ಸೌದಿ ಅರೇಬಿಯಾದಲ್ಲಿ 8,000 ವರ್ಷಗಳಷ್ಟು ಹಳೆಯದಾದ ಸನಾತನ ಧರ್ಮದ ದೇವಾಲಯ ಮತ್ತು ನಾಗರಿಕತೆಯ ಅವಶೇಷಗಳನ್ನು ಕಂಡುಹಿಡಿಯಲಾಗಿದೆ ಎಂಬ ಪೋಸ್ಟರ್‌ನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
ಫ್ಯಾಕ್ಟ್ ಚೆಕ್
ಈ ವೈರಲ್ ವೀಡಿಯೋದ ಹೆಸರುಗಳನ್ನು Google ಕೀವರ್ಡ್ ಬಳಸಿಕೊಂಡು ಹುಡುಕಿದಾಗ, ಈ ಉತ್ಖನನ ಮತ್ತು ಅನ್ವೇಷಣೆಯ ಕುರಿತು ಹಲವಾರು ವರದಿಗಳು ಲಭಿಸಿವೆ. 2022ರ ಜುಲೈನಲ್ಲಿ ಸೌದಿ ಹೆರಿಟೇಜ್ ಕಮಿಷನ್, ಉತ್ಖನನದಲ್ಲಿ ನೈಋತ್ಯ ಸೌದಿ ಅರೇಬಿಯಾದ ಮೌಂಟ್ ತುವೈಕ್‌ನಲ್ಲಿರುವ ಅಲ್-ಫಾವ್‌ನಲ್ಲಿ 8,000 ವರ್ಷಗಳಷ್ಟು ಹಳೆಯದಾದ ಕಲ್ಲಿನ ದೇವಾಲಯದ ತುಣುಕುಗಳು ದೊರೆತಿವೆ. ಈ ಆವಿಷ್ಕಾರವು ಪ್ರಾಚೀನ ಅರೇಬಿಯಾದಲ್ಲಿನ ಅಲೆಮಾರಿ ಬುಡಕಟ್ಟುಗಳ ದೈನಂದಿನ ಜೀವನದ ಬಗ್ಗೆ ತಜ್ಞರ ಒಳನೋಟಗಳ ಕುರಿತು ಮಾಹಿತಿಯನ್ನು ನೀಡುತ್ತದೆ. ಕಿಂಡಾ ಸಾಮ್ರಾಜ್ಯದ ಹಿಂದಿನ ರಾಜಧಾನಿಯಾದ ಅಲ್-ಫಾವ್‌ನಲ್ಲಿ ಸೌದಿ ಮತ್ತು ಫ್ರೆಂಚ್ ಪುರಾತತ್ವಶಾಸ್ತ್ರಜ್ಞರ ಬಹುರಾಷ್ಟ್ರೀಯ ತಂಡವು ಉತ್ಖನನವನ್ನು ನಡೆಸಿದೆ. ಈ ಪ್ರದೇಶವನ್ನು ಅನ್ವೇಷಿಸಲು ವೈಮಾನಿಕ ಛಾಯಾಗ್ರಹಣ, ಲೇಸರ್ ಸ್ಕ್ಯಾನ್‌ಗಳು, ನೆಲದ-ಪೆನೆಟ್ರೇಟಿಂಗ್ ರಾಡಾರ್, ಟೊಪೊಗ್ರಾಫಿಕ್ ಮತ್ತು ಜಿಯೋಫಿಸಿಕಲ್ ಸಮೀಕ್ಷೆಗಳಂತಹ ಸುಧಾರಿತ ವಿಧಾನಗಳನ್ನು ಬಳಸಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಉತ್ಖನನದಿಂದ, ಅಲ್-ಫಾವ್‌ನಲ್ಲಿ 8,000 ವರ್ಷಗಳಷ್ಟು ಹಳೆಯದಾದ ನವಶಿಲಾಯುಗದ ಮಾನವ ವಸಾಹತುಗಳು ಮತ್ತು ವಿವಿಧ ಅವಧಿಗಳ 2,807 ಸಮಾಧಿಗಳು ಕಂಡುಬಂದಿವೆ. ಈ ಉತ್ಖನನ ಪ್ರಾಚೀನ ಸಮಾಧಿಯ ಪದ್ಧತಿಗಳು ಮತ್ತು ಅವರ ದೈನಂದಿನ ಜೀವನದ ಒಳನೋಟಗಳ ಕುರಿತು ಮಾಹಿತಿಯನ್ನು ಒದಗಿಸುತ್ತದೆ.
ದೊಡ್ಡ ಕಟ್ಟಡಗಳನ್ನು ವ್ಯಾಪಾರಿಗಳು ಬಳಸುತ್ತಿದ್ದರು ಎಂದು ಅವಶೇಷಗಳ ಮೂಲಕ ತಿಳಿದುಬಂದಿದೆ. ಮರುಭೂಮಿಯಲ್ಲಿ ಕೃಷಿಗಾಗಿ ಸುಧಾರಿತ ನೀರಾವರಿ ವ್ಯವಸ್ಥೆಯನ್ನು ಹೊಂದಿದ್ದರು. ಜೊತೆಗೆ ದೈನಂದಿನ ದೃಶ್ಯಗಳನ್ನು ಚಿತ್ರಿಸುವ ರಾಕ್ ಆರ್ಟ್ ಸಹ ಇತ್ತು ಎಂದು ತಿಳಿದುಬಂದಿದೆ.
ಉತ್ಖನನದಿಂದಾಗಿ ಅಲ್-ಫಾವ್‌ನ ಸ್ಥಳೀಯ ದೇವರಾದ ಕಹಲ್‌ಗೆ ಸಂಬಂಧಿಸಿದ ಶಾಸನಗಳು ಕಂಡುಬಂದಿವೆ. ಕಹಲ್ ದೇವಾಲಯವನ್ನು ಕಲ್ಲಿನಿಂದ ಕೆತ್ತಲಾಗಿದ್ದು, ಇದು ಸ್ಥಳೀಯರ ಮತ್ತು ವ್ಯಾಪಾರಿಗಳ ಧಾರ್ಮಿಕ ಆಚರಣೆಗಳ ಕೇಂದ್ರವಾಗಿತ್ತು ಎಂದು ತಿಳಿದುಬಂದಿದೆ. ಅಲ್-ಫಾವ್‌ನ ಜನರ ಧಾರ್ಮಿಕ ಆಚರಣೆಗೂ, ಹಿಂದೂ ಧರ್ಮಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. ಆದರೆ ಉತ್ಖನನವು ಸಾವಿರಾರು ವರ್ಷಗಳ ಹಿಂದಿನ ಸಮುದಾಯದ ಆಧ್ಯಾತ್ಮಿಕ ಜೀವನವನ್ನು ಪ್ರತಿಬಿಂಬಿಸುತ್ತದೆ. ಅಲ್ –ಫಾವ್ ಪುರಾತತ್ವ ಪ್ರದೇಶವನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿ ವರ್ಗೀಕರಿಸಲಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಕಲ್ಲಿನಲ್ಲಿ ಕೆತ್ತಿದ ಕಹಲ್ ದೇವಾಲಯವು ಅಲ್-ಫಾವ್ ನಿವಾಸಿಗಳ ಧಾರ್ಮಿಕ ಆಚರಣೆಯ ನಂಬಿಕೆಯಾಗಿದೆ ಹೊರತು ಹಿಂದೂ ಧರ್ಮಕ್ಕೆ ಸಂಬಂಧಿಸಿಲ್ಲ. ಆದ್ದರಿಂದ ಇಂತಹ ಮಾಹಿತಿಗಳನ್ನು ಹಂಚಿಕೊಳ್ಳುವ ಮುನ್ನ ಒಮ್ಮೆ ಪರಿಶೀಲಿಸಿಕೊಳ್ಳುವುದು ಉತ್ತಮ.
ಇದನ್ನು ಓದಿ :
Fact Check : ಜಮೀನಿನಲ್ಲಿರುವ ಸನ್ನಿ ಡಿಯೋಲ್,ಎಂಎಸ್ ಧೋನಿಯ ಫೋಟೊ ಎಡಿಟೆಡ್ ಆಗಿದೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.