Fact Check: ನಾಗಮಂಗಲ ಗಲಭೆ ಕೇಸ್​: ಪೋಲಿಸರ ಭೀತಿಯಿಂದ ಯುವಕ ಸಾವು ಎಂದು ಸುಳ್ಳು ಹರಡಿದ ಕನ್ನಡದ ಮಾಧ್ಯಮಗಳು

ಇತ್ತೀಚೆಗೆ (ಸೆ.11ರಂದು) ಮಂಡ್ಯ ಜಿಲ್ಲೆಯ ನಾಗಮಂಗಲದ ಬದರಿಕೊಪ್ಪಲಿನಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿ ವಿಸರ್ಜನೆ ವೇಳೆ ಗಲಭೆ ನಡೆದು ರಾಜ್ಯದಾದ್ಯಂತ ಆತಂಕಕ್ಕೆ ಕಾರಣವಾಗಿತ್ತು. ಅಂದು ಬುದವಾರ ಅದ್ದೂರಿ ಮೆರವಣಿಗೆ ಮೂಲಕ ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡಲಾಗುತ್ತಿತ್ತು. ಈ ವೇಳೆ ಕಿಡಿಗೇಡಿಗಳು ಏಕಾಏಕಿ ಕಲ್ಲು ತೂರಾಟ ನಡೆಸಿದ್ದರು. ಎರಡು ಗುಂಪುಗಳ ನಡುವಿನ ಘರ್ಷಣೆಯಿಂದ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. ತಡರಾತ್ರಿ ಪೊಲೀಸರು ಕಾರ್ಯಾಚರಣೆ ನಡೆಸಿ ಪರಿಸ್ಥಿತಿ ಹತೋಟಿಗೆ ತಂದರು. ಪ್ರಕರಣ ಸಂಬಂಧ ಇದುವರೆಗೆ 53 ಜನರನ್ನು ಬಂಧಿಸಲಾಗಿತ್ತು. ಬಳಿಕ ನ್ಯಾಯಾಧೀಶರ ಮುಂದೆ ಬಂಧಿತರನ್ನು ಪೊಲೀಸರು ಹಾಜರುಪಡಿಸಿದ್ದರು. ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿ ಹಿರಿಯ ಸಿವಿಲ್ ನ್ಯಾಯಾಧೀಶರು ಆದೇಶಿಸಿದ್ದಾರೆ.

ಆದರೆ “ನಾಗಮಂಗಲದ ಗಲಭೆಗೆ ಸಂಬಂಧಿಸಿದಂತೆ ಬಂಧನ ಭೀತಿಯಲ್ಲಿ ಗ್ರಾಮ ತೊರೆದು ತಲೆಮರೆಸಿಕೊಂಡಿದ್ದ ಕಿರಣ್(23) ಎಂಬ ಯುವಕನೋರ್ವ ಬ್ರೈನ್ ಸ್ಟ್ರೋಕ್​ನಿಂದ ಮೃತಪಟ್ಟಿದ್ದಾರೆ. ಅವರ ತಂದೆ ಕುಮಾರ್‌ ಎಂಬುವವರನ್ನು ಸಹ ಪೋಲೀಸರು ಬಂಧಿಸಿದ್ದರು” ಎಂಬ ಸುದ್ದಿಯನ್ನು ರಾಜ್ಯದ ಹಲವು ಮಾಧ್ಯಮಗಳು ಬಿತ್ತರಿಸಿವೆ. ಇದರಿಂದ ರಾಜ್ಯದ ಜನತೆ ಆಡಳಿತಾರೂಢ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.

ಟಿವಿ 9, ಸುವರ್ಣ ನ್ಯೂಸ್, ಕನ್ನಡ ಪ್ರಭ, ನ್ಯೂಸ್ 18 ಸೇರಿದಂತೆ ಕನ್ನಡದ ಬಹುತೇಕ ಮಾಧ್ಯಮಗಳು ಈ ವರದಿಯನ್ನು ಮಾಡಿದ್ದು “ಗಲಭೆಯ ಹಿನ್ನೆಲೆಯಲ್ಲಿ ಬಂಧನ ಭೀತಿಯಿಂದ ಗ್ರಾಮ ತೊರೆದಿದ್ದ ಯುವಕ ಕಿರಣ್‌ ಮಿದುಳಿಗೆ ಪಾರ್ಶ್ವವಾಯು ಹೊಡೆದು ಮೃತಪಟ್ಟಿದ್ದಾರೆ. ಗಲಭೆಯ ನಂತರ ಕಳೆದ ವಾರ ಕಿರಣ್‌ ಊರು ತೊರೆದಿದ್ದರು. ಈ ಯುವಕನ ತಂದೆ ಕುಮಾರ್‌ನನ್ನು (ಆರೋಪಿ ಎ–17) ಪೊಲೀಸರು ಬಂಧಿಸಿದ್ದು, ಕಾರಾಗೃಹದಲ್ಲಿದ್ದಾರೆ. ತಂದೆಯ ಬಂಧನದಿಂದ ಅತಿಯಾದ ಆತಂಕ ಮತ್ತು ಒತ್ತಡಕ್ಕೆ ಒಳಗಾಗಿ ಕಿರಣ್‌ ಮೃತಪಟ್ಟಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.” ಎಂದು ಈ ವರದಿಗಳಲ್ಲಿ ಹೇಳಲಾಗಿದೆ.

ಫ್ಯಾಕ್ಟ್‌ ಚೆಕ್:

ಕನ್ನಡದ ಮಾಧ್ಯಮಗಳ ವರದಿಗಳು ಸುಳ್ಳಾಗಿದ್ದು, ಬ್ರೇನ್‌ ಸ್ಟ್ರೋಕ್‌ನಿಂದ ಮೃತಪಟ್ಟ ಯುವಕ ಕಿರಣ್ ಮೇಲೆ ಯಾವ ಆರೋಪಗಳು ಸಹ ಇರಲಿಲ್ಲ ಎಂದು ಮಂಡ್ಯ ಜಿಲ್ಲಾ ಪೋಲಿಸರು ಸ್ಪಷ್ಟನೆ ನೀಡಿದ್ದಾರೆ. ಪೋಲಿಸರ ಭೀತಿಯಿಂದ ಯುವಕ ಕಿರಣ್ ಮೃತಪಟ್ಟಿದ್ದಾರೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದಂತೆ ಇದಕ್ಕೆ ಪ್ರತಿಕ್ರಯಿಸಿರುವ ಮಂಡ್ಯ ಪೋಲಿಸರು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ” ಈ ದಿನ ಬ್ರೇನ್ ಸ್ಟ್ರೋಕ್‌ನಿಂದ ಮೃತ ಪಟ್ಟಿರುವ ವ್ಯಕ್ತಿ ಕಿರಣ್ ಬಿನ್ ಕುಮಾರ್ (23 ವರ್ಷ) ಬದರಿಕೊಪ್ಪಲು ಗ್ರಾಮದವರು ನಾಗಮಂಗಲ ಗಲಭೆ ಪ್ರಕರಣದಲ್ಲಿ ಆರೋಪಿಯಾಗಿರುವುದಿಲ್ಲ. ನಾಗಮಂಗಲ ಗಲಭೆ ಪ್ರಕರಣದ A1 ಆರೋಪಿ ಕಿರಣ್ ಕುಮಾರ್ ಎಸ್‌ ಬಿನ್ ಶ್ರೀನಿವಾಸ್‌ 26 ವರ್ಷ ಬದರಿಕೊಪ್ಪಲು ಗ್ರಾಮದವರು ದಸ್ತಗಿರಿಯಾಗಿ ಮಂಡ್ಯ ಕಾರಗೃಹದಲ್ಲಿ ನ್ಯಾಯಂಗ ಬಂಧನದಲ್ಲಿರುತ್ತಾರೆ.

ಈ ರೀತಿ ನಿಖರವಾದ ಮಾಹಿತಿ ತಿಳಿಯದೆ ಸಾಮಾಜಿಕ ಜಾಲತಾಣಗಳಲ್ಲಿ ಸಮಾಜದ ಶಾಂತಿ ಮತ್ತು ನೆಮ್ಮದಿಗೆ ಭಂಗ ತರುವಂತಹ ಸುಳ್ಳು ಸುದ್ದಿಯನ್ನು ವೈರಲ್ ಮಾಡುವವರ ವಿರುದ್ದ ಸೂಕ್ತ ಕಾನೂನು ರೀತಿಯ ಕ್ರಮ ಜರುಗಿಸಲಾಗುವುದು” ಎಂದು ಎಚ್ಚರಿಸಿದ್ದಾರೆ.

ಆದ್ದರಿಂದ, ಬ್ರೇನ್‌ ಸ್ಟ್ರೋಕ್‌ನಿಂದ ಮೃತಪಟ್ಟಿರುವ ಯುವಕ ಕಿರಣ್ ಅನಾರೋಗ್ಯದ ಕಾರಣದಿಂದ ಮೃತಪಟ್ಟಿದ್ದಾರೆಯೇ ಹೊರತು ಪೋಲಿಸರ ಭೀತಿಯಿಂದಲ್ಲ. ನಾಗಮಂಗಲದ ಗಲಭೆಗೆ ಸಂಬಂಧಿಸಿದ A1 ಆರೋಪಿ ಕಿರಣ್ ಕುಮಾರ್ ಎನ್ನುವ ವ್ಯಕ್ತಿಯ ಹೆಸರನ್ನು ಮೃತಪಟ್ಟಿರುವ ವ್ಯಕ್ತಿಗೆ ಹೊಂದಿಸಿ ಪೋಲಿಸರಿಂದ ಕಿರಣ್ ತಲೆಮರೆಸಿಕೊಂಡಿದ್ದರು ಎಂದು ಸುಳ್ಳು ಹಂಚಿಕೊಳ್ಳಲಾಗಿದೆ.


ಇದನ್ನು ಓದಿ: ಚೀನಾದ ಹಳೆಯ ವೀಡಿಯೊವನ್ನು ಮಹಾರಾಷ್ಟ್ರದಲ್ಲಿ ಗುಂಡಿ ಬಿದ್ದ ರಸ್ತೆಗಳೆಂದು ಹಂಚಿಕೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *