Fact Check | ವಂದೇ ಭಾರತ್ ರೈಲಿನ ಗಾಜು ಒಡೆದವರು ಮುಸ್ಲಿಂ ಎಂಬುದು ಸುಳ್ಳು

ಸಾಮಾಜಿಕ ಜಾಲತಾಣದಲ್ಲಿ ವಂದೇ ಭಾರತ್ ರೈಲಿನ ಗಾಜನ್ನು ಒಡೆಯುತ್ತಿರುವ ವ್ಯಕ್ತಿಯೊಬ್ಬನ ವಿಡಿಯೋವನ್ನು ಹಂಚಿಕೊಂಡು ” ಈ ಜಿಹಾದಿಗಳಿಗೆ ಬುದ್ದಿ ಕಲಿಸದಿದ್ದರೇ ಭಾರತಕ್ಕೆ ಅಪಾಯ ತಪ್ಪಿದ್ದಲ್ಲ. ಇವರು ಈಗ ಗಾಜನ್ನು ಒಡೆದಿದ್ದಾರೆ. ಮುಂದೇ ಇಡೀ ರೈಲನ್ನು ಒಡೆದು ಹಾಕಬಹುದು. ಇಂತಹ ಮುಸಲ್ಮಾನನನ್ನು ನೀವು ಉಗ್ರಗಾಮಿ, ಜಿಹಾದಿ ಎನ್ನದೆ, ಇನ್ನೇನು ಹೇಳುತ್ತೀರಿ.” ಎಂಬ ರೀತಿಯ ವಿವಿಧ ಟಿಪ್ಪಣಿಗಳೊಂದಿಗೆ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

https://twitter.com/AmitSanatani8/status/1833412490903818612

ಈ ವಿಡಿಯೋ ನೋಡಿದ ಹಲವು ಮಂದಿ ಈತ ನಿಜಕ್ಕೂ ಮುಸ್ಲಿಂ ಎಂದು ಭಾವಿಸಿ, ಈತನ ವಿರುದ್ಧ ಆಕ್ರೋಶ ವ್ಯಕ್ತ ಪಡಿಸುತ್ತಿದ್ದರೆ. ಹಲವರು‌ ಇದೇ ವಿಡಿಯೋವನ್ನು ಬಳಸಿಕೊಂಡು ಈತ ಮುಸಲ್ಮಾನ ಜಿಹಾದಿ ಎಂದು ತಮ್ಮ ಸಾಮಾಜಿಕ ಜಾಲತಾಣದ ವೈಯಕ್ತಿಕ ಖಾತೆಗಳಲ್ಲಿ ಕೂಡ ಹಂಚಿಕೊಂಡು ಆಕ್ರೋಶವನ್ನು ವ್ಯಕ್ತ ಪಡಿಸುತ್ತಿದ್ದಾರೆ. ಹೀಗಾಗಿ ಜನ ಸಾಮಾನ್ಯರಲ್ಲಿ ಈ ವಿಡಿಯೋ ಸಾಕಷ್ಟು ಗೊಂದಲವನ್ನು ಕೂಡ ಉಂಟು ಮಾಡುತ್ತಿದೆ. ಹೀಗೆ ವಿವಿಧ ಬರಹಗಳೊಂದಿಗೆ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋವಿನ ಅಸಲಿಯತ್ತು ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ.

ಫ್ಯಾಕ್ಟ್‌ಚೆಕ್

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ವಿಡಿಯೋದಲ್ಲಿನ ಅಂಶಗಳನ್ನು ಬಳಸಿಕೊಂಡು ವಿವಿಧ ಕೀ ವರ್ಡ್‌ಗಳೊಂದಿಗೆ ಅಂತರ್ಜಾಲದಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ ತಮಿಳುನಾಡಿನ ತಿರುನೆಲ್ವೇಲಿ ಕೋಚಿಂಗ್ ಡಿಪೋದಲ್ಲಿ ಸೆಕ್ಷನ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಮಂಥೀರ ಮೂರ್ತಿ ಅವರು ಪೋಸ್ಟ್‌ವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದ ಕಮೆಂಟ್ ಅನ್ನು ಸಾಕಷ್ಟು ಮಂದಿ ಹಂಚಿಕೊಂಡಿರುವುದು ಕಂಡು ಬಂದಿದೆ. ಈ ಪೋಸ್ಟ್ ‌ಗಳ ಪ್ರಕಾರ ವಂದೇ ಭಾರತಕ್ಕೆ ಹಾನಿ ಮಾಡಲು ಈ ಗಾಜುಗಳನ್ನು ಒಡೆಯಲಾಗಿಲ್ಲ‌, ಬದಲಿಗೆ ಇದು ಒಡೆದ ಗಾಜನ್ನು ಬದಲಾಯಿಸುವ ಪ್ರಕ್ರಿಯೆಯಾಗಿದೆ ಎಂಬುದು ತಿಳಿದು ಬಂದಿದೆ.

ಈ ಕುರಿತು ಇನ್ನಷ್ಟು ಹುಡುಕಾಟವನ್ನು ನಡೆಸಿದಾಗ ‘signare_mahi_manish’ ಪ್ರೊಫೈಲ್‌ನಿಂದ ಸೆಪ್ಟೆಂಬರ್ 10 ರಂದು ಅಪ್‌ಲೋಡ್ ಮಾಡಿದ ಇನ್‌ಸ್ಟಾಗ್ರಾಂ ಸ್ಟೋರಿ ಕಂಡು ಬಂದಿದೆ. ಇದೇ ರೀತಿ ರೈಲಿಗೆ ಸಂಬಂಧ ಪಟ್ಟಂತೆ ಹಲವು ರೀಲ್ಸ್‌ಗಳು ಅವರ ಖಾತೆಯಲ್ಲಿ ಕಂಡು ಬಂದಿದೆ. ಹೀಗಾಗಿ ಹಲವು ಮಾಧ್ಯಮ ಸಂಸ್ಥೆಗಳು ಅವರನ್ನು ಸಂಪರ್ಕಿಸಿದಾಗ ಅವರು ತಮ್ಮ ಹೆಸರು ಮನೀಶ್ ಕುಮಾರ್ ಮತ್ತು ತಾನು ಬಿಹಾರದ ಅರ್ರಾ ನಿವಾಸಿ ಎಂದು ತಿಳಿಸಿದ್ದಾರೆ. ಪ್ರಸ್ತುತ ಅಹಮದಾಬಾದ್‌ನಲ್ಲಿ ಮತ್ತು ರೈಲ್ವೆಯಲ್ಲಿ ಕೆಲಸ ಮಾಡುತ್ತಿರುವ ಬಗ್ಗೆ ಮಾಹಿತಿ ನೀಡಿದ್ದು, ವೈರಲ್ ವಿಡಿಯೋಗಳ ಕುರಿತು ಅಧಿಕಾರಿಗಳು ಮಾಧ್ಯಮಗಳೊಂದಿಗೆ ಮಾತನಾಡದಂತೆ ಸೂಚಿಸಿದ್ದರಿಂದ ಅವರು ಈ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ‌ ಎಂದು ತಿಳಿದು ಬಂದಿದೆ.

ಇನ್ನು ಈ ಬಗ್ಗೆ ಯಾವುದಾದರೂ ಅಧಿಕೃತ ಮಾಹಿತಿ ಇದೆಯೇ ಎಂದು ಪರಿಶೀಲನೆಯನ್ನು ನಡೆಸಿದಾಗ 10 ಸೆಪ್ಟೆಂಬರ್‌ 2024 ರಂದು ಟ್ರೈನ್ಸ್‌ ಆಫ್‌ ಇಂಡಿಯಾ ಎಂಬ ಎಕ್ಸ್‌ ಖಾತೆಯಿಂದ ಹಂಚಿಕೊಂಡ ಪೋಸ್ಟ್‌ವೊಂದು ಕಂಡು ಬಂದಿದೆ. ಆ ಪೋಸ್ಟ್‌ನಲ್ಲಿ ಕೂಡ  ” ವೈರಲ್‌ ವಿಡಿಯೋದಲ್ಲಿರುವ ವ್ಯಕ್ತಿ ಗಾಜನ್ನು ಬದಲಾಯಿಸಲು, ಈಗಿರುವ ಗಾಜನ್ನು ಒಡೆದು ತೆಯುತ್ತಾರೆ. ಇದು ಗಾಜು ಬದಲಾಯಿತು ಪ್ರಕ್ರಿಯೆಯಾಗಿದೆ. ಗಾಜುಗಳು ರೈಲಿಗೆ ಭೀಗಿಯಾಗಿ ಅಳವಡಿಸಿರುವುದರಿಂದ ಅವುಗಳನ್ನು ಹೀಗೆ ಸುತ್ತಿಗೆಯಲ್ಲಿ ಒಡೆದು ತೆಗೆಯಲಾಗುತ್ತದೆ.” ಎಂದು ಮಾಹಿತಿಯನ್ನು ನೀಡಿರುವುದು ಕಂಡು ಬಂದಿದೆ.

ಒಟ್ಟಾರೆಯಾಗಿ ಹೇಳುವುದಾದರೆ , ರೈಲಿನ ಗಾಜು ಒಡೆದಿರುವ ವೈರಲ್ ವೀಡಿಯೊವನ್ನು ಸುಳ್ಳು ಮಾಹಿತಿಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಈ ವೈರಲ್ ವಿಡಿಯೋ ಗಾಜು ಬದಲಾಯಿಸುವ ಪ್ರಕ್ರಿಯೆಗೆ ಸಂಬಂಧಿಸಿದೆ. ಹೀಗಾಗಿ ಯಾವುದೇ ವೈರಲ್ ವಿಡಿಯೋ ನಿಮಗೆ ಕಂಡು ಬಂದರೆ ಆ ಕುರಿತು ಪರಿಶೀಲಿಸದೆ ಹಂಚಿಕೊಳ್ಳಬೇಡಿ.‌


ಇದನ್ನೂ ಓದಿ : Fact Check | ಕಮಲಾ ಹ್ಯಾರಿಸ್‌ ಎಕ್ಸ್‌ ( ಈ ಹಿಂದಿನ ಟ್ವಿಟರ್‌) ಅನ್ನು ಸ್ಥಗಿತಗೊಳಿಸುವುದಾಗಿ ಬೆದರಿಕೆ ಹಾಕಿಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *