Fact Check: ರಾಮಾಯಣ ಕಾಲದ ಕುಂಭಕರ್ಣನ ದೈತ್ಯ ಖಡ್ಗ ಪತ್ತೆಯಾಗಿದೆ ಎಂದು ಎಐ ಚಿತ್ರಗಳನ್ನು ಹಂಚಿಕೊಳ್ಳಲಾಗುತ್ತಿದೆ

ಎಐ ಚಿತ್ರಗಳು

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಬೃಹತ್ ಖಡ್ಗ ಒಂದರ ಪೋಟೋ ಒಂದನ್ನು ಹಂಚಿಕೊಳ್ಳಲಾಗುತ್ತಿದ್ದು, ಈ ಖಡ್ಗವು ರಾಮಾಯಣ ಕಾಲದ ಕುಂಬಕರ್ಣನ ಖಡ್ಗ ಎಂದು ಪ್ರತಿಪಾದಿಸಲಾಗುತ್ತಿದೆ. ಇದೇ ರೀತಿಯ ಅನೇಕ ಪ್ರತಿಪಾದನೆಗಳನ್ನು ಕೆಲವು ಬಲಪಂಥೀಯರು ಹರಿಬಿಡುತ್ತಿದ್ದು ಆಸ್ಟ್ರೇಲಿಯಾ ದೇಶ ರಾಮಾಯಣ ಮತ್ತು ಮಹಾಭಾರತದ ಕಾಲದಲ್ಲಿ “ಅಸ್ತ್ರಾಲಯ” ಎಂಬ ಪ್ರದೇಶವಾಗಿತ್ತು ಎಂದು ಪ್ರತಿಪಾದಿಸಲಾಗುತ್ತಿದೆ.

ಬೃಹತ್ ಖಡ್ಗವನ್ನು ಹಂಚಿಕೊಂಡಿರುವ ಕೆಲವರು “ಕುಂಭಕರ್ಣನ ಖಡ್ಗ ಪತ್ತೆ ರಾಮಾಯಣ ನಡೆದಿದೆ ಎಂಬುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಿಲ್ಲ” ಎಂಬ ಶೀರ್ಷಿಕೆಯೊಂದಿಗೆ ಈ ವೀಡಿಯೋವನ್ನು ಹಂಚಿಕೊಂಡಿದ್ದಾರೆ.

ಪೇಸ್‌ಬುಕ್‌ನಲ್ಲಿಯೂ ಸಹ ಇದೇ ರೀತಿಯ ಪ್ರತಿಪಾದನೆಗಳೊಂದಿಗೆ ವಿಡಿಯೋ ಹಂಚಿಕೊಂಡಿರುವುದನ್ನು ನೀವು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಫ್ಯಾಕ್ಟ್‌ ಚೆಕ್:

ಈ ಮಾಹಿತಿ ಸುಳ್ಳಾಗಿದ್ದು, ಈ ಚಿತ್ರಗಳು ಕೃತಕ ಬುದ್ಧಿಮತ್ತೆಯಿಂದ(AI) ಸೃಷ್ಟಿಸಲಾಗಿದೆ.

ಈ ದೈತ್ಯ ಖಡ್ಗಗಳ ಕುರಿತು ಮಾಹಿತಿ ತಿಳಿಯಲು ನಾವು ಗೂಗಲ್ ರಿವರ್ಸ್‌ ಇಮೇಜ್‌ನಲ್ಲಿ ವೈರಲ್ ಚಿತ್ರಗಳನ್ನು ಬಳಸಿ ಹುಡುಕಿದಾಗ ಇದೇ ಚಿತ್ರಗಳನ್ನು ಬಳಸಿಕೊಂಡು “ಟರ್ಕಿಯಲ್ಲಿ ಪುರಾತತ್ವ ಶೋಧನೆಯಲ್ಲಿ ಪತ್ತೆಯಾದ ದೈತ್ಯ ಖಡ್ಗಗಳನ್ನು ತೋರಿಸುವ ನಾಲ್ಕು ಛಾಯಾಚಿತ್ರಗಳು” ಎಂದು ಹಂಚಿಕೊಳ್ಳುತ್ತಿರುವುದು ತಿಳಿದು ಬಂದಿದೆ.

“ಆಘಾತಕಾರಿ ಪತ್ತೆ: ಪುರಾತತ್ವಶಾಸ್ತ್ರಜ್ಞರು ಟರ್ಕಿಯ 3,000 ವರ್ಷಗಳಷ್ಟು ಹಳೆಯದಾದ ನಾಗರಿಕತೆಯಿಂದ ಬೃಹತ್ ಖಡ್ಗಗಳನ್ನು ಕಂಡುಹಿಡಿದಿದ್ದಾರೆ, ಇದು ದೈತ್ಯ ಯೋಧರು ಮತ್ತು ಅವರ ಆಶ್ಚರ್ಯಕರ ಕರಕುಶಲತೆಯ ಬಗ್ಗೆ ಕುತೂಹಲವನ್ನು ಬಿಚ್ಚಿಡುತ್ತದೆ” ಎಂದು ಚಿತ್ರಗಳೊಂದಿಗೆ ಫೇಸ್‌ಬುಕ್‌ ಪೋಸ್ಟ್‌ನಲ್ಲಿ ಬರೆಯಲಾಗಿದೆ. ಇದೇ ಚಿತ್ರಗಳನ್ನು ಹೊಂದಿರುವ ಒಂದು ಎಕ್ಸ್ ಪೋಸ್ಟ್ ಈ ಲೇಖನವನ್ನು ಬರೆಯುವ ಹೊತ್ತಿಗೆ 1.4 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ.

ಆದರೆ, ಟರ್ಕಿಯಲ್ಲಿ ಪತ್ತೆಯಾದ ದೈತ್ಯ ಖಡ್ಗಗಳನ್ನು ತೋರಿಸುವ ಚಿತ್ರಗಳು ಎಐ-ಉತ್ಪತ್ತಿಯಾದ ಹಲವಾರು ಲಕ್ಷಣಗಳನ್ನು ತೋರಿಸುತ್ತವೆ. ಉದಾಹರಣೆಗೆ, ಫೋಟೋಗಳಲ್ಲಿನ ವ್ಯಕ್ತಿಗಳ ವಿರೂಪಗೊಂಡ ಕೈಗಳು, ಅಸಮತೋಲಿತ ದೇಹಗಳು ಮತ್ತು ಅಸ್ವಾಭಾವಿಕ ಮುಖದ ಲಕ್ಷಣಗಳನ್ನು ಹೊಂದಿದ್ದಾರೆ. ಹೆಚ್ಚುವರಿಯಾಗಿ, ಚಿತ್ರಗಳಲ್ಲಿನ ನೆರಳುಗಳು ಅಸಮಂಜಸವಾಗಿವೆ, ಕೆಲವು ಪರಸ್ಪರ ವಿರುದ್ಧ ದಿಕ್ಕುಗಳಲ್ಲಿವೆ (ಕೆಳಗಿನ ಉದಾಹರಣೆಗಳಲ್ಲಿ ಹೈಲೈಟ್ ಮಾಡಿದಂತೆ).

ಸಾಮಾನ್ಯವಾಗಿ ಎಐ ಚಿತ್ರಗಳಲ್ಲಿ ಫೋಟೋಗಳಲ್ಲಿನ ವ್ಯಕ್ತಿಗಳ ತಲೆಗಳು ಹೆಚ್ಚಾಗಿ ವಿರೂಪಗೊಂಡಿದ್ದು, ಅಸ್ವಾಭಾವಿಕ ಆಕಾರದಲ್ಲಿರುತ್ತವೆ, ಮತ್ತು ಅವರ ಕೈಗಳು ಹೆಚ್ಚುವರಿ ಬೆರಳುಗಳನ್ನು ಅಥವಾ ಮಸುಕಾದ ರೂಪರೇಖೆಗಳನ್ನು ಹೊಂದಿರುತ್ತವೆ.

ಎಐ-ರಚಿಸಿದ ಚಿತ್ರಗಳನ್ನು ಪತ್ತೆಹಚ್ಚಲು ವಿನ್ಯಾಸಗೊಳಿಸಲಾದ ಇಸ್‌ ಇಟ್‌ ಎಐ?, ಎಲ್ಲಾ ನಾಲ್ಕು ಛಾಯಾಚಿತ್ರಗಳು “ಹೆಚ್ಚು ಸಂಭವನೀಯ” ಎಐ ನಿಂದ-ಉತ್ಪಾದಿಸಲ್ಪಟ್ಟಿವೆ ಎಂದು ಸೂಚಿಸಿದೆ. ಹಾಗೆಯೇ, TrueMedia.org ವೆಬ್ಸೈಟ್ “ಕೃತಕ ಬುದ್ಧಿಮತ್ತೆ ಎನ್ನಲು ಸಾಕಷ್ಟು ಪುರಾವೆಗಳಿವೆ” ಎಂದು ಸೂಚಿಸಿತು.

ಅಂತಿಮವಾಗಿ, ಸುದ್ದಿ ಸಂಸ್ಥೆಗಳು, ಪುರಾತತ್ವ ಸಂಸ್ಥೆಗಳು ಅಥವಾ ವೈಜ್ಞಾನಿಕ ನಿಯತಕಾಲಿಕೆಗಳು ಸೇರಿದಂತೆ ಯಾವುದೇ ಪ್ರತಿಷ್ಠಿತ ಮೂಲಗಳು ಭಾರತದಲ್ಲಿ, ಟರ್ಕಿಯಲ್ಲಿ ಅಥವಾ ವಿಶ್ವದ ಬೇರೆಲ್ಲಿಯಾದರೂ ಈ ರೀತಿಯ ದೈತ್ಯ ಖಡ್ಗಗಳು ಪತ್ತೆಯಾಗಿರುವ ಕುರಿತು ವರದಿ ಮಾಡಿಲ್ಲ.

ಟರ್ಕಿಯ ಸತ್ಯಶೋಧನಾ ಸಂಸ್ಥೆಯಾದ ಟೆಯಿಟ್ ಕೂಡ ಜುಲೈ 2024 ರಲ್ಲಿ ಚಿತ್ರಗಳನ್ನು ತನಿಖೆ ಮಾಡಿ, ಅದೇ ರೀತಿ ಚಿತ್ರಗಳನ್ನು ಕೃತಕವಾಗಿ ರಚಿಸಲಾಗಿದೆ ಎಂದು ತೀರ್ಮಾನಿಸಿತು. ಇಂಡೋನೇಷ್ಯಾದ ಸತ್ಯಶೋಧನಾ ಸಂಸ್ಥೆಯಾದ Tempo.co ಕೂಡ ಆಗಸ್ಟ್ 2024 ರಲ್ಲಿ ಈ ಚಿತ್ರಗಳು ನಕಲಿ ಎಂದು ಅಂದಾಜಿಸಿದೆ.

ಆದ್ದರಿಂದ ಸಧ್ಯ ರಾಮಾಯಣ ಕಾಲದ ಕುಂಭಕರ್ಣನ ದೈತ್ಯ ಖಡ್ಗ ಪತ್ತೆಯಾಗಿದೆ ಎಂಬುದು ಸುಳ್ಳಾಗಿದ್ದು, ಇವು ಎಐನ ಚಿತ್ರಗಳಾಗಿವೆ.


ಇದನ್ನು ಓದಿ: ಹೃದಯ ಶಸ್ತ್ರಚಿಕಿತ್ಸೆಗೆ ಬಳಸುವ ಮೆಗಾವಾಕ್ ಉಪಕರಣವನ್ನು ಭಾರತೀಯ ವೈದ್ಯರು ಅಭಿವೃದ್ಧಿ ಪಡಿಸಿದ್ದಾರೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *