“ತಿರುಪತಿ ದೇಗುಲಕ್ಕೆ ಪ್ರಸಾದ ತಯಾರಿಸುವ ಗುತ್ತಿಗೆ ಪಡೆದಿರುವ ಎ.ಆರ್. ಡೈರಿ ಫುಡ್ ಪ್ರೈವೆಟ್ ಲಿಮಿಟೆಡ್‌ನ ಉದ್ಯೋಗಿಗಳ ಹೆಸರುಗಳನ್ನು ಗಮನಿಸಿ ಇವರೆಲ್ಲ ಮುಸಲ್ಮಾನರು. ಇದು ನಾಚಿಕೆಗೇಡಿನ ಸಂಗತಿ. ಈ ಹೆಸರುಗಳನ್ನು ನೋಡಿದರೆ ಪ್ರಸಾದದಲ್ಲಿ ದನದ ಕೊಬ್ಬು ಹಾಗೂ ಮಾಂಸಾಹಾರಿ ಪದಾರ್ಥಗಳನ್ನು ಬೆರೆಸಿ ತಿರುಪತಿ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಈ ಪ್ರಸಾದವನ್ನು ತಿನ್ನಿಸಿದರಲ್ಲಿ ಆಶ್ಚರ್ಯವಿಲ್ಲ. ಭಾರತದಲ್ಲಿ ಒಬ್ಬ ಹಿಂದೂ ವಕ್ಫ್ ಬೋರ್ಡ್ ಅಥವಾ ಯಾವುದೇ ಮುಸ್ಲಿಂ ಸಂಘಟನೆಯನ್ನು ನಡೆಸಬಹುದೇ? ಅದು ಸಾಧ್ಯವಿಲ್ಲ ಹಾಗಿದ್ದ ಮೇಲೆ ಹಿಂದೂಗಳ ದೇವಸ್ಥಾನಕ್ಕೆ ಮುಸಲ್ಮಾನರು ಏಕೆ?” ಎಂದು ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ.
Have a look at the names of the top executives of the Company from Tamilnadu which supplies Ghee to #TirupatiBalaji mandir . Explains it all ! pic.twitter.com/S4pKHbS1tD
— Amitabh Chaudhary (@MithilaWaala) September 22, 2024
ಈ ಫೋಟೋದಲ್ಲಿ ಕೇವಲ ಮುಸಲ್ಮಾನರ ಹೆಸರುಗಳು ಮಾತ್ರ ಇದ್ದು, ಇದನ್ನು ಗಮನಿಸಿದ ಹಲವರು ಎ.ಆರ್. ಡೈರಿ ಫುಡ್ ಪ್ರೈವೆಟ್ ಲಿಮಿಟೆಡ್‌ನಲ್ಲಿ ಕೇವಲ ಮುಸಲ್ಮಾನರಿದ್ದಾರೆ. ಹಿಂದೂಗಳು ಒಬ್ಬರು ಇಲ್ಲ ಎಂದು ಸಾಕಷ್ಟು ಮಂದಿ ಆಕ್ರೋಶವನ್ನು ವ್ಯಕ್ತ ಪಡಿಸಿದ್ದಾರೆ. ಹಲವರು ಇದನ್ನು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಕೂಡ ಹಂಚಿಕೊಂಡಿದ್ದಾರೆ. ಹೀಗಾಗಿ ಸಾಕಷ್ಟು ವೈರಲ್ ಆಗುತ್ತಿರುವ ಈ ಫೋಟೋವಿನ ಅಸಲಿಯತ್ತು ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ.
https://twitter.com/jpsin1/status/1837844982775816560
ಫ್ಯಾಕ್ಟ್‌ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ಈ ಕುರಿತು ಯಾವುದಾದರೂ ವರದಿಗಳು ಪ್ರಕಟಗೊಂಡಿವೆಯೇ ಎಂದು ಅಂತರ್ಜಾಲದಲ್ಲಿ ವಿವಿಧ ಕೀ ವರ್ಡ್‌ಗಳನ್ನು ಬಳಸಿಕೊಂಡು ಹುಡುಕಾಟವನ್ನು ನಡೆಸಿದೆವು. ಆದರೆ ನಮಗೆ ಈ ಬಗ್ಗೆ ಅಧಿಕೃತವಾಗಿ ಯಾವುದೇ ವರದಿಗಳು ಲಭ್ಯವಾಗಿಲ್ಲ. ಒಂದು ವೇಳೆ ಈ ಸಂಸ್ಥೆಯಲ್ಲಿ ಸಂಪೂರ್ಣವಾಗಿ ಮುಸ್ಲಿಂ ಸಿಬ್ಬಂಧಿಗಳೇ ಇರುವುದಾಗಿದ್ದರೆ, ಇದು ಬಹುದೊಡ್ಡ ಚರ್ಚೆಯನ್ನು ಹುಟ್ಟು ಹಾಕಬೇಕಿತ್ತು, ಈ ಪ್ರಕರಣದ ಬಹುದೊಡ್ಡ ಬೆಳವಣಿಗೆ ಆಗಬೇಕಿತ್ತು, ಆದರೆ ಆ ರೀತಿಯ ಯಾವುದೇ ಬೆಳವಣಿಗೆ ಈ ಪ್ರಕರಣದಲ್ಲಿ ಕಂಡು ಬಂದಿಲ್ಲ.
ಹೀಗಾಗಿ ಈ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ನಾವು, ಎ.ಆರ್. ಡೈರಿ ಫುಡ್ ಪ್ರೈವೆಟ್ ಲಿಮಿಟೆಡ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿದೆವು. ಇದರಲ್ಲಿ ಸಂಸ್ಥೆಯ ಸಿಬ್ಬಂಧಿಗಳ ಅಧಿಕೃತ ಮಾಹಿತಿ ಲಭ್ಯವಾಗದೇ ಇದ್ದರೂ ಸಂಸ್ಥೆಯ ಮಾಲೀಕರು ಯಾರು ಎಂಬುದು ಪತ್ತೆಯಾಗಿದೆ. ಈ ಕಂಪನಿಯನ್ನು 5 ಮೇ 1995ರಲ್ಲಿ ಸ್ಥಾಪಿಸಲಾಗಿದ್ದು, ಇದರ ನಿರ್ದೇಶಕರಾಗಿ ರಾಜಶೇಖರನ್ ಸೂರ್ಯಪ್ರಭ , ರಾಜು ರಾಜಶೇಖರನ್ ಮತ್ತು ಶ್ರೀನಿವಾಸಲುನಾಯ್ಡು ಶ್ರೀನಿವಾಸನ್ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ನಾವು ಹುಡುಕಾಟವನ್ನು ನಡೆಸಿದಾಗ 21 ಸೆಪ್ಟೆಂಬರ್ 2024ರಂದು ಹಿಂದೂಸ್ತಾನ್ ಟೈಮ್ಸ್ ಪ್ರಕಟಿಸಿದ ವರದಿಯೊಂದು ಕಂಡು ಬಂದಿದ್ದು, ಅದರಲ್ಲಿ ಕೂಡ ಎ.ಆರ್. ಡೈರಿ ಫುಡ್ ಪ್ರೈವೆಟ್ ಲಿಮಿಟೆಡ್ ಕಂಪನಿಯ ನಿರ್ದೇಶಕರು ಹಿಂದೂಗಳು ಅವರ ಹೆಸರು ರಾಜಶೇಖರನ್ ಸೂರ್ಯಪ್ರಭ , ರಾಜು ರಾಜಶೇಖರನ್ ಮತ್ತು ಶ್ರೀನಿವಾಸಲುನಾಯ್ಡು ಶ್ರೀನಿವಾಸನ್ ಎಂದು ಗುರುತಿಸಿದೆ. ಇದೇ ಮಾಹಿತಿಯನ್ನು ಬೇರೆ ಬೇರೆ ಮಾಧ್ಯಮಗಳು ಕೂಡ ನೀಡಿವೆ.
ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಪೋಸ್ಟ್ ಸಂಪೂರ್ಣವಾಗಿ ಸುಳ್ಳಿನಿಂದ ಕೂಡಿದೆ ಎಂಬುದು ಸಾಬೀತಾಗಿದೆ. ಎ.ಆರ್ ಡೈರಿ ಫುಡ್ ಪ್ರೈವೆಟ್ ಲಿಮಿಟೆಡ್ ನಿರ್ದೇಶಕರು ಹಾಗೂ ಮಾಲೀಕರು ಹಿಂದೂಗಳಾಗಿದ್ದಾರೆ ಎಂಬುದು ಕೂಡ ಹಲವು ವರದಿಗಳಿಂದ ಸಾಬೀತಾಗಿದೆ. ಹಾಗಾಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಮಾಹಿತಿ ಸುಳ್ಳಿನಿಂದ ಕೂಡಿದೆ.
ಇದನ್ನೂ ಓದಿ : Fact Check: ನಾಗಮಂಗಲ ಗಲಭೆ ಕೇಸ್: ಪೋಲಿಸರ ಭೀತಿಯಿಂದ ಯುವಕ ಸಾವು ಎಂದು ಸುಳ್ಳು ಹರಡಿದ ಕನ್ನಡದ ಮಾಧ್ಯಮಗಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.