Fact Check | ವೈ.ಎಸ್‌ ಜಗನ್‌ ಮೋಹನ್‌ ರೆಡ್ಡಿ ಪ್ರಸಾದ ಸ್ವೀಕರಿಸಲು ನಿರಾಕರಿಸಿದ್ದಾರೆ ಎಂಬ ವಿಡಿಯೋ ಎಡಿಟೆಡ್‌ ಆಗಿದೆ

ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಪಕ್ಷ (ಟಿಡಿಪಿ), ಇತ್ತೀಚೆಗೆ ವಿರೋಧ ಪಕ್ಷದ ನಾಯಕ ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ವಿರುದ್ಧ ವಿಡಿಯೋವೊಂದನ್ನು ಹಂಚಿಕೊಂಡಿದೆ. ಇದರಲ್ಲಿ ” ತಿರುಮಲದ ಲಡ್ಡು ಇವರಿಗೆ ವಾಸನೆ ಬರುತ್ತದೆ. ಇವರು ಮನೆಯಲ್ಲಿಯೇ ದೇವಸ್ಥಾನವನ್ನು ನಿರ್ಮಿಸಿಕೊಂಡಿದ್ದು, ಅಲ್ಲಿ ತೀರ್ಥವನ್ನು ಕೊಟ್ಟರೆ, ಕುಡಿದಂತೆ ನಟಿಸಿ, ಎಸೆಯುತ್ತಾರೆ. ಈ ಜಗನ್‌ ಮೋಹನ್‌ ರೆಡ್ಡಿ ಕಳೆದ 5 ವರ್ಷಗಳಿಂದ ದೇವರನ್ನು ಅಪವಿತ್ರಗೊಳಿಸಿದ್ದಾರೆ” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ.

ಈ ವಿಡಿಯೋ ನೋಡಿದ ಹಿಂದೂ ಪರ ಸಂಘಟನೆಗಳು ಸೇರಿದಂತೆ ಹಲವು ಹಿಂದೂ ಪರ ಕಾರ್ಯಕರ್ತರು ವ್ಯಾಪಕವಾಗಿ ಆಕ್ರೋಶವನ್ನು ವ್ಯಕ್ತ ಪಡಿಸುತ್ತಿದ್ದಾರೆ. ಸಾಕಷ್ಟು ಮಂದಿ ಸಾರ್ವಜನಿಕರು ಕೂಡ ಈ ವಿಡಿಯೋವನ್ನು ವಿವಿಧ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಂಡು ಆಕ್ರೋಶವನ್ನು ಕೂಡ ವ್ಯಕ್ತ ಪಡಿಸುತ್ತಿದ್ದಾರೆ. ಹೀಗಾಗಿ ಈ ವಿಡಿಯೋ ಈಗ ರಾಜಕೀಯವಾಗಿ ಕೂಡ ಪರ ವಿರೋಧದ ಚರ್ಚೆಯನ್ನು ಕೂಡ ಹುಟ್ಟುಹಾಕಿದೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ವಿಡಿಯೋವಿನ ಅಸಲಿಯತ್ತು ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು ಇದಕ್ಕಾಗಿ ನಾವು ವೈರಲ್‌ ವಿಡಿಯೋಗೆ ಸಂಬಂಧಿಸಿದಂತೆ ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿ ಗೂಗಲ್‌ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ 14 ಜನವರಿ 2024 ರಂದು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಸಂಕ್ರಾಂತಿ ಆಚರಣೆಯಲ್ಲಿ ಭಾಗವಹಿಸಿರುವ ಕುರಿತು ತೆಲುಗು ಸುದ್ದಿವಾಹಿನಿ ಸಾಕ್ಷಿ ಟಿವಿ ಪ್ರಸಾರ ಮಾಡಿದ ವೈರಲ್ ದೃಶ್ಯಗಳ ದೀರ್ಘ ಆವೃತ್ತಿ ಕಂಡು ಬಂದಿದೆ. ಇದರಲ್ಲಿ ಜಗನ್‌ ಮೋಹನ್‌ ರೆಡ್ಡಿ ತನ್ನ ಪತ್ನಿಯೊಂದಿಗೆ ಚರಣಾಮೃತವನ್ನು ಸ್ವೀಕರಿಸುವ ಮತ್ತು ಕುಡಿಯುತ್ತಿರುವ ಸಂಪೂರ್ಣ ದೃಶ್ಯಾವಳಿಯು ಮೂಲ ವೀಡಿಯೊದಲ್ಲಿ 2:58-ನಿಮಿಷದ ಮಾರ್ಕ್‌ನಲ್ಲಿ ಸ್ಪಷ್ಟವಾಗಿ ಕಂಡು ಬಂದಿದೆ.

ದಿ ಹಿಂದೂ ವರದಿಯ ಪ್ರಕಾರ , ಅಂದಿನ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಮತ್ತು ಅವರ ಪತ್ನಿ ವೈಎಸ್ ಭಾರತಿ ಅವರ ಜೊತೆ 14 ಜನವರಿ 2024 ರಂದು ತಾಡೆಪಲ್ಲಿಯಲ್ಲಿರುವ ಕಚೇರಿಯಲ್ಲಿ ಸಂಕ್ರಾಂತಿ ಆಚರಣೆಯಲ್ಲಿ ಭಾಗವಹಿಸಿದ್ದರು. ದಂಪತಿಗಳು ಗೋಶಾಲೆಯಲ್ಲಿ ಹಸುಗಳನ್ನು ಪೂಜಿಸಿದರು ಎಂದು ವರದಿಯಲ್ಲಿ ಸ್ಪಷ್ಟ ಪಡಿಸಲಾಗಿದೆ. ಇದರ ಜೊತೆಗೆ ವಿನಾಯಕ, ವೆಂಕಟೇಶ್ವರ ಸ್ವಾಮಿ ಮತ್ತು ಕನಕದುರ್ಗಾ ದೇವಸ್ಥಾನಗಳಲ್ಲಿ ಪ್ರಾರ್ಥನೆ ಸಲ್ಲಿಸಿದರು ಎಂದು ಉಲ್ಲೇಖಿಸಲಾಗಿದೆ.

ಇನ್ನು ವೈರಲ್‌ ವಿಡಿಯೋಗೆ ಸಂಬಂಧಿಸಿದಂತೆ  YSR ಕಾಂಗ್ರೆಸ್ ಪಕ್ಷವು ಟಿಡಿಪಿಯ ಹೇಳಿಕೆಯನ್ನು ಖಂಡಿಸಿದೆ ಮತ್ತು ತಮ್ಮ ಅಧಿಕೃತ X ಖಾತೆಯಿಂದ ಮೂಲ ಮತ್ತು ದೀರ್ಘ ಆವೃತ್ತಿಯಲ್ಲಿ ಕಂಡು ಬಂದ ನೈಜ ವೀಡಿಯೊವನ್ನು ಹಂಚಿಕೊಂಡು ಟಿಡಿಪಿ ವಿರುದ್ಧ ಕಿಡಿ ಕಾರಿದೆ. YSR ಕಾಂಗ್ರೆಸ್ ಪಕ್ಷ ಹಂಚಿಕೊಂಡ ಪೋಸ್ಟ್‌ನಲ್ಲಿ ಜಗನ್‌ ಮೋಹನ್‌ ರೆಡ್ಡಿ ತೀರ್ಥ ಸೇವನೆ ಮಾಡುತ್ತಿರುವ ಸ್ಪಷ್ಟ ಚಿತ್ರಣವನ್ನು ನೋಡಬಹುದಾಗಿದೆ.

ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ಟಿಡಿಪಿ ಹಂಚಿಕೊಂಡಂತೆ ಆಂಧ್ರದ ಮಾಜಿ ಮುಖ್ಯಮಂತ್ರಿ ವೈಎಸ್‌ ಜಗನ್‌ ಮೋಹನ್‌ ರೆಡ್ಡಿ ತೀರ್ಥ ಸ್ವೀಕರಿಸಿ ಅದನ್ನು ಕುಡಿಯದೆ ಎಸೆದಿದ್ದಾರೆ ಎಂಬ ವಿಡಿಯೋ ಎಡಿಟೆಡ್‌ ಆಗಿದೆ. ಮೂಲ ವಿಡಿಯೋದಲ್ಲಿ ಜಗನ್‌ ಅವರು ತೀರ್ಥ ಸೇವನೆ ಮಾಡಿರುವುದು ಸ್ಪಷ್ಟವಾಗಿ ಕಂಡು ಬಂದಿದೆ. ಹಾಗಾಗಿ ವೈರಲ್‌ ವಿಡಿಯೋ ಸುಳ್ಳು ನಿರೂಪಣೆಯಿಂದ ಕೂಡಿದೆ.


ಇದನ್ನೂ ಓದಿ :  Fact Check : ಮುಸ್ಲಿಂ ವ್ಯಕ್ತಿ ತನ್ನ ಮಗಳನ್ನು ಮದುವೆಯಾಗಿದ್ದಾನೆ ಎಂದು ನಾಟಕೀಯ ವೀಡಿಯೊ ಹಂಚಿಕೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *