“ಕ್ರಿಶ್ಚಿಯನ್ನರ ಮೇಲಿನ ದಾಳಿಯಲ್ಲಿ ತಪ್ಪಿತಸ್ಥರಿಗೆ ಹತ್ತು ವರ್ಷಗಳ ಜೈಲು ಶಿಕ್ಷೆ ವಿಧಿಸಲು ಸುಪ್ರೀಂ ಕೋರ್ಟ್ ತುರ್ತು ತೀರ್ಪು ನೀಡಿದೆ” ಎಂದು ಪೋಸ್ಟ್‌ವೊಂದು ವೈರಲ್ ಆಗಿದೆ. ಇದೇ ಪೋಸ್ಟ್‌ನಲ್ಲಿ “ದೇಶದಲ್ಲಿರುವ ಕ್ರಿಶ್ಚಿಯನ್ನರಿಗಾಗಿ ಯುನೈಟೆಡ್ ಕ್ರಿಶ್ಚಿಯನ್ ಫೋರಮ್ ಟೋಲ್ ಫ್ರೀ ಸಹಾಯವಾಣಿ ಸಂಖ್ಯೆಯನ್ನು ಇಂದು ಪ್ರಾರಂಭಿಸಲಾಗಿದೆ, ದಯವಿಟ್ಟು ಅದನ್ನು ಸಾಧ್ಯವಾದಷ್ಟು ಕ್ರಿಶ್ಚಿಯನ್ ಜನರು ಮತ್ತು ಪಾದ್ರಿಗಳಿಗೆ ರವಾನಿಸಿ” ಎಂದು ಸಂದೇಶವನ್ನು ಸೇರಿಸಲಾಗಿದೆ . ಹೀಗಾಗಿ ಸಾಕಷ್ಟು ಮಂದಿ ಸುದ್ದಿಯನ್ನು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ.
ಈ ಪೋಸ್ಟ್ ನೋಡಿದ ಹಲವರು ಇದನ್ನು ನಿಜವೆಂದು ನಂಬಿ ತಮ್ಮ ಸಾಮಾಜಿಕ ಜಾಲತಾಣದ ವಿವಿಧ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹೀಗಾಗಿ ಪೋಸ್ಟ್ ಕೂಡ ವೈರಲ್ ಆಗಿದೆ. ಜೊತೆಗೆ ಇನ್ನೂ ಕೆಲವರು ಈ ಬಗ್ಗೆ ಆಕ್ರೋಶವನ್ನು ವ್ಯಕ್ತ ಪಡಿಸಿದ್ದು, ಈ ಇನ್ನುಳಿದ ಮತಗಳ ಬಗ್ಗೆ ಯಾಕೆ ಕಾಳಜಿ ಇಲ್ಲ ಎಂಬ ಪ್ರಶ್ನೆಯನ್ನು ಮಾಡಿದ್ದಾರೆ. ಆದರೆ ಹಲವರು ಈ ರೀತಿಯ ಏಕಪಕ್ಷೀಯ ತೀರ್ಪು ಬರಲು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ. ಇದೊಂದು ಸುಳ್ಳು ಮಾಹಿತಿಯಾಗಿರುವ ಸಾಧ್ಯತೆ ಇದೆ ಎಂದು ಹೇಳುತ್ತಿದ್ದಾರೆ. ಹೀಗೆ ವಿವಿಧ ಆಯಾಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಪೋಸ್ಟ್ ಕುರಿತು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ
ಫ್ಯಾಕ್ಟ್‌ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಪೋಸ್ಟ್ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯಿತು ಇದಕ್ಕಾಗಿ ನಾವು ವಿವಿಧ ಕೀ ವರ್ಡ್‌ಗಳನ್ನು ಬಳಸಿ ಈ ಕುರಿತು ಯಾವುದಾದರೂ ವರದಿಗಳು ಪ್ರಕಟವಾಗಿವೆಯೇ ಎಂದು ಗೂಗಲ್‌ನಲ್ಲಿ ಹುಡುಕಾಟವನ್ನು ನಡೆಸಿದೆವು. ಒಂದು ವೇಳೆ ಸುಪ್ರೀಂಕೋರ್ಟ್ ಈ ತೀರ್ಪು ನೀಡಿದ್ದು ನಿಜವೇ ಆಗಿದ್ದರೆ ಇದು ದೇಶದ ಕಾನೂನಿನ ಇತಿಹಾಸದಲ್ಲಿ ಬಹುದೊಡ್ಡ ಬೆಳವಣಿಗಯಾಗಬೇಕಿತ್ತು, ಹೀಗಾಗಿ ಎಲ್ಲಾ ಮಾಧ್ಯಮಗಳು ಈ ಬಗ್ಗೆ ಸಾಲು ಸಾಲು ವರದಿಗಳನ್ನು ಮಾಡಬೇಕಿತ್ತು. ಆದರೆ ನಾವು ಹುಡುಕಾಟವನ್ನು ನಡೆಸಿದಾಗ ಇದಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯಾದ ವರದಿಗಳು ಕಂಡು ಬಂದಿಲ್ಲ. ಇಲ್ಲಿಗೆ ವೈರಲ್ ಪೋಸ್ಟ್ ಸುಳ್ಳು ಮಾಹಿತಿಯಿಂದ ಕೂಡಿದೆ ಎಂಬುದು ಸ್ಪಷ್ಟವಾಗಿತ್ತು.
ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಪಡೆದುಕೊಳ್ಳಲು ಹುಡುಕಾಟವನ್ನು ನಡೆಸಿದಾಗ 31 ಜನವರಿ 2015 ರಂದು UCF ( ಯುನೈಟೆಡ್ ಕ್ರಿಶ್ಚಿಯನ್ ಫೋರಮ್) ನ X (ಹಿಂದೆ Twitter) ಪೋಸ್ಟ್, “UCF 24-ಗಂಟೆಗಳ ರಾಷ್ಟ್ರೀಯ ಸಹಾಯವಾಣಿಯನ್ನು (ಸಂಖ್ಯೆ 1800-208-4545) ನಿಯೋಜಿಸಿದೆ, ಇದರಿಂದಾಗಿ ವಕೀಲರು ಮತ್ತು ತಜ್ಞರು ಹಿಂಸೆ, ಬೆದರಿಕೆ, ದಬ್ಬಾಳಿಕೆ ಮತ್ತು ಕಾನೂನುಬಾಹಿರ ಸಂತ್ರಸ್ತರಿಗೆ ಸಹಾಯ ಮಾಡಬಹುದು ಎಂಬುದನ್ನು ಉಲ್ಲೇಖಿಸಿರುವ ಪೋಸ್ಟ್ ಇತ್ತೆ ವಿನಹ, ಇಲ್ಲಿ ಸುಪ್ರೀಂಕೋರ್ಟ್ ಕ್ರೈಸ್ತರ ಮೇಲಿನ ದೌರ್ಜನ್ಯಕ್ಕೆ 10 ವರ್ಷಗಳ ಶಿಕ್ಷೆ ನೀಡಬೇಕೆಂದು ತೀರ್ಪು ನೀಡಿರುವುದರ ಬಗ್ಗೆ ಯಾವ ಉಲ್ಲೇಖಗಳು ನಮಗೆ ಕಂಡು ಬಂದಿಲ್ಲ. ಒಂದು ವೇಳೆ ವೈರಲ್ ಪೋಸ್ಟ್‌ನಲ್ಲಿ ಉಲ್ಲೇಖಿಸಿರುವ ಅಂಶ ನಿಜವೇ ಆಗಿದ್ದರೆ, ಆ ಬಗ್ಗೆ ಇಲ್ಲಿ ಖಂಡಿತವಾಗಿ ಉಲ್ಲೇಖ ಇರಲೇ ಬೇಕಿತ್ತು.
Why do India's Christians need a dedicated "persecution" helpline?: http://t.co/vJy7gtLLYq via @YouTube
— UCF (@UCFHR) January 31, 2015
ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಪೋಸ್ಟ್ ಸುಳ್ಳಿನಿಂದ ಕೂಡಿದೆ ಎಂಬುದು ಸ್ಪಷ್ಟವಾಗಿದೆ. ಸುಪ್ರೀಂಕೋರ್ಟ್ ಕ್ರೈಸ್ತರ ಮೇಲೆ ದೌರ್ಜನ್ಯ ನಡೆದರೆ 10 ವರ್ಷಗಳ ವರೆಗೆ ಶಿಕ್ಷೆ ನೀಡಬೇಕೆಂದು ಯಾವುದೇ ತೀರ್ಪು ನೀಡಿಲ್ಲ. ಈ ಬಗ್ಗೆ ಯಾವುದೇ ವರದಿಗಳು ಕಂಡು ಬಂದಿಲ್ಲ. ಈ ಬಗ್ಗೆ UCFಯಲ್ಲಿ ಕೂಡ ಯಾವುದೇ ಮಾಹಿತಿಗಳು ಕಂಡು ಬಂದಿಲ್ಲ. ಹಾಗಾಗಿ ವೈರಲ್ ಪೋಸ್ಟ್ ಸುಳ್ಳಿನಿಂದ ಕೂಡಿದೆ.
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.