ಬಾಂಗ್ಲಾದೇಶದಲ್ಲಿ ವೃದ್ಧನೊಬ್ಬ ಬುರ್ಖಾ ಧರಿಸಿದ ಹುಡುಗಿಯನ್ನು ಅನುಚಿತವಾಗಿ ಸ್ಪರ್ಶಿಸಿದ್ದಾನೆ ಎಂದು ವೀಡಿಯೊವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
ವೀಡಿಯೊದಲ್ಲಿ “ಇದು ಬಾಂಗ್ಲಾದೇಶದ ವೀಡಿಯೊ. ವೃದ್ಧನಾದ ಮೊಹಮ್ಮದ್ ಬಾಸಿಮ್ ಎಂಬಾತ ಹುಡುಗಿಯ ಹತ್ತಿರ ಅಸಭ್ಯವಾಗಿ ವರ್ತಿಸಿದ್ದರಿಂದ ಆ ಹುಡುಗಿ ಮುದುಕನಿಗೆ ಎರಡು ಬಾರಿ ಕಪಾಳಮೋಕ್ಷ ಮಾಡಿದ್ದಾಳೆ. ನಂತರ ಮುದುಕ ಆತುರದಲ್ಲಿ ಇದ್ದುದರಿಂದ ನಾನು ತಪ್ಪಾಗಿ ನಡೆದುಕೊಂಡಿದ್ದೇನೆ ಎಂದು ಹೇಳಿದ್ದಾನೆ.” ಎಂದು ಬರೆದ ವೀಡಿಯೊವನ್ನು ಹಂಚಿಕೊಂಡಿದ್ದಾರೆ.
ಫ್ಯಾಕ್ಟ್ ಚೆಕ್ :
ಈ ವೈರಲ್ ವೀಡಿಯೊದ ಸ್ಕ್ರೀನ್‌ಶಾಟ್ ಚಿತ್ರಗಳನ್ನು ಗೂಗಲ್ ಲೆನ್ಸ್ ಬಳಸಿಕೊಂಡು ರಿವರ್ಸ್ ಇಮೇಜ್‌ನಲ್ಲಿ ಹುಡುಕಿದಾಗ ‘ಅಜಿಜುಲ್ 2.0’ ಎಂಬ ಹೆಸರಿನ ಫೇಸ್‌ಬುಕ್ ಖಾತೆಯ ವೀಡಿಯೊ ಲಭಿಸಿದೆ. ಸೆಪ್ಟೆಂಬರ್ 5 ರಂದು ಈ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ.
ಬುರ್ಖಾ ಧರಿಸಿರುವ ಹುಡುಗಿ ಮತ್ತು ಮುದುಕ ಒಂದೇ ಸೇತುವೆಯ ಮೇಲೆ ಮಾತನಾಡುತ್ತಿರುವ ಮತ್ತೊಂದು ವೀಡಿಯೊ ದೊರೆತಿದೆ. ಸೆಪ್ಟೆಂಬರ್ 20ರಂದು ಹಂಚಿಕೊಳ್ಳಲಾದ ಆ ವೀಡಿಯೊದಲ್ಲಿ ಇವರಿಬ್ಬರೂ ಪುನಃ ಕಾಣಿಸಿಕೊಂಡಿದ್ದಾರೆ. ‘ ಅಜೀಜುಲ್ ಹಕ್ ಮೊರಾಡ್ ‘ ಮತ್ತು ‘ಅಜಿಜುಲ್ 2.0’ ಎಂಬ ಎರಡು ಖಾತೆಗಳಲ್ಲಿ ಇವರ ಹಲವಾರು ವಿಡಿಯೋಗಳು ಕಂಡುಬಂದಿವೆ. ಈ ಎರಡೂ ಖಾತೆಗಳನ್ನು ಒಬ್ಬ ವ್ಯಕ್ತಿ ನಡೆಸುತ್ತಿದ್ದು, ತನ್ನನ್ನು ‘ಡಿಜಿಟಲ್ ಸೃಷ್ಟಿಕರ್ತ’ ಎಂದು ಕರೆದುಕೊಂಡಿದ್ದಾನೆ. ಎರಡೂ ಖಾತೆಯ ಫೇಸ್‌ಬುಕ್ ಪುಟಗಳಲ್ಲಿ ಇದೇ ರೀತಿಯ ಪೋಸ್ಟ್‌ಗಳನ್ನು, ವೀಡಿಯೊಗಳನ್ನು ನಿಯಮಿತವಾಗಿ ಹಂಚಿಕೊಳ್ಳಲಾಗಿದೆ.
ಇಂತಹ ಹಲವಾರು ವೀಡಿಯೊಗಳನ್ನು ಅದೇ ಫೇಸ್‌ಬುಕ್ ಪುಟದಲ್ಲಿ ಹಂಚಿಕೊಳ್ಳಲಾಗಿದ್ದು, ಅದೇ ಕಲಾವಿದರು ವೀಡಿಯೊಗಳಲ್ಲಿ ನಟಿಸಿದ್ದಾರೆ. ಹುಡುಗಿ ಮತ್ತು ವಯಸ್ಸಾದ ವ್ಯಕ್ತಿ ನಿಜ ಜೀವನದಲ್ಲಿ ನಟರಾಗಿದ್ದಾರೆ. ಹಾಗಾಗಿ ಈ ವೈರಲ್ ವೀಡಿಯೊ ನೈಜವಾದ ಘಟನೆಯಲ್ಲ, ಬದಲಿಗೆ ನಾಟಕೀಯ ವಿಡಿಯೋ ಎಂದು ಸಾಬೀತಾಗಿದೆ. ಆ ಹಲವು ಫೋಟೊಗಳನ್ನು ಈ ಕೆಳಗೆ ನೋಡಬಹುದು.
ಒಟ್ಟಾರೆಯಾಗಿ ಹೇಳುವುದಾದರೆ, ಈ ವೈರಲ್ ವೀಡಿಯೊದಲ್ಲಿನ ಹುಡುಗಿ ಮತ್ತು ವಯಸ್ಸಾದ ವ್ಯಕ್ತಿ ನಿಜ ಜೀವನದಲ್ಲಿ ನಟರಾಗಿದ್ದಾರೆ. ಹಾಗಾಗಿ ಈ ಘಟನೆ ಬಾಂಗ್ಲಾದೇಶದಲ್ಲಿ ನಡೆದ ನೈಜ ಘಟನೆ ಅಲ್ಲ, ಬದಲಿಗೆ ನಾಟಕೀಯ ವಿಡಿಯೋ ಎಂಬುದು ಸ್ಪಷ್ಟವಾಗಿದೆ. ಆದ್ದರಿಂದ ಇಂತಹ ವೀಡಿಯೊಗಳನ್ನು ಹಂಚಿಕೊಳ್ಳುವ ಮುನ್ನ ಒಮ್ಮೆ ಪರಿಶೀಲಿಸಿಕೊಳ್ಳುವುದು ಉತ್ತಮ.
ಇದನ್ನು ಓದಿ :
Fact Check : ಚೀನಾದ ಸೇತುವೆಯ ವೀಡಿಯೊವನ್ನು ಜಮ್ಮು ಕಾಶ್ಮೀರದ NH 44 ಎಂದು ತಪ್ಪಾಗಿ ಹಂಚಿಕೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.