Fact Check | ಚೀನಾದ ಹಳೆಯ ವೀಡಿಯೊವನ್ನು ಮಹಾರಾಷ್ಟ್ರದಲ್ಲಿ ಗುಂಡಿ ಬಿದ್ದ ರಸ್ತೆಗಳೆಂದು ಹಂಚಿಕೆ

“ಈ ವಿಡಿಯೋವನ್ನು ನೋಡಿ ಇದು ಇಂದಿನ ಮಹಾರಾಷ್ಟ್ರದ ಪರಿಸ್ಥಿತಿ. ಇಂದು ದೇಶದಲ್ಲಿ ಎಲ್ಲಯೂ ಕಂಡು ಬಾರದ ರಸ್ತೆ ಗುಂಡಿಗಳು‌ ಮಹಾರಾಷ್ಟ್ರದಲ್ಲಿ ಕಂಡು ಬರುತ್ತಿವೆ. ಗುಣಮಟ್ಟದ ರಸ್ತೆಗಳು ಮಹಾರಾಷ್ಟ್ರದಲ್ಲಿ ಮಾಯವಾಗುತ್ತಿದೆ, ಫಡ್ನವಿಸ್ ಅವರ ಅವರ ಮಾತುಗಳು ಕೇವಲ ಸುಳ್ಳುಗಳಿಂದ ಕೂಡಿದೆ. ಇನ್ನು ಮುಂದಿನ ದಿನಗಳಲ್ಲಾದರೂ ಮಹಾರಾಷ್ಟ್ರದ ಜನ ಎಚ್ಚೆತ್ತುಕೊಳ್ಳಲಿಲ್ಲವೆಂದರೆ ಅಪಾಯ ತಪ್ಪಿದ್ದಲ್ಲ” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲಾತಾಣದಲ್ಲಿ‌ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ‌.

ಈ ವೈರಲ್ ವಿಡಿಯೋ ನೋಡಿದ ಹಲವು ಮಂದಿ ಭಾರತದ ಸಾರಿಗೆ ವ್ಯವಸ್ಥೆ ಅದರಲ್ಲೂ ಪ್ರಮುಖವಾಗಿ ರಸ್ತೆ ಸಾರಿಗೆ ವ್ಯವಸ್ಥೆ ದೇಶದಲ್ಲಿ ಸಂಪೂರ್ಣವಾಗಿ ಹಾಳಾಗಿದೆ ಎಂದು ಆಕ್ರೋಶವನ್ನು ವ್ಯಕ್ತ ಪಡಿಸುತ್ತಿದ್ದಾರೆ. ಇನ್ನೂ ಕೆಲವರು ವಿವಿಧ ಬರಹಗಳೊಂದಿಗೆ ವೈರಲ್ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣದ ವೈಯಕ್ತಿಕ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹೀಗೆ ವಿವಿಧ ಬರಹಗಳೊಂದಿಗೆ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋವಿನ ಅಸಲಿಯತ್ತು ಏನು ಎಂಬುದನ್ನು ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ‌ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ಫೋಟೋಗಳನ್ನು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಪರಿಶೀಲನೆಯನ್ನು ನಡೆಸಿದೆವು. ಈ ವೇಳೆ ನಮಗೆ ವೈರಲ್ ವಿಡಿಯೋಗಳ ತುಣುಕು ಚೀನಾದಲ್ಲಿ ಅತೀವೃಷ್ಟಿಗೆ ಸಂಬಂಧಿಸಿದ್ದಾಗಿದೆ ಎಂಬುದು ತಿಳಿದು ಬಂದಿದೆ. ಇದಕ್ಕೆ ಸಂಬಂಧ ಪಟ್ಟಂತೆ ಇನ್ನಷ್ಟು ಹುಡುಕಾಟವನ್ನು ನಡೆಸಿದಾಗ ನಮಗೆ ಹಲವು ಚೀನಿ ವರದಿಗಳು ಕೂಡ ಕಂಡು ಬಂದಿವೆ.

ಈ ವರದಿಗಳ ಪ್ರಕಾರ ಚೀನಾದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಅಲ್ಲಿನ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿತ್ತು, ಸಾಕಷ್ಟು ಸಾರ್ವಜನಿಕರು ತೊಂದರೆಗೆ ಈಡಾಗಿದ್ದಾರೆ, ಇದರ ಜೊತೆಗೆ ಹಲವು ರಸ್ತೆಗಳು ಗುಂಡಿ ಬಿದ್ದಿವೆ, ಜನಸಾಮಾನ್ಯರು ವಾಹನಗಳಲ್ಲಿ ಪ್ರಾಯಣಿಸುವಾಗ ಎಚ್ಚರ ವಹಿಸಿ. ಎಂಬ ಅಂಶಗಳನ್ನು ಉಲ್ಲೇಖಿಸಲಾಗಿತ್ತು. ಈ ಬಗ್ಗೆ ಇನ್ನಷ್ಟು ಹುಡುಕಾಟವನ್ನು ನಡೆಸಿದಾಗ, 16 ಜುಲೈ  2020 ರಂದು ಮಳೆಯಿಂದಾಗಿ ಚೀನಾದ ರಸ್ತೆಗಳ ಗುಂಡಿ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾದ‌ ವಿಡಿಯೋವೊಂದು ಕಂಡು ಬಂದಿದ್ದು, ವೈರಲ್ ವಿಡಿಯೋ ಚೀನಾಗೆ ಸಂಬಂಧಿಸಿದಾಗಿದೆ ಎಂಬುದು ಸಾಬೀತಾಗಿದೆ.

ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ವೈರಲ್ ವಿಡಿಯೋ ಮಹಾರಾಷ್ಟ್ರದ್ದು ಎಂಬುದು ಸುಳ್ಳಾಗಿದೆ‌. ಈ ವಿಡಿಯೋ ಚೀನಾದ್ದಾಗಿದ್ದು, ಹಲವು ವರದಿಗಳಲ್ಲಿ ಈ ಬೃಹತ್‌ ಗುಂಡಿಗಳಿಂದ ಆವೃತವಾದ ರಸ್ತೆ ಚೀನಾದಲ್ಲಿದೆ ಎಂಬುದನ್ನು ಸಾಬೀತು ಪಡಿಸಿವೆ. ಹಾಗಾಗಿ ಯಾವುದೇ ವೈರಲ್‌ ವಿಡಿಯೋಗಳನ್ನು ಹಂಚಿಕೊಳ್ಳುವ ಮುನ್ನ ಎಚ್ಚರ ವಹಿಸಿ.


ಇದನ್ನೂ ಓದಿ : Fact Check | ಚಂಡೀಘಡ ಟೋಲ್‌ ಪ್ಲಾಜಾದಲ್ಲಿ ಮುಸಲ್ಮಾನರು ಗಲಾಟೆ ಮಾಡಿದ್ದಾರೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *