Fact Check | ಕಾನ್ಪುರದಲ್ಲಿ ನಡೆದ ಸಾಹಿಲ್ ಹತ್ಯೆ ಪ್ರಕರಣದಲ್ಲಿ ಯಾವುದೇ ಕೋಮು ಆಯಾಮವಿಲ್ಲ

ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದ ಘಟನೆ ಎಂದು ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದರಲ್ಲಿ ಇಬ್ಬರು ಯುವಕನೊಬ್ಬನಿಗೆ ಥಳಿಸುತ್ತಿರುವುದನ್ನು ಕಾಣಬಹುದು. ಕೆಲವು ಬಳಕೆದಾರರು ಈ ವೀಡಿಯೊವನ್ನು ಯುಪಿಯ ಕಾನ್ಪುರದಲ್ಲಿ ಮುಸ್ಲಿಂ ಯುವಕ ಸಾಹಿಲ್ ಅನ್ನು ಹಿಂದೂ ಯುವಕರು ಹೊಡೆದು ಕೊಂದಿದ್ದಾರೆ ಎಂದು ಹಂಚಿಕೊಳ್ಳುತ್ತಿದ್ದಾರೆ. ಹಲವರು ಯುಪಿಯಲ್ಲಿ ಇತ್ತೀಚೆಗೆ ಕೋಮು ಸಂಬಂಧಿತ ಗಲಭೆಗಳು ಹಾಗೂ ಹತ್ಯೆಗಳು ಜಾಸ್ತಿಯಾಗುತ್ತಿದೆ ಎಂದು ಬರೆದುಕೊಂಡು ಆಕ್ರೋಶವನ್ನು ವ್ಯಕ್ತ ಪಡಿಸುತ್ತಿದ್ದಾರೆ.

ಹೀಗೆ ವಿವಿಧ ಬರಹಗಳೊಂದಿಗೆ ವ್ಯಾಪಕವಾಗಿ ವೈರಲ್‌ ಆಗಿರುವ ವಿಡಿಯೋ ನೋಡಿದ ಜನ ಸಾಮಾನ್ಯರು ಕೂಡ ಇದನ್ನು ನಿಜವೆಂದು ಭಾವಿಸಿ ತಮ್ಮ ಸಾಮಾಜಿಕ ಜಾಲತಾಣದ ವೈಯಕ್ತಿಕ ಖಾತೆಗಳಲ್ಲಿ ಕೂಡ ಹಂಚಿಕೊಳ್ಳುತ್ತಿದ್ದಾರೆ. ಈ ಘಟನೆಯ ಹಿನ್ನೆಲೆ ಅರಿಯದೆ ಹಲವಾರು ಮಂದಿ ವಿವಿಧ ರೀತಿಯ ಕಮೆಂಟ್‌ಗಳನ್ನು ಕೂಡ ಮಾಡುತ್ತಿದ್ದು, ಪ್ರಕರಣ ಹಿನ್ನೆಲೆ ಏನು, ಹತ್ಯೆಗೊಳಗದವನು ನಿಜಕ್ಕೂ ಮುಸಲ್ಮಾನನೇ ಎಂಬುದನ್ನು ಪರಿಶೀಲನೆ ನಡೆಸದೆ ಈ ವೈರಲ್‌ ಪೋಸ್ಟ್‌ಗಳನ್ನು ಹಂಚಿಕೊಳ್ಳಲಾಗುತ್ತಿದೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ವಿಡಿಯೋವಿನ ಅಸಲಿಯತ್ತು ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ಪೋಸ್ಟ್‌ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್‌ ವಿಡಿಯೋಗೆ ಸಂಬಂಧಿಸಿದಂತೆ ವಿವಿಧ ಕೀವರ್ಡ್‌ಗಳನ್ನು ಬಳಸಿಕೊಂಡು Google ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ ಆಜ್ ತಕ್ ವೆಬ್‌ಸೈಟ್‌ನಲ್ಲಿ ಸೆಪ್ಟೆಂಬರ್ 22 ರಂದು ಪ್ರಕಟವಾದ ಸುದ್ದಿಯಲ್ಲಿ ವೈರಲ್ ವೀಡಿಯೊವನ್ನು ಸಹ ಅಪ್‌ಲೋಡ್ ಮಾಡಲಾಗಿರುವುದು ಕಂಡು ಬಂದಿದೆ. ಇದರಲ್ಲಿ ಕಾನ್ಪುರದ ಗೋವಿಂದನಗರದ ಮಹದೇವ್ ನಗರ ಕಚ್ಚಿ ಬಸ್ತಿಯಲ್ಲಿ ಸಾಹಿಲ್ ಅವರನ್ನು ಹೊಡೆದು ಸಾಯಿಸಲಾಗಿದೆ ಎಂದು ಸುದ್ದಿಯಲ್ಲಿ ಬರೆಯಲಾಗಿದೆ. ಆರೋಪಿಯ ಕುಟುಂಬಸ್ಥರು ಪ್ರಕರಣ ಹಿಂಪಡೆಯುವಂತೆ ಒತ್ತಡ ಹೇರುತ್ತಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ ಎಂಬ ಅಂಶವನ್ನು ಕೂಡ ಉಲ್ಲೇಖವಾಗಿರುವುದು ಪತ್ತೆಯಾಗಿದೆ.

ಈ ಬಗ್ಗೆ ಇನ್ನಷ್ಟು ಹುಡುಕಾಟವನ್ನು ನಡೆಸಿದಾಗ ಸೆಪ್ಟೆಂಬರ್ 21 ರಂದು ದೈನಿಕ್ ಜಾಗರಣ್‌ನ ಕಾನ್ಪುರ ಆವೃತ್ತಿಯಲ್ಲಿ ಪ್ರಕಟವಾದ ಸುದ್ದಿಯಲ್ಲಿ, ರೌಡಿ ಶೀಟರ್‌ ಇತಿಹಾಸ ಹೊಂದಿರುವ ಮೂವರು ಸಹೋದರರು ತಮ್ಮ ಇಬ್ಬರು ಸಹಚರರೊಂದಿಗೆ ಹಳೆಯ ವೈಷಮ್ಯ ಹಿನ್ನೆಲೆ ಸಾಹಿಲ್‌ನನ್ನೂ ರಾಡ್‌ನಿಂದ ಥಳಿಸಿ ಕೊಂದಿದ್ದಾರೆ.  ದಬೌಲಿ ಸಬ್ ಸ್ಟೇಷನ್ ಬಳಿ ಈ ಘಟನೆ ನಡೆದಿದೆ. ಶಾಹಿಲ್ ಸಹೋದರಿಯ ದೂರಿನ ಆಧಾರದ ಮೇಲೆ ವಿಕ್ರಮ್, ವಿವೇಕ್, ವಿನಯ್, ಅಕ್ಷಯ್ ಮತ್ತು ವಿಶಾಲ್ ವಿರುದ್ಧ ಗೋವಿಂದ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ 20 ರಂದು ಕಾನ್ಪುರ ಪೊಲೀಸರ ಎಕ್ಸ್ ಹ್ಯಾಂಡಲ್‌ನಿಂದ ಮಾಹಿತಿಯನ್ನು ಪೋಸ್ಟ್ ಮಾಡಲಾಗಿದೆ. ಇದರ ಪ್ರಕಾರ ಮೃತ ಯುವಕನ ತಂದೆ ಲಾಲ್ತಾ ಪ್ರಸಾದ್  ಹಾಗೂ ಮೃತನ ಪೂರ್ಣ ಹೆಸರು ಸಾಹಿಲ್ ಪಾಸ್ವಾನ್ ಎಂದು ತಿಳಿದು ಬಂದಿದೆ. ಈ ಮೂಲಕ ಇಲ್ಲಿ ಕೊಲೆಯಾದವನು ಕೂಡ ಹಿಂದೂ ಮತ್ತು ಹತ್ಯೆಗೈದ ಕೊಲೆಗಡುಕರು ಕೂಡ ಹಿಂದೂಗಳು ಎಂಬುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿ ಹೇಳುವುದಾದರೆ,  ಕಾನ್ಪುರದ ಗೋವಿಂದ್ ನಗರ ಪೊಲೀಸ್ ಠಾಣೆಯಲ್ಲಿ ಸಾಹಿಲ್ ಎಂಬ ಮುಸ್ಲಿಂ ವ್ಯಕ್ತಿಯನ್ನು ಹಿಂದೂಗಳು ಕೊಂದಿದ್ದಾರೆ ಎಂಬುದು ಸುಳ್ಳು, ಮೃತ ವ್ಯಕ್ತಿಯ ಪೂರ್ತಿ ಹೆಸರು ಸಾಹಿಲ್‌ ಪಸ್ವಾನ್‌. ಈ ಪ್ರಕರಣದಲ್ಲಿ ಯಾವುದೇ ರೀತಿಯಾದ ಕೋಮು ಆಯಾಮವಿಲ್ಲ. ಕೊಲೆಯಾದ ವ್ಯಕ್ತಿ ಹಾಗೂ ಕೊಲೆಗಡುಕರು ಒಂದೇ ಸಮುದಾಯಕ್ಕೆ ಸೇರಿದ್ದಾರೆ ಎಂಬುದು ಎಫ್‌ಐಆರ್‌ ಪ್ರತಿಯಿಂದ ಸಾಬೀತಾಗಿದೆ.


ಇದನ್ನೂ ಓದಿ : Fact Check | ಲೆಬನಾನ್‌ನಲ್ಲಿನ ಅಗ್ನಿ ದುರಂತದ ವಿಡಿಯೋವನ್ನು ಇಸ್ರೇಲ್‌ ದಾಳಿಯ ವಿಡಿಯೋ ಎಂದು ಹಂಚಿಕೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *