ಮಹಾತ್ಮ ಗಾಂಧೀಜಿಯವರ ಮರಿ ಮೊಮ್ಮಗರಾದ ಶ್ರೀಕೃಷ್ಣ ಕುಲಕರ್ಣಿಯವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ ಬರೆದ ಬಹಿರಂಗ ಪತ್ರ ಎಂಬ ಸಂದೇಶವೊಂದು ಹಲವಾರು ವರ್ಷಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಈ ಪತ್ರದಲ್ಲಿ ಶ್ರೀಕೃಷ್ಣ ಕುಲಕರ್ಣಿಯವರು “ಮೋಹನ್ ದಾಸ್ ಕರಮಚಂದ್ ಗಾಂಧಿ ನನ್ನ ಮುತ್ತಜ್ಜ. ಅವರನ್ನು ಶ್ರೀ ನಾಥೂರಾಂ ಗೋಡ್ಸೆ ಕೊಂದರು. ಅನೇಕ ತನಿಖೆಗಳು ಮತ್ತು ಆಯೋಗಗಳು ಈ ಪ್ರಕರಣವನ್ನು ಸಂಶೋಧಿಸಿವೆ. ಗಾಂಧಿ ಹತ್ಯೆ ಪ್ರಕರಣದಲ್ಲಿ ಆರ್‌ಎಸ್‌ಎಸ್‌ನ ಯಾರೂ ಸಿಲುಕಿಸಿಲ್ಲ. ಆರ್‌ಎಸ್‌ಎಸ್ ಮೇಲೆ ಹೊಣೆಯನ್ನೂ ಹೊರಿಸಿಲ್ಲ. ಶ್ರೀ ನಾಥೂರಾಂ ಗೋಡ್ಸೆಯನ್ನು ಮರಣದಂಡನೆಯಿಂದ ಮುಕ್ತಗೊಳಿಸುವಂತೆ ನನ್ನ ಅಜ್ಜ ದಿವಂಗತ ರಾಮದಾಸ್ ಗಾಂಧಿ ಅಂದಿನ ಗೃಹ ಸಚಿವ ಸರ್ದಾರ್ ಪಟೇಲ್ ಜಿ ಅವರಿಗೆ ಪತ್ರ ಬರೆದಿದ್ದರು.” ಎನ್ನಲಾಗಿದೆ.
“ನಿಮ್ಮ ಜನತೆಗೆ ನನ್ನ ವಿನಮ್ರ ಸಲಹೆ ಏನೆಂದರೆ, ಕಾಂಗ್ರೆಸ್ ಮತ್ತು ನಿಮ್ಮ ಹಿತ ಬಯಸುವವರು ಮುಂದೆ ಹೋಗಿ ಗಾಂಧಿಯವರ ಹೆಸರನ್ನು ಮತ್ತು ಈ ವಿಷಯವನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸುವುದನ್ನು ನಿಲ್ಲಿಸಿ. ನೀವೆಲ್ಲರೂ.. ವಿವಿಧ ಆಯೋಗಗಳ ನಿರ್ಧಾರಗಳನ್ನು ಒಪ್ಪಿಕೊಳ್ಳುವಾಗ ದಯವಿಟ್ಟು ಉದಾರತೆ ತೋರಿ. ಆರೆಸ್ಸೆಸ್ ಗಾಂಧಿಯನ್ನು ಕೊಂದರು ಎಂದು ಹೇಳುವುದು ಸಿಖ್ಖರು ನಿಮ್ಮ ಅಜ್ಜಿಯನ್ನು ಕೊಂದರು ಎಂದು ಹೇಳುವುದು ಸುಳ್ಳಾದಾಗ ಎಲ್ಲಾ ಸಿಖ್ಖರು ಅದರಲ್ಲಿ ಭಾಗಿಯಾಗಿಲ್ಲ.”
“ನಿಮ್ಮ ಕುಟುಂಬದವರು ತಮ್ಮ ಅವಕಾಶವಾದಿ ನೀತಿಯ ಭಾಗವಾಗಿ ನನ್ನ ಮುತ್ತಜ್ಜನ ಉಪನಾಮವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಈಗ ನೀವು ನಿಮ್ಮ ನಿಜವಾದ ಗುರುತನ್ನು ದೇಶಕ್ಕೆ ತಿಳಿಸಬೇಕು ಮತ್ತು ಗಾಂಧಿಯವರ ಹೆಸರನ್ನು ಬಳಸುವುದನ್ನು ನಿಲ್ಲಿಸಬೇಕು. ನಿಮ್ಮ ತಾತ ಗಾಂಧಿ ಅಲ್ಲ.. ಫಿರೋಜ್ ಖಾನ್.. ಅವರು ಜುನಾಗಢದ ಗುಜರಾತಿ ಪಠಾಣ್ ‘ನವಾಬ್ ಖಾನ್’ ಅವರ ಮಗ.. ನವಾಬ್ ಖಾನ್ ಅವರ ಪತ್ನಿ ಪಾರ್ಸಿ.. ಇಸ್ಲಾಂಗೆ ಮತಾಂತರಗೊಂಡಿದ್ದರು. ನಿಮ್ಮ ಅಜ್ಜಿ ಇಂದಿರಾ ಜೀ ಕೂಡ ಮುಸ್ಲಿಂ ಆಗಿದ್ದರು.. ಏಕೆಂದರೆ.. ಫಿರೋಜ್ ಖಾನ್ ಅವರನ್ನು ಮದುವೆಯಾಗಲು ಇಸ್ಲಾಂಗೆ ಮತಾಂತರಗೊಂಡರು. ನೀವು ಮುಸ್ಲಿಂ ಮತ್ತು ಕ್ರಿಶ್ಚಿಯನ್ನರ ಮಿಶ್ರಣ.. ನಿಮ್ಮಲ್ಲಿ ಸ್ವಲ್ಪವೂ ರಾಹುಲ್ ಇಲ್ಲ.. ಗಾಂಧಿಯೂ ಇಲ್ಲ. ಎಂದಿದ್ದಾರೆ ಎಂಬ ಸಂದೇಶವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.
ಫ್ಯಾಕ್ಟ್ ಚೆಕ್:
ಮಹಾತ್ಮ ಗಾಂಧಿಯವರ ಮರಿಮೊಮ್ಮಗರಾದ ಶ್ರೀಕೃಷ್ಣ ಕುಲಕರ್ಣಿಯವರು ರಾಹುಲ್ ಗಾಂಧಿಗೆ ಪತ್ರ ಬರೆದಿರುವ ಕುರಿತು ನಾವು ಹುಡುಕಿದಾಗ 2014ರ ದ ಫಸ್ಟ್‌ಪೋಸ್ಟ್‌ನ ವರದಿಯೊಂದು ಲಭ್ಯವಾಗಿದ್ದು, ಇದರಿಂದ ಶ್ರೀಕೃಷ್ಣ ಕುಲಕರ್ಣಿಯವರು ರಾಹುಲ್ ಗಾಂಧಿಯವರಿಗೆ ಬಹಿರಂಗ ಪತ್ರ ಬರೆದು ತಮ್ಮ ಪೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದರ ಕುರಿತು ತಿಳಿದು ಬಂದಿದೆ.
ಈ ವರದಿಯಲ್ಲಿ “ಮಹಾತ್ಮ ಗಾಂಧಿಯವರ ಹತ್ಯೆಗೆ ಆರ್‌ಎಸ್‌ಎಸ್ ಕಾರಣ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಹೇಳಿಕೆಗೆ ಅವರ ಮೊಮ್ಮಗ ಶ್ರೀಕೃಷ್ಣ ಕುಲಕರ್ಣಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.” ಎಂದು ಉಲ್ಲೇಖಿಸಿದೆ.
ಕಾಂಗ್ರೆಸ್ ತನ್ನ ಸ್ವಾರ್ಥ ಲಾಭಕ್ಕಾಗಿ ಗಾಂಧಿಯ ಹೆಸರನ್ನು ಹಾಳು ಮಾಡುತ್ತಿದೆ ಎಂದು ಆರೋಪಿಸಿದ್ದ ಅವರು, ವಿವಿಧ ತನಿಖಾ ಆಯೋಗಗಳ ತೀರ್ಪುಗಳನ್ನು ಒಪ್ಪಿಕೊಳ್ಳಬೇಕು ಎಂದು ಹೇಳಿದರು.
“ಆದ್ದರಿಂದ ದಯವಿಟ್ಟು ಈ ಪ್ರಹಸನವನ್ನು ನಿಲ್ಲಿಸಿ, ಗಾಂಧಿ ಹೆಸರಿನ ಈ ಅವಕಾಶವಾದಿ ಬಳಕೆಯನ್ನು ನಿಲ್ಲಿಸಿ. ನೀವು ಗಾಂಧಿ ಕುಟುಂಬಕ್ಕೆ ಸೇರಿದವರಲ್ಲ. ನೀವು ಭಾರತದಲ್ಲಿ ಬಹಳ ಸಮಯದವರೆಗೆ ಅನೇಕ ಜನರನ್ನು ಮೂರ್ಖರನ್ನಾಗಿ ಮಾಡಿದ್ದೀರಿ. ಈಗ ಅದನ್ನು ನಿಲ್ಲಿಸಿ.” ಎಂದಿದ್ದರು.
ಮಹಾತ್ಮ ಗಾಂಧಿಯವರ ಮೊಮ್ಮಗನಿಂದ ಪತ್ರ:
ಇದು ಶ್ರೀಕೃಷ್ಣ ಕುಲಕರ್ಣಿಯವರ ಮೂಲ ಪತ್ರವಾಗಿದ್ದು ಈ ಮೂಲ ಪತ್ರದಲ್ಲಿರುವ ಮಾಹಿತಿಗೂ ವೈರಲ್ ಸಂದೇಶಕ್ಕೂ ಅನೇಕ ವ್ಯತ್ಯಾಸಗಳನ್ನು ಕಾಣಬಹುದು. ಪತ್ರದಲ್ಲಿ ಶ್ರೀಕೃಷ್ಣ ಕುಲಕರ್ಣಿಯವರು “ಆರ್‌ಎಸ್‌ಎಸ್ ಗಾಂಧಿಯನ್ನು ಕೊಂದಿದೆ ಎಂದು ಹೇಳುತ್ತಲೇ ಇರುವುದು, ತಮಿಳರು ನಿಮ್ಮ ತಂದೆಯನ್ನು ಕೊಂದರು ಎಂದು ಹೇಳುವುದಕ್ಕೆ ಸಮಾನವಾಗಿದೆ.” ಎಂದು ಬಳಸಿದರೆ ವೈರಲ್ ಸಂದೇಶದಲ್ಲಿ “ಆರೆಸ್ಸೆಸ್ ಗಾಂಧಿಯನ್ನು ಕೊಂದರು ಎಂದು ಹೇಳುವುದು ಸಿಖ್ಖರು ನಿಮ್ಮ ಅಜ್ಜಿಯನ್ನು ಕೊಂದರು ಎಂದು ಹೇಳುವುದು ಸುಳ್ಳಾದಾಗ ಎಲ್ಲಾ ಸಿಖ್ಖರು ಅದರಲ್ಲಿ ಭಾಗಿಯಾಗಿಲ್ಲ.” ಎಂದು ಬಳಸಲಾಗಿದೆ.
ಮೂಲ ಬಹಿರಂಗ ಪತ್ರದಲ್ಲಿ ಶ್ರೀಕೃಷ್ಣ ಕುಲಕರ್ಣಿಯವರು ರಾಹುಲ್ ಗಾಂಧಿಯವರ ಕುಟುಂಬದ ಕುರಿತು ಯಾವುದೇ ಮಾಹಿತಿ ನೀಡಿಲ್ಲ. ರಾಹುಲ್ ಗಾಂಧಿ ಮುಸ್ಲಿಂ ಅಥವಾ ಕ್ರಿಶ್ಚಿಯನ್ ಎಂದು ಕರೆದಿಲ್ಲ. ಅವರು ಗಾಂಧೀಜಿಯರ ಹೆಸರನ್ನು ರಾಜಕೀಯಕ್ಕೆ ಮಾತ್ರ ಬಳಸಿಕೊಳ್ಳಬೇಡಿ ಎಂದು ಮನವಿ ಮಾಡಿದ್ದಾರೆ.
ಆದ್ದರಿಂದ ಈ ಸಂದೇಶ 2014 ರ ಹಳೆಯದಾಗಿದ್ದು ಇತ್ತೀಚಿನದ್ದಲ್ಲ. ಗಾಂಧೀಜಿಯ ಮರಿಮೊಮ್ಮಗ ಶ್ರೀಕೃಷ್ಣ ಕುಲಕರ್ಣಿ ಅವರ ಮಾತುಗಳನ್ನು ತಿರುಚಿ ಹಂಚಿಕೊಳ್ಳಲಾಗಿದೆ.
ಇದನ್ನು ಓದಿ: ನಾಗಮಂಗಲ ಗಲಭೆ ಕೇಸ್: ಪೋಲಿಸರ ಭೀತಿಯಿಂದ ಯುವಕ ಸಾವು ಎಂದು ಸುಳ್ಳು ಹರಡಿದ ಕನ್ನಡದ ಮಾಧ್ಯಮಗಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.