Fact Check | ವಕ್ಫ್ ಕಾಯಿದೆಗೆ ತಿದ್ದುಪಡಿಗಳನ್ನು ಬೆಂಬಲಿಸಲು/ವಿರೋಧಿಸಲು ಕೇಂದ್ರ ಸರ್ಕಾರ ಯಾವುದೇ ದೂರವಾಣಿ ಸಂಖ್ಯೆ ಆರಂಭಿಸಿಲ್ಲ

“ಆತ್ಮೀಯ ಹಿಂದೂಗಳೇ ಗಮನಿಸಿ ದೇಶಾದ್ಯಂತ ಹಲವು ಕಡೆಗಳಲ್ಲಿ ಸರ್ಕಾರದ ಆಸ್ತಿಯನ್ನು ವಕ್ಫ್‌ ತನ್ನ ವಶಕ್ಕೆ ಪಡೆದಿರುವುದು ಈ ಗುಟ್ಟಾಗಿ ಉಳಿದಿಲ್ಲ. ಇದರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲು ಮೋದಿ ಸರ್ಕಾರ ವಕ್ಫ್‌ ಕಾಯ್ದೆಗೆ ತಿದ್ದುಪಡಿ ತರಲು ಹೊಸ ಹೆಜ್ಜೆಯನ್ನು ಇಟ್ಟಿದೆ. ಇದರ ಭಾಗವಾಗಿ ಈಗ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ವಕ್ಫ್‌ ಕಾಯ್ದೆಗೆ ತಿದ್ದುಪಡಿಗಳನ್ನು ಬೆಂಬಲಿಸಲು ಅಥವಾ ವಿರೋಧಿಸಲು 9209204204 ಎಂಬ ದೂರವಾಣಿ ಸಂಖ್ಯೆಯನ್ನು ಆರಂಭಿಸಿದೆ.  ವಕ್ಫ್‌ ಕಾಯಿದೆಯ ತಿದ್ದುಪಡಿಗಳಿಗೆ ಬೆಂಬಲಿಸಲು ನೀವು ಈ ನಂಬರ್‌ಗೆ ಮಿಸ್‌ ಕಾಲ್‌ ಕೊಡಿ” ಎಂದು ಪೋಸ್ಟ್‌ವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಹೀಗೆ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ಪೋಸ್ಟ್‌ ಅನ್ನು ನಂಬಿ ಸಾಕಷ್ಟು ಮಂದಿ ಸಾಮಾಜಿಕ ಜಾಲತಾಣದಲ್ಲಿರುವ ತಮ್ಮ ವೈಯಕ್ತಿಕ ಖಾತೆಗಳಲ್ಲಿ ಕೂಡ ಇದೇ ಪೋಸ್ಟ್‌ ಅನ್ನು ಹಂಚಿಕೊಳ್ಳುತ್ತಿದ್ದಾರೆ. ಹೀಗಾಗಿ ಈ ಸುದ್ದಿ ಈಗ ಸಾರ್ವಜನಿಕರಲ್ಲಿ ಗೊಂದಲವನ್ನು ಕೂಡ ಮೂಡಿಸಿದೆ. ಇದರ ನಡುವೆ ವಿವಿಧ ಆಯಾಮಗಳಲ್ಲಿ ಕೂಡ ಈ ಟಿಪ್ಪಣಿಯನ್ನು ವಿವಿಧ ಕಡೆಗಳಲ್ಲಿ ಹಂಚಿಕೊಳ್ಳಲಾಗುತ್ತಿದ್ದು, ವೈರಲ್‌ ಆಗುತ್ತಿರುವ ಮಾಹಿತಿ ನಿಜವೇ ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ.

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್‌ ಆಗುತ್ತಿರುವ ವಿಡಿಯೋ ಕುರಿತು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಪರಿಶೀಲನೆಯನ್ನು ನಡೆಸಲು ಮುಂದಾಯಿತು. ಇದಕ್ಕಾಗಿ ವೈರಲ್ ಪೋಸ್ಟ್‌ಗೆ ಸಂಬಂಧಿಸಿದಂತೆ ನಾವು ವಿವಿಧ ಕೀ ವರ್ಡ್‌ಗಳನ್ನು ಬಳಸಿ ಅಂತರ್ಜಾಲದಲ್ಲಿ ಹುಡುಕಾಟವನ್ನು ನಡೆಸಿದೆವು. 9 ಆಗಸ್ಟ್‌ 2024ರಂದು ಟೈಮ್ಸ್‌ ಆಫ್‌ ಇಂಡಿಯಾ Allies backing, waqf bill tabled, sent to JPC ಎಂಬ ಶೀರ್ಷಿಕೆಯ ಅಡಿಯಲ್ಲಿ ಮಾಡಿದ್ದ ವರದಿಯೊಂದು ಲಭ್ಯವಾಗಿದೆ.

ಈ ವರದಿಯ ಪ್ರಕಾರ ಕೇಂದ್ರ ಸರ್ಕಾರವು ಲೋಕಸಭೆಯಲ್ಲಿ ಮಂಡಿಸಿರುವ ವಕ್ಫ್‌ (ತಿದ್ದುಪಡಿ) ಮಸೂದೆ–2024ಕ್ಕೆ ಸಂಸತ್ತಿನ ಒಳಗೂ ಹೊರಗೂ ಪರ–ವಿರೋಧ ವ್ಯಕ್ತವಾಗಿದೆ. ಮಸೂದೆಯಲ್ಲಿರುವ ಅಂಶಗಳ ಬಗ್ಗೆ ಸಂಸತ್ತಿನಲ್ಲಿ ವಿರೋಧ ಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾದ ಬಳಿಕ, ಮಸೂದೆಯನ್ನು ಪರಿಶೀಲನೆಗಾಗಿ ಜಂಟಿ ಸದನ ಸಮಿತಿಗೆ ಒಪ್ಪಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಜಗದಾಂಬಿಕಾ ಪಾಲ್ ಅವರ ಅಧ್ಯಕ್ಷತೆಯಲ್ಲಿ 22 ಆಗಸ್ಟ್ 2024 ರಂದು ನಡೆದ ತನ್ನ ಮೊದಲ ಸಭೆಯಲ್ಲಿ ಸಾರ್ವಜನಿಕರಿಂದ ಮತ್ತು ಇತರ ಮಧ್ಯಸ್ಥಗಾರರಿಂದ ಪ್ರತಿಕ್ರಿಯೆಯನ್ನು ಸಂಗ್ರಹಿಸಲು ಪತ್ರಿಕೆಯ ಜಾಹೀರಾತನ್ನು ನೀಡಲು ಸಲಹೆ ನೀಡಲಾಯಿತು. ಅದರಂತೆ, 30 ಆಗಸ್ಟ್ 2024 ರಂದು, ಲೋಕಸಭಾ ಸಚಿವಾಲಯವು ಸಾರ್ವಜನಿಕ ವ್ಯಕ್ತಿಗಳು ಮತ್ತು ಸಂಸ್ಥೆಗಳು ಪೋಸ್ಟ್, ಫ್ಯಾಕ್ಸ್ ಅಥವಾ ಇಮೇಲ್ ಮೂಲಕ ತಮ್ಮ ಸಲಹೆಗಳನ್ನು ಸಲ್ಲಿಸಲು ಆಹ್ವಾನಿಸುವ ಜಾಹೀರಾತನ್ನು ನೀಡಿತು. ಅಭಿಪ್ರಾಯಗಳನ್ನು ಸಲ್ಲಿಸಲು  16 ಸೆಪ್ಟೆಂಬರ್ 2024ರ ಮಧ್ಯರಾತ್ರಿಯವರೆಗೆ ಅವಕಾಶ ಕಲ್ಪಿಸಲಾಗಿದೆ ಎಂಬುದು ಕೂಡ ನಿಜ

ಇದರ ಹಿನ್ನೆಲೆಯಲ್ಲಿ 31 ಆಗಸ್ಟ್ 2024 ರಂದು, ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯು “ನೋ ವಕ್ಫ್ ತಿದ್ದುಪಡಿ ಮಸೂದೆ” ಎಂಬ ಶೀರ್ಷಿಕೆಯ ನೋಟೀಸ್ ಬಿಡುಗಡೆ ಮಾಡಿತು, ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಲು ಮತ್ತು ಜಂಟಿ ಸಂಸದೀಯ ಸಮಿತಿಗೆ (ಜೆಪಿಸಿ) ತಮ್ಮ ಸಲಹೆಗಳನ್ನು ಸಲ್ಲಿಸಲು ಒದಗಿಸಿದ ಲಿಂಕ್ ಅನ್ನು ಬಳಸಲು ಸಾರ್ವಜನಿಕರಿಗೆ ಮನವಿ ಮಾಡಿತ್ತು.

ಇದೇ ರೀತಿಯಲ್ಲಿ 12 ಸೆಪ್ಟೆಂಬರ್‌ 2024ರಂದು ವಿಶ್ವ ಹಿಂದೂ ಪರಿಷತ್‌ ತನ್ನ ಎಕ್ಸ್‌ನಲ್ಲಿ ರೀಪೋಸ್ಟ್ ಮಾಡಿದ ಟ್ವೀಟ್‌ ಲಭ್ಯವಾಗಿ. ಇದರಲ್ಲಿ ವಿಶ್ವ ಹಿಂದೂ ಪರಿಷತ್ ಕ್ಯೂಆರ್ ಕೋಡ್‌ನೊಂದಿಗೆ ನೋಟಿಸ್ ಅನ್ನು ಸಹ ಪೋಸ್ಟ್ ಮಾಡಿದ್ದು, ಕೋಡ್ ಅನ್ನು ಸ್ಕ್ಯಾನ್ ಮಾಡಲು ಮತ್ತು ಒದಗಿಸಿದ ಲಿಂಕ್ ಅನ್ನು ಬಳಸಿಕೊಂಡು ಜಂಟಿ ಸಂಸದೀಯ ಸಮಿತಿಗೆ (ಜೆಪಿಸಿ) ತಮ್ಮ ಸಲಹೆಗಳನ್ನು ಸಲ್ಲಿಸಲು ಸಾರ್ವಜನಿಕರಿಗೆ ಮನವಿ ಮಾಡಿದೆ. ನಾವು QR ಕೋಡ್ ಅನ್ನು ಸ್ಕ್ಯಾನ್ ಮಾಡಿದ್ದೇವೆ, ಇದು “ವಕ್ಫ್ ತಿದ್ದುಪಡಿ ಮಸೂದೆ, 2024 ಗಾಗಿ ಸಲಹೆಗಳು ಮತ್ತು ಸಂಪೂರ್ಣ ಬೆಂಬಲ” ಎಂಬ ವಿಷಯದೊಂದಿಗೆ ಪೂರ್ವ-ಕರಡು ಮಾಡಿದ ಇಮೇಲ್‌ ಲಭ್ಯವಾಗಿದೆ.

ಆದರೆ ಇಲ್ಲಿ ಪ್ರಮುಖವಾಗಿ ವೈರಲ್‌ ಪೋಸ್ಟ್‌ನಲ್ಲಿ ಹಂಚಿಕೊಂಡಂತೆ ಸಾರ್ವಜನಿಕರು ಮಿಸ್‌ ಕಾಲ್‌ ಕೊಟ್ಟು ತಮ್ಮ ಅಭಿಪ್ರಾಯ ತಿಳಿಸಲು ನೀಡಿರುವ ಸಂಖ್ಯೆಯ ಕುರಿತು ಪರಿಶೀಲನೆಯನ್ನು ನಡೆಸಿದಾಗ 9209204204 ಎಂಬ ಸಂಖ್ಯೆ ಅಸ್ತಿತ್ವದಲ್ಲೇ ಇಲ್ಲ ಎಂದು ತಿಳಿದು ಬಂದಿದೆ. ಹಾಗಾಗಿ ವೈರಲ್‌ ವಿಡಿಯೋದಲ್ಲಿ ಹಂಚಿಕೊಳ್ಳಲಾದ ಮಾಹಿತಿ ಅರ್ಧ ಸತ್ಯದಿಂದ ಕೂಡಿದ್ದು, ಸಾರ್ವಜನಿಕರನ್ನು ದಾರಿ ತಪ್ಪಿಸಲು ಯತ್ನಿಸಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ವಕ್ಫ್ ಬೋರ್ಡ್ ರದ್ದತಿಯನ್ನು ಬೆಂಬಲಿಸಲು 9209204204 ಗೆ ಮಿಸ್ಡ್ ಕಾಲ್ ನೀಡುವಂತೆ ಮನವಿ ಮಾಡುವ ವೈರಲ್ ಪೋಸ್ಟ್  ಸುಳ್ಳು ಮಾಹಿತಿಯಿಂದ ಕೂಡಿದೆ. ಈ ಕುರಿತು  ಸರ್ಕಾರ ಅಥವಾ ಜೆಪಿಸಿ ( ಜಾಯಿಂಟ್‌ ಪಾರ್ಲಿಮೆಂಟರಿ ಕಮಿಟಿ) ಯಾವುದೇ ಮಿಸ್ಡ್ ಕಾಲ್ ಅಭಿಯಾನವನ್ನು ಪ್ರಕಟಿಸಿಲ್ಲ ಎಂಬುದು ಸ್ಪಷ್ಟವಾಗಿದೆ.


ಇದನ್ನೂ ಓದಿ : Fact Check | ಕೀನ್ಯಾದಲ್ಲಿ ಅದಾನಿ ಗ್ರೂಪ್ ಅಧಿಕಾರಿಗಳಿಗೆ ಲಂಚ ನೀಡಿದ್ದನ್ನು ಒಪ್ಪಿಕೊಂಡಿದೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *