“ತಂದೆ ಇಲ್ಲದ ಮಕ್ಕಳ ಖಾತೆಗೆ ಒಂದು ವರ್ಷ 24,000 ರೂ.ಗಳ ಸ್ಕಾಲರ್ ಶಿಪ್ ಸೌಲಭ್ಯವಿದ್ದು, ಆದುದರಿಂದ ತಮಗೆ ಗೊತ್ತಿರುವ ಯಾರಾದರೂ ತಂದೆ ಇಲ್ಲದ ಮಗು ಇದ್ದಲ್ಲಿ ಅವರ ಪೋಷಕರಿಗೆ ಕೂಡಲೇ ಅರ್ಜಿ ಸಲ್ಲಿಸಲು ತಿಳಿಸಿ. ಇದು ಆನ್ಲೈನ್ ಮೂಲಕ ಅಂದರೆ ಯಾವುದೇ ಸೈಬರ್ ಮೂಲಕ ಸಲ್ಲಿಕೆ ಇರುವುದಿಲ್ಲ. ಮಗುವಿಗೆ 18 ವರ್ಷಕ್ಕಿಂತ ಕಡಿಮೆ ವಯಸ್ಸು ಇರಬೇಕು. ಅರ್ಜಿ ಫಾರಂನ್ನು ಖುದ್ದಾಗಿ ಡಿಸಿ ಕಛೇರಿಯಿಂದ ತಂದು ಬೇಕಾಗುವ ದಾಖಲೆಗಳನ್ನು ಇಟ್ಟು ಶಾಲೆ ಅಥವಾ ಕಾಲೇಜು ಮುಖ್ಯೋಪಾಧ್ಯಾಯ/ ಪ್ರಾಂಶುಪಾಲರ ಸಹಿ ಮತ್ತು ಸೀಲ್ ಮಾಡಿದ ಮೇಲೆ ಪುನಃ ಡಿಸಿ ಆಫೀಸಿಗೆ ಸಲ್ಲಿಸಬೇಕು. ನಂತರ ಅವರ ಸಿಬ್ಬಂದಿಗಳು ಮನೆ ಭೇಟಿ ನೀಡಿ ಪರಿಶೀಲನೆ ಮಾಡಿದ ಮೇಲೆ ಯೋಜನೆ ಪ್ರಾರಂಭವಾಗುತ್ತದೆ” ಎಂದು ವಾಟ್ಸ್‌ಆಪ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
ಈ ಪೋಸ್ಟ್‌ಗಳನ್ನು ಗಮನಿಸಿದ ಹಲವು ಮಂದಿ ಜನಸಾಮಾನ್ಯರು ಹಲವು ದಾಖಲೆಗಳೊಂದಿಗೆ ವಿವಿಧ ಸರ್ಕಾರಿ ಇಲಾಖೆಗಳಿಗೆ ತೆರಳುತ್ತಿದ್ದಾರೆ. ಇನ್ನು ಕೆಲವರು ಇದನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಹೀಗೆ ವಿವಿಧ ಗೊಂದಲಗಳೊಂದಿಗೆ ಹಂಚಿಕೊಳ್ಳಲಾಗುತ್ತಿರುವ ವೈರಲ್ ಪೋಸ್ಟ್ ಕುರಿತು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ.
ಫ್ಯಾಕ್ಟ್‌ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಪೋಸ್ಟ್ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿ ಅಂತರ್ಜಾಲದಲ್ಲಿ ಈ ಕುರಿತು ಯಾವುದಾದರೂ ವರದಿ ಪ್ರಕಟವಾಗಿದೆಯೇ ಎಂದು ಹುಡುಕಾಟವನ್ನು ನಡೆಸಿದೆವು. ಆದರೆ ಈ ಬಗ್ಗೆ ಯಾವುದೇ ವರದಿಗಳು ನಮಗೆ ಕಂಡು ಬಂದಿಲ್ಲ. ಈ ಕಾರಣದಿಂದಾಗಿ ನಾವು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ವೆಬ್‌ಸೈಟ್‌ನಲ್ಲಿ ಹುಡುಕಾಟವನ್ನು ನಡೆಸಿದೆವು. ಆದರೆ ಈ ರೀತಿಯ ವಿದ್ಯಾರ್ಥಿವೇತನದ ಕುರಿತು ನಮಗೆ ಯಾವುದೇ ರೀತಿಯಾದ ಮಾಹಿತಿ ಲಭ್ಯವಾಗಿಲ್ಲ.
ಈ ಹಿನ್ನೆಲೆಯಲ್ಲಿ ನಾವು ಇದೇ ಇಲಾಖೆಯ ಕೆಲ ಅಧಿಕಾರಿಗಳನ್ನು ಸಂಪರ್ಕಿಸಿದೆವು. ಈ ವೇಳೆ ನಮಗೆ ವಾರ್ಷಿಕ 24 ಸಾವಿರ ಸ್ಕಾಲರ್ ಶಿಪ್ ಸಿಗುತ್ತಿದೆ ಎಂಬುದು ತಪ್ಪು ಮಾಹಿತಿಯಾಗಿದೆ. ಮಾಸಿಕ 4 ಸಾವಿರ ರೂಪಾಯಿಯಂತೆ ವಾರ್ಷಿಕ 48 ಸಾವಿರ ರೂಪಾಯಿ ಧನ ಸಹಾಯ ಸಿಗುತ್ತದೆ. 18 ವರ್ಷದೊಳಗಿನ ಗಂಡು ಮತ್ತು ಹೆಣ್ಣು ಮಕ್ಕಳು ಈ ಯೋಜನೆಗೆ ಅರ್ಹರು. ಅರ್ಹರು ಅವರಾಗಿಯೇ ಅರ್ಜಿ ಸಲ್ಲಿಸಬಹುದು ಅಥವಾ ಸಿಬ್ಬಂದಿಯ ಮೂಲಕ ಇಲಾಖೆಯೇ ಅರ್ಹರನ್ನು ಪತ್ತೆ ಮಾಡುತ್ತದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ವ್ಯವಸ್ಥೆಯಿಲ್ಲ, ಕೇವಲ ಆಫ್‌ಲೈನ್ ಮೂಲಕ ಸಲ್ಲಿಸಬೇಕಿದೆ. ತಂದೆಯಿಲ್ಲದ ಮಕ್ಕಳಿಗೆ ಮಾತ್ರ ಇರುವ ಯೋಜನೆಯಲ್ಲ. ಅನಾಥ ಮಕ್ಕಳು, ಪೋಷಕರು ಜೈಲಿನಲ್ಲಿರುವ ಮಕ್ಕಳು, ಲೈಂಗಿಕ ಕಾರ್ಯಕರ್ತೆಯರು, ದೇವದಾಸಿ ಪದ್ದತಿಗೆ ಒಳಗಾಗಿರುವವ ಮಕ್ಕಳು, ಏಕ ಪೋಷಕ (ತಂದೆ ಅಥವಾ ತಾಯಿ) ಮಕ್ಕಳು, ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುವ ಮಕ್ಕಳು, ಸೇರಿದಂತೆ ವಿವಿಧ ಸಮಸ್ಯೆಗಳಿಗೆ ತುತ್ತಾಗಿರುವ ಮಕ್ಕಳು ಅರ್ಜಿ ಸಲ್ಲಿಸಬಹುದಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ.. ವಾಟ್ಸಾಪ್‌ನಲ್ಲಿ ಹರಿದಾಡುತ್ತಿರುವ ಸಂದೇಶಲ್ಲಿ ಹೇಳಿರುವಂತೆ 18 ವರ್ಷದೊಳಗಿನ ಮಕ್ಕಳಿಗೆ ಧನ ಸಹಾಯ ನೀಡುವ ಯೋಜನೆ ಜಾರಿಯಲ್ಲಿರುವುದು ನಿಜ. ಆದರೆ, ಅದು ತಂದೆಯಿಲ್ಲದ ಮಕ್ಕಳಿಗೆ ಮಾತ್ರ ಇರುವ ಯೋಜನೆಯಲ್ಲ. ವಿವಿಧ ರೀತಿಯ ಸಮಸ್ಯೆಗಳಿಗೆ ತುತ್ತಾಗಿರುವವರು ಈ ಯೋಜನೆಯ ಲಾಭವನ್ನು ಪಡೆಯಬಹುದಾಗಿದೆ. ಅಲ್ಲದೆ, ವರ್ಷಕ್ಕೆ 24 ಸಾವಿರ ರೂ. ಧನ ಸಹಾಯ ಸಿಗುತ್ತದೆ ಎಂಬುದು ಕೂಡ ಸುಳ್ಳು. ಈ ಯೋಜನೆಯಲ್ಲಿ ವರ್ಷಕ್ಕೆ 48 ಸಾವಿರ ರೂ. ಧನ ಸಹಾಯ ಸಿಗುತ್ತದೆ ಎಂಬ ಮಾಹಿತಿ ಲಭ್ಯವಾಗಿ.
ಇದನ್ನೂ ಓದಿ : Fact Check | ಇಂಗ್ಲೆಂಡ್‌ನಲ್ಲಿ ನಡೆದ ‘ಮುಸ್ಲಿಂ ಡಾಕ್ಟರ್ಸ್ ಅಸೋಸಿಯೇಷನ್’ ಕಾರ್ಯಕ್ರಮದ ಫೋಟೋವನ್ನು ಭಾರತದ್ದು ಎಂದು ಹಂಚಿಕೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.