Fact Check | ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ ಶಾಶ್ವತ ಸದಸ್ಯತ್ವವನ್ನು ಪಡೆದಿದೆ ಎಂಬುದು ಸುಳ್ಳು

“ಇತ್ತೀಚೆಗೆ, 23 ಸೆಪ್ಟೆಂಬರ್ 2024 ರಂದು, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ನ್ಯೂಯಾರ್ಕ್‌ನಲ್ಲಿ ನಡೆದ ಯುಎನ್ ಜನರಲ್ ಅಸೆಂಬ್ಲಿಯಲ್ಲಿ ‘ಭವಿಷ್ಯದ ಶೃಂಗಸಭೆ’ಯನ್ನು ಉದ್ದೇಶಿಸಿ ಮಾತನಾಡಿದರು. ತಮ್ಮ ಭಾಷಣದಲ್ಲಿ, ಅವರು ವಿಶ್ವಸಂಸ್ಥೆಯಂತಹ ಜಾಗತಿಕ ಸಂಸ್ಥೆಗಳಲ್ಲಿ ಸುಧಾರಣೆಗಳಿಗೆ ಕರೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ (ಯುಎನ್‌ಎಸ್‌ಸಿ) ಖಾಯಂ ಸದಸ್ಯತ್ವವನ್ನು ಪಡೆದುಕೊಂಡಿದೆ ಮತ್ತು ವಿಟೋ ಅಧಿಕಾರವನ್ನು ಪಡೆದುಕೊಂಡಿದೆ” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಈ ವಿಡಿಯೋ ನೋಡಿದ ಹಲವು ಮಂದಿ ಭಾರತಕ್ಕೆ ನಿಜವಾಗಿಯೂ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ಯತ್ವವನ್ನು ಪಡೆದುಕೊಂಡಿದೆ ಎಂದು ಭಾವಿಸಿದ್ದಾರೆ. ಹೀಗಾಗಿ ಹಲವರು ತಮ್ಮ ಸಾಮಾಜಿಕ ಜಾಲತಾಣದ ವೈಯಕ್ತಿಕ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದು ಸಾಕಷ್ಟು ಸಾರ್ವಜನಿಕರ ಗೊಂದಲಕ್ಕೆ ಕೂಡ ಕಾರಣವಾಗಿದೆ. ಹೀಗಾಗಿ ಈ ವಿಚಾರ ಹಲವು ಅನುಮಾನಗಳನ್ನು ಕೂಡ ಹುಟ್ಟು ಹಾಕುತ್ತಿದೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ವಿಡಿಯೋವಿನ ಅಸಲಿಯತ್ತು ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ.

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ನಾವು  ವಿಶ್ವಸಂಸ್ಥೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ನಿಜಕ್ಕೂ ಭಾರತಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ಯತ್ವವನ್ನು ನೀಡಲಾಗಿದೆಯೇ ಎಂದು  ಪರಿಶೀಲನೆ ನಡೆಸಿದೆವು.ಯುಎನ್ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಭಾರತವು ಇನ್ನೂ ಯುಎನ್‌ಎಸ್‌ಸಿಯ ಖಾಯಂ ಸದಸ್ಯರಾಗಿಲ್ಲ ಮತ್ತು ವಿಟೋ ಅಧಿಕಾರವನ್ನು ಹೊಂದಿಲ್ಲ.

ಪ್ರಸ್ತುತ, ಕೇವಲ ಐದು ದೇಶಗಳು – ಚೀನಾ, ಫ್ರಾನ್ಸ್, ರಷ್ಯಾ, ಯುನೈಟೆಡ್ ಕಿಂಗ್‌ಡಮ್ ಮತ್ತು ಯುನೈಟೆಡ್ ಸ್ಟೇಟ್ಸ್-ಯುಎನ್‌ಎಸ್‌ಸಿಯ ಖಾಯಂ ಸದಸ್ಯರಾಗಿದ್ದಾರೆ ಮತ್ತು ಈ ಖಾಯಂ ಸದಸ್ಯರಿಗೆ ಮಾತ್ರ ವೀಟೋ ಅಧಿಕಾರವಿದೆ. ಯುಎನ್‌ಎಸ್‌ಸಿಯು ಐದು ಖಾಯಂ ಸದಸ್ಯ ರಾಷ್ಟ್ರಗಳ ಜೊತೆಗೆ ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯಿಂದ ಎರಡು ವರ್ಷಗಳ ಅವಧಿಗೆ ಚುನಾಯಿತರಾದ ಹತ್ತು ಶಾಶ್ವತವಲ್ಲದ ಸದಸ್ಯರನ್ನು ಒಳಗೊಂಡಿದೆ. ಪ್ರಸ್ತುತ, ಅಲ್ಜೀರಿಯಾ, ಈಕ್ವೆಡಾರ್, ಗಯಾನಾ, ಜಪಾನ್, ಮಾಲ್ಟಾ, ಮೊಜಾಂಬಿಕ್, ರಿಪಬ್ಲಿಕ್ ಆಫ್ ಕೊರಿಯಾ, ಸಿಯೆರಾ ಲಿಯೋನ್, ಸ್ಲೊವೇನಿಯಾ ಮತ್ತು ಸ್ವಿಟ್ಜರ್ಲೆಂಡ್ UNSC ಯ 10 ಶಾಶ್ವತವಲ್ಲದ ಸದಸ್ಯರಾಗಿದ್ದಾರೆ.

ನಾವು ಸೆಪ್ಟೆಂಬರ್ 2024 ರ ವಿಶ್ವಸಂಸ್ಥೆಯ ಕಾರ್ಯಸೂಚಿಯನ್ನು ಸಹ ಪರಿಶೀಲಿಸಿದ್ದೇವೆ ಆದರೆ UNSC ಸುಧಾರಣೆಗಳಿಗೆ ಸಂಬಂಧಿಸಿದ ಯಾವುದೇ ವಿಷಯಗಳು ಅಥವಾ ಯಾವುದೇ ರಾಷ್ಟ್ರಗಳಿಗೆ ವೀಟೋ ಅಧಿಕಾರವನ್ನು ನೀಡಲಾಗಲಿಲ್ಲ. ಈ ಎಲ್ಲಾ ಮಾಹಿತಿಗಳನ್ನು ಆಧರಿಸಿ, ಭಾರತಕ್ಕೆ ಯುಎನ್‌ಎಸ್‌ಸಿಯಲ್ಲಿ ವಿಟೋ ಅಧಿಕಾರದೊಂದಿಗೆ ಶಾಶ್ವತ ಸದಸ್ಯತ್ವವನ್ನು ಇನ್ನೂ ನೀಡಲಾಗಿಲ್ಲ ಎಂಬುದು ಸ್ಪಷ್ಟವಾಗಿದೆ. ಹೆಚ್ಚಿನ ಹುಡುಕಾಟವನ್ನು ನಡೆಸಿದಾಗ UNSC ಖಾಯಂ ಸದಸ್ಯ ರಾಷ್ಟ್ರಗಳಾದ US, ಫ್ರಾನ್ಸ್ ಮತ್ತು UK ಭಾರತಕ್ಕೆ ಖಾಯಂ ಸದಸ್ಯನಾಗಲು ತಮ್ಮ ಬೆಂಬಲವನ್ನು ವಿಸ್ತರಿಸಿದೆ ಎಂದು ತಿಳಿಸುವ ಹಲವಾರು ಸುದ್ದಿ ವರದಿಗಳನ್ನು  ಕಂಡು ಕೊಂಡಿದ್ದೇವೆ. 

ಒಟ್ಟಾರೆಯಾಗಿ ಹೇಳುವುದಾದರೆ, ಭಾರತಕ್ಕೆ ಯುಎನ್‌ಎಸ್‌ಸಿಯಲ್ಲಿ ಖಾಯಂ ಸದಸ್ಯತ್ವವನ್ನು ಇನ್ನೂ ನೀಡಲಾಗಿಲ್ಲ ಅಥವಾ ಅದು ವೀಟೋ ಅಧಿಕಾರವನ್ನು ಹೊಂದಿಲ್ಲ. US, ಫ್ರಾನ್ಸ್ ಮತ್ತು UK ಭಾರತಕ್ಕೆ ಖಾಯಂ ಸದಸ್ಯನಾಗಲು ತಮ್ಮ ಬೆಂಬಲವನ್ನು ಸೂಚಿಸಿವೆ ಎಂಬ ವರದಿಗಳು ಕಂಡು ಬಂದಿದೆ.  ಹಾಗಾಗಿ ವೈರಲ್‌ ಪೋಸ್ಟ್‌ ಸಂಪೂರ್ಣವಾಗಿ ಸುಳ್ಳಿನಿಂದ ಕೂಡಿದೆ ಎಂಬುದು ಸ್ಪಷ್ಟವಾಗಿದೆ.


ಇದನ್ನೂ ಓದಿ : Fact Check: ಜಪಾನಿನ ಅಟಾಮಿಯ ಭೂಕುಸಿತವನ್ನುಇಟಲಿಯಲ್ಲಿ ನಡೆದಿದೆ ಎಂದು ಹಂಚಿಕೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *