ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು “ಉರ್ದು ಪಾಕಿಸ್ತಾನದ ರಾಷ್ಟ್ರೀಯ ಭಾಷೆ ಮತ್ತು ಹಿಂದಿ ಭಾರತದ ರಾಷ್ಟ್ರೀಯ ಭಾಷೆ ಎಂದು ಪ್ರತಿಪಾದಿಸಲಾಗುತ್ತಿದೆ. ಕರ್ನಾಟಕದ ಅಂಗನವಾಡಿ ಶಾಲೆಗಳಲ್ಲಿ ಉರ್ದು ಕಡ್ಡಾಯವಾಗಿದೆ, ಆದರೆ ರಾಜ್ಯದಲ್ಲಿ ಹಿಂದಿ ಭಾಷಿಕರು ಹಿಂಸಾಚಾರವನ್ನು ಎದುರಿಸುತ್ತಿದ್ದಾರೆ.” ಎಂದು ಪ್ರತಿಪಾದಿಸಲಾಗುತ್ತಿದೆ.
ತುಮಕೂರು ನಗರ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಖಾಲಿ ಇರುವ ಗೌರವಧನ ಆಧಾರಿತ ಅಂಗನವಾಡಿ ಕಾರ್ಯರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ ಎಂಬ ಪತ್ರಿಕೆಯ ಪ್ರಕಟಣೆಯೊಂದನ್ನು ಮುಂದಿಟ್ಟುಕೊಂಡು ಈ ಸುದ್ದಿ ಹಬ್ಬಿಸಲಾಗುತ್ತಿದೆ.
ಕೆಲವು ತಿಂಗಳ ಹಿಂದೆ ಈ ಸುದ್ದಿಯನ್ನು ಮುಂದಿಟ್ಟುಕೊಂಡು ಬಲಪಂಥೀಯ ಮಾಧ್ಯಮವಾದ ‘ಸಂವಾದ” ವೀಡಿಯೋವನ್ನು ಹಂಚಿಕೊಂಡಿತ್ತು. ಈಗ ಮತ್ತೆ ಇದೇ ಹೇಳಿಕೆಗಳು ಎಕ್ಸ್ ನಲ್ಲಿ ಮುನ್ನಲೆಗೆ ಬಂದಿದ್ದು ಬಲಪಂಥೀಯ ಮಾಧ್ಯಮವಾದ ಮೇಘ್ ಅಪ್ಡೇಟ್ಸ್ ಮತ್ತು ಉತ್ತರ ಪ್ರದೇಶ ಮೂಲದ ಬಿಜೆಪಿ ಪ್ರಚಾರಕ ಮಿ. ಸಿನ್ಹಾ “ಉರ್ದು ಪಾಕಿಸ್ತಾನಿ ರಾಷ್ಟ್ರೀಯ ಭಾಷೆ: ಕರ್ನಾಟಕದ ಅಂಗನವಾಡಿ ಶಾಲೆಗಳಲ್ಲಿ ಕಡ್ಡಾಯ – ಹಿಂದಿ ಭಾರತೀಯ ರಾಷ್ಟ್ರೀಯ ಭಾಷೆ: ಕರ್ನಾಟಕದಲ್ಲಿ ಅದನ್ನು ಮಾತನಾಡಿದ್ದಕ್ಕಾಗಿಯೂ ನಿಮ್ಮನ್ನು ಹೊಡೆಯಲಾಗುತ್ತದೆ ಕಾಂಗ್ರೆಸ್‌ನ ಒಳಗೊಳ್ಳುವ ಕರ್ನಾಟಕಕ್ಕೆ ಸುಸ್ವಾಗತ..” ಎಂದು ಪ್ರತಿಪಾದನೆಯನ್ನು ಮಾಡಿದ್ದಾರೆ.
-Urdu is Pakistani National language : Mandatory in Karnataka's Anganwadi schools
-Hindi is an Indian national language : You'll be beaten even for speaking it in Karnataka
Welcome to Congress's inclusive Karnataka…
— Mr Sinha (@MrSinha_) September 25, 2024
ಅನೇಕ ಬಿಜೆಪಿ ಬೆಂಬಲಿಗರು ಇದೇ ರೀತಿಯ ಪ್ರತಿಪಾದನೆಯೊಂದಿಗೆ ಕರ್ನಾಟಕ ಸರ್ಕಾರವನ್ನು ಟೀಕಿಸುತ್ತಿದ್ದಾರೆ.
Karnataka people please start learning urdu. You opposed hindi saying that hindi is not a national language. What will you do now?? Ek baar jo ye log ghus gaya toh fir dekhna kaise tumhe hi bahar ka rasta dikhayenge. pic.twitter.com/2uDLbPzMni
— yugandhara (@yugandhara_02) September 24, 2024
ಫ್ಯಾಕ್ಟ್ ಚೆಕ್:
ತುಮಕೂರಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರಿಗೆ ಕನ್ನಡ ಭಾಷೆಯ ಜೊತೆಗೆ ಉರ್ದು ಗೊತ್ತಿರಬೇಕು ಎಂಬ ಪತ್ರಿಕಾ ಪ್ರಕಟಣೆ ಮತ್ತು ಅದರ ಸುತ್ತ ಹರಡುತ್ತಿರುವ ಕೋಮು ಆಯಾಮದ ಸುದ್ದಿಗಳ ಸತ್ಯಾಸತ್ಯತೆ ಪರಿಶೀಲಿಸಲು ನಮ್ಮ ತಂಡವು ಮೊದಲು ತುಮಕೂರಿನ ಮಹಿಳಾ ಮತ್ತು ಮಕ್ಕಳ ಅಭಿವೃಧ್ಧಿ ಇಲಾಖೆಯ ಉಪ ನಿರ್ದೇಶಕರಾದ ಚಿದಾನಂದ ಅವರಿಗೆ ಕರೆ ಮಾಡಿ ಮಾಹಿತಿ ಪಡೆದಿದ್ದೇವೆ.
ಚಿದಾನಂದ ಅವರು ನೀಡಿದ ಮಾಹಿತಿ ಪ್ರಕಾರ, ಪ್ರಸ್ತುತ ಅಂಗನವಾಡಿ ಹುದ್ದೆಗಳ ಭರ್ತಿಗೆ 2022ರ ಡಿಸೆಂಬರ್ ತಿಂಗಳಲ್ಲಿ ಅಂದಿನ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ನೀಡಿದ ಆದೇಶದಂತೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಸರ್ಕಾರದ ಆದೇಶದ ಪ್ರಕಾರ ರಾಜ್ಯದ ಯಾವುದೇ ಪ್ರದೇಶದ ಅಂಗನವಾಡಿಗಳಿಗೆ ಕಾರ್ಯಕರ್ತೆಯರು ಮತ್ತು ಸಹಾಯಕಿಯರನ್ನು ನೇಮಕ ಮಾಡಿಕೊಳ್ಳುವಾಗ, ‘ಆ ಪ್ರದೇಶದಲ್ಲಿ ವಾಸಿಸುತ್ತಿರುವ ಅಲ್ಪಸಂಖ್ಯಾತ ಜನಸಂಖ್ಯೆಯ ಶೇ.25ರಷ್ಟು ಜನರು ಮಾತನಾಡುವ ಭಾಷೆ’ ಅರ್ಜಿ ಸಲ್ಲಿಸುವವರಿಗೆ ಗೊತ್ತಿರಬೇಕು.
ಉದಾಹರಣೆಗೆ : ಮುಸ್ಲಿಮರು ಹೆಚ್ಚಿರುವ ಪ್ರದೇಶಗಳ ಅಂಗನವಾಡಿಗಳಿಗೆ ಕಾರ್ಯಕರ್ತೆಯರನ್ನು ನೇಮಿಸಿಕೊಳ್ಳುವಾಗ ಅವರಿಗೆ ಕನ್ನಡದ ಜೊತೆಗೆ ಉರ್ದು ಭಾಷೆ ಗೊತ್ತಿರಬೇಕು. ಕ್ರೈಸ್ತ ಸಮುದಾಯದ ಜನರು ಹೆಚ್ಚಿರುವ ಪ್ರದೇಶಗಳ ಅಂಗನವಾಡಿಗೆ ನೇಮಿಸಿಕೊಳ್ಳುವುದಾದರೆ ಅವರಿಗೆ ಕ್ರೈಸ್ತರು ಮಾತನಾಡುವ ಕೊಂಕಣಿಯೋ ಇತರ ಯಾವುದೇ ಭಾಷೆ ತಿಳಿದಿರಬೇಕು.
ಇಲ್ಲಿ ಕನ್ನಡದ ಜೊತೆಗೆ ಉರ್ದು ಮಾತ್ರ ಗೊತ್ತಿರಬೇಕು ಎಂದು ಎಲ್ಲೂ ಕಡ್ಡಾಯ ಮಾಡಿಲ್ಲ. ಅಂಗನವಾಡಿ ಇರುವ ಪ್ರದೇಶದ ಜನ ಸಂಖ್ಯೆಯ ಶೇ.25ರಷ್ಟು ಅಲ್ಪ ಸಂಖ್ಯಾತರು ಮಾತನಾಡುವ ಭಾಷೆ ಗೊತ್ತಿರಬೇಕು ಎಂದು ಹೇಳಲಾಗಿದೆ. ಆ ಭಾಷೆ ಉರ್ದು, ಕೊಂಕಣಿ, ಪಂಜಾಬಿ ಇತರ ಯಾವುದೂ ಆಗಿರಬಹುದು. ಇಲ್ಲಿ ಗಮನಾರ್ಹ ಸಂಗತಿ ಏನೆಂದರೆ, ಎಲ್ಲಾ ಕಡೆಯೂ ಕನ್ನಡ ಗೊತ್ತಿರಬೇಕೆನ್ನುವುದು ಮೊದಲ ಆದ್ಯತೆಯಾಗಿದೆ. ನಂತರ ಇತರ ಭಾಷೆಗಳು ತಿಳಿದಿರಬೇಕು ಎಂದು ಹೇಳಲಾಗಿದೆ.
ತುಮಕೂರಿನಲ್ಲಿ ಕನ್ನಡ ಜೊತೆ ಉರ್ದು ಭಾಷೆಯನ್ನೇ ಯಾಕೆ ಕಡ್ಡಾಯ ಮಾಡಲಾಗಿದೆ?
ತುಮಕೂರು ನಗರ ವ್ಯಾಪ್ತಿಯ 11 ವಾರ್ಡ್‌ಗಳ ವಿವಿಧ ಪ್ರದೇಶಗಳ ಅಂಗನವಾಡಿಗಳಲ್ಲಿ ಖಾಲಿ ಇರುವ ಕಾರ್ಯಕರ್ತೆಯರ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಇದರಲ್ಲಿ ಅರ್ಜಿ ಸಲ್ಲಿಸುವವರಿಗೆ ಕನ್ನಡದ ಜೊತೆ ಉರ್ದು ಭಾಷೆ ತಿಳಿದಿರಬೇಕು ಎಂದು ಹೇಳಲಾಗಿದೆ.
ಚಿದಾನಂದ ಅವರು ನೀಡಿದ ಮಾಹಿತಿ ಪ್ರಕಾರ, ಮೇಲೆ ಅರ್ಜಿ ಆಹ್ವಾನಿಸಿರುವ ತುಮಕೂರಿನ 11 ವಾರ್ಡ್‌ಗಳ ಎಲ್ಲಾ ಅಂಗನವಾಡಿಗಳು ಕೂಡ ಅಲ್ಪಸಂಖ್ಯಾತ ವರ್ಗದ ಮುಸ್ಲಿಂ ಸಮುದಾಯದ ಜನರು ಹೆಚ್ಚಾಗಿ ಇರುವ ಪ್ರದೇಶಗಳದ್ದಾಗಿವೆ. ಮುಸ್ಲಿಮರು ಉರ್ದು ಭಾಷೆ ಮಾತನಾಡುವ ಕಾರಣ, ಸರ್ಕಾರದ ನಿಯಮದಂತೆ ಕನ್ನಡದ ಜೊತೆ ಉರ್ದು ಭಾಷೆಯನ್ನು ಕಡ್ಡಾಯಗೊಳಿಸಲಾಗಿದೆ. ಈ ಪ್ರದೇಶದಲ್ಲಿ ಒಂದು ವೇಳೆ ಕೊಂಕಣಿ ಮಾತನಾಡುವವರು ಹೆಚ್ಚಿದ್ದರೆ, ಕನ್ನಡದ ಜೊತೆ ಅವರ ಭಾಷೆಯನ್ನು ಕಡ್ಡಾಯಗೊಳಿಸಲಾಗುತ್ತಿತ್ತು.
‘Accidental Bhakth’ಎಕ್ಸ್ ಖಾತೆಯ ಪೋಸ್ಟ್‌ಗೆ ಜನವರಿ 18ರಂದು ಪ್ರತಿಕ್ರಿಯೆ ನೀಡಿದ್ದ ಕನ್ನಡ ಹೋರಾಟಗಾರ ರೂಪೇಶ್ ರಾಜಣ್ಣ “ನಾಳೆ ಇದರ ಅಸಲಿ ಸತ್ಯ ಎಲ್ಲೆರೆದುರು ಗೊತ್ತು ಮಾಡುತ್ತೇವೆ. ಈ ವಿಷಯವಾಗಿ ನೂರಾರು ಜನ ನನ್ನನ್ನು ಟ್ಯಾಗ್ ಮಾಡಿ ಕನ್ನಡ ಹೋರಾಟಗಾರರ ಮೇಲೆ ಅಸಭ್ಯ ಪದಗಳನ್ನು ಬಳಸಿ ಪ್ರಶ್ನೆ ಮಾಡಿದ್ದೀರಿ. ಇರಲಿ ನಾವಂತೂ ಯಾವುದಕ್ಕೂ ಹಿಂದೆ ಬೀಳೊಲ್ಲ. ನಾಳೆ ಇದಕ್ಕೆ ಉತ್ತರ ಸಿಗಲಿದೆ. ಪೋಸ್ಟ್ ಡಿಲೀಟ್ ಮಾಡದೆ ನಮ್ಮ ಉತ್ತರವನ್ನು ಹೀಗೆ ತಮ್ಮ ವಾಲ್ ಮೇಲೆ ಹಾಕಬೇಕು” ಎಂದಿದ್ದರು.
ಜನವರಿ 19ರಂದು ಎಕ್ಸ್‌ನಲ್ಲಿ ಮತ್ತೊಂದು ಪೋಸ್ಟ್ ಹಾಕಿದ್ದ ಅವರು, “ಅಂಗನವಾಡಿ ಶಿಕ್ಷಕರ ನೇಮಕ ವಿಚಾರವಾಗಿ ಇಂದು ತುಮಕೂರಿನ ಮಹಿಳಾ ಮಕ್ಕಳ ಇಲಾಖೆಗೆ ಹೋಗಿ ವಿಚಾರಿಸಲಾಗಿದೆ. ಈ ಆದೇಶ ಕಳೆದ ಸರ್ಕಾರದ ಅವಧಿ ದಿನಾಂಕ 3-12-2022 ರಂದು ಆಗಿದ್ದು, ಅದನ್ನು ಈಗ ಜಾರಿ ಮಾಡಿರೋದಾಗಿ ಅಧಿಕಾರಿಗಳು ತಿಳಿಸಿದ್ದು, ಈ ಆದೇಶ ಪರಿಶೀಲಿಸಿ ಕನ್ನಡ ಕಡ್ಡಾಯ ಮಾಡಲು ಮುಖ್ಯ ಇಲಾಖೆಗೆ ಪತ್ರ ಬರೆಯುವಂತೆ ಅಧಿಕಾರಿಗಳಿಗೆ ಮನವಿ ನೀಡಿದ್ದೇವೆ” ಎಂದು ತಿಳಿಸಿದ್ದರು.
ಅಂಗನವಾಡಿ ಶಿಕ್ಷಕರ ನೇಮಕ ವಿಚಾರವಾಗಿ
ಇಂದು ತುಮಕೂರಿನ ಮಹಿಳಾ ಮಕ್ಕಳ ಇಲಾಖೆಗೆ ಹೋಗಿ ವಿಚಾರಿಸಲಾಗಿ
ಈ ಆದೇಶ ಕಳೆದ ಸರ್ಕಾರದ ಅವಧಿ ದಿನಾಂಕ 3-12-2022 ರಂದು ಆಗಿದ್ದು ಅದನ್ನು ಈಗ ಜಾರಿ ಮಾಡಿರೋದಾಗಿ ಅಧಿಕಾರಿಗಳು ತಿಳಿಸಿದ್ದು
ಈ ಆದೇಶ ಪರಿಶೀಲಿಸಿ ಕನ್ನಡ ಕಡ್ಡಾಯ ಮಾಡಲು ಮುಖ್ಯ ಇಲಾಖೆಗೆ ಪತ್ರ ಬರೆಯುವಂತೆ ಅಧಿಕಾರಿಗಳಿಗೆ ಮನವಿ ನೀಡಿದ್ದೇವೆ. pic.twitter.com/ntElxQfMD2— ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) January 19, 2024
ದಿನಾಂಕ 3 ಡಿಸೆಂಬರ್ 2022ರಂದು ಮಹಿಳಾ ಮತ್ತು ಮಕ್ಕಳ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರ ಇಲಾಖೆಯ ಅಂದಿನ ಸರ್ಕಾರದ ಅಧೀನ ಕಾರ್ಯದರ್ಶಿ ನಿರ್ಮಲಾ ಎಸ್ ಖಟಾವರ್‌ಕರ್ ಅವರ ಹೆಸರಿನಲ್ಲಿ ಹೊರಡಿಸಲಾಗಿದ್ದ ಸುತ್ತೋಲೆಯ ಪ್ರತಿಯನ್ನು ಹಂಚಿಕೊಂಡಿದ್ದರು.
ಖಚಿತ ಮೂಲಗಳಿಂದ ನಮಗೆ ದೊರೆತಿರುವ ಮಾಹಿತಿ ಪ್ರಕಾರ, ರಾಜ್ಯ ಸರ್ಕಾರದ ಆದೇಶದಂತೆ ತುಮಕೂರು ನಗರ ವ್ಯಾಪ್ತಿಯ 11 ವಾರ್ಡ್ ವ್ಯಾಪ್ತಿಯ ಅಂಗನವಾಡಿಗಳಿಗೆ ಕಾರ್ಯರ್ತೆಯರ ನೇಮಕಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಇದರಲ್ಲಿ ಮುಸ್ಲಿಂ ಜನ ಸಂಖ್ಯೆ ಹೆಚ್ಚಿರುವ ಪ್ರದೇಶವಾದ್ದರಿಂದ ಕನ್ನಡದ ಜೊತೆ ಉರ್ದು ಭಾಷೆ ಕಡ್ಡಾಯಗೊಳಿಸಲಾಗಿದೆ. ಇಲ್ಲಿ ಮುಸ್ಲಿಮರನ್ನು ಓಲೈಸಲು ಪ್ರಸ್ತುತ ಇರುವ ರಾಜ್ಯ ಕಾಂಗ್ರೆಸ್ ಸರ್ಕಾರ ಉರ್ದು ಭಾಷೆಯನ್ನು ಕಡ್ಡಾಯಗೊಳಿಸಿಲ್ಲ.
ಸಂವಾದ ಸೇರಿದಂತೆ ಬಲಪಂಥೀಯ ಮಾಧ್ಯಮಗಳಲ್ಲಿ ಉರ್ದು ಭಾಷೆಯನ್ನು ಮುಂದಿಟ್ಟುಕೊಂಡು ಮುಸ್ಲಿಂ ಸಮುದಾಯದ ವಿರುದ್ದ ದ್ವೇಷ ಕಾರಲಾಗಿದೆ. ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಮುಸ್ಲಿಮರನ್ನು ಓಲೈಸುತ್ತಿದೆ, ಹಿಂದೂ ವಿರೋಧಿ ಸರ್ಕಾರ ಎಂದು ಬಿಂಬಿಸುವ ಪ್ರಯತ್ನ ಮಾಡಲಾಗಿದೆ.
ಉರ್ದು ಭಾಷೆಯ ಕುರಿತು:
ವೈರಲ್ ಹೇಳಿಕೆಯಲ್ಲಿ ಉರ್ದು ಭಾಷೆ ಪಾಕಿಸ್ತಾನದ ರಾಷ್ಟ್ರ ಭಾಷೆ ಮತ್ತು ಹಿಂದಿ ಭಾರತದ ರಾಷ್ಟ್ರ ಭಾಷೆ, ಹಿಂದಿ ಕಲಿಯಲು ಅಸಹನೆ ತೋರುವ ಕನ್ನಡಿಗರು ಈಗ ಉರ್ದು ಕಲಿಯಿರಿ ಎಂದು ಮಿ.ಸಿನ್ಹಾ ಸೇರಿದಂತೆ ಬಿಜೆಪಿ ಬೆಂಬಲಿಗರು ಕರ್ನಾಟಕದ ಜನರನ್ನು ಸಹ ತಮ್ಮ ಹೇಳಿಕೆಗಳಲ್ಲಿ ಟೀಕಿಸಿದ್ದಾರೆ.
ಉರ್ದು ಭಾರತೀಯ ಭಾಷೆಯಾಗಿದೆ, ಮತ್ತು ಹಿಂದಿ ಭಾರತದ ರಾಷ್ಟ್ರೀಯ ಭಾಷೆಯಲ್ಲ. ಆದರೆ ಸಂವಿಧಾನದ ಮಾನ್ಯತೆ ಪಡೆದ ತಮಿಳು, ಕನ್ನಡ, ತೆಲುಗು, ಮರಾಠಿ, ಬಂಗಾಳಿ ಮುಂತಾದ ಹಲವು ಭಾಷೆಗಳಲ್ಲಿ ಒಂದಾಗಿದೆ. ಸಂವಿಧಾನದ ಪ್ರಕಾರ ಭಾರತಕ್ಕೆ ಯಾವುದೇ ರಾಷ್ಟ್ರೀಯ ಭಾಷೆ ಇಲ್ಲ, ಆದರೆ ಹಿಂದಿ ಮತ್ತು ಇಂಗ್ಲಿಷ್ ಅಧಿಕೃತ ಆಡಳಿತ ಭಾಷೆಗಳಾಗಿವೆ. ಉರ್ದು ಸಂವಿಧಾನದ ಎಂಟನೇ ಅನುಸೂಚಿಯಲ್ಲಿ ಪಟ್ಟಿ ಮಾಡಲಾದ ಸಾಂವಿಧಾನಿಕವಾಗಿ ಮಾನ್ಯತೆ ಪಡೆದ ಭಾಷೆಯಾಗಿದೆ.
ಉರ್ದು ಹೆಚ್ಚುವರಿ ಈ ರಾಜ್ಯಗಳಲ್ಲಿ ಅಧಿಕೃತ ಭಾಷೆಯಾಗಿದೆ: 1. ಉತ್ತರ ಪ್ರದೇಶ 2. ಬಿಹಾರ 3. ಜಾರ್ಖಂಡ್ 4. ದೆಹಲಿ (NCT) 5. ಆಂಧ್ರ ಪ್ರದೇಶ 6. ತೆಲಂಗಾಣ 7. ಜಮ್ಮು ಮತ್ತು ಕಾಶ್ಮೀರ 8. ಪಶ್ಚಿಮ ಬಂಗಾಳ ಮತ್ತು ಇತರ ರಾಜ್ಯಗಳಲ್ಲಿ ಗಣನೀಯ ಪ್ರಮಾಣದ ಉರ್ದು ಮಾತನಾಡುವವರಿದ್ದಾರೆ. ದುರದೃಷ್ಟವಶಾತ್ ಪಾಕಿಸ್ತಾನವು ಉರ್ದುವನ್ನು ರಾಷ್ಟ್ರೀಯ ಭಾಷೆಯಾಗಿ ಅಂಗೀಕರಿಸಿದ ನಂತರ ಉರ್ದುವಿಗೆ ಕೆಲವು ಕೋಮುವಾದಿಗಳಿಂದ ಧಾರ್ಮಿಕ ಆಯಾಮ ನೀಡಲಾಗುತ್ತಿದೆ. ಉರ್ದು ಇಂಡೋ ಗಂಗಾ ಬಯಲಿನಲ್ಲಿ ಹುಟ್ಟಿದ ಭಾಷೆಯಾಗಿದ್ದು ಸಂಸ್ಕೃತ, ಪರ್ಷಿಯನ್, ಅರೇಬಿಕ್ ಮತ್ತು ತುರ್ಕಿ ಭಾಷೆಯ ಸಮ್ಮಿಲನವಾಗಿದೆ.
ಇದನ್ನು ಓದಿ: ಇತ್ತೀಚೆಗೆ ಲೆಬನಾನ್‌ನಲ್ಲಿ ಸೌರ ಫಲಕಗಳು ಸ್ಪೋಟಗೊಂಡಿವೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ