ದೀಪಾವಳಿ ಹಬ್ಬದ ಸಂದರ್ಭದಲ್ಲಿ ಅನೇಕ ಕಂಪನಿಗಳು ಹಬ್ಬದ ಕೊಡುಗೆಗಳನ್ನು ಪ್ರತಿವರ್ಷ ನೀಡುತ್ತಿರುತ್ತವೆ. ಆದರೆ ಅವುಗಳಲ್ಲಿ ಹಲವು ನಿಜವಿದ್ದರೆ ಇನ್ನೂ ಕೆಲವು ಸುಳ್ಳಿರುತ್ತವೆ. ಈಗ ಐಫೋನ್ 13 ಅಥವಾ ಸ್ಯಾಮ್ಸಂಗ್ ಎಸ್ 23 ಕೇವಲ 99 ರೂ.ಗೆ ಸಿಗುತ್ತದೆ ಅಥವಾ ಒಪ್ಪೋ ಸ್ಮಾರ್ಟ್ಫೋನ್ ಕೇವಲ 9 ರೂ.ಗೆ ಸಿಗುತ್ತದೆ, ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ವೈರಲ್ ಆಗುತ್ತಿರುವ ಈ ಪೋಸ್ಟ್‌ಗಳ ಪ್ರಕಾರ, ಈ ಕೊಡುಗೆಗಳನ್ನು ಪಡೆಯಲು ನೀವು ಮಾಡಬೇಕಾಗಿರುವುದು ಇನ್ಸ್ಟಾಗ್ರಾಮ್ ರೀಲ್ ಅನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳುವುದು ಮತ್ತು “digital712.com” ಎಂಬ ವೆಬ್ಸೈಟ್‌ನಲ್ಲಿ ನಿಮ್ಮ ವೈಯಕ್ತಿಕ ವಿವರಗಳನ್ನು ನಮೂದಿಸುವುದು. ಹೆಚ್ಚಿನ ಜನರು ಇದನ್ನು ಸ್ಪಷ್ಟ ವಂಚನೆ ಎಂದು ಗುರುತಿಸುತ್ತಾರೆ. ಆದರೆ ಅನೇಕರು, ಈ ಪೋಸ್ಟ್‌ಗಳ ಕಾಮೆಂಟ್‌ಗಳಲ್ಲಿ ತಮ್ಮ ಫೋನ್ ಸಂಖ್ಯೆಗಳನ್ನು ಹಲವಾರು ಜನರು ಹಂಚಿಕೊಂಡಿರುವುದರಿಂದ ನಿಜವೆಂದು ನಂಬುತ್ತಾರೆ.
ಫ್ಯಾಕ್ಟ್ ಚೆಕ್:
ವೈರಲ್ ಆಗುತ್ತಿರುವ ಈ ದೀಪಾವಳಿ ಕೊಡುಗೆ ಮೋಸದ ಜಾಲವಾಗಿದ್ದು, ಕೇವಲ 99 ರೂಗಳಿಗೆ ಐಫೋನ್ 13 ಅಥವಾ ಸ್ಯಾಮ್ಸಂಗ್ ಎಸ್ 23 ನೀಡುವ ಯಾವುದೇ ಕೊಡುಗೆಗಳನ್ನು ಈ ಕಂಪನಿಗಳು ಘೋಷಿಸಿಲ್ಲ.
ವೈರಲ್ ಆಗುತ್ತಿರುವ ರೀಲ್ಸ್‌ನಲ್ಲಿ, ಎಐ-ರಚಿಸಿದ ಧ್ವನಿಯು digital712.com ವೆಬ್ಸೈಟ್‌ಗೆ ಭೇಟಿ ನೀಡಲು ನಿಮ್ಮನ್ನು ಪ್ರೇರೇಪಿಸುತ್ತದೆ. ಇದನ್ನು ಹಂಚಿಕೊಳ್ಳುವ ಇನ್ಸ್ಟಾಗ್ರಾಮ್ ಖಾತೆಗಳ ಬಯೋಸ್‌ಗೆ ಲಿಂಕ್ ಮಾಡಲಾಗಿದೆ. ವೆಬ್ಸೈಟ್‌ನಲ್ಲಿ, ಉಚಿತ ಸ್ಮಾರ್ಟ್ಫೋನ್ ಪಡೆಯಲು ಲಿಂಕ್ ಅನ್ನು ಕ್ಲಿಕ್ ಮಾಡಲು ನಿಮ್ಮನ್ನು ಕೇಳಲಾಗುತ್ತದೆ. ನಂತರ ಐಫೋನ್ 13, ಸ್ಯಾಮ್ಸಂಗ್ ಎಸ್ 23 ಅಥವಾ ವಿವೋ ವಿ 27 ನಂತಹ ಆಯ್ಕೆಗಳಿಂದ ಆಯ್ಕೆ ಮಾಡಲು ನಿಮ್ಮನ್ನು ಕೇಳಲಾಗುತ್ತದೆ. ಮುಂದೆ, ಈ ಖರೀದಿಯನ್ನು ನೀವು ಯಾರಿಗಾಗಿ ಮಾಡಲು ಬಯಸುತ್ತೀರಿ ಎಂದು ನಿಮ್ಮನ್ನು ಕೇಳಲಾಗುತ್ತದೆ.
ವೆಬ್ಸೈಟ್ ಉಚಿತ ಫೋನ್ ರೀಚಾರ್ಜ್ ಕೊಡುಗೆಗಳನ್ನು ಸಹ ಜಾಹೀರಾತು ಮಾಡುತ್ತದೆ. ನೀವು ಅವುಗಳನ್ನು ಪಡೆಯಲು ಪ್ರಯತ್ನಿಸಿದರೆ, ನಿಮ್ಮ ಫೋನ್ ಸಂಖ್ಯೆಯಂತಹ ವೈಯಕ್ತಿಕ ವಿವರಗಳಿಗಾಗಿ ನಿಮ್ಮನ್ನು ಕೇಳಲಾಗುತ್ತದೆ. ಇದು ವೈಯಕ್ತಿಕ ವಿವರಗಳ ಸಂಗ್ರಹಣೆಯ ಹಗರಣ(data harvesting scams)ಗಳಿಗೆ ಸಾಮಾನ್ಯ ಕಾರ್ಯವಿಧಾನವಾಗಿದೆ.
ನೀವು ಸ್ಮಾರ್ಟ್ಫೋನ್ ಖರೀದಿಸಲು ಪ್ರಯತ್ನಿಸಿದರೆ ಅಥವಾ digital712.com ಮೂಲಕ ರೀಚಾರ್ಜ್ ಕೊಡುಗೆಗಳನ್ನು ಪಡೆಯಲು ಪ್ರಯತ್ನಿಸಿದರೆ, ನೀವು ಕ್ರಮೇಣ ಎರಡು ವಿಭಿನ್ನ ಪೋರ್ಟಲ್‌ಗಳಿಗೆ ಮರುನಿರ್ದೇಶಿಸಲ್ಪಡುತ್ತೀರಿ: earnwithfaith.in ಮತ್ತು go.sapost.co.in. ನಿಜವಾದ ವೆಬ್ಸೈಟ್‌ಗಳು ಇಲ್ಲಿ ಲಿಂಕ್ ಆಗಿಲ್ಲ, ಅವುಗಳ ಆರ್ಕೈವ್‌ಗಳು ಮಾತ್ರ ನೀಡಲಾಗಿದೆ. ಈ ಮೂರೂ ಒಂದೇ ರೀತಿಯಲ್ಲಿ ಕಾಣುತ್ತವೆ ಮತ್ತು ಉದ್ದೇಶ ಹೊಂದಿವೆ, ಹಣ ಮಾಡುವ ತಂತ್ರಗಳು, ಸರ್ಕಾರಿ ಯೋಜನೆಗಳು ಮತ್ತು ಕೊಡುಗೆಗಳನ್ನು ಕೇಂದ್ರೀಕರಿಸುವ ಲೇಖನಗಳನ್ನು ಒಳಗೊಂಡಿವೆ.
ಈ ಭಾರಿ ರಿಯಾಯಿತಿಯ ಸ್ಮಾರ್ಟ್ಫೋನ್‌ಗಳನ್ನು ಖರೀದಿಸುವ ಪ್ರಯತ್ನದಲ್ಲಿ ನಿಮ್ಮ ವೈಯಕ್ತಿಕ ವಿವರಗಳನ್ನು ನಮೂದಿಸಿದ ನಂತರ, ಪುಟವು ಸಹಜ ಸ್ಥಿತಿಗೆ ಮರಳುತ್ತದೆ. ಅಲ್ಲಿ ಜಾಹೀರಾತು ಮಾಡಿದ ಫೋನ್ ಗಳನ್ನು ಖರೀದಿಸಲು ನಿಜವಾದ ಮಾರ್ಗವಿಲ್ಲ. ಇದು ಕೇವಲ ಡೇಟಾ ಸಂಗ್ರಹಣೆಯ ಹಗರಣವಾಗಿದೆ.
digital712.com ಲಿಂಕ್‌ನಲ್ಲಿ “ನಮ್ಮ ಕುರಿತು” ವಿಭಾಗದಲ್ಲಿ, ನಾವು ಇಮೇಲ್ ವಿಳಾಸವನ್ನು ಕಂಡುಕೊಂಡಿದ್ದೇವೆ. ಈ ವಿಳಾಸವನ್ನು ಹುಡುಕಿದಾಗ ಅದಕ್ಕೆ ಸಂಪರ್ಕಗೊಂಡಿರುವ LinkedIn ಖಾತೆಗೆ ನಮ್ಮನ್ನು ಕರೆದೊಯ್ಯಿತು. ಈ ವ್ಯಕ್ತಿಯ ಲಿಂಕ್ಡ್ಇನ್ ಬಯೋದಲ್ಲಿ ಅವರು ರಾಜಸ್ಥಾನದ ಬಿಕಾನೇರ್‌ನಲ್ಲಿ ಶಿಕ್ಷಕರಾಗಿದ್ದಾರೆ ಎಂದು ಹೇಳಲಾಗಿದೆ.
ನಾವು ಲಿಂಕ್ಡ್ಇನ್‌ನಲ್ಲಿ ಪಟ್ಟಿ ಮಾಡಲಾದ ಶಾಲೆಯನ್ನು ಹುಡುಕಿದೆವು ಮತ್ತು ಅದರ ಮಾಲೀಕರನ್ನು ಸಂಪರ್ಕಿಸಿದೆವು. ಲಿಂಕ್ಡ್ಇನ್ ಖಾತೆಯಲ್ಲಿ ನೀಡಲಾದ ಹೆಸರು ನಿಜವಾಗಿಯೂ ಅಲ್ಲಿನ ಬೋಧಕವರ್ಗದ ಸದಸ್ಯರೊಬ್ಬರು ಎಂದು ಅವರು ಕನ್ನಡ ಫ್ಯಾಕ್ಟ್ ಚೆಕ್‌ಗೆ ದೃಢಪಡಿಸಿದರು. ಶಾಲೆಯ ಮಾಲೀಕರ ಮೂಲಕ, ನಾವು ಶಿಕ್ಷಕರನ್ನು ಸಂಪರ್ಕಿಸಿದೆವು.
ಈ ವೆಬ್ಸೈಟ್‌ಗಳಲ್ಲಿ, “ನಮ್ಮ ಕುರಿತು” ವಿಭಾಗದಲ್ಲಿ ಪಟ್ಟಿ ಮಾಡಲಾದ ಇಮೇಲ್ ಅಥವಾ ಈ ಇಮೇಲ್‌ಗೆ ಲಿಂಕ್ ಮಾಡಲಾದ ಲಿಂಕ್ಡ್ಇನ್ ಖಾತೆಯೊಂದಿಗೆ ಯಾವುದೇ ಲಿಂಕ್ ಅನ್ನು ಅವರು ನಿರಾಕರಿಸಿದರು. ಅವರ ಮೂಲ ಲಿಂಕ್ಡ್ಇನ್ ಖಾತೆಯ ಲಿಂಕ್ ಕಳುಹಿಸುವಂತೆ ನಾವು ಅವರನ್ನು ಕೇಳಿದ್ದೇವೆ. ಅವರು ಆರಂಭದಲ್ಲಿ ಹಾಗೆ ಮಾಡಲು ಒಪ್ಪಿಕೊಂಡರೂ, ನಂತರ ಅವರು ಖಾತೆಯನ್ನು ಅಳಿಸಿದ್ದಾರೆ ಎಂದು ಹೇಳಿದರು – ಏಕೆಂದರೆ ಅದು ಕೆಲಸ ಹುಡುಕಲು ಸಹಾಯ ಮಾಡುತ್ತಿಲ್ಲ ಎಂದು ಆರೋಪಿಸಿದ್ದಾರೆ. ಕುತೂಹಲಕಾರಿ ಸಂಗತಿಯೆಂದರೆ, ಅವರೊಂದಿಗೆ ಮಾತನಾಡಿದ ನಂತರ ನಾವು ಪರಿಶೀಲಿಸಿದಾಗ, ನಾವು ಕಂಡುಕೊಂಡ ಲಿಂಕ್ಡ್ಇನ್ ಖಾತೆಯನ್ನು ಅಳಿಸಲಾಗಿದೆ.
ಇನ್ನಷ್ಟು ರಾಜಸ್ಥಾನದ ಲಿಂಕ್ ಗಳು
ವೆಬ್ಸೈಟ್ earnwithfaith.in ನ “ನಮ್ಮ ಕುರಿತು” ವಿಭಾಗದಲ್ಲಿ, ನಾವು ಮತ್ತೊಂದು ಇಮೇಲ್ ಅನ್ನು ಕಂಡುಕೊಂಡಿದ್ದೇವೆ. ನಾವು ಗೂಗಲ್‌ನಲ್ಲಿ ಈ ಇಮೇಲ್‌ಗಳಿಗಾಗಿ ಹುಡುಕಿದಾಗ, ಫೇಸ್ಬುಕ್, ಇನ್ಸ್ಟಾಗ್ರಾಮ್ ಮತ್ತು ಸ್ನ್ಯಾಪ್ಚಾಟ್ ಖಾತೆಗಳು ಇದಕ್ಕೆ ಲಿಂಕ್ ಆಗಿರುವುದನ್ನು ನಾವು ಕಂಡುಕೊಂಡಿದ್ದೇವೆ. ಈ ಖಾತೆಗಳಲ್ಲಿ ನೀಡಲಾದ ಮಾಹಿತಿಯ ಪ್ರಕಾರ, ಅವುಗಳನ್ನು ನಿರ್ವಹಿಸುವ ವ್ಯಕ್ತಿಯು ಸಂಗೀತಗಾರನಂತೆ ತೋರುತ್ತದೆ. ಅವನ ಛಾಯಾಚಿತ್ರಗಳನ್ನು ನೋಡಿದಾಗ, ಅವನು ಸಹ ಅಪ್ರಾಪ್ತನಾಗಿರಬಹುದು ಎಂದು ನಾವು ಭಾವಿಸಿದೆವು. ಆದ್ದರಿಂದ, ನಾವು ಅವರ ಬಗ್ಗೆ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸುತ್ತಿಲ್ಲ.
ಅವರು ಸ್ನ್ಯಾಪ್ಚಾಟ್‌ನಲ್ಲಿ ಹಂಚಿಕೊಂಡ ಚಿತ್ರಗಳನ್ನು ಸಹ ನಾವು ಪರಿಶೀಲಿಸಿದ್ದೇವೆ ಮತ್ತು ಡಾಲ್ಫಿನ್ ಪ್ರತಿಮೆಯ ಒಂದು ಚಿತ್ರವು ಜೋಧಪುರದ ಸುರ್ಪುರ ಸಫಾರಿ ಪಾರ್ಕ್‌ನದ್ದಾಗಿದೆ ಎಂದು ಕಂಡುಕೊಂಡಿದ್ದೇವೆ.
ಅಂತೆಯೇ, ಮತ್ತೊಂದು ಚಿತ್ರದಲ್ಲಿ, ಸ್ಟಾರ್ಬಕ್ಸ್ ಕ್ಯೂಆರ್ ಕೋಡ್ ಗೋಚರಿಸುತ್ತದೆ. ಈ ಕೋಡ್ ಅನ್ನು ಸ್ಕ್ಯಾನ್ ಮಾಡಿದ ನಂತರ, ನಮ್ಮನ್ನು ಜೋಧಪುರ ಪಾರ್ಕ್ ಪ್ಲಾಜಾದಲ್ಲಿರುವ ಸ್ಟಾರ್ಬಕ್ಸ್ ಮಳಿಗೆಯ ಮೆನು ಪುಟಕ್ಕೆ ಕರೆದೊಯ್ಯಲಾಯಿತು.
ವೈರಲ್ ಪೋಸ್ಟ್ ಗಳಲ್ಲಿ ಒಂದು ಫೋನ್ ಸಂಖ್ಯೆಯನ್ನು ಹೊಂದಿರುವುದನ್ನು ನಾವು ಗಮನಿಸಿದ್ದೇವೆ. ನಾವು ಟ್ರೂಕಾಲರ್‌ನಲ್ಲಿ ಈ ಫೋನ್ ಸಂಖ್ಯೆಯನ್ನು ಹುಡುಕಿದಾಗ, ಅದು ಸ್ಥಳವನ್ನು ರಾಜಸ್ಥಾನ ಎಂದು ಬಹಿರಂಗಪಡಿಸಿತು.
ಈ ಹಗರಣದ ವೆಬ್ಸೈಟ್‌ಗಳನ್ನು ಉತ್ತೇಜಿಸುವ ಇನ್ಸ್ಟಾಗ್ರಾಮ್ ಪುಟಗಳಿಗೆ ಸಂಪೂರ್ಣ ಸಂಪರ್ಕ ಹೊಂದಿವೆ. ಈ ಖಾತೆಗಳಲ್ಲಿ ಕೆಲವು mobilemela offers, paiskaamao7 ಮತ್ತು divya.tech. ಅಂತಹ ವೆಬ್ಸೈಟ್‌ಗಳನ್ನು ಉತ್ತೇಜಿಸಲು ಅವರು ತಮ್ಮೊಳಗೆ ಸಹಕರಿಸುತ್ತಿರುತ್ತಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ಹಗರಣ ವೆಬ್ಸೈಟ್‌ಗಳ ಜಾಲವು ಅಸ್ತಿತ್ವದಲ್ಲಿಲ್ಲದ ಅಗ್ಗದ ಸ್ಮಾರ್ಟ್ಫೋನ್ ಗಳನ್ನು ಜನರಿಗೆ ಮಾರಾಟ ಮಾಡುವ ನೆಪದಲ್ಲಿ ಅವರ ಎಲ್ಲಾ ಮಾಹಿತಿಗಳನ್ನು ಸಂಗ್ರಹಿಸಿಕೊಳ್ಳುತ್ತಿವೆ. ಆದರೆ ಅತ್ಯಂತ ಕಡಿಮೆ ಬೆಲೆಗೆ ಮೊಬೈಲ್ ಪೋನ್ ಸಿಗುತ್ತದೆ ಎಂಬ ಕೊಡುಗೆಗಳು ಅನೇಕ ಬಾರಿ ಹಗರಣವಾಗಿದ್ದು, ಇಂತಹ ನಕಲಿ ವೆಬ್‌ಸೈಟ್‌ಗಳಿಂದ ಅಂತರ ಕಾಯ್ದುಕೊಳ್ಳಿ.
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.