ಕಳೆದ ಅನೇಕ ವರ್ಷಗಳಿಂದ ಪೋನ್ ಕಾಲ್ ಮೂಲಕ ವಂಚಿಸುವ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕೆಲವು ದಿನಗಳಿಂದ “ನಿಮ್ಮ ಮೇಲೆ ವರ್ಚುವಲ್ ಅರೆಸ್ಟ್ ವಾರಂಟ್ ಜಾರಿಯಾಗಿದೆ” ಎಂದು ವೀಡಿಯೋ ಕಾಲ್ ಮೂಲಕ ಬೆದರಿಸಿ ಹಣ ವರ್ಗಾಯಿಸಿಕೊಂಡಿರುವ ಪ್ರಕರಣಗಳು ಬಯಲಿಗೆ ಬಂದಿವೆ.
ಈಗ ಉಡುಪಿಯಲ್ಲಿ ಇಂತಹದ್ದೇ ಪ್ರಕರಣ ಬೆಳಕಿಗೆ ಬಂದಿದ್ದು, +918822309328 ಸಂಖ್ಯೆಯಿಂದ ಕರೆ ಮಾಡಿ ಟೆಲಿಕಾಮ್ ರೆಗುಲೇಟರಿ ಅಥಾರಿಟಿ ಆಫ್ ಇಂಡಿಯಾ ದಿಂದ ಕರೆ ಮಾಡುತ್ತಿದ್ದು ನಿಮ್ಮ ಮೊಬೈಲ್ ನಂಬರ್ ನಲ್ಲಿ ಅನೈತಿಕ ಜಾಹಿರಾತು ಹಾಗೂ ಕಿರುಕುಳ ನೀಡುವಂತಹ ಸಂದೇಶಗಳು ಇದ್ದು, ನಿಮ್ಮ ಮೇಲೆ ಒಟ್ಟು 17 FIR ದಾಖಲಾಗಿವೆ. ಇನ್ನೇರಡು ಗಂಟೆಗಳ ಒಳಗೆ ನಿಮ್ಮ ಹೆಸರಿನಲ್ಲಿರುವ ಎಲ್ಲಾ ಕಾಂಟ್ಯಾಕ್ಟ್ ಸಂಖ್ಯೆಗಳನ್ನು ನಿಷ್ಕ್ರಿಯಗೊಳಿಸುತ್ತೇವೆ. ನಿಮ್ಮ ಮೇಲೆ ಅರೆಸ್ಟ್ ವಾರೆಂಟ್ ಆಗಿದೆ ಎಂದು ಪೋಲೀಸರ ಶೈಲಿಯಲ್ಲಿ ಬೆದರಿಸಿ 89 ಲಕ್ಷದಷ್ಟು ವಂಚನೆ ಮಾಡಿದ್ದಾರೆ.
ಫ್ಯಾಕ್ಟ್ ಚೆಕ್:
ಈ ರೀತಿಯ ಕರೆ ನಕಲಿಯಾಗಿದ್ದು, ಇದು ವಂಚನೆಯ ಜಾಲವಾಗಿದೆ. ಈ ರೀತಿ ಯಾವುದೇ ಪೋಲಿಸ್ ಠಾಣೆಯಿಂದ ಜನರನ್ನು ವರ್ಚುವಲ್ ಅರೆಸ್ಟ್ ಮಾಡುವ ಪದ್ಧತಿ ಇಲ್ಲ. ಪೋಲಿಸ್ ಇಲಾಖೆ ಇಂತಹ ಅನಾಮಿಕ ಕರೆಗಳನ್ನು ಸ್ವೀಕರಿಸದಂತೆ ಜನರಲ್ಲಿ ಮನವಿ ಮಾಡಿದೆ.
ಕಾನೂನು ಜಾರಿ ಅಧಿಕಾರಿಗಳಂತೆ ನಟಿಸುವ ಸೈಬರ್ ಅಪರಾಧಿಗಳು “ಡಿಜಿಟಲ್ ಬಂಧನಗಳ” ಬಗ್ಗೆ ಹೆಚ್ಚುತ್ತಿರುವ ವರದಿಗಳ ನಂತರ, ಆನ್ಲೈನ್ ಬೆದರಿಕೆ, ಬ್ಲ್ಯಾಕ್ಮೇಲ್ ಮತ್ತು ಸುಲಿಗೆಗೆ ಬಳಸುವ 1,000 ಕ್ಕೂ ಹೆಚ್ಚು ಸ್ಕೈಪ್ ಐಡಿಗಳನ್ನು ನಿರ್ಬಂಧಿಸಲು ಕೇಂದ್ರ ಸರ್ಕಾರ ಮೈಕ್ರೋಸಾಫ್ಟ್‌ನೊಂದಿಗೆ ಕೈಜೋಡಿಸಿದೆ. ಘಟನೆ ನಡೆದ ತಕ್ಷಣ ದೂರು ದಾಖಲಿಸುವಂತೆ ಸರ್ಕಾರ ಜನರಿಗೆ ಸಲಹೆ ನೀಡಿದೆ. ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಭಾರತದಲ್ಲಿ ಸೈಬರ್ ಅಪರಾಧಗಳು ಏಕೆ ಸ್ಫೋಟಗೊಳ್ಳುತ್ತಿವೆ:
ಈ ವರ್ಷದಲ್ಲಿ ಸೈಬರ್ ಹಗರಣಗಳು ಹೆಚ್ಚಾಗಿವೆ. ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ (ಐ 4 ಸಿ) ಪ್ರಕಾರ, ಮೇ 2024 ರ ವೇಳೆಗೆ 7,000 ಸೈಬರ್ ಅಪರಾಧ ವರದಿಗಳು ದಾಖಲಾಗಿವೆ. ಇದು 2021 ಮತ್ತು 2023 ರ ನಡುವಿನ ಅವಧಿಗಿಂತ 114% ಹೆಚ್ಚಾಗಿದೆ ಮತ್ತು 2022 ಕ್ಕಿಂತ 61% ಹೆಚ್ಚಾಗಿದೆ.
ಸೈಬರ್ ಹಗರಣಗಳು ಹೆಚ್ಚಾಗಲು ಒಂದು ಕಾರಣವಿದೆ.
“ಯಾವುದೇ ಅಪರಾಧವು ಸಣ್ಣ ಕಂಪನಿಯಂತೆ ಸಣ್ಣ ಘಟಕವಾಗಿ ಪ್ರಾರಂಭವಾಗುತ್ತದೆ. ಹೆಚ್ಚಿನ ಜನರು ಮೋಸ ಹೋಗುತ್ತಿದ್ದಂತೆ ಮತ್ತು ಸ್ಕ್ಯಾಮರ್‌ಗಳು ಹೆಚ್ಚು ಹೆಚ್ಚು ಹಣವನ್ನು ಗಳಿಸುತ್ತಿದ್ದಂತೆ, ಘಟಕಗಳು ವಿಸ್ತರಿಸುತ್ತವೆ “ಎಂದು ಭವಿಷ್ಯದ ಅಪರಾಧ ಸಂಶೋಧಕ ಮತ್ತು ಉತ್ತರ ಪ್ರದೇಶದ ಸೈಬರ್ ಅಪರಾಧದ ಮಾಜಿ ಎಸ್‌ಪಿ ತ್ರಿವೇಣಿ ಸಿಂಗ್ IndiaTodayಗೆ ತಿಳಿಸಿದ್ದಾರೆ.
ಇಷ್ಟೇ ಅಲ್ಲದೆ ವೀಡಿಯೋ ಕಾಲ್ ಮಾಡುವ ಮೂಲಕ ವ್ಯಕ್ತಿಗಳ ನಗ್ನ ಚಿತ್ರಗಳನ್ನು ಇತರರೊಂದಿಗೆ ಇರುವಂತೆ ಎಡಿಡ್ ಮಾಡಿ ನಿಮ್ಮ ಮನೆಯವರು ಮತ್ತು ನಿಮ್ಮ ಮೊಬೈಲ್‌ನಲ್ಲಿರುವ ಎಲ್ಲಾ ನಂಬರ್‌ಗಳಿಗೂ ಕಳೆಸುತ್ತೇವೆ ಎಂದು ಸಾವಿರಾರು, ಲಕ್ಷಾಂತರ ರೂಪಾಯಿಗಳನ್ನು ವಂಚಿಸುತ್ತಿರುವ ಪ್ರಕರಣಗಳು ಸಾಮಾನ್ಯವಾಗಿವೆ.
ಅನೇಕ ಬಾರಿ ಪೋಲಿಸರಿಗೆ ಹೆದರಿಕೊಂಡು ಇಂತಹ ವಂಚನೆಗೆ ಬಲಿಯಾದ ಜನರು ಹಣ ಕಳೆದುಕೊಂಡು ಸುಮ್ಮನಾಗಿ ಬಿಡುತ್ತಾರೆ. ಆದ್ದರಿಂದಲೇ ಈಗ ಪೋಲಿಸ್ ಇಲಾಖೆ ಸೈಬರ್ ಪೋಲಿಸ್ ಎಂಬ ಹೊಸ ವಿಭಾಗವನ್ನೇ ತೆರೆದು ಇಂತಹ ಆನ್ಲೈನ್ ವಂಚನೆಗಳ ವಿರುದ್ದ ಜನರಲ್ಲಿ ಅರಿವು ಮೂಡಿಸುತ್ತಿದೆ.
ಇಂದು ಈ ಸುದ್ದಿ ಬರೆಯುವ ಹೊತ್ತಿಗೆ ಕನ್ನಡದ ಪ್ರಸಿದ್ಧ ಕಾರ್ಟೂನಿಸ್ಟ್ ಆದ ಪಿ. ಮಹಮ್ಮದ್ ಅವರಿಗೂ ಸಹ +918652596745 ನಂಬರ್ ನಿಂದ ಇದೇ ರೀತಿಯ ವಂಚನೆಯ ಕರೆ ಬಂದಿದೆ ಎಂದು ಅವರು ತಮ್ಮ ಪೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡು ಇಂತಹ ಕರೆಗಳನ್ನು ಸ್ವೀಕರಿಸಬೇಡಿ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರಿಗೆ ಎಚ್ಚರಿಸಿದ್ದಾರೆ.
ಡಿಜಿಟಲ್ ಬಂಧನದಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಕ್ರಮಗಳು:
ಸೈಬರ್ ಸುರಕ್ಷತೆಯ ಕಡೆಗೆ ಪ್ರಾಯೋಗಿಕ ಮತ್ತು ಅವಲೋಕನಾತ್ಮಕ ವಿಧಾನವನ್ನು ರೂಢಿಸಿಕೊಳ್ಳುವ ಮತ್ತು ಡಿಜಿಟಲ್ ಬಂಧನ(Virtual Arrest)ವನ್ನು ಅನುಭವಿಸುವ ಅಪಾಯವನ್ನು ಕಡಿಮೆ ಮಾಡಲು ಪ್ರಮುಖವಾಗಿ ಕೆಲವು ಉತ್ತಮ ಅಭ್ಯಾಸಗಳು ಈ ಕೆಳಗಿನಂತಿವೆ:
- ಸೈಬರ್ ನೈರ್ಮಲ್ಯ: ಪಾಸ್ವರ್ಡ್‌ಗಳು ಮತ್ತು ಸಾಫ್ಟ್ವೇರ್ ಅನ್ನು ಆಗಾಗ ನವೀಕರಿಸುವ ಮೂಲಕ ಸೈಬರ್ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ಮತ್ತು ಅನಧಿಕೃತ ಪ್ರವೇಶದ ಸಾಧ್ಯತೆಗಳನ್ನು ಕಡಿಮೆ ಮಾಡಲು ಎರಡು ಅಂಶಗಳ ದೃಢೀಕರಣವನ್ನು ಸಕ್ರಿಯಗೊಳಿಸುವುದು ಅಗತ್ಯವಾಗಿದೆ.
- ಫಿಶಿಂಗ್ ಪ್ರಯತ್ನಗಳು: ಅನುಮಾನಾಸ್ಪದ ಲಿಂಕ್‌ಗಳನ್ನು ಕ್ಲಿಕ್ ಮಾಡುವುದನ್ನು ತಪ್ಪಿಸುವ ಮೂಲಕ ಅಥವಾ ಅಪರಿಚಿತ ಮೂಲಗಳಿಂದ ಲಗತ್ತುಗಳನ್ನು ಡೌನ್ಲೋಡ್ ಮಾಡುವ ಮೂಲಕ ಮತ್ತು ಯಾವುದೇ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳುವ ಮೊದಲು ಇಮೇಲ್‌ಗಳು ಮತ್ತು ಸಂದೇಶಗಳ ನ್ಯಾಯಸಮ್ಮತತೆಯನ್ನು ದೃಢೀಕರಿಸುವ ಮೂಲಕ ಇವುಗಳನ್ನು ತಪ್ಪಿಸಬಹುದು.
- ಸುರಕ್ಷಿತ ಸಾಧನಗಳು: ಪ್ರತಿಷ್ಠಿತ ಆಂಟಿವೈರಸ್ ಮತ್ತು ಮಾಲ್ವೇರ್ ವಿರೋಧಿ ಪರಿಹಾರಗಳನ್ನು ನಿಮ್ಮ ಮೊಬೈಲ್ ಮತ್ತು ಲ್ಯಾಪ್‌ಟಾಪ್‌ನಲ್ಲಿ ಸ್ಥಾಪಿಸುವ ಮೂಲಕ ಮತ್ತು ಇತ್ತೀಚಿನ ಭದ್ರತಾ ಪ್ರೋಟೋಕಾಲ್‌ಗಳೊಂದಿಗೆ ಆಪರೇಟಿಂಗ್ ಸಿಸ್ಟಮ್‌ಗಳು ಮತ್ತು ಅಪ್ಲಿಕೇಶನ್‌ಗಳನ್ನು ನವೀಕರಿಸುವ ಮೂಲಕ.
- ವರ್ಚುವಲ್ ಪ್ರೈವೇಟ್ ನೆಟ್ವರ್ಕ್‌ಗಳು (VPNs): ಇಂಟರ್ನೆಟ್ ಸಂಪರ್ಕಗಳನ್ನು ಎನ್ಕ್ರಿಪ್ಟ್ ಮಾಡಲು ವಿಪಿಎನ್‌ಗಳನ್ನು ಬಳಸಬಹುದು, ಇದರಿಂದಾಗಿ ಗೌಪ್ಯತೆ ಮತ್ತು ಭದ್ರತೆಯನ್ನು ಹೆಚ್ಚಿಸುತ್ತದೆ. ಆದಾಗ್ಯೂ, ವಿಶ್ವಾಸಾರ್ಹ ಪೂರೈಕೆದಾರರಿಗೆ ಮಾತ್ರ ಉಚಿತ ವಿಪಿಎನ್ ಸೇವೆಗಳು ಮತ್ತು ಒಟಿಪಿ ಬಗ್ಗೆ ಜಾಗರೂಕರಾಗಿರಬೇಕು.
- ಆನ್ ಲೈನ್ ಸೇವೆಗಳನ್ನು ಮೇಲ್ವಿಚಾರಣೆ ಮಾಡಿ: ಯಾವುದೇ ಅನಧಿಕೃತ ಅಥವಾ ಕಾನೂನುಬಾಹಿರ ಚಟುವಟಿಕೆಗಳಿಗಾಗಿ ಆನ್ ಲೈನ್ ಖಾತೆಗಳ ನಿಯಮಿತ ಪರಿಶೀಲನೆ ಮತ್ತು ಖಾತೆ ಸೆಟ್ಟಿಂಗ್ ಗಳು ಅಥವಾ ಲಾಗಿನ್ ಪ್ರಯತ್ನಗಳಲ್ಲಿ ಯಾವುದೇ ಬದಲಾವಣೆಗಳಿಗಾಗಿ ಎಚ್ಚರಿಕೆಗಳನ್ನು ಹೊಂದಿಸುವುದು ಸೈಬರ್ ಅಪರಾಧವನ್ನು ಮುಂಚಿತವಾಗಿ ಪತ್ತೆಹಚ್ಚಲು ಮತ್ತು ಅದನ್ನು ನಿಭಾಯಿಸಲು ಸಹಾಯ ಮಾಡುತ್ತದೆ.
- ಸುರಕ್ಷಿತ ಸಂವಹನ ಮಾರ್ಗಗಳು: ಸೂಕ್ಷ್ಮ ಮಾಹಿತಿಯ ರಕ್ಷಣೆಗಾಗಿ ಗೂಢಲಿಪೀಕರಣದಂತಹ ಸುರಕ್ಷಿತ ಸಂವಹನ ತಂತ್ರಗಳನ್ನು ಬಳಸಬಹುದು. ಪಾಸ್ ವರ್ಡ್ ಗಳು ಮತ್ತು ಇತರ ಮಾಹಿತಿಯನ್ನು ಹಂಚಿಕೊಳ್ಳುವುದನ್ನು ವಿಶೇಷವಾಗಿ ಸಾರ್ವಜನಿಕ ವೇದಿಕೆಗಳಲ್ಲಿ ಎಚ್ಚರಿಕೆಯಿಂದ ಮಾಡಬೇಕು.
- ಜಾಗೃತಿ: “ಡಿಜಿಟಲ್ ಬಂಧನ” ಎಂದು ಕರೆಯಲ್ಪಡುವ ಸೈಬರ್ ಅಪರಾಧದ ಹೆಚ್ಚುತ್ತಿರುವ ಹರಡುವಿಕೆಯು ತಡೆಗಟ್ಟುವ ಕ್ರಮಗಳು ಮತ್ತು ಹೆಚ್ಚಿದ ಸಾರ್ವಜನಿಕ ಜಾಗೃತಿಯ ಅಗತ್ಯವನ್ನು ಒತ್ತಿಹೇಳುತ್ತದೆ. ಪ್ರಚಲಿತದಲ್ಲಿರುವ ಸೈಬರ್ ಬೆದರಿಕೆಗಳತ್ತ ಗಮನ ಸೆಳೆಯುವ ಶೈಕ್ಷಣಿಕ ಉಪಕ್ರಮಗಳು-ವಿಶೇಷವಾಗಿ ಕಾನೂನು ಜಾರಿಯ ಕ್ರಮಗಳನ್ನು ಒಳಗೊಂಡಿರುವವು-ಈ ರೀತಿಯ ಹಗರಣಗಳನ್ನು ಗುರುತಿಸಲು ಮತ್ತು ತಡೆಗಟ್ಟಲು ಜನರಿಗೆ ಅನುವು ಮಾಡಿಕೊಡುತ್ತದೆ. ಕಾನೂನು ಜಾರಿ ಸಂಸ್ಥೆಗಳು ಮತ್ತು ದೂರಸಂಪರ್ಕ ಕಂಪನಿಗಳ ಸಹಯೋಗವು ಸಂಭಾವ್ಯ ಕರೆಗಳನ್ನು ಗುರುತಿಸುವ ಮತ್ತು ನಿರ್ಬಂಧಿಸುವ ಮೂಲಕ ವಂಚಕರು ಬಳಸುವ ಪ್ರವೇಶ ಬಿಂದುಗಳನ್ನು ಪರಿಣಾಮಕಾರಿಯಾಗಿ ಮಿತಿಗೊಳಿಸಬಹುದು.
ಆದ್ದರಿಂದ, ಈ ರೀತಿಯ ಕರೆ ಬಂದಾಗ ಸ್ವೀಕರಿಸದೇ ಮತ್ತು ಯಾರಿಗೇ ಆಗಲಿ ನಿಮ್ಮ ಬ್ಯಾಂಕ್ ಖಾತೆಗಳ ವಿವರಗಳನ್ನು ನೀಡದೇ ಇಂತಹ ವಂಚಕರಿಂದ ಅಂತರ ಕಾಯ್ದುಕೊಳ್ಳಿ ಮತ್ತು ಇಂತಹ ವಂಚನೆಗಳ ಕುರಿತು ಇತರರನ್ನೂ ಸಹ ಎಚ್ಚರಿಸಿ ಎಂದು ಕನ್ನಡ ಫ್ಯಾಕ್ಟ್ ಚೆಕ್ ತಂಡ ಎಲ್ಲರನ್ನು ಒತ್ತಾಯಿಸುತ್ತದೆ.
ಇದನ್ನು ಓದಿ: ಕರ್ನಾಟಕದ ಪೋಲಿಸರು ಗಣೇಶ ವಿಗ್ರಹವನ್ನು ಬಂಧಿಸಿದ್ದಾರೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.