“ಅದಾನಿ ಗ್ರೂಪ್‌ನ ಸಂಸ್ಥಾಪಕ ಮತ್ತು ಅಧ್ಯಕ್ಷ ಗೌತಮ್ ಅದಾನಿ ಹೂಡಿಕೆಯ ಅವಕಾಶವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮತ್ತು ಅದಾನಿ ಸಂಸ್ಥೆಯಲ್ಲಿ ಹೂಡಿಕೆ ಮಾಡಲು ಜನರಿಗೆ ಪ್ರೇರಣೆಯನ್ನು ನೀಡುವ ದೃಷ್ಟಿಯಿಂದ ಅವರೇ ಪ್ರಚಾರವನ್ನು ಮಾಡುತ್ತಿದ್ದಾರೆ.” ಎಂದು ಗೌತಮ್ ಅದಾನಿ ಮಾತನಾಡುತ್ತಿರುವ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕಾವಾಗಿ ಹಂಚಿಕೊಳ್ಳಲಾಗುತ್ತಿದೆ.
ಈ ವಿಡಿಯೋದಲ್ಲಿ ಅದಾನಿ ಮಾತನಾಡುತ್ತಿರುವುದನ್ನು ನೋಡಬಹುದಾಗಿದೆ. ಧ್ವನಿ ಕೂಡ ಗೌತಮ್ ಅದಾನಿಗೆ ಹೋಲಿಕೆ ಆಗುತ್ತಿದೆ. ಹೀಗಾಗಿ ಹೂಡಿಕೆ ಕ್ಷೇತ್ರದಲ್ಲಿ ಆಸಕ್ತಿ ಇರುವ ಹಲವು ಮಂದಿಗೆ ಈ ವಿಡಿಯೋ ಅಚ್ಚರಿಯನ್ನು ಉಂಟು ಮಾಡಿದ್ದು, ಗೊಂದಲವನ್ನು ಸೃಷ್ಟಿಸಿದೆ. ಸಾಕಷ್ಟು ಮಂದಿ ಅದಾನಿಯ ಈ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹೀಗೆ ಶೇರ್ ಮಾಡಲಾಗುತ್ತಿರುವ ವಿಡಿಯೋದ ಹಿಂದಿನ ಸತ್ಯಾಸತ್ಯತೆ ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ
ಫ್ಯಾಕ್ಟ್‌ಚೆಕ್
ಹೀಗೆ ಸಾಮಾಜಿಕ ಜಾಲತಾಣದಲ್ಲಿ ಅದಾನಿ ಮಾತನಾಡಿದ್ದಾರೆ ಎಂದು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯಿತು. ಈ ಸಂಬಂಧ ಯಾವುದಾದರೂ ವರದಿಗಳು ಪ್ರಕಟವಾಗಿವೆ ಎಂದು ನಾವು ವಿವಿಧ ಕೀವರ್ಡ್‌ಗಳನ್ನು ಬಳಸಿ ಹುಡುಕಾಟವನ್ನು ನಡೆಸಿದೆವು. ಆದರೆ ಈ ಕುರಿತು ಯಾವುದೇ ಸುದ್ದಿಗಳು ಕಂಡು ಬಂದಿಲ್ಲ. ಒಂದು ವೇಳೆ ಅದಾನಿ ಹೂಡಿಕೆಯನ್ನು ಉತ್ತೇಜಿಸಲು ಪ್ರಚಾರ ನಡೆಸಿದ್ದೇ ಆಗಿದ್ದಲ್ಲಿ ಆ ಕುರಿತು ವರದಿಗಳು ಕಂಡು ಬರಬೇಕಿತ್ತು. ಆದರೆ ಅಂತಹ ಯಾವುದೇ ಬೆಳವಣಿಗೆಗಳು ಕಂಡುಬಂದಿಲ್ಲವಾದರಿಂದ ವೈರಲ್ ಪೋಸ್ಟ್ ಹಲವು ಅನುಮಾನಗಳನ್ನು ಮೂಡಿಸಿತ್ತು.
ಹೀಗಾಗಿ ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ವಿವಿಧ ಕಿ ಪ್ರೇಮ್‌ಗಳನ್ನು ಗೂಗಲ್ ರಿವರ್ಸ್ ಇಮೇಜಿನಲ್ಲಿ ಪರಿಶೀಲನೆ ನಡೆಸಲಾಯಿತು. ಈ ವೇಳೆ ಅದಾನಿ ಗ್ರೂಪ್‌ನ ಅಧಿಕೃತ ಯೂಟ್ಯೂಬ್ ಚಾನಲ್ ಕಂಡು ಬಂದಿದೆ. ಅದರಲ್ಲಿ 2 ಫೆಬ್ರವರಿ 2023 ರಂದು ಹಂಚಿಕೊಳ್ಳಲಾದ ವಿಡಿಯೋವೊಂದು ಕಂಡು ಬಂದಿದೆ. ಇದರಲ್ಲಿ ಎಇಎಲ್ ಮತ್ತು ಎಫ್‌ಪಿಓ ಚಂದದಾರಿಕೆಯನ್ನು ಹೂಡಿಕೆದಾರರು ಸಂಪೂರ್ಣವಾಗಿ ಹಿಂತೆಗೆದುಕೊಂಡ ನಂತರ, ಅವರನ್ನು ಉದ್ದೇಶಿಸಿ ಗೌತಮ್ ಅದಾನಿ ಮಾತನಾಡಿರುವುದು ಕಂಡುಬಂದಿದೆ.
ಆದರೆ ಈ ವಿಡಿಯೋದಲ್ಲಿ ಅದಾನಿ ಮಾತನಾಡಿರುವ ವಿಷಯ ಬೇರೆಯದ್ದೆ ಆಗಿದ್ದು, ವೈರಲ್ ವಿಡಿಯೋದಲ್ಲಿನ ವಿಷಯವು ಬೇರೆಯಾಗಿದೆ ಆದರೆ ವಿಡಿಯೋಗಳಲ್ಲಿ ಹೋಲಿಕೆ ಕಂಡು ಬಂದಿದೆ. ಇನ್ನು ವೈರಲ್ ವಿಡಿಯೋ ಮತ್ತು ಮೂಲ ವಿಡಿಯೋವನ್ನು ಹೋಲಿಕೆ ಮಾಡಿ ನೋಡಿದಾಗ, ಲಿಪ್ ಸಿಂಕಿಂಗ್ ಆಗದಿರುವುದು ಕಂಡು ಬಂದಿದೆ. ಹೀಗಾಗಿ ಹಿಯಾ ಎಇ ವಾಯ್ಸ್ ಡಿಟೆಕ್ಟರ್‌ನಲ್ಲಿ ಪರಿಶೀಲನೆಯನ್ನು ನಡೆಸಿದಾಗ, ಅದಾನಿ ದ್ವನಿಯನ್ನು ನಕಲು ಮಾಡಿ, ಹಳೆಯ ವಿಡಿಯೋದೊಂದಿಗೆ ಹೊಂದಿಸಿ ಹಂಚಿಕೊಳ್ಳಲಾಗಿದೆ ಎಂಬುದು ಸ್ಪಷ್ಟವಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಂತೆ, ಅದನಿ ಗ್ರೂಪ್‌ನಲ್ಲಿ ಹೂಡಿಕೆಗೆ ಗೌತಮ್ ಅದಾನಿ ವ್ಯಾಪಕವಾಗಿ ಪ್ರಚಾರವನ್ನು ನಡೆಸಿದ್ದಾರೆ ಎಂಬ ವಿಡಿಯೋ ಸುಳ್ಳು ನಿರೂಪಣೆಯೊಂದಿಗೆ ಕೂಡಿದೆ. ಹಾಗಾಗಿ ಇಂತಹ ವಿಡಿಯೋ ಹಂಚಿಕೊಳ್ಳುವ ಮುನ್ನ ಎಚ್ಚರ. ಯಾವುದೇ ವೈರಲ್ ವಿಡಿಯೋಗಳನ್ನು ಹಂಚಿಕೊಳ್ಳುವ ಮುನ್ನ ಪರಿಶೀಲನೆ ನಡೆಸಿಕೊಳ್ಳಿ
ಇದನ್ನೂ ಓದಿ : Fact Check | ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ ಶಾಶ್ವತ ಸದಸ್ಯತ್ವವನ್ನು ಪಡೆದಿದೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ