Fact Check | ಕೀನ್ಯಾದಲ್ಲಿ ಅದಾನಿ ಗ್ರೂಪ್ ಅಧಿಕಾರಿಗಳಿಗೆ ಲಂಚ ನೀಡಿದ್ದನ್ನು ಒಪ್ಪಿಕೊಂಡಿದೆ ಎಂಬುದು ಸುಳ್ಳು

ಸಾಮಾಜಿಕ ಜಾಲತಾಣದಲ್ಲಿ” ಕೀನ್ಯಾದಲ್ಲಿ ವಿಮಾನ ನಿಲ್ದಾಣ ನವೀಕರಣ ಮತ್ತು ವಿದ್ಯುತ್ ಸರಬರಾಜಿಗಾಗಿ ತಮ್ಮ ಯೋಜನೆಗಳು ಕೈ ತಪ್ಪದಂತೆ ಲಂಚ ನೀಡುತ್ತಿರುವುದನ್ನು ಅದಾನಿ ಗ್ರೂಪ್ ಒಪ್ಪಿಕೊಂಡಿದೆ. ಈ ಕುರಿತು ತನ್ನ ಪತ್ರಿಕಾ ಹೇಳಿಕೆಯನ್ನು ಹೊರಡಿಸಿರುವ ಅದಾನಿ ಸಮೂಹ, ತಾವು ಯಾವೆಲ್ಲ ಅಧಿಕಾರಿಗಳಿಗೆ ಲಂಚದ ಹಣ ನೀಡಿದ್ದೇವೆ ಎಂಬುದನ್ನು ಅತೀ ಶೀಘ್ರದಲ್ಲಿ ಬಯಲು ಮಾಡಲಿದ್ದೇವೆ ಎಂದು ಹೇಳಿಕೊಂಡಿದೆ. ಇದು ಒಂದು ಕಡೆ ಕೀನ್ಯಾದಲ್ಲಿ ರಾಜಕೀಯ ತಿರುವನ್ನು ಪಡೆದುಕೊಂಡರೆ. ಮತ್ತೊಂದು ಕಡೆ ಭಾರತದಲ್ಲೂ ಅದಾನಿ ಸಮೂಹ ಎಷ್ಟು ಲಂಚ ಕೊಟ್ಟು ಕೆಲಸ ಮಾಡಿಸಿಕೊಂಡಿರಬೇಡ ಎಂದು ನೀವೆ ಊಹಿಸಿ” ಎಂಬ ವಿವಿಧ ರೀತಿಯ ಬರಹವುಳ್ಳ ಪೋಸ್ಟ್‌ಗಳು ಸಾಮಾಜಿಕ  ಜಾಲತಾಣದಲ್ಲಿ ವೈರಲ್‌ ಆಗಿದೆ.

ಹೀಗೆ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಅದಾನಿ ಸಮೂಹದ ಅಧಿಕೃತ ತಲೆ ಬರಹ ಹೊಂದಿರುವ ಪತ್ರಿಕಾ ಪ್ರಕಟಣೆಯ ಪತ್ರವೇ ಇದ್ದು, ಈ ಪತ್ರ ಅದಾನಿ ಸಮೂಹದ ನೈಜ ಪತ್ರಿಕಾ ಹೇಳಿಕೆಯಂತೆ ಕಂಡು ಬಂದಿರುವುದರಿಂದ ಹಲವರು ಈ ಪೋಸ್ಟ್‌ ಅನ್ನು ಎಲ್ಲೆಡೆ ಹಂಚಿಕೊಳ್ಳುತ್ತಿದ್ದಾರೆ. ಸಾಕಷ್ಟು ಮಂದಿ ಅದಾನಿ ಸಮೂಹದ ವಿರುದ್ಧ ಆಕ್ರೋಶವನ್ನು ಕೂಡ ವ್ಯಕ್ತ ಪಡಿಸುತ್ತಿದ್ದಾರೆ. ಇದರಿಂದ ಜನ ಸಾಮಾನ್ಯರಿಗೂ ಕೂಡ ಈ ವಿಚಾರದ ಕುರಿತು ಹಲವು ಅನುಮಾನಗಳು ಮೂಡಲು ಆರಂಭಿಸಿದೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ಪೋಸ್ಟ್‌ನ ಕುರಿತು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್‌ 

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ಪೋಸ್ಟ್‌ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್‌ ಪೋಸ್ಟ್‌ಗೆ ಸಂಬಂಧಿಸಿದಂತೆ ಅದಾನಿ ಗ್ರೂಪ್‌ನ ಅಧಿಕೃತ ವೆಬ್‌ಸೈಟ್ ಅನ್ನು ಪರಿಶೀಲನೆ ನಡೆಸಿದೆವು. ಆದರೆ ವೈರಲ್‌ ಪೋಸ್ಟ್‌ನಲ್ಲಿ ಕಂಡು ಬಂದ ಪ್ರಕಟಣೆಯ ಕುರಿತು ಯಾವುದೇ ಮಾಹಿತಿ ಅದಾನಿ ಸಮೂಹದ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟವಾಗಿರಲಿಲ್ಲ. ಒಂದು ವೇಳೆ ವೈರಲ್‌ ಪೋಸ್ಟ್‌ ನಿಜವೇ ಆಗಿದ್ದರೆ ಆ ಬಗ್ಗೆ ಅದಾನಿ ಸಮೂಹ ಅಧಿಕೃತ ಮಾಹಿತಿಯನ್ನು ಹೊರ ಹಾಕುತ್ತಿತ್ತು.

ಹೀಗಾಗಿ ಇನ್ನಷ್ಟು ಮಾಹಿತಿಗಾಗಿ ನಾವು ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿಕೊಂಡು ಎಕ್ಸ್‌ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ 16 ಸೆಪ್ಟೆಂಬರ್‌ 2024ರಂದು ಅದಾನಿ ಸಮೂಹ ತಮ್ಮ ಅಧಿಕೃತ ಎಕ್ಸ್‌ ಖಾತೆಯಲ್ಲಿ ಮಾಹಿತಿಯನ್ನು ನೀಡಿದ್ದು ” ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿರುವ ಪತ್ರಿಕಾ ಹೇಳಿಕೆಗೂ ಅದಾನಿ ಸಮೂಹಕ್ಕೂ ಯಾವುದೇ ರೀತಿಯಾದ ಸಂಬಂಧಿವಿಲ್ಲ. ಹಾಗಾಗಿ ಈ ವೈರಲ್‌ ಪೋಸ್ಟ್‌ ಅನ್ನು ನಂಬಬೇಡಿ” ಎಂದು ಮನವಿಯನ್ನು ಮಾಡಿಕೊಂಡಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿಯಲ್ಲಿ ಅದಾನಿ ಸಮೂಹ ಕೀನ್ಯಾದಲ್ಲಿನ ತನ್ನ ಕೆಲವೊಂದು ಕಾಮಗಾರಿಗಳಿಗೆ ಹಣ ನೀಡಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ ಎಂಬ ಪತ್ರಿಕಾ ಹೇಳಿಕೆ ಸುಳ್ಳಾಗಿದೆ. ಹಾಗಾಗಿ ಇಂತಹ ಸುಳ್ಳು ಹೇಳುಕೆಗಳನ್ನು ನಂಬುವ ಮುನ್ನ ಎಚ್ಚರ ವಹಿಸಿ


ಇದನ್ನೂ ಓದಿ : Fact Check: ಆರೋಗ್ಯ ವಿಮಾ ಪ್ರೀಮಿಯಂ ಮೇಲಿನ GST ದರವನ್ನು 18% ರಿಂದ 5% ಗೆ ಕಡಿಮೆಗೊಳಿಸಿದ್ದಾರೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *