ಇಸ್ರೇಲ್‌ನ ಟೆಲ್ ಅವಿವ್‌ನ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದೆ. ಇದಾದ ಕೆಲವೇ ಗಂಟೆಗಳ ನಂತರ, ಇಸ್ರೇಲ್‌ನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೆದರಿ ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ಕಟ್ಟಡದ ಕಾರಿಡಾರ್‌ನ ಮೂಲಕ ಬಂಕರ್‌ಗೆ ಓಡಿಹೋಗುತ್ತಿದ್ದಾರೆ ಎಂದು ವೀಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
Sohidul Islam Sahid ಎಂಬ ಖಾತೆಯಲ್ಲಿ ಹಂಚಿಕೊಳ್ಳಲಾದ ಪೋಸ್ಟರ್‌ನಲ್ಲಿ, “ಇಸ್ರೇಲ್ ಪಿಎಂ ಬೆಂಜಮಿನ್ ನೆತನ್ಯಾಹು ತನ್ನ ಜೀವವನ್ನು ಉಳಿಸಿಕೊಳ್ಳಲು ಓಡುತ್ತಿದ್ದಾರೆ. ಅವರು ಎಷ್ಟು ದಿನ ಬಂಕರ್‌ನಲ್ಲಿ ಅಡಗಿಕೊಳ್ಳುತ್ತಾರೆ” ಎಂದು ಹಂಚಿಕೊಳ್ಳಲಾಗುತ್ತಿದೆ.
ಫ್ಯಾಕ್ಟ್ ಚೆಕ್ :
ಈ ವೈರಲ್ ವೀಡಿಯೊದ ಕೀಫ್ರೇಮ್‌ಗಳನ್ನು ರಿವರ್ಸ್ ಇಮೇಜ್ ಬಳಸಿಕೊಂಡು ಹುಡುಕಿದಾಗ, 2021ರ ಡಿಸೆಂಬರ್ 14ರಂದು ಬೆಂಜಮಿನ್ ನೆತನ್ಯಾಹು ಅವರ ಅಧಿಕೃತ X ಖಾತೆಯು ಹಂಚಿಕೊಂಡ ಮೂಲ ವೀಡಿಯೊ ಲಭಿಸಿದೆ. ಹೀಬ್ರೂ ಭಾಷೆಯಲ್ಲಿನ ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ, “ನಿಮಗಾಗಿ ಓಡಲು ನಾನು ಯಾವಾಗಲೂ ಹೆಮ್ಮೆಪಡುತ್ತೇನೆ. ಈ ಫೋಟೋ ಅರ್ಧ ಘಂಟೆಯ ಹಿಂದೆ ನೆಸೆಟ್‌ನಲ್ಲಿ ತೆಗೆದದ್ದು” ಎಂದು ಬರೆದು ಹಂಚಿಕೊಂಡಿದ್ದಾರೆ.
ಈ ವೈರಲ್ ವೀಡಿಯೊ ಕುರಿತು ಮತ್ತಷ್ಟು ಕೀವರ್ಡ್‌ಗಳನ್ನು ಬಳಸಿಕೊಂಡು ಹುಡುಕಿದಾಗ, 2021ರ ಡಿಸೆಂಬರ್ 13ರಂದು ಪ್ರಕಟವಾದ ಹೀಬ್ರೂ ಸುದ್ದಿ ವರದಿ ಲಭಿಸಿತು. ಆ ಸಮಯದಲ್ಲಿ ವಿರೋಧ ಪಕ್ಷದ ಮುಖ್ಯಸ್ಥರಾಗಿದ್ದ ನೆತನ್ಯಾಹು ಪ್ಲೀನಮ್‌ನಲ್ಲಿ ಮತದಾನ ಮಾಡಲು ಸರಿಯಾದ ಸಮಯಕ್ಕೆ ಹೋಗುವ ಸಲುವಾಗಿ ತಮ್ಮ ನೆಸ್ಸೆಟ್ ಕಚೇರಿಯಿಂದ ಓಡಿಹೋಗಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ.
ನೆಸ್ಸೆಟ್ ಇಸ್ರೇಲ್‌ನ ಏಕಸದಸ್ಯ ಶಾಸಕಾಂಗವಾಗಿದ್ದು, ಅಧ್ಯಕ್ಷ ಮತ್ತು ಪ್ರಧಾನ ಮಂತ್ರಿಯನ್ನು ಆಯ್ಕೆ ಮಾಡುತ್ತದೆ. ಕ್ಯಾಬಿನೆಟ್ ಅನ್ನು ರಚಿಸುತ್ತದೆ. ಎಲ್ಲಾ ರೀತಿಯ ಕಾನೂನುಗಳನ್ನು ಅಂಗೀಕರಿಸುತ್ತದೆ. ನೆಸ್ಸೆಟ್ ಪ್ಲೀನಮ್ ಸರ್ವೋಚ್ಚ ಅಧಿಕೃತ ಸಂಸ್ಥೆಯಾಗಿದೆ. ನೆಸ್ಸೆಟ್‌ನ ನಿರ್ಣಯಗಳನ್ನು ಪ್ಲೀನಮ್‌ನಲ್ಲಿ ಮತದಾನದ ಮೂಲಕ ಅಂಗೀಕರಿಸಲಾಗುತ್ತದೆ.
ಒಟ್ಟಾರೆಯಾಗಿ ಹೇಳುವುದಾದರೆ, ಇಸ್ರೇಲ್ ಮೇಲೆ ಇರಾನ್ ದಾಳಿ ಮಾಡಿದ್ದರಿಂದ ಇಸ್ರೇಲ್ ಪ್ರಧಾನಿ ನೇತನ್ಯಾಹು ಹೆದರಿ ಬಂಕಾರ್‌ಗೆ ಓಡಿಹೋಗುತ್ತಿದ್ದಾರೆ ಎಂಬ ವೀಡಿಯೊ ಸುಳ್ಳು ಮಾಹಿತಿಯಿಂದ ಕೂಡಿದೆ. ಹಾಗಾಗಿ ಇಂತಹ ವೀಡಿಯೊಗಳನ್ನು ಹಂಚಿಕೊಳ್ಳುವ ಮುನ್ನ ಒಮ್ಮೆ ಪರಿಶೀಲಿಸಿಕೊಳ್ಳಿ.
ಇದನ್ನು ಓದಿ :
Fact Check : ಮನಮೋಹನ್ ಸಿಂಗ್ ಹೂಡಿಕೆ ಉತ್ತೇಜಿಸಿ ಪ್ರಚಾರ ಮಾಡಿದ್ದಾರೆ ಎಂದು ನಕಲಿ ವೀಡಿಯೊ ಹಂಚಿಕೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.