Fact Check: ಅಮೆರಿಕದ ಜನತೆ ರಾಹುಲ್ ಗಾಂಧಿ ಭಾರತದವರೇ? ಅಥವಾ ಪಾಕಿಸ್ತಾನದವರೇ? ಎಂದು ಕೇಳಿದ್ದಾರೆ ಎಂಬುದು ಸುಳ್ಳು

ರಾಹುಲ್‌ಗಾಂಧಿ

ಕಾಂಗ್ರೆಸ್‌ ಪಕ್ಷದ ನಾಯಕ ರಾಹುಲ್ ಗಾಂಧಿಯವರು ಇತ್ತೀಚೆಗೆ ಮೂರು ದಿನಗಳ ಕಾಲ ಅಮೇರಿಕಕ್ಕೆ ಭೇಟಿ ನೀಡಿದ್ದರು. ಈ ಬೆನ್ನಲ್ಲೇ ಗಾಂಧಿಯವರ ರಾಷ್ಟ್ರೀಯತೆಯನ್ನು ಪ್ರಶ್ನಿಸುವ ಅಮೇರಿಕ ಮೂಲದ ಇಂಗ್ಲಿಷ್ ಆವೃತ್ತಿಯ ಪತ್ರಿಕೆಯ ಲೇಖನದ ಪೋಸ್ಟರ್‌ನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

“ರಾಹುಲ್ ಗಾಂಧಿ ಭಾರತದಿಂದ ಬಂದಿದ್ದಾರೋ ಅಥವಾ ಪಾಕಿಸ್ತಾನದಿಂದ ಬಂದಿದ್ದಾರೋ” ಎಂದು ಅಮೇರಿಕನ್ನರು ಕೇಳುತ್ತಿದ್ದಾರೆ. ಮತ್ತು ರಾಹುಲ್‌ ಗಾಂಧಿ ಭಾರತದ ಬಗ್ಗೆ ಮಾತನಾಡುವಾಗ ಭಾರತದ ಶತ್ರುಗಳ ಹಾಗೆ ವರ್ತಿಸುತ್ತಾರೆ. ಇದು ಭಾರತ ದೇಶಕ್ಕೆ ಎಂತಹ ಅವಮಾನ! ಎಂಬ ಶೀರ್ಷಿಕೆಯನ್ನು ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಇಂಗ್ಲೀಷ್‌ ಪತ್ರಿಕೆ ಲೇಖನವನ್ನು ತಯಾರಿಸಿದೆ ಎಂದು ಹಂಚಿಕೊಂಡಿದ್ದಾರೆ.

ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ (ಪಿಟಿಐ) ದ ಸಂದರ್ಶನದಲ್ಲಿ, ಮಾಜಿ ಕೇಂದ್ರ ಸಚಿವ ಮತ್ತು ಬಿಜೆಪಿಯ ಹಿರಿಯ ನಾಯಕ ಅನುರಾಗ್ ಠಾಕೂರ್ ಅವರು ಅಮೆರಿಕದ ಜನರು ರಾಹುಲ್ ಗಾಂಧಿ ಭಾರತದವರಾ? ಅಥವಾ ಪಾಕಿಸ್ತಾನದವರಾ? ಎಂದು ಪ್ರಶ್ನಿಸಲು ಪ್ರಾರಂಭಿಸಿದ್ದಾರೆ ಎಂದು ಹೇಳಿದ್ದಾರೆ. ಠಾಕೂರ್‌ರು ತಮ್ಮ ಸಂವಾದದಲ್ಲಿ, “ಈಗ ಅಮೆರಿಕಾದ ಜನರು ರಾಹುಲ್ ಗಾಂಧಿ ಭಾರತದವರಲ್ಲ, ಪಾಕಿಸ್ತಾನದಿಂದ ಬಂದವರು ಎಂದು ಬರೆಯಲು ಪ್ರಾರಂಭಿಸಿದ್ದಾರೆ.” ಎಂಬ ವೀಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಫ್ಯಾಕ್ಟ್‌ ಚೆಕ್:‌

ವೈರಲ್ ಫೋಟೋ ಕುರಿತು ಸತ್ಯಾಸತ್ಯತೆಯನ್ನು ಪರಿಶೀಲಿಸಲು, ಹಲವಾರು ಕೀವರ್ಡ್‌ಗಳನ್ನು ಬಳಸಿ ಹುಡುಕಿದಾಗ ಈ ವಿಷಯದ ಕುರಿತು ಯಾವುದೇ ಇಂಗ್ಲಿಷ್ ವರದಿಗಳು ಲಭಿಸಿಲ್ಲ. ಈ ವೇಳೆ ಸಾಮಾನ್ಯ ಸುದ್ದಿ ಪತ್ರಿಕೆಗಳಿಗಿಂತ ಈ ಪತ್ರಿಕೆ ಭಿನ್ನವಾಗಿ ಕಂಡುಬಂದಿದೆ. ಇದಲ್ಲದೆ, ಲೇಖನದಾದ್ಯಂತ ಅಸಮಂಜಸವಾದ ಅಕ್ಷರ ವಿನ್ಯಾಸಗಳನ್ನು ಒಳಗೊಂಡಿರುವ ಬಹಳಷ್ಟು ವ್ಯತ್ಯಾಸಗಳು ವ್ಯತಿರಿಕ್ತವಾಗಿ ಕಂಡುಬಂದಿವೆ. ಮತ್ತು ಪೋಟೊದಲ್ಲಿ ರಾಹುಲ್ ಗಾಂಧಿಯ ಹೆಸರನ್ನು ತಪ್ಪಾಗಿ ಬರೆಯಲಾಗಿದೆ. ಅವರು ಭಾಷಣ ಮಾಡಿರುವ ಸ್ಥಳ ‘ಸಾಂಟಾ ಕ್ಲಾಸ್, ಕ್ಯಾಲಿಫೋರ್ನಿಯಾ’ ಎಂದು ದಾಖಲಾಗಿದೆ. ಆದರೆ, ರಾಹುಲ್ ಗಾಂಧಿ ಇತ್ತೀಚೆಗೆ ಭಾಷಣ ಮಾಡಿರುವುದು ‘ಸಾಂಟಾ ಕ್ಲಾರಾ, ಕ್ಯಾಲಿಫೋರ್ನಿಯಾ’ದಲ್ಲಾಗಿದೆ. ಇನ್ನೂ ಪತ್ರಿಕೆಯ ಎಡ ಭಾಗದಲ್ಲಿ ಅರ್ಧ ಹಿಂದಿ ಪದ ಕಂಡು ಬಂದಿದೆ. ಹಾಗಾಗಿ, ಅದು ನಿಜವಾದ ಪತ್ರಿಕಾ ವರದಿಯಾ? ಎಂಬ ಶಂಕೆ ವ್ಯಕ್ತವಾಗಿದೆ.

ವೈರಲ್ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹಾಕಿ ನಾವು ಸರ್ಚ್ ಮಾಡಿದ್ದೇವೆ. ಈ ವೇಳೆ ವಿವೇಕ್ ಪಾಂಡೆ (INDIVivekPandey) ಎಕ್ಸ್‌ ಖಾತೆಯಲ್ಲಿ ಅದೇ ರೀತಿಯ ಹಿಂದಿ ಭಾಷೆಯ ಪತ್ರಿಕೆಯ ಫೋಟೋವನ್ನು 2023 ಜೂನ್ 5ರಂದು ಪೋಸ್ಟ್ ಮಾಡಿರುವುದು ಕಂಡು ಬಂದಿದೆ. ಅದರಲ್ಲಿ ಹಿಂದಿ ಶೀರ್ಷಿಕೆಯೊಂದಿಗೆ  “अमेरिकी पूछ रहे हैं की राहुल भारत के है या पाकिस्तान को? प्रश्न तो सही है।” ಸ್ಕ್ರೀನ್‌ಶಾಟ್‌ ಪೋಟೊಗಳನ್ನು ಹಂಚಿಕೊಂಡಿದ್ದಾರೆ.

Image

ಗೂಗಲ್‌ ಟ್ರಾನ್ಸ್‌ಲೇಟ್‌ ಬಳಸಿಕೊಂಡು ಹಿಂದಿ ಲೇಖನವನ್ನು ಇಂಗ್ಲಿಷ್ ಭಾಷೆಗೆ ಭಾಷಾಂತರಿಸಿದಾಗ ವೈರಲ್‌ ಲೇಖನದ ಚಿತ್ರವನ್ನು ಹೋಲುವಂತೆ ಕಂಡುಬಂದಿತು. ಹಾಗಾಗಿ ಈ ಲೇಖನ ಮೂಲತಃ ಹಿಂದಿಯಲ್ಲಿ ಪ್ರಕಟವಾಗಿದೆ ಹೊರತು ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಪತ್ರಿಕೆ ವರದಿಯನ್ನು ಪ್ರಕಟಿಸಿಲ್ಲ ಎಂಬುದು ಖಚಿತವಾಗಿ ತಿಳಿದುಬಂದಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ರಾಹುಲ್‌ ಗಾಂಧಿ ಕುರಿತು ವೈರಲ್‌ ಆಗುತ್ತಿರುವ ಪತ್ರಿಕೆಯ ವರದಿ ತಪ್ಪು ಮಾಹಿತಿಯಿಂದ ಕೂಡಿದ್ದು, ಅಧಿಕೃತ ಪತ್ರಿಕೆಯ ವರದಿಯಲ್ಲ. ಗಾಂಧಿಯ ಬಗ್ಗೆ ಸುಳ್ಳು ಸುದ್ದಿಯನ್ನು ಹರಡಲು ನಕಲಿ ವರದಿಗಳನ್ನು ತಯಾರಿಸಿ ಹಂಚಿಕೊಂಡಿದ್ದಾರೆ.  ಹಾಗಾಗಿ ಇಂತಹ ಸುದ್ದಿಗಳನ್ನು ನಂಬುವ ಮುನ್ನ ಒಮ್ಮೆ ಪರಿಶೀಲಿಸಿಕೊಳ್ಳುವುದು ಉತ್ತಮ.


ಇದನ್ನು ಓದಿದ್ದೀರಾ?


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *