“ವಿಮಾನದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬ ಶೌಚಾಲಯಕ್ಕೆ ಹೋಗುವ ಹಾದಿಯನ್ನು ಬಂದ್ ಮಾಡಿ ನಮಾಜ್ ಮಾಡಿದ್ದಾರೆ. ಇದರಿಂದ ಬೇಸತ್ತ ಹಿಂದೂ ಮಹಿಳೆ ಶಿವನ ಸ್ತೋತ್ರ ಹಾಡಿದ್ದಾರೆ. ಇನ್ನು ಮುಂದೆ ಕಂಡ ಕಂಡಲ್ಲಿ ನಮಾಜ್ ಮಾಡುವ ಎಲ್ಲಾ ಜಿಹಾದಿಗಳಿಗೆ ಹಿಂದೂಗಳು ಇದೇ ರೀತಿಯಾದ ಪಾಠವನ್ನು ಕಲಿಸಬೇಕಿದೆ. ಈ ಮಹಿಳೆಯ ಕಾರ್ಯಕ್ಕೆ ಎಲ್ಲರೂ ಅಭಿನಂದನೆಯನ್ನು ಸಲ್ಲಿಸಲೇಬೇಕು” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
A Muslim guy started Namaz in the flight, where a Hindu woman started singing Namo Namo Shankara Bhajan. pic.twitter.com/XMkKKrqwH9
— AB (@zainee05) September 13, 2024
ಹೀಗೆ ವೈರಲ್ ಆಗುತ್ತಿರುವ ವಿಡಿಯೋವನ್ನು ನೋಡಿದ ಹಲವು ಮಂದಿ ಇದು ನಿಜವಾದ ಘಟನೆ ಎಂದು ಭಾವಿಸಿ ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದೇ ರೀತಿ ಇನ್ನೂ ಕೆಲವರು “ಮುಸ್ಲಿಂ ವ್ಯಕ್ತಿಯೊಬ್ಬ ವಿಮಾನದಲ್ಲಿ ಮೌನದಿಂದ ಪ್ರಾರ್ಥನೆ ಸಲ್ಲಿಸಿದ್ದಾನೆ. ಆದರೆ ಇದನ್ನು ಸಹಿಸಲಾಗದ ಹಿಂದೂ ಯುವತಿ ಜೋರಾಗಿ ಕಿರುಚಿ ಹಿಂದೂ ಭಕ್ತಿಗೀತೆ ಹಾಡಿದ್ದಾಳೆ” ಎಂದು ಹಂಚಿಕೊಳ್ಳುತ್ತಿದ್ದಾರೆ. ಇದು ಕೋಮುಗಳ ನಡುವಿನ ಸೌಹಾರ್ದವನ್ನು ಕದಡುವಂತ ಪೋಸ್ಟ್‌ಗಳಾಗಿದ್ದು, ಹೀಗೆ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನ ಸತ್ಯಾಸತ್ಯತೆ ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ.
A Muslim man prayed quietly on the plane, but a Hindu woman started singing bhajans loudly in response. Although Muslims usually pray quietly to avoid disturbing others, her reaction caused a disturbance on the flight.
Some dances in front of mosques and some on flights. pic.twitter.com/YPAoBYyXB9
— أمينة Amina (@AminaaKausar) September 10, 2024
ಫ್ಯಾಕ್ಟ್‌ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಪೋಸ್ಟ್‌ನ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋಗೆ ಸಂಬಂಧಿಸಿದಂತೆ ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿಕೊಂಡು ಅಂತರ್ಜಾಲದಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ ವಿಡಿಯೋದಲ್ಲಿ ಹಾಡುತ್ತಿರುವ ಮಹಿಳೆ ಕಲಾವಿದೆ ಮತ್ತು ಗಾಯಕಿ ನಿಶಾ ಶಿವದಾಸನಿ ಎಂಬ ಮಾಹಿತಿ ಲಭ್ಯವಾಗಿದೆ.
ಈ ವಿಡಿಯೋವನ್ನು 8, ಮಾರ್ಚ್ 2024 ರಂದು ಸ್ವತಃ ನಿಶಾ ಶಿವದಾಸನಿ ಅವರು ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ “ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ 2024 ರ ಶುಭಾಶಯಗಳು | ನಿಶಾ ಶಿವದಾಸನಿ | ಇಂಡಿಗೋ ಏರ್‌ಲೈನ್ ಧನ್ಯವಾದಗಳು” ಎಂದು ಶೀರ್ಷಿಕೆಯನ್ನು ನೀಡಿ ವಿಡಿಯೋವನ್ನು ಹಂಚಿಕೊಂಡಿರುವುದು ಕಂಡು ಬಂದಿದೆ. ಈ ವಿಡಿಯೋವನ್ನು ಪೂರ್ತಿಯಾಗಿ ವೀಕ್ಷಿಸಿದಾಗ ನಿಶಾ ಶಿವದಾಸನಿ ಅವರು ವಿಮಾನದಲ್ಲಿರುವ ಎಲ್ಲರ ಸಮ್ಮುಖದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಈ ಹಾಡು ಹಾಡಿದ್ದಾರೆ. ಈ ಹಾಡಿಗೆ ವಿಮಾನದಲ್ಲಿ ಕುಳಿತಿರುವ ಇತರೆ ಪ್ರಯಾಣಿಕರು ಕೂಡ ಪ್ರೋತ್ಸಾಹ ನೀಡಿರುವುದು ಕಂಡು ಬಂದಿದೆ.
ಈ ವಿಡಿಯೋ ಕುರಿತು ಇನ್ನಷ್ಟು ಹುಡುಕಾಟವನ್ನು ನಡೆಸಿದಾಗ 31 ಮಾರ್ಚ್, 2024 ರಂದು ಡ್ರಂಕ್ ಜರ್ನಲಿಸ್ಟ್ ಎಂಬ ಎಕ್ಸ್ ಖಾತೆಯಲ್ಲಿ ಇದೇ ವೈರಲ್ ವಿಡಿಯೋವನ್ನು ಪೋಸ್ಟ್ ಮಾಡಿರುವುದು ಪತ್ತೆಯಾಗಿದೆ. ಅದರಲ್ಲಿ ಈ ವಿಡಿಯೋಗೂ ನಮಾಜ್‌ಗೂ ಯಾವುದೇ ಸಂಬಂಧವಿಲ್ಲ. ಈ ಮಹಿಳೆ ಭಜನೆಯನ್ನು ಹಾಡಿರುವ ವಿಡಿಯೋ ಇದಾಗಿದೆ ಮತ್ತು ಇದಕ್ಕೂ ಮುಸ್ಲಿಮರಿಗೂ ನಮಾಜ್‌ಗೂ ಯಾವುದೇ ಸಂಬಂಧವಿಲ್ಲ’ ಎಂದು ಉಲ್ಲೇಖಿಸಿರುವುದು ಕಂಡು ಬಂದಿದೆ.
This is okay and permitted. pic.twitter.com/fQ51XeXiJC
— Drunk Journalist (@drunkJournalist) March 31, 2024
ಒಟ್ಟಾರೆಯಾಗಿ ಹೇಳುವುದಾದರೆ 2024 ರ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಮಹಿಳೆಯರು ವಿಮಾನದಲ್ಲಿ ಭಕ್ತಿಗೀತೆ ಹಾಡುವ ವಿಡಿಯೋವನ್ನು, ಮುಸ್ಲಿಂ ವ್ಯಕ್ತಿಯೊಬ್ಬರು ವಿಮಾನದಲ್ಲಿ ನಮಾಜ್ ಮಾಡಿದ್ದಕ್ಕೆ ಪ್ರತಿಯಾಗಿ ಮಹಿಳೆಯೊಬ್ಬರು ಶಿವ ಸ್ತೋತ್ರ ಹಾಡಿದ್ದಾರೆ ಎಂದು ಸುಳ್ಳು ಮಾಹಿತಿಯೊಂದಿಗೆ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಇಂತಹ ಕೋಮು ಸಾಮರಸ್ಯ ಕದಡುವ ಯಾವುದೇ ವಿಡಿಯೋಗಳು ನಿಮಗೆ ಕಂಡು ಬಂದರೆ ಅವುಗಳನ್ನು ಹಂಚಿಕೊಳ್ಳಬೇಡಿ. ಸುಳ್ಳು ವಿಡಿಯೋಗಳು ಎನಿಸಿದಲ್ಲಿ ಅವುಗಳನ್ನು ರಿಪೋರ್ಟ್ ಮಾಡಿ.
ಇದನ್ನೂ ಓದಿ : Fact Check | ಬುರ್ಖಾ ಧರಿಸಿಲ್ಲವೆಂದು ಬಾಂಗ್ಲಾದೇಶದಲ್ಲಿ ಮಹಿಳೆಯರಿಗೆ ಥಳಿಸಲಾಗಿದೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.