“ಶಿವಮೊಗ್ಗದ ಸಾಗರ ಭಟ್ಕಳ ರೋಡ್‌ನಲ್ಲಿ ಸಿಂಹಗಳ ಗುಂಪೊಂದು ಓಡಾಡುತ್ತಿವೆ. ದಯವಿಟ್ಟು ಸಂಜೆ ವೇಳೆ ಯುವಕರು ಬೈಕ್‌ನಲ್ಲಿ ತಿರುಗಾಡುವ ಮುನ್ನ ಎಚ್ಚರ” ಎಂದು ವಾಟ್ಸ್‌ಆಪ್‌ಗಳಲ್ಲಿ ವಿಡಿಯೋವೊಂದನ್ನು ಹಂಚಿಕೊಳ್ಳಲಾಗುತ್ತಿದೆ. ವಿಡಿಯೋದಲ್ಲಿ ಸಿಂಹಿಣಿಗಳ ಗುಂಪೊಂದು ತನ್ನ ಮರಿಗಳ ಜೊತೆ ನಡುರಸ್ತೆಯಲ್ಲಿ ಓಡಾಡುವುದನ್ನು ಕಾಣ ಬಹುದಾಗಿದೆ. ಈಗಾಗಲೇ ಈ ವಿಡಿಯೋ ಶಿವಮೊಗ್ಗ ವಾಟ್ಸ್‌ಆಪ್ ಗ್ರೂಪ್ ಸೇರಿದಂತೆ ಹಲವೆಡೆ ಹಂಚಿಕೊಳ್ಳಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಸಾಕಷ್ಟು ಮಂದಿ ಈ ವಿಡಿಯೋ ಬಗ್ಗೆ ಸರಿಯಾದ ಸ್ಪಷ್ಟನೆ ಇಲ್ಲದ ಕಾರಣ ಗೊಂದಲಕ್ಕೆ ಈಡಾಗಿದ್ದಾರೆ. ಹಲವರು ಇದನ್ನು ನಿಜವೆಂದು ಭಾವಿಸಿದ್ದಾರೆ ಎನ್ನಲಾಗಿದೆ. ಹಾಗಾಗಿ ವೈರಲ್ ವಿಡಿಯೋವಿನ ನೈಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ.
ಫ್ಯಾಕ್ಟ್‌ಚೆಕ್
ವಾಟ್ಸ್‌ಆಪ್ ಮೂಲಕ ಈ ವೈರಲ್ ವಿಡಿಯೋವನ್ನು ಪರಿಶೀಲಿಸುವಂತೆ ಸಾರ್ವಜನಿಕರು ಕನ್ನಡ ಫ್ಯಾಕ್ಟ್‌ಚೆಕ್ ತಂಡಕ್ಕೆ ವೈರಲ್ ವಿಡಿಯೋವನ್ನು ಕಳುಹಿಸಿದ್ದರು. ಹೀಗಾಗಿ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಾವು ವಿಡಿಯೋವನ್ನು ವಿವಿಧ ಕೀ ವರ್ಡ್‌ಗಳನ್ನು ಬಳಸಿ ಅಂತರ್ಜಾಲದಲ್ಲಿ ಹುಡುಕಾಟವನ್ನು ನಡೆಸಿದೆವು. ಆದರೆ ಈ ಬಗ್ಗೆ ಯಾವುದೇ ರೀತಿಯಾದ ಅಧಿಕೃತ ಮಾಧ್ಯಮ ವರದಿಗಳು ನಮಗೆ ಕಂಡು ಬರಲಿಲ್ಲ. ಇನ್ನು ಲಭ್ಯವಿರುವ ಮಾಹಿತಿಗಳ ಪ್ರಕಾರ ತ್ಯಾವರೆಕೊಪ್ಪ ಸಿಂಹದಾಮ ಬಿಟ್ಟರೆ, ಶಿವಮೊಗ್ಗದಲ್ಲಿ ಸಿಂಹಗಳ ಇರುವಿಕೆ ಇಲ್ಲ ಎಂಬುದು ಸ್ಪಷ್ಟವಾಗಿದೆ.
ಹೀಗಾಗಿ ನಾವು ವೈರಲ್ ವಿಡಿಯೋವನ್ನು ವಿವಿಧ ಕೀ ಪ್ರೇಮ್‌ಗಳಾಗಿ ವಿಂಗಡಿಸಿ ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ 7 ಸೆಪ್ಟೆಂಬರ್ 2024ರಂದು ಅಮೇಜಿಂಗ್ ಅಮ್ರೇಲಿ ಎಂಬ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಪೋಸ್ಟ್ ಆಗಿರುವುದು ಕಂಡು ಬಂದಿದೆ. ಮತ್ತು ಗುಜರಾತ್ ವೈಲ್ಡ್ ಲೈಫ್ ಅಫಿಶಿಯಲ್ ಎಂಬ Instagram ನಲ್ಲಿಯು ಈ ವಿಡಿಯೋ ಲಭ್ಯವಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಹಲವು ಅಂಶಗಳನ್ನು ಗಮನಿಸಿದಾಗ ವೈರಲ್ ವಿಡಿಯೋ ಕರ್ನಾಟಕಕ್ಕೆ ಸೇರಿದ್ದಲ್ಲ, ಗುಜರಾತ್‌ನದ್ದು ಎಂಬುದು ಸ್ಪಷ್ಟವಾಗಿದೆ. ಸಾರ್ವಜನಿಕರಲ್ಲಿ ಭಯ ಹುಟ್ಟಿಸಲು ಕಿಡಿಗೇಡಿಗಳು ಈ ವಿಡಿಯೋವನ್ನು ಸಾಗರ ಭಟ್ಕಳ ರೋಡ್‌ನಲ್ಲಿ ಸಿಂಹಗಳ ಗುಂಪೊಂದು ಓಡಾಡುತ್ತಿವೆ ಎಂದು ಸುಳ್ಳು ಮಾಹಿತಿಯೊಂದಿಗೆ ಹಂಚಿಕೊಂಡಿದ್ದಾರೆ. ಹಾಗಾಗಿ ಇಂತಹ ಸುಳ್ಳು ನಿರೂಪಣೆಯೊಂದಿಗೆ ಕೂಡಿರುವ ವಿಡಿಯೋವನ್ನು ನಂಬಬೇಡಿ.
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.