Fact Check | ಲವ್ ಜಿಹಾದ್ ಉತ್ತೇಜಿಸಿ VIP ಸ್ಕೈಬ್ಯಾಗ್ಸ್ ಕಂಪನಿ ಜಾಹೀರಾತು ನೀಡಿದೆ ಎಂಬುದು ಸುಳ್ಳು

“ವಿಐಪಿಯ ಸ್ಕೈಬ್ಯಾಗ್ ಹೇಗೆ ಲವ್ ಜಿಹಾದ್ ಅನ್ನು ಪ್ರಚಾರ ಮಾಡುತ್ತಿದೆ ಎಂಬುದನ್ನು ನೋಡಿ. ವೀಡಿಯೊ ವಿಷಯಕ್ಕೂ ಸ್ಕೈಬ್ಯಾಗ್‌ಗಳಿಗೂ ಯಾವುದೇ ಸಂಬಂಧವಿಲ್ಲ, ಹುಡುಗನು ಹುಡುಗಿಯ ಬಿಂದಿ ತೆಗೆದು ತಲೆಯ ಮೇಲೆ ಬಟ್ಟೆ ಹಾಕುವುದನ್ನು ತೋರಿಸಲಾಗಿದೆ. ಇಂತಹ ಜಾಹೀರಾತುಗಳನ್ನು ವಿರೋಧಿಸಬೇಕು. ಸ್ಕೈಬ್ಯಾಗ್ ವಿಐಪಿ ಉತ್ಪನ್ನಗಳನ್ನು ಬಹಿಷ್ಕರಿಸಿ. ಒಂದು ವೇಳೆ ಇವರಿಗೆ ಈಗ ಬುದ್ದಿ ಕಲಿಸಲು ಸಾಧ್ಯವಾಗದೆ ಇದ್ದರೆ, ಮುಂದೆಯೂ ಇವರು ಇಂತಹ ಹತ್ತು ಹಲವು ಜಾಹಿರಾತುಗಳನ್ನು ಮಾಡುತ್ತಾರೆ. ಈಗಲೇ ಎಚ್ಚೆತ್ತುಕೊಳ್ಳಿ” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. 

ಇನ್ನೂ ಕೆಲವರು “ಲವ್‌ ಜಿಹಾದ್‌ ಪ್ರಚಾರಕ್ಕೆ ಕೇರಳ ಸರ್ಕಾರ ಬೆಂಬಲವನ್ನು ಕೊಟ್ಟಿದೆ. ಹೀಗಾಗಿ ಈ ರೀತಿಯ ವಿಡಿಯೋಗಳನ್ನು ಹರಿ ಬಿಡಲಾಗುತ್ತಿದೆ” ಎಂದು ಬರೆದುಕೊಂಡು ತಮ್ಮ ಸಾಮಾಜಿಕ ಜಾಲತಾಣದ ವೈಯಕ್ತಿಕ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹೀಗೆ ವಿವಿಧ ಬರಹಗಳೊಂದಿಗೆ ವಿಡಿಯೋವನ್ನು ಸಾಕಷ್ಟು ಮಂದಿ ಹಂಚಿಕೊಳ್ಳಲಾಗುತ್ತಿದ್ದು, ಮುಸ್ಲಿಂ ಸಮುದಾಯದ ವಿರುದ್ಧ ತಪ್ಪು ಭಾವನೆ ಮೂಡುವಂತೆ ಮಾಡಲಾಗುತ್ತಿದೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ವಿಡಿಯೋ ಕುರಿತು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ.

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ವಿಡಿಯೋ ಕುರಿತು ಪರಿಶಿಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ವೀಡಿಯೊದ ಸ್ಕ್ರೀನ್‌ಶಾಟ್‌ಗಳ ಗೂಗಲ್‌ ರಿವರ್ಸ್ ಇಮೇಜ್‌ನಲ್ಲಿ ಪರಿಶೀಲಿಸಿದೆವು. ಈ ವೇಳೆ ನಮಗೆ ವಿಡಿಯೋದಲ್ಲಿ ಕಂಡು ಬಂದ ವ್ಯಕ್ತಿ ವಿಷ್ಣು ಕೆ ವಿಜಯನ್ ಹಾಗೂ ಯುವತಿ ಸುಮಿ ರಶಿಕ್ ಎಂಬುದು ತಿಳಿದು ಬಂದಿದೆ. ಇವರಿಬ್ಬರು ಕಿರು ಚಿತ್ರ, ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳಿಂದ ಗುರುತಿಸಿಕೊಂಡಿದ್ದಾರೆ ಎಂಬುದು ತಿಳಿದು ಬಂದಿದೆ. 

                          ವಿಷ್ಣು ಕೆ ವಿಜಯನ್ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾದ ವೈರಲ್‌ ಪೋಸ್ಟ್‌
                                      ಸುಮಿ ರಶಿಕ್ ಅವರ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಕಂಡು ಬಂದ ಫೋಟೋಗಳು

ಈ ಕುರಿತು ಇನ್ನಷ್ಟು ಹುಡುಕಾಟವನ್ನು ನಡೆಸಲು ನಾವು ಮುಂದಾದೆವು. ಈ ವೇಳೆ ನಮಗೆ  ಈ ವಿಡಿಯೋದಲ್ಲಿ ಕಂಡು ಬರುವ ಹಾಡು ‘ಸೂಫಿಯುಂ ಸುಜಾತಯುಂ’ ಎಂಬ ಸಿನಿಮಾಗೆ ಸಂಬಂಧಿಸಿದ್ದಾಗಿದೆ ಎಂದು ತಿಳಿದು ಬಂದಿದೆ. ಮೂಲತಃ, ವೀಡಿಯೊವು 2020 ರ ಮಲಯಾಳಂ ಚಲನಚಿತ್ರ ಸೂಫಿಯುಮ್ ಸುಜಾತಯುಂನ ವತ್ತಿಕ್ಕಲು ವೆಳ್ಳರಿಪ್ರವು ಹಾಡಿನ ಮರುಸೃಷ್ಟಿಯಾಗಿದೆ. ಈ ಹಾಡನ್ನು ಬಳಸಿಕೊಂಡು ರೀಲ್ಸ್‌ ಮಾಡಲಾಗಿತ್ತು. ಆದಾಗ್ಯೂ, ನಟಿ ಹಂಚಿಕೊಂಡಿರುವ ಈ ವೀಡಿಯೊವು ಕೊನೆಯಲ್ಲಿ ಸ್ಕೈ ಬ್ಯಾಗ್‌ನ ಯಾವುದೇ ದೃಶ್ಯಗಳನ್ನು ಹೊಂದಿಲ್ಲ. ಮುಸ್ಲಿಂ ಪುರುಷ ಹಿಂದೂ ಮಹಿಳೆಯ ಬಿಂದಿಯನ್ನು ತೆಗೆದು ಆಕೆಯ ತಲೆಯನ್ನು ದುಪಟ್ಟಾದಿಂದ ಮುಚ್ಚಿರುವಂತಹ ಫ್ರೇಮ್‌ಗಳನ್ನು ಈ ರೀಲ್ಸ್‌ ವೀಡಿಯೊ ಒಳಗೊಂಡಿರುವುದರಿಂದ, ಲವ್ ಜಿಹಾದ್‌ನ ಪ್ರಚಾರವನ್ನು ಆರೋಪಿಸಿ ಈ ರೀಲ್ಸ್‌ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವೈರಲ್‌ ವಿಡಿಯೋದಲ್ಲಿನ ಹಾಡು ಸೂಫಿಯುಂ ಸುಜಾತಯುಂ ಚಿತ್ರದ್ದು

ಇನ್ನು ಈ ವಿಡಿಯೋ ಕುರಿತು ವಿಐಪಿ ಬ್ಯಾಗ್ಸ್‌ ತನ್ನ ಏಕ್ಸ್‌ ಖಾತೆಯಲ್ಲಿ 24 ಏಪ್ರಿಲ್‌ 2023ರಂದು ಸ್ಪಷ್ಟನೆಯನ್ನು ನೀಡಿದ್ದು, ಅದರಲ್ಲಿ  “ಇದು ವಿಐಪಿ ಮತ್ತು ಸ್ಕೈಬ್ಯಾಗ್ಸ್‌ಗಳ ಬ್ರಾಂಡ್ ಹೆಸರುಗಳನ್ನು ಬಳಸಿಕೊಂಡು ಕಾನೂನುಬಾಹಿರವಾಗಿ ಸೃಷ್ಟಿಸಿದ ಅನಧಿಕೃತ ಜಾಹೀರಾತು, ವಿಐಪಿ ಇಂಡಸ್ಟ್ರೀಸ್ ಈ ಜಾಹಿರಾತು ನೀಡಿಲ್ಲ ಮತ್ತು ಈ ಪ್ರಕಟಣೆಯನ್ನು ಹಾಕಿದ ವ್ಯಕ್ತಿಯೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ. ವಿಐಪಿ ಇಂಡಸ್ಟ್ರೀಸ್ ತನ್ನ ಹೆಸರು ಮತ್ತು ಟ್ರೇಡ್‌ಮಾರ್ಕ್‌ಗಳ ಅನಧಿಕೃತವಾಗಿ ಬಳಸಿಕೊಂಡವರ ವಿರುದ್ಧ ಪೊಲೀಸ್ ದೂರು ದಾಖಲಿಸಿದೆ” ಎಂದು ಪೋಸ್ಟ್‌ನಲ್ಲಿ ಮಾಹಿತಿಯನ್ನು ನೀಡಿದೆ.

ಒಟ್ಟಾರೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿ ವೈರಲ್‌ ವಿಡಿಯೋ ಲವ್‌ ಜಿಹಾದ್‌ ಅನ್ನು ಉತ್ತೇಜಿಸಿ ಪ್ರಚಾರ ಮಾಡಲಾಗುತ್ತಿದೆ ಎಂಬುದು ಸುಳ್ಳು, ಇದು ರೀಲ್ಸ್‌ ವಿಡಿಯೋವಾಗಿದೆ. ಈ ವೈರಲ್‌ ವಿಡಿಯೋ ಯಾವುದೇ ಜಾಹಿರಾತಿಗೆ ಕೂಡ ಸಂಬಂಧ ಪಟ್ಟಿಲ್ಲ. ಈ ಬಗ್ಗೆ ವಿಐಪಿ ಸ್ಕೈ ಬ್ಯಾಗ್ಸ್‌ ಕೂಡ ಸ್ಪಷ್ಟನೆಯನ್ನು ನೀಡಿದೆ. ವೈರಲ್‌ ವಿಡಿಯೋದಲ್ಲಿ ಕೇಳಿ ಬರುವ ಹಾಡು ಕೇರಳದಲ್ಲಿ 2020ರಲ್ಲಿ ಬಿಡುಗಡೆಯಾದ ‘ಸೂಫಿಯುಂ ಸುಜಾತಯುಂ’ ಚಿತ್ರಕ್ಕೆ ಸಂಬಂಧಿಸಿದ್ದಾಗಿದೆ.ಇನ್ನು ವಿಡಿಯೋದಲ್ಲಿದ್ದ ಯುವಕ, ಯುವತಿ ಇಬ್ಬರು ಕೂಡ ಕಲಾವಿದರಾಗಿದ್ದು, ನ್ಯೂಸ್‌ ಮಾಡುವ ಉದ್ದೇಶದಿಂದ ಈ ವಿಡಿಯೋವನ್ನು ನಿರ್ಮಿಸಿದ್ದಾರೆ ಎಂಬುದು ತಿಳದು ಬಂದಿದೆ.


ಇದನ್ನೂ ಓದಿ : Fact Check: ಬಾಂಗ್ಲಾದೇಶದ ಗಲಭೆಯ ವೀಡಿಯೋವನ್ನು ಇತ್ತೀಚೆಗೆ ರಾಜಸ್ಥಾನದ ಜೈಪುರದ ಪರಿಸ್ಥಿತಿ ಎಂದು ಹಂಚಿಕೊಳ್ಳಲಾಗುತ್ತಿದೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *