Fact Check | ಎಸ್‌ಪಿ ನಾಯಕ ಕಮಲ್ ಅಖ್ತರ್‌ಗೆ ಪೊಲೀಸರು ಥಳಿಸಿದ್ದಾರೆ ಎಂಬುದು ಎಡಿಟೆಡ್‌ ವಿಡಿಯೋ ಆಗಿದೆ

” ಎಸ್‌ಪಿ ನಾಯಕ ಕಮಲ್ ಅಖ್ತರ್ ಅವರು ಪೊಲೀಸ್ ಸಿಬ್ಬಂದಿಗೆ ಸಂಬಂಧಿಸಿದಂತೆ ವಿವಾದಾತ್ಮಕ ಹೇಳಿಕೆ ನೀಡಿದ್ದು, ಪೊಲೀಸರ ವಿರುದ್ಧ ರಾಜಕೀಯ ನಾಯಕರು ಹೀನಾಯವಾಗಿ ನಡೆದುಕೊಂಡರೆ, ಅವರಿಗೆ ಯಾವ ಗತಿಯಾಗುತ್ತದೆ ಎಂದು ಈ ವಿಡಿಯೋ ನಿಮಗೆ ಹೇಳುತ್ತದೆ. ನೋಡಿ ಹೇಗೆ ಈ ಸಮಾಜವಾದಿ ಪಕ್ಷದ ನಾಯಕ ಪೊಲೀಸರ ಕೈಯಿಂದ ಒದೆ ತಿನ್ನುತ್ತಿದ್ದಾನೆ” ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಹೀಗೆ ವೈರಲ್‌ ಆಗಿರುವ ವಿಡಿಯೋವನ್ನು ಹಲವು ಮಂದಿ ನಿಜವೆಂದು ಭಾವಿಸಿದ್ದಾರೆ. ಸಾಕಷ್ಟು ಮಂದಿ ತಮ್ಮ ಸಾಮಾಜಿಕ ಜಾಲತಾಣದ ವೈಯಕ್ತಿಕ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹಾಗೆಯೇ ಹಲವಾರು ಸಾರ್ವಜನಿಕರಲ್ಲಿ ಇದು ರಾಜಕೀಯ ಚರ್ಚೆಗೆ ಕೂಡ ದಾರಿ ಮಾಡಿಕೊಟ್ಟಿದೆ. ಆದರೆ ಇದರ ಹಿನ್ನೆಲೆ ಏನು?, ಈ ವಿಡಿಯೋ ನಿಜವೇ ಅಥವಾ ಸುಳ್ಳಿನಿಂದ ಕೂಡಿದೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ಹೀಗಾಗಿ ಇದು ಹಲವು ಅನಿಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಹೀಗೆ ವ್ಯಾಪಕವಾಗಿ ಹಂಚಿಕೊಳಳಲಾಗುತ್ತಿರುವ ವೈರಲ್‌ ವಿಡಿಯೋವಿನ ಸತ್ಯಾಸತ್ಯತೆ ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ವಿಡಿಯೋ ಕುರಿತು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಪರಿಶೀಲನೆ ನಡೆಸಲು ಮುಂದಾಯಿತು. ಇದಕ್ಕಾಗಿ ನಾವು ವೈರಲ್‌ ವಿಡಿಯೋವಿನ ಮೊದಲ ಭಾಗವಾದ ಕಮಲ್ ಅಖ್ತರ್ ಭಾಷಣದ ದೃಷ್ಯದ  ಕೀ ಫ್ರೇಮ್‌ಗಳನ್ನು ಬಳಸಿ ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ 9 ಏಪ್ರಿಲ್‌ 2021 ರಂದು ABP Ganga ಯುಟ್ಯೂಬ್‌ ಚಾನಲ್‌ನಲ್ಲಿ ಹಂಚಿಕೊಳ್ಳಲಾದ ಮೂಲ ವಿಡಿಯೋ ಕಂಡು ಬಂದಿದೆ.

ಈ ವಿಡಿಯೋ ವರದಿಯ ಪ್ರಕಾರ,  ಉತ್ತರ ಪ್ರದೇಶದಲ್ಲಿ ಅಮ್ರೋಹಾದ ಪಂಚಾಯತ್‌ಗೆ ಮತ ಕೇಳಲು ಬಂದಿದ್ದ ಎಸ್‌ಪಿಯ ರಾಷ್ಟ್ರೀಯ ಕಾರ್ಯದರ್ಶಿ ಮತ್ತು ಮಾಜಿ ಸಚಿವ ಕಮಲ್ ಅಖ್ತರ್ ಪೊಲೀಸರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿರುವುದು ಕಂಡು ಬಂದಿದೆ. ಈ ವಿಡಿಯೋ ಬಹುದೊಡ್ಡ ವಿವಾದವನ್ನು ಸೃಷ್ಟಿಸಿದೆ. ಆದರೆ ಈ ವಿಡಿಯೋದಲ್ಲಿ ಎಲ್ಲಿಯೂ ಕಮಲ್‌ ಅಖ್ತರ್‌ಗೆ ಪೊಲೀಸರು ಹಲ್ಲೆ ನಡೆಸುವುದು ಕಂಡು ಬಂದಿಲ್ಲ. ಹಾಗಾಗಿ ವೈರಲ್‌ ವಿಡಿಯೋ ಎರಡು ಬೇರೆಬೇರೆಯದ್ದಾಗಿದೆ ಎಂಬುದು ಸ್ಪಷ್ಟವಾಗಿದೆ.

ಇನ್ನು ವೈರಲ್‌ ವಿಡಿಯೋದ ಮತ್ತೊಂದು ದೃಷ್ಯದಲ್ಲಿ ವ್ಯಕ್ತಿಯೊಬ್ಬರಿಗೆ ಪೊಲೀಸರು ಥಳಿಸುತ್ತಿರುವುದು ಕಂಡು ಬಂದಿದ್ದು, ಈ ವಿಡಿಯೋವಿನ ಹಿನ್ನೆಲೆ ಏನು ಎಂದು ಕೀ ಫ್ರೇಮ್‌ಗಳ ಸಹಾಯದಿಂದ ಹುಡುಕಾಟವನ್ನು ನಡೆಸಿದಾಗ ಸಮಾಜವಾದಿ ಪಕ್ಷದ ಮತ್ತೊಬ್ಬ ನಾಯಕ ರಾಜಾ ಚತುರ್ವೇದಿ ಅವರ Instagram ಖಾತೆಯಲ್ಲಿ ವಿಡಿಯೋವೊಂದು ಕಂಡು ಬಂದಿದೆ. ಇದರಲ್ಲಿ ಬಜೆಟ್ ಅಧಿವೇಶನದ ಕೊನೆಯ ದಿನವಾದ ಫೆಬ್ರವರಿ 21, 2011 ರಂದು ಮಧ್ಯರಾತ್ರಿ 12 ಗಂಟೆಗೆ, ವಿಧೇಯಕವನ್ನು ವಿರೋಧಿಸಿ ಪ್ರತಿಭಟನೆಯ ಸಂದರ್ಭದಲ್ಲಿ ವಿಧಾನಸಭೆ ಕಟ್ಟಡದ ಬಳಿ ತೆರಳಲು ಪ್ರಯತ್ನಿಸಿದಾಗ ಪೊಲೀಸರು ಲಾಠಿಚಾರ್ಜ್ ನಡೆಸಿ ಇವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲಿಗೆ ಈ ವಿಡಿಯೋ ಬೇರೆ ಬೇರೆ ಘಟನೆಯದ್ದು ಎಂಬುದು ಸಾಬೀತಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿರುವಂತೆ ಎಸ್‌ಪಿ ನಾಯಕ ಕಮಲ್ ಅಖ್ತರ್ ಅವರು ಪೊಲೀಸ್ ಸಿಬ್ಬಂದಿಗೆ ಸಂಬಂಧಿಸಿದಂತೆ ವಿವಾದಾತ್ಮಕ ಹೇಳಿಕೆ ನೀಡಿದ ಹಿನ್ನೆಲೆ ಪೊಲೀಸರು ಥಳಿಸಿದ್ದಾರೆ ಎಂಬುದು ಸುಳ್ಳು. ವೈರಲ್‌ ವಿಡಿಯೋ 2011ರದ್ದಾಗಿದೆ. ವಿಡಿಯೋದಲ್ಲಿ ಪೊಲೀಸರಿಂದ ಹಲ್ಲೆಗೊಳಗಾದವರು ಸಮಾಜವಾದಿ ಪಕ್ಷದ ನಾಯಕ ರಾಜಾ ಚತುರ್ವೇದಿ ಎಂಬುದು ತಿಳಿದು ಬಂದಿದೆ. ಹಾಗಾಗಿ ಇಂತಹ ಸುದ್ದಿಗಳು ಕಂಡು ಬಂದರೆ ಅವುಗಳನ್ನು ಪರಿಶೀಲಿಸದೆ ಹಂಚಿಕೊಳ್ಳಬೇಡಿ.


ಇದನ್ನೂ ಓದಿ : Fact Check | ಝಾನ್ಸಿಯಲ್ಲಿ ವೃದ್ಧರೊಬ್ಬರ ಮೇಲೆ ಫೋ಼ಮ್‌ ಎಸೆದ ವ್ಯಕ್ತಿ ಮುಸ್ಲಿಂ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *