Fact Check | ಮಣಿಪುರದಲ್ಲಿ ವಿದ್ಯಾರ್ಥಿಗಳು ರಾಷ್ಟ್ರಧ್ವಜವನ್ನು ತೆಗೆದು ಮೈತೇಯಿ ಧ್ವಜವನ್ನು ಹಾರಿಸಿದ್ದಾರೆ ಎಂಬುದು ಸುಳ್ಳು

” ಮಣಿಪುರದಲ್ಲಿ ಪ್ರತಿನಿತ್ಯ ಒಂದಲ್ಲ ಒಂದು ಗಲಭೆಗಳು ಉಂಟಾಗುತ್ತಿವೆ. ಅಲ್ಲಿ ದಿನವೂ ದೇಶದ್ರೋಹದ ಕೃತ್ಯಗಳು ನಡೆಯುತ್ತಿದ್ದು, ಅಲ್ಲಿನ ವಿದ್ಯಾರ್ಥಿಗಳು ಸೇರಿದಂತೆ ಹಲವು ಮಂದಿ ದೇಶದ್ರೋಹದ ಕೃತ್ಯಗಳಿಗೆ ಬೆಂಬಲವನ್ನು ನೀಡುತ್ತಿದ್ದಾರೆ. ಆದರೂ ಈ ಬಗ್ಗೆ ಅಲ್ಲಿನ ಯಾವ ಅಧಿಕಾರಿಗಳು ಕೂಡ ಕ್ರಮ ಕೈಗೊಳ್ಳದೆ, ಪ್ರತಿಭಟನಾ ನಿರತರಿಗೆ ಬೆಂಬಲವನ್ನು ನೀಡುತ್ತಿದ್ದಾರೆ. ಇದಕ್ಕೆ ಪೂರಕ ಎಂಬಂತೆ ಈಗ ಮಣಿಪುರದ ಡಿಸಿ ಕಚೇರಿ ಮೇಲಿದ್ದ ರಾಷ್ಟ್ರಧ್ವಜವನ್ನು ಕಿತ್ತು ಹಾಕಿರುವ ಅಲ್ಲಿನ ವಿದ್ಯಾರ್ಥಿಗಳು ಮೈತೇಯಿ  ಧ್ವಜವನ್ನು ಅಳವಡಿಸುವ ಮೂಲಕ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದಾರೆ” ಎಂದು ವಿಡಿಯೋವೊಂದನ್ನು ಹಂಚಿಕೊಳ್ಳಲಾಗುತ್ತಿದೆ.

ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ವಿಡಿಯೋವನ್ನು ನೋಡಿದ ಹಲವು ಮಂದಿ, ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಕೂಡ ವಿವಿಧ ಬರಹಗಳೊಂದಿಗೆ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ. ಹೀಗಾಗಿ ಸಾರ್ವಜನಿಕರು ಕೂಡ ಇದರ ಬಗ್ಗೆ ಅನುಮಾನವನ್ನು ವ್ಯಕ್ತ ಪಡಿಸಿ ಪೋಸ್ಟ್‌ ಮಾಡುತ್ತಿರುವುದು ಕೂಡ ಕಂಡು ಬಂದಿದೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ವಿಡಿಯೋ ಕುರಿತು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ.

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್‌ ಆಗುತ್ತಿರುವ ವಿಡಿಯೋ ಕುರಿತು ಪರಿಶೀಲನೆ ನಡೆಸಲು, ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿ ಸಾಮಾಜಿಕ ಜಾಲತಾಣದಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ 9 ಸೆಪ್ಟೆಂಬರ್‌ 2024ರಂದು ಮಣಿಪುರದ ಪೊಲೀಸರು ಹಂಚಿಕೊಂಡ ಪೋಸ್ಟ್‌ವೊಂದು ಕಾಣಿಸಿಕೊಂಡಿದೆ. ಈ ಪೋಸ್ಟ್‌ನಲ್ಲಿ ವೈರಲ್‌ ಪೋಸ್ಟ್‌ಗಳಲ್ಲಿನ ಮಾಹಿತಿಯ ಪ್ರಕಾರ ವೈರಲ್‌ ವಿಡಿಯೋ ಸುಳ್ಳು ನಿರೂಪಣೆಯೊಂದಿಗೆ ಕೂಡಿದೆ ಎಂಬುದು ತಿಳಿದು ಬಂದಿದೆ. ಇದರ ಜೊತೆಗೆ ನಾವು ವೈರಲ್‌ ವಿಡಿಯೋದಲ್ಲಿನ ಧ್ವಜಗಳನ್ನು ಪರಿಶೀಲನೆ ನಡೆಸಿದೆವು. ಆಗ ನಮಗೆ ವಿದ್ಯಾರ್ಥಿಗಳು ತೆರವುಗೊಳಿಸುತ್ತಿರುವುದು ರಾಷ್ಟ್ರಧ್ವಜವಲ್ಲ ಎಂಬುದು ಸ್ಪಷ್ಟವಾಗಿದೆ.

ಮಣಿಪುರದ ಪೊಲೀಸರು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡ ಪೋಸ್ಟ್‌ನ ಪ್ರಕಾರ “ಮಣಿಪುರದ ವಿದ್ಯಾರ್ಥಿ ಪ್ರತಿಭಟನಾಕಾರರು ತೌಬಲ್‌ನಲ್ಲಿರುವ ಡಿಸಿ ಕಚೇರಿಯಲ್ಲಿ ರಾಷ್ಟ್ರಧ್ವಜವನ್ನು ತೆಗೆದು ಹಾಕಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ಗಳನ್ನು ಹಂಚಿಕೊಳ್ಳಲಾಗುತ್ತಿದೆ. ಆದರೆ ಇದು ಸುಳ್ಳು ಸುದ್ದಿಯಾಗಿದೆ. ವಿದ್ಯಾರ್ಥಿ ಪ್ರತಿಭಟನಾಕಾರರು ಡಿಸಿ ಕಚೇರಿಯ ತೌಬಲ್‌ನ ಹೊರಗಿನ ಗೇಟ್‌ನಲ್ಲಿರುವ ಹಳೆಯ ಮತ್ತು ಸವೆದ ಸಲೈ ಟಾರೆಟ್ (7 ಬಣ್ಣದ ಧ್ವಜ) ಧ್ವಜವನ್ನು ಬದಲಾಯಿಸಲು ಪ್ರಯತ್ನಿಸಿದರು. ಪೊಲೀಸರು ಗುಂಪು ಚದುರಿಸಿದ ನಂತರ ಎರಡೂ ಧ್ವಜಗಳನ್ನು ಗೇಟ್‌ನಿಂದ ತೆಗೆದುಹಾಕಲಾಯಿತು.” ಎಂದು ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಇನ್ನು ಈ ಘಟನೆಯ ಕುರಿತು ಕೆಲವೊಂದು ವರದಿಗಳು ಕೂಡ ಕಂಡು ಬಂದಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿಲ್ಲಿ ಮಣಿಪುರದ ವಿದ್ಯಾರ್ಥಿಗಳು ರಾಷ್ಟ್ರ ಧ್ವಜವನ್ನು ತೆಗೆದು ಮೈತೇಯಿ ಧ್ವಜವನ್ನು ಅಳವಡಿಸಿದ್ದಾರೆ ಎಂಬುದು ಸುಳ್ಳು. ಮಣಿಪುರದ ಪೊಲೀಸರೇ ನೀಡಿರುವ ಮಾಹಿತಿಯ ಪ್ರಕಾರ ವಿದ್ಯಾರ್ಥಿಗಳು ಹಳೆಯ 7 ಬಣ್ಣದ ಸವೆದ ಸಲೈ ಟಾರೆಟ್ ಧ್ವಜವನ್ನು ತೆಗೆದು, ಹೊಸ ಸವೆದ ಸಲೈ ಟಾರೆಟ್ ಧ್ವಜವನ್ನು ಅಳವಡಿಸಲು ಮುಂದಾಗಿದ್ದರು ಎಂಬುದು ತಿಳಿದು ಬಂದಿದೆ. ಹಾಗಾಗಿ ಇಂತಹ ಯಾವುದೇ ವೈರಲ್‌ ವಿಡಿಯೋಗಳನ್ನು ನಂಬುವ ಮುನ್ನ ಒಮ್ಮೆ ಪರಿಶೀಲಿಸಿಕೊಳ್ಳುವುದು ಉತ್ತಮವಾಗಿದೆ.


ಇದನ್ನೂ ಓದಿ : Fact Check: ಅಮೆರಿಕದ ಜನತೆ ರಾಹುಲ್ ಗಾಂಧಿ ಭಾರತದವರೇ? ಅಥವಾ ಪಾಕಿಸ್ತಾನದವರೇ? ಎಂದು ಕೇಳಿದ್ದಾರೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *