Fact Check | ಸ್ನಾನಗೃಹದಲ್ಲಿರುವಾಗ ಹಿಜ್ಬುಲ್ಲಾ ಅಪರೇಟರ್‌ನನ್ನು ಸ್ಪೋಟಿಸಿ ಕೊಲ್ಲಲಾಗಿದೆ ಎಂಬುದು ಸುಳ್ಳು

“ಲೇಬನಾನ್‌ನಲ್ಲಿ ಇಸ್ರೇಲ್ ಪೇಜರ್ ದಾಳಿಯನ್ನು ನಡೆಸಿದ ನಂತರ, ವಿವಿಧ ರೀತಿಯ ದಾಳಿಗೆ ಇಸ್ರೇಲ್ ಮುಂದಾಗಿದೆ. ಈ ಹಿನ್ನಲೆಯಲ್ಲಿ ಹಲವು ಕಡೆಗಳಲ್ಲಿ ವಾಕಿಟಾಕಿ ಕೂಡ ಸ್ಪೋಟಗೊಂಡಿರುವ ಪ್ರಕರಣ ಕಂಡು ಬಂದಿದೆ. ಇದರ ನಡುವೆ ಇತ್ತೀಚಿಗೆ ಹಿಜ್ಬುಲ್ಲಾ ಆಪರೇಟರ್ ಒಬ್ಬನನ್ನು ಸ್ನಾನಗ್ರಹದಲ್ಲೇ ಇಸ್ರೇಲ್ ಹೊಡೆದು ಹಾಕಿದೆ. ಈ ಫೋಟೋದಲ್ಲಿರುವ ಕಮೋಡ್ ಅನ್ನು ಗಮನಿಸಿ ಇದು ಸ್ಪೋಟಗೊಂಡ ತೀವ್ರತೆಗೆ ಹಿಜ್ಬುಲ್ಲಾ ಆಪರೇಟರ್ ಸ್ಥಳದಲ್ಲಿ ಸಾವನ್ನಪ್ಪಿದ್ದಾನೆ” ಎಂದು ಫೋಟೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಈ ಫೋಟೋ ನೋಡಿದ ಹಲವರು ಈ ಘಟನೆ ನಿಜಕ್ಕೂ ನಡೆದಿದೆ ಮತ್ತು‌ ಹಿಜ್ಬುಲ್ಲಾ ಆಪರೇಟರ್ ಒಬ್ಬನನ್ನು ಸ್ನಾನಗ್ರಹದಲ್ಲೇ ಇಸ್ರೇಲ್ ಸ್ಪೋಟಿಸಿ ಕೊಂದಿದೆ ಎಂಬ ಬರಹಗಳೊಂದಿಗೆ ಎಕ್ಸ್ ಖಾತೆಗಳು ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ವೈರಲ್ ಫೋಟೋವನ್ನು ಹಂಚಿಕೊಳ್ಳುತ್ತಿದ್ದಾರೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಫೋಟೋವಿನ ಅಸಲಿಯತ್ತು ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್

ಸಾಮಾಜಿಕ ಜಾಲತಾಣದಲ್ಲಿ ವಿವಿಧ ಬರಹಗಳೊಂದಿಗೆ ಹಂಚಿಕೊಳ್ಳಲಾಗುತ್ತಿರುವ ವೈರಲ್ ಫೋಟೋ ನಿಜಕ್ಕೂ ಲೇಬನಾನ್‌ನಲ್ಲಿ ನಡೆದ ಘಟನೆಯೇ ಎಂಬುದನ್ನು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ವೈರಲ್ ವಿಡಿಯೋವಿನ ವಿವಿಧ ಕೀ ಫ್ರೇಮ್‌ಗಳನ್ನು ಬಳಸಿ ರಿವರ್ಸ್ ಇಮೇಜ್‌ನಲ್ಲಿ ಹುಡುಕಾಟವನ್ನು ನಡೆಸಲಾಯಿತು. ಈ ವೇಳೆ ನಮಗೆ 28 ಜನವರಿ 2020ರಲ್ಲಿ ಸೌತ್‌ ಚೀನಾ ಮಾರ್ನಿಂಗ್ ಪೋಸ್ಟ್ ಸುದ್ದಿ ವರದಿಯಲ್ಲಿ ಇದೆ ಫೋಟೋ ಆವೃತ್ತಿಯೊಂದು ಕಂಡು ಬಂದಿದೆ.

ಹೀಗಾಗಿ ಈ ಸಂಪೂರ್ಣ ವರದಿಯನ್ನು ಪರಿಶೀಲಿಸಿದಾಗ ಅದರಲ್ಲಿ “ಜನವರಿ 27 ರಂದು ವೆಸ್ಟ್ ಕೌಲೂನ್‌ನ ಜೋರ್ಡಾನ್ ರಸ್ತೆಯಲ್ಲಿರುವ ಕಿಂಗ್ ಜಾರ್ಜ್ V ಸ್ಮಾರಕ ಉದ್ಯಾನವನದಲ್ಲಿ ಶಂಕಿತ ಸುಧಾರಿತ ಸ್ಫೋಟಕ ಸಾಧನವು ಸಾರ್ವಜನಿಕ ಶೌಚಾಲಯವನ್ನು ನಾಶಪಡಿಸಿದೆ” ಎಂದು ಫೋಟೋದ ಶೀರ್ಷಿಕೆ ನೀಡಿರುವುದು‌ ಕಂಡು ಬಂದಿದೆ. ಈ ಬಗ್ಗೆ ಇನ್ನಷ್ಟು ಹುಡುಕಾಟವನ್ನು ನಡೆಸಿದಾಗ ಜನವರಿ 29, 2020 ರ ಈ ಕೊರಿಯನ್ ಸುದ್ದಿ ವರದಿಯ ಪ್ರಕಾರ, ಕರೋನ ವೈರಸ್ ಹರಡುವುದನ್ನು ತಡೆಯಲು ಚೀನಾದೊಂದಿಗಿನ ಗಡಿ ಪ್ರದೇಶವನ್ನು ಸಂಪೂರ್ಣವಾಗಿ ಮುಚ್ಚುವ ಪ್ರಯತ್ನದಲ್ಲಿ ಮನೆಯಲ್ಲಿ ತಯಾರಿಸಿದ ಬಾಂಬ್ ಚೀನಾ ವಿರೋಧಿ ಪ್ರತಿಭಟನಾಕಾರರು ಸ್ಪೋಟಿಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ

ಒಟ್ಟಾರೆಯಾಗಿ ಹೇಳುವುದಾದರೆ ಈ ಎಲ್ಲಾ ವರದಿಗಳ ಆಧಾರದ ಮೇಲೆ ವೈರಲ್ ಆಗುತ್ತಿರುವ ಫೋಟೋ ಲೇಬನಾನ್‌ಗೆ ಸಂಬಂಧಿಸಿದಲ್ಲ ಮತ್ತು ಲೆಬನಾನ್‌ನ ಸ್ನಾನಗ್ರಹ ಸ್ಫೋಟಗೊಂಡು ಹಿಜ್ಬುಲ್ಲಾದ ಆಪರೇಟರ್ ಸತ್ತಿದ್ದಾನೆ ಎಂಬುದಕ್ಕೆ ಯಾವುದೇ ರೀತಿಯ ಆಧಾರಗಳು ಇಲ್ಲ. ವೈರಲ್ ಆಗಿರುವ ಫೋಟೋ ಚೀನಾಗೆ ಸಂಬಂಧಿಸಿದ್ದಾಗಿದೆ ಎಂಬುದು ಹಲವು ವರದಿಗಳಿಂದ ಸಾಬೀತಾಗಿದೆ. ಹಾಗಾಗಿ ಇಂತಹ ಸುದ್ದಿಗಳನ್ನು ನಂಬುವ ಮುನ್ನ ಎಚ್ಚರವಹಿಸಿ


ಇದನ್ನೂ ಓದಿ : Fact Check | ಭಾರತ ಬಾಂಗ್ಲಾದೇಶಕ್ಕೆ ವಿದ್ಯುತ್ ಪೂರೈಕೆಯನ್ನು ನಿಲ್ಲಿಸಿದೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *