Fact Check | ತಿರುಮಲ ತಿರುಪತಿ ದೇವಸ್ಥಾನಕ್ಕೆ ಅಮುಲ್‌ ಸಂಸ್ಥೆ ತುಪ್ಪ ಪೂರೈಸುತ್ತಿತ್ತು ಎಂಬುದು ಸುಳ್ಳು

ಆಂಧ್ರದ ತಿರುಮಲ ತಿರುಪತಿ ದೇವಸ್ಥಾನದಲ್ಲಿ(ಟಿಟಿಡಿ ) ನೀಡುವ ಲಡ್ಡು ಪ್ರಸಾದ ತಯಾರಿಸಲು ಬಳಸುವ ತುಪ್ಪದಲ್ಲಿ ಮೀನು, ದನ ಮತ್ತು ಹಂದಿ ಕೊಬ್ಬನ್ನು ಬಳಸಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಈ ನಡುವೆ, “ತಿರುಪತಿ ದೇವಸ್ಥಾನಕ್ಕೆ ಮೊದಲು ನಂದಿನಿ ಸಂಸ್ಥೆಯು ತುಪ್ಪ ಪೂರೈಸುತ್ತಿತ್ತು ಆದರೆ ಅದನ್ನು ತೆರವುಗೊಳಿಸಿ ಅಮುಲ್ (Amul) ಸಂಸ್ಥೆಯಯೊಂದಿಗೆ ತುಪ್ಪ ಪೂರೈಸಲ ಒಪ್ಪಂದ ಮಾಡಿಕೊಳ್ಳಲಾಯ್ತು. ದಕ್ಷಿಣ ಭಾರತದ ಪ್ರಮುಖ ಬ್ರ್ಯಾಂಡ್‌ ಆದ ನಂದಿನಿಯ ಪ್ರಚಾರ ಕುಗ್ಗಿಸಲು ದೇವಸ್ಥಾನದಲ್ಲೂ ಭ್ರಷ್ಟಾಚಾರ ನಡೆಸಿ ಅಮುಲ್‌ ಜೊತೆಗೆ ಒಪ್ಪಂದ ಮಾಡಲಾಯ್ತು. ಯಾಕೆಂದರೆ ಅಮುಲ್ ಮೋದಿಯವರು ಪ್ರಚಾರ ನೀಡಿದ್ದರು ಎಂಬ ಒಂದು ಕಾರಣಕ್ಕಾಗಿ ಮಾತ್ರ” ಎಂಬ ಸಂದೇಶವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಆಗಸ್ಟ್ 2023ರಂದು ಸೌತ್‌ ಫಸ್ಟ್‌ನಲ್ಲಿ ಪ್ರಕಟವಾದ ಊಹಾಪೋಹ ಪ್ರೇರಿತ ಲೇಖನದ ಬೆನ್ನಲ್ಲೇ ಅಮುಲ್‌ ವಿರುದ್ಧ ಇಂತಹ ಆರೋಪಗಳು ಕೇಳಿ ಬಂದಿವೆ.

ಫ್ಯಾಕ್ಟ್‌ ಚೆಕ್‌

ಈ ಸುದ್ದಿಯ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಅಮುಲ್‌ ಸಂಸ್ಥೆಯು, “ತಿರುಮಲ ತಿರುಪತಿ ದೇವಸ್ಥಾನಕ್ಕೆ(ಟಿಟಿಡಿ) ಎಂದಿಗೂ ತುಪ್ಪವನ್ನು ಸರಬರಾಜು ಮಾಡಿಲ್ಲ” ಎಂದು ದೃಢೀಕರಿಸಿ ಸ್ಪಷ್ಟನೆಯನ್ನು ಹೊರಡಿಸಿದೆ. ಹೆಚ್ಚುವರಿಯಾಗಿ, “ಅಮುಲ್ ತುಪ್ಪವನ್ನು ಹಾಲಿನಿಂದ ತಯಾರಿಸಲಾಗುತ್ತದೆ ಎಂದು ಸ್ಪಷ್ಟಪಡಿಸಲು ನಾವು ಬಯಸುತ್ತೇವೆ, ಇದು ISO ಪ್ರಮಾಣೀಕೃತವಾಗಿವೆ. ಅಮುಲ್ ತುಪ್ಪವನ್ನು ಉತ್ತಮ ಗುಣಮಟ್ಟದ ಶುದ್ಧ ಹಾಲಿನ ಕೊಬ್ಬಿನಿಂದ ತಯಾರಿಸಲಾಗುತ್ತದೆ. ಎಫ್‌ಎಸ್‌ಎಸ್‌ಎಐ ಕಲಬೆರಕೆ ಪತ್ತೆ ಸೇರಿದಂತೆ ಗುಣಮಟ್ಟದ ತಪಾಸಣೆಯನ್ನು ಕೂಡ ನಡೆಸಲಾಗಿದೆ.” ಎಂದು ಪ್ರಕಟನೆಯನ್ನು ಹೊರಡಿಸಿದೆ.

“ದೇವಸ್ಥಾನಕ್ಕೆ ತುಪ್ಪ ಪೂರೈಸುತ್ತಿದ್ದ ಪ್ರಮುಖ ಪೂರೈಕೆದಾರ ತಮಿಳುನಾಡು ಮೂಲದ AR ಡೈರಿ ಫುಡ್ ಪ್ರೈವೇಟ್ ಲಿಮಿಟೆಡ್, ಹೆಚ್ಚು ಕಲಬೆರಕೆ ತುಪ್ಪವನ್ನು ಪೂರೈಸಿದ ತಪ್ಪಿತಸ್ಥರೆಂದು ಕಂಡುಬಂದಿದ್ದು, ಸಧ್ಯಕ್ಕೆ AR ಡೈರಿ ಫುಡ್ ಪ್ರೈವೇಟ್ ಲಿಮಿಟೆಡ್‌ನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ ಎಂದು ವರದಿಯಾಗಿದೆ. ತುಪ್ಪವನ್ನು ಒದಗಿಸಲು ಒಪ್ಪಂದ ಮಾಡಿಕೊಂಡ ಐದು ಪೂರೈಕೆದಾರರಲ್ಲಿ, ಕೇವಲ AR ಡೈರಿಯು ವಂಚನೆ ನಡೆಸಿದೆ, ಅವರ ಉತ್ಪನ್ನವು ಅಪಾಯಕಾರಿಯಾದ ಹೆಚ್ಚಿನ ಮಟ್ಟದ ವಿದೇಶಿ ಕೊಬ್ಬನ್ನು ಒಳಗೊಂಡಿರುವುದು ಕಂಡುಬಂದಿದೆ” ಎಂದು ದಿ ಹಿಂದೂ ಪತ್ರಿಕೆ ವರದಿ ಮಾಡಿರುವುದನ್ನು ಇಲ್ಲಿ ಗಮನಿಸಬಹುದು.

ಒಟ್ಟಾರೆಯಾಗಿ ಅಮುಲ್‌ ತಿರುಮಲ ತಿರುಪತಿ ದೇವಸ್ಥಾನಕ್ಕೆ(ಟಿಟಿಡಿ) ತುಪ್ಪ ಪೂರೈಸುತ್ತಿರಲಿಲ್ಲ ಹಾಗಾಗಿ ನಂದಿನಿ ಬದಲು ಅಮುಲ್‌ಗೆ ಒಪ್ಪಂದ ನೀಡಲಾಗಿತ್ತು ಎಂಬುದು ಊಹಾಪೋಹದ ಆಧಾರದ ಕಟ್ಟಿದ ಕಥೆ ಎಂಬುದು ಇದರಿಂದ ಸ್ಪಷ್ಟವಾಗಿದೆ.


ಇದನ್ನು ಓದಿದ್ದೀರಾ? Fact Check: 100 ರೂಪಾಯಿಯ ಹೊಸ ನೋಟುಗಳನ್ನು ಆರ್‌ಬಿಐ ನಿಷೇಧಿಸಿದೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *