Fact Check | ಬುರ್ಖಾ ಧರಿಸಿಲ್ಲವೆಂದು ಬಾಂಗ್ಲಾದೇಶದಲ್ಲಿ ಮಹಿಳೆಯರಿಗೆ ಥಳಿಸಲಾಗಿದೆ ಎಂಬುದು ಸುಳ್ಳು

“ಇದು ಹೊಸ ಬಾಂಗ್ಲಾದೇಶ.. ಇಲ್ಲಿ ಪ್ರತಿಯೊಬ್ಬ ಮಹಿಳೆ ಕೂಡ ಬುರ್ಖಾವನ್ನು ಧರಿಸಲೇಬೇಕು, ಒಂದು ವೇಳೆ ಮಹಿಳೆಯರು ಬುರ್ಖಾವನ್ನು ಧರಿಸಿಲ್ಲವಾದರೆ, ನಾಳೆ ಅವರನ್ನು ಬೀದಿ ಬೀದಿಯಲ್ಲಿ ಈ ರೀತಿ ಥಳಿಸಿ ಬುದ್ದಿ ಕಲಿಸಲಾಗುತ್ತದೆ. ಈಗ ಹೇಳಿ ಜಾತ್ಯಾತೀತ ಹಿಂದೂಗಳೆ, ಇಸ್ಲಾಂನಲ್ಲಿ ನಿಜವಾಗಿಯೂ ಮಹಿಳೆಯರಿಗೆ ಸ್ವಾತಂತ್ರ್ಯವಿದೆಯಾ? ಹಿಂದುಗಳೇ ಬಾಂಗ್ಲಾದೇಶದಲ್ಲಿನ ಹಿಂದೂಗಳಿಗಾಗಿ ಪ್ರಾರ್ಥಿಸಿ” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ.

ವ್ಯಾಪಕವಾಗಿ ವೈರಲ್‌ ಆಗುತ್ತಿರುವ ವಿಡಿಯೋವನ್ನು ನೋಡಿದ ಹಲವು ಮಂದಿ ಇದು ನಿಜವಾಗಿಯೂ ಕೂಡ ಬಾಂಗ್ಲಾದೇಶದಲ್ಲಿ ನಡೆದ ಘಟನೆ ಎಂದು ಭಾವಿಸಿದ್ದಾರೆ. ಹೀಗಾಗಿ ಸಾಕಷ್ಟು ಮಂದಿ ತಮ್ಮ ಸಾಮಾಜಿಕ ಜಾಲತಾಣದ ವೈಯಕ್ತಿಕ ಖಾತೆಗಳಲ್ಲಿ ಕೂಡ ಹಂಚಿಕೊಳ್ಳುತ್ತಿದ್ದಾರೆ. ಹಲವರು ಇಸ್ಲಾಂ ಸಮುದಾಯದ ವಿರುದ್ಧ ಹಾಗೂ ಎಲ್ಲಾ ಬಾಂಗ್ಲಾದೇಶದ ನಾಗರೀಕರ ವಿರುದ್ಧ ಆಕ್ರೋಶವನ್ನು ವ್ಯಕ್ತ ಪಡಿಸುತ್ತಿದ್ದಾರೆ. ಹೀಗೆ ವ್ಯಾಪಕವಾಗಿ ವಿವಿಧ ಟಿಪ್ಪಣಿಗಳೊಂದಿಗೆ ಹಂಚಿಕೆಯಾಗುತ್ತಿರುವ ವೈರಲ್‌ ವಿಡಿಯೋ ಕುರಿತು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ.

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್‌ ಆಗುತ್ತಿರುವ ವಿಡಿಯೋ ಕುರಿತು ಸಂಪೂರ್ಣವಾಗಿ ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ಅಂತರ್ಜಾಲದಲ್ಲಿ ಸಂಚಲನ ಮೂಡಿಸುತ್ತಿರುವ ವೈರಲ್‌ ವಿಡಿಯೋಗೆ ಸಂಬಂಧಿಸಿದಂತೆ ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ Islamic Media TV ಎಂಬ ಫೇಸ್‌ಬುಕ್‌ ಖಾತೆಯಿಂದ  30 ಆಗಸ್ಟ್‌ 2024 ರಂದು ಹಂಚಿಕೊಳ್ಳಲಾದ ವಿಡಿಯೋದ ಮೂಲ ಆವೃತ್ತಿ ಕಂಡು ಬಂದಿದೆ.

ಈ ವಿಡಿಯೋದಲ್ಲಿ ಯುವಕನೊಬ್ಬ ಮಾಸ್ಕ್‌ ಧರಿಸುವ ಮುನ್ನ “ವೇಶ್ಯೆಯರನ್ನು ಈ ರೀತಿ ಹೊರಹಾಕಬೇಕು. ಒಂದು ಗುಂಪನ್ನು ಕೊಂದರು ಇನ್ನೊಂದು ಗುಂಪು ಬರುತ್ತಿದೆ’ ಎಂದು ಹೇಳುವುದನ್ನು ಕೇಳಬಹುದಾಗಿದೆ. ಈ ವಿಡಿಯೋ ಮೂಲಕ ಆತ ಲೈಂಗಿಕ ಕಾರ್ಯಕರ್ತೆಯರ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾನೆ ಎಂಬುದು ತಿಳಿದು ಬಂದಿದೆ. ಇದೇ ಆಧಾರದ ಮೇಲೆ ನಾವು ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿ ಅಂತರ್ಜಾಲದಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ ಪ್ರೋಥೊಮಾಲೊ ಸೇರಿದಂತೆ ಹಲವು ವರದಿಗಳು ಕಂಡು ಬಂದಿವೆ.

ವರದಿಗಳ ಪ್ರಕಾರ ಬಾಂಗ್ಲಾದೇಶದಾದ್ಯಂತ ಲೈಂಗಿಕ ಕಾರ್ಯಕರ್ತೆಯರ ಮೇಲೆ ಹಲವು ಯುವಕರು ದಾಳಿ ನಡೆಸುತ್ತಿದ್ದು, ಸಾಕಷ್ಟು ಮಂದಿ ಲೈಂಗಿಕ ಕಾರ್ಯಕರ್ತೆಯರು ಗಾಯಗೊಂಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಇನ್ನೂ ಕೆಲವು ಕಡೆ ಹಲವು ಯುವಕರು ಲೈಂಗಿಕ ಕಾರ್ಯಕರ್ತೆಯರನ್ನು ಬಳಸಿಕೊಂಡ ನಂತರ ಹಣ ಕೇಳಿದಾಗ ಅವರನ್ನು ಥಳಿಸುತ್ತಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಹೀಗೆ ವಿವಿಧ ರೀತಿಯ ಆಯಾಮಗಳಿರುವ ವರದಿಗಳಲ್ಲಿ ಲೈಂಗಿಕ ಕಾರ್ಯಕರ್ತೆಯರ ಮೇಲೆ ಹಲ್ಲೆಯಾಗಿರುವುದು ದೃಢ ಪಟ್ಟಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿರುವ ರೀತಿಯಲ್ಲಿ ಬುರ್ಖಾ ಧರಿಸಿಲ್ಲವೆಂದು ಸಿಕ್ಕ ಸಿಕ್ಕ ಮಹಿಳೆಯರ ಮೇಲೆ ಯುವಕರು ಹಲ್ಲೆ ನಡೆಸಿದ್ದಾರೆ ಎಂಬುದು ಸುಳ್ಳು, ಯುವಕರ ದಾಳಿಗೆ ತುತ್ತಾಗಿರುವವರೆಲ್ಲ ಲೈಂಗಿಕ ಕಾರ್ಯಕರ್ತೆಯರಾಗಿದ್ದು, ಈ ಬಗ್ಗೆ ಅಲ್ಲಿನ ಸ್ಥಳೀಯ ಆಡಳಿತಗಳು ಕ್ರಮ ತೆಗೆದುಕೊಂಡಿವೆ ಎಂಬ ಮಾಹಿತಿ ಲಭ್ಯವಾಗಿದೆ. ಹಾಗಾಗಿ ಇಂತಹ ಯಾವುದೇ ಸುದ್ದಿಗಳು ಕಂಡು ಬಂದರೆ ಅವುಗಳ ಕುರಿತು ಒಮ್ಮೆ ಪರಿಶೀಲಿಸಿಕೊಳ್ಳುವುದು ಉತ್ತಮ.


ಇದನ್ನೂಓದಿ : Fact Check | ಮಣಿಪುರದಲ್ಲಿ ವಿದ್ಯಾರ್ಥಿಗಳು ರಾಷ್ಟ್ರಧ್ವಜವನ್ನು ತೆಗೆದು ಮೈತೇಯಿ ಧ್ವಜವನ್ನು ಹಾರಿಸಿದ್ದಾರೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *