Fact Check | ಗಾಯಕಿ ಲತಾ ಮಂಗೇಶ್ಕರ್ ಅವರ ಕೊನೆಯ ಮಾತು ಎಂದು ಸಂಬಂಧವಿಲ್ಲದ ಬರಹಗಳ ಹಂಚಿಕೆ

ಸಾಮಾಜಿಕ ಜಾಲತಾಣದಲ್ಲಿ ದೇಶದ ಹೆಮ್ಮೆಯ ಗಾಯಕಿಯರಲ್ಲಿ ಒಬ್ಬರಾದ ಲತಾ ಮಂಗೇಶ್ಕರ್‌ ಅವರ ಕೊನೆಯ ಮಾತು ಎಂದು ಬರಹವೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಅದರಲ್ಲಿ ” ಲತಾ ಮಂಗೇಶ್ಕರ್ ಅವರ ಕೊನೆಯ ಮಾತುಗಳು, ಸಾವಿನಷ್ಟು ಸತ್ಯ ಈ ಜಗತ್ತಿನಲ್ಲಿ ಯಾವುದೂ ಇಲ್ಲ. ಪ್ರಪಂಚದ ಅತ್ಯಂತ ದುಬಾರಿ ಬ್ರ್ಯಾಂಡ್ ಕಾರು ನನ್ನ ಗ್ಯಾರೇಜ್‌ನಲ್ಲಿ ನಿಂತಿದೆ. ಆದರೆ, ನಾನು ಗಾಲಿಕುರ್ಚಿಗೆ ಸೀಮಿತಳಾಗಿದ್ದೆ! ಎಲ್ಲಾ ವಿಭಿನ್ನ ವಿನ್ಯಾಸಗಳು ಮತ್ತು ಬಣ್ಣಗಳ ದುಬಾರಿ ಬಟ್ಟೆಗಳು, ದುಬಾರಿ ಚಪ್ಪಲಿಗಳು, ದುಬಾರಿ ಪರಿಕರಗಳು ನನ್ನ ಮನೆಯಲ್ಲಿವೆ,  ನಾನು ನನ್ನ ಬ್ಯಾಂಕ್ ಖಾತೆಯಲ್ಲಿ ಸಾಕಷ್ಟು ಹಣವನ್ನು ಹೊಂದಿದ್ದೇನೆ ನನಗೆ ಅರಮನೆಯಂತಹ ಮನೆಯಿದೆ, ಆದರೆ ನಾನು ಆಸ್ಪತ್ರೆಯಲ್ಲಿ ಸಣ್ಣ ಹಾಸಿಗೆಯಲ್ಲಿ ಮಲಗಿದ್ದೇನೆ. ನಾನು ಈ ಜಗತ್ತಿನಲ್ಲಿ ಪಂಚತಾರಾ ಹೋಟೆಲ್‌ಗಳಿಗೆ ಹೋಗುತ್ತಿದ್ದೆ. ಆದರೆ ಈಗ ನನ್ನನ್ನು ಆಸ್ಪತ್ರೆಯಲ್ಲಿ ಒಂದು ಲ್ಯಾಬ್‌ಗೆ ಕಳುಹಿಸಲಾಗುತ್ತಿದೆ!. ಇದು ಲತಾ ಮಂಗೇಶ್ಕರ್‌ ಅವರ ಕೊನೆಯ ಮಾತು” ಎಂದು ಪೋಸ್ಟ್‌ವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ವೈರಲ್‌ ಪೋಸ್ಟ್‌ ಸಾಕಷ್ಟು ಭಾವನಾತ್ಮಕ ಅಂಶಗಳಿಂದ ಕೂಡಿರುವುದರಿಂದ ಮತ್ತು ಇದು ಲತಾ ಮಂಗೇಶ್ಕರ್‌ ಅವರೇ ಹೇಳಿದ್ದಾರೆ ಎಂದು ಹಂಚಿಕೊಳ್ಳಲಾಗುತ್ತಿರುವುದರಿಂದ ಸಾಕಷ್ಟು ಮಂದಿ ಇದು ನಿಜವೆಂದು ಭಾವಿಸಿ ತಮ್ಮ ಸಾಮಾಜಿಕ ಜಾಲತಾಣದ ವೈಯಕ್ತಿಕ ಖಾತೆಗಳಲ್ಲಿ ಕೂಡ ಇದೇ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದರ ಜೊತೆಗೆ ಇನ್ನೂ ಕೆಲವರು ತಮ್ಮ ಸ್ವಂತ ಬರಹಗಳಿಂದಲೂ ಈ ಪೋಸ್ಟ್‌ಗಳನ್ನು ಹಂಚಿಕೊಂಡು ವಿವಿಧ ರೀತಿಯ ಅಭಿಪ್ರಾಯವನ್ನು ವ್ಯಕ್ತ ಪಡಿಸುತ್ತಿದ್ದಾರೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ಪೋಸ್ಟ್‌ನ ಸತ್ಯಾಸತ್ಯತೆ ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ.

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ಪೋಸ್ಟ್‌ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ವೈರಲ್‌ ಪೋಸ್ಟ್‌ಗೆ ಸಂಬಂಧಿಸಿದಂತೆ ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿ ಈ ಕುರಿತು ಯಾವುದಾದರು ಮಾಧ್ಯಮಗಳು ವರದಿ ಮಾಡಿವೆಯೇ ಎಂದು ಹುಡುಕಾಟವನ್ನು ನಡೆಸಿದೆವು. ಒಂದು ವೇಳೆ ವೈರಲ್‌ ಪೋಸ್ಟ್‌ನಲ್ಲಿ ಹೇಳಿರುವಂತೆ ಇದು ನಿಜಕ್ಕೂ ಲತಾ ಮಂಗೇಶ್ಕರ್‌ ಅವರು ಕೊನೆಯ ಮಾತುಗಳಾಗಿದ್ದರೆ. ಈ ಕುರಿತು ರಾಷ್ಟ್ರೀಯ ಹಾಗೂ ಸ್ಥಳೀಯ ಮಾಧ್ಯಮಗಳು ವರದಿಯನ್ನು ಮಾಡಬೇಕಿತ್ತು. ಆದರೆ ಆ ರೀತಿಯ ಯಾವುದೇ ವರದಿಗಳು ಕಂಡು ಬಂದಿಲ್ಲ. ಹೀಗಾಗಿ ವೈೆರಲ್‌ ಪೋಸ್ಟ್‌ ಹಲವು ಅನುಮಾನಗಳನ್ನು ಮೂಡಿಸಿತ್ತು.

ಈ ಕಾರಣದಿಂದಾಗಿ ಈ ಬಗ್ಗೆ ಇನ್ನಷ್ಟು ಹುಡಕಾಟವನ್ನು ನಡೆಸಿದಾಗ ನಮಗೆ  5 ವರ್ಷಗಳ ಹಿಂದೆ ಕೀನ್ಯಾದ ದ ಸ್ಟ್ಯಾಂಡರ್ಡ್‌ ಪತ್ರಿಕೆಯ ಆನ್‌ಲೈನ್ ವೆಬ್‌ಸೈಟ್ ಪ್ರಕಟಿಸಿದ ವರದಿಯೊಂದು ಕಂಡು ಬಂದಿದೆ. ಅದರಲ್ಲಿ ಈ ಹೇಳಿಕೆಗಳನ್ನು ಡೊಮಿನಿಕನ್ ರಿಪಬ್ಲಿಕ್‌ನ ಫ್ಯಾಶನ್ ಬ್ಲಾಗರ್ ಕಿರ್ಜಾಯ್ಡಾ ರೋಡ್ರಿಗಸ್ ಅವರು ಮಾಡಿದ್ದಾರೆ ಎಂದು ಉಲ್ಲೇಖಿಸಿರುವುದು ಕಂಡು ಬಂದಿದೆ.  ಅವರು ಕ್ಯಾನ್ಸರ್ ನಿಂದ 2018 ರಲ್ಲಿ ನಿಧನರಾಗಿರುವುದು ಕೂಡ ತಿಳಿದು ಬಂದಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿಯಲ್ಲಿ ಲತಾ ಮಂಗೇಶ್ಕರ್ ಅವರು ತಮ್ಮ ಕೊನೆಯ ಗಳಿಗೆಯಲ್ಲಿ ಆಡಿದ ಮಾತು ಎಂಬ ಟಿಪ್ಪಣಿಯು ಸಂಪೂರ್ಣವಾಗಿ ಸುಳ್ಳಿನಿಂದ ಕೂಡಿದೆ. ಹಾಗೂ ಈ ರೀತಿಯ ಹೇಳಿಕೆಯನ್ನು ನೀಡಿರುವುದು ಕೀನ್ಯಾದ ಫ್ಯಾಶನ್ ಬ್ಲಾಕರ್ ಕಿರ್ಜಾಯ್ಡಾ ರೋಡ್ರಿಗ್ರಸ್ ಅವರು ಎಂಬುದು ತಿಳಿದುಬಂದಿದೆ. ಹಾಗಾಗಿ ಯಾವುದೇ ಭಾವನಾತ್ಮಕ ಸುದ್ದಿಗಳು ಕಂಡು ಬಂದಾಗ ಅವುಗಳನ್ನು ಒಮ್ಮೆ ಪರಿಶೀಲಿಸಿಕೊಳ್ಳುವುದು ಉತ್ತಮ


ಇದನ್ನೂ ಓದಿ : Fact Check | ವಕ್ಫ್ ಕಾಯಿದೆಗೆ ತಿದ್ದುಪಡಿಗಳನ್ನು ಬೆಂಬಲಿಸಲು/ವಿರೋಧಿಸಲು ಕೇಂದ್ರ ಸರ್ಕಾರ ಯಾವುದೇ ದೂರವಾಣಿ ಸಂಖ್ಯೆ ಆರಂಭಿಸಿಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *