ರೋಹಿಂಗ್ಯಾ ಮುಸ್ಲಿಮರು ಭಾರತೀಯ ಮುಸ್ಲಿಮರ ಮಸೀದಿಯನ್ನು ಆಕ್ರಮಿಸಿಕೊಂಡಿದ್ದಾರೆ. ಇದರಿಂದಾಗಿ ಭಾರತೀಯ ಮುಸ್ಲಿಮರು ಮತ್ತು ರೋಹಿಂಗ್ಯಾ ಮುಸ್ಲಿಮರ ಮಧ್ಯೆ ಹಿಂಸಾತ್ಮಕ ಘರ್ಷಣೆ ನಡೆಯುತ್ತಿದೆ ಎಂಬ ಪೋಸ್ಟ್‌ನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
ಫ್ಯಾಕ್ಟ್ ಚೆಕ್ :
ಈ ವೈರಲ್ ಪೋಸ್ಟ್‌ನ “ರೋಹಿಂಗ್ಯಾ ಮುಸ್ಲಿಮರು ಭಾರತೀಯ ಮುಸ್ಲಿಮರ ಮಸೀದಿಯನ್ನು ಆಕ್ರಮಿಸಿದ್ದಾರೆ” ಎಂಬ ಶೀರ್ಷಿಕೆಯಲ್ಲಿನ ಕೆಲವು ಹೆಸರುಗಳನ್ನು Google ಕೀವರ್ಡ್ ಬಳಸಿ ಹುಡುಕಿದಾಗ, ವೈರಲ್ ಘಟನೆಯ ಕುರಿತು ಯಾವುದೇ ಸಂಬಂಧಿತ ಸುದ್ದಿ ವರದಿಗಳು ಲಭಿಸಿಲ್ಲ. ವೈರಲ್ ಚಿತ್ರವನ್ನು ಕೀಫ್ರೇಮ್‌ಗಳ ರಿವರ್ಸ್ ಇಮೇಜ್‌ನಲ್ಲಿ ಹುಡುಕಿದಾಗ, ಈ ವೈರಲ್ ಘಟನೆಯ ಕುರಿತು 2023ರ ಜನವರಿ 3ರಂದು ಪ್ರಕಟವಾದ ANI ವರದಿ ಲಭಿಸಿದೆ. ಲೇಖನದಲ್ಲಿ ಡಿಸೆಂಬರ್ 30 ರಂದು ಅಸ್ಸಾಂನ ಧುಬ್ರಿ ಜಿಲ್ಲೆಯ ಬಿಲಾಸಿಪಾರಾ ಪ್ರದೇಶದಲ್ಲಿ ಮಸೀದಿಯೊಂದರ ಆಡಳಿತ ಮಂಡಳಿಯ ಅಧಿಕಾರಕ್ಕಾಗಿ ಎರಡು ಗುಂಪುಗಳ ನಡುವೆ ಘರ್ಷಣೆ ಉಂಟಾಗಿತ್ತು. ಆ ಘರ್ಷಣೆಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ ಎಂದು ವರದಿ ಮಾಡಿದೆ.
2024ರ ಜನವರಿ 3ರಂದು ಅಸ್ಸಾಂ ಮೂಲದ ನ್ಯೂಸ್ ಲೈವ್‌ನ ಕಾರ್ಯನಿರ್ವಾಹಕ ಸಂಪಾದಕರು ಟ್ವಿಟರ್‌ನಲ್ಲಿ ವೈರಲ್ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. 2023ರ ಜನವರಿ 5 ರಂದು ಯುಟ್ಯೂಬ್‌ನಲ್ಲಿ ಟೈಮ್ಸ್ ನೌ ವರದಿಯು ಅದೇ ವೀಡಿಯೊವನ್ನು ಹಂಚಿಕೊಂಡಿದ್ದು, ರೋಹಿಂಗ್ಯಾ ಮುಸ್ಲಿಮರು ಭಾರತದ ಮಸೀದಿಯನ್ನು ಆಕ್ರಮಿಸಿಕೊಂಡಿರುವುದರ ಕುರಿತು ಯಾವುದೇ ವರದಿಗಳು ಲಭ್ಯವಾಗಿಲ್ಲ.
ಬಿಲಾಸಿಪಾರಾ ಪೊಲೀಸ್ ಠಾಣೆಯ ಪ್ರಭಾರ ಅಧಿಕಾರಿ ಇನ್ಸ್‌ಪೆಕ್ಟರ್ ಟಿ ಬೊರೊ, “ಮಸೀದಿಯ ಆಡಳಿತ ಸಮಿತಿಯ ಅಧಿಕಾರಕ್ಕಾಗಿ ಆಂತರಿಕ ಘರ್ಷಣೆಯಾಗಿದೆ. 2022ರಲ್ಲಿ ಗುಂಪುಗಳ ನಡುವಿನ ಘರ್ಷಣೆಗೆ ಸಂಬಂಧಿಸಿದಂತೆ ಎರಡು ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ಘಟನೆಯಲ್ಲಿ ರೋಹಿಂಗ್ಯಾ ಮುಸ್ಲಿಮರು ಭಾಗಿಯಾಗಿಲ್ಲ” ಎಂದು ಖಚಿತಪಡಿಸಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ಅಸ್ಸಾಂನ ಮಸೀದಿಯ ಎರಡು ಬಣಗಳ ನಡುವಿನ ಆಂತರಿಕ ಘರ್ಷಣೆಯ ಹಳೆಯ ವೀಡಿಯೊವನ್ನು ರೋಹಿಂಗ್ಯಾ ಮುಸ್ಲಿಮರು ಭಾರತೀಯ ಮುಸ್ಲಿಮರ ಮಸೀದಿಯನ್ನು ಹಿಂಸಾತ್ಮಕವಾಗಿ ವಶಪಡಿಸಿಕೊಳ್ಳುತ್ತಿದ್ದಾರೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಇಂತಹ ಮಾಹಿತಿಗಳನ್ನು ಹಂಚಿಕೊಳ್ಳುವ ಮುನ್ನ ಒಮ್ಮೆ ಪರಿಶೀಲಿಸಿಕೊಳ್ಳುವುದು ಉತ್ತಮ.
ಇದನ್ನು ಓದಿದ್ದೀರಾ?
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.