ಮುಸ್ಲಿಂ ವ್ಯಕ್ತಿಯೊಬ್ಬ ಹಸುವನ್ನು ಗೇಲಿ ಮಾಡಿದ್ದಕ್ಕಾಗಿ ಉತ್ತರ ಪ್ರದೇಶದ ಪೊಲೀಸರು ಥಳಿಸಿದ್ದಾರೆ. ಕಾರಿನೊಳಗೆ ಕುಳಿತ ವ್ಯಕ್ತಿಯೊಬ್ಬ ರಸ್ತೆಯಲ್ಲಿ ನಿಂತಿದ್ದ ಹಸುವಿಗೆ “ಈದ್ ಹೈ, ಬಾಚ್ ಕೆ” (ಇದು ಈದ್, ಈದ್. ಅಸ್-ಸಲಾಮು ಅಲೈಕುಮ್) ಎಂದು ಗೇಲಿ ಮಾಡಿದ್ದಾನೆ ಎಂಬ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
ಈ ವೈರಲ್ ವಿಡಿಯೋದಲ್ಲಿ ಪೊಲೀಸ್ ಅಧಿಕಾರಿಯ ಮುಂದೆ ವ್ಯಕ್ತಿಯೊಬ್ಬ ಕುಳಿತಿರುವುದನ್ನು ತೋರಿಸಲಾಗಿದೆ. ಪೊಲೀಸರ ಕೈಯಲ್ಲಿ ಸಿಕ್ಕಿಬಿದ್ದ ವ್ಯಕ್ತಿಯು ನಡೆಯಲು ತೊಂದರೆಯನ್ನು ಅನುಭವಿಸುತ್ತಾ…..“ಹಸು ನಮ್ಮ ತಾಯಿ” ಎಂದು ನೋವಿನಿಂದ ಪದೇ ಪದೇ ಹೇಳಿದ್ದಾನೆ.
ಬಾಬಾ ಬನಾರಸ್ ಟಿಎಮ್ ಎಂಬ ಫೇಸ್‌ಬುಕ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳುವಾಗ, “ಅಬ್ದುಲ್ ಭಾಯ್ ಅವರು ಉತ್ತರ ಪ್ರದೇಶದಲ್ಲಿದ್ದಾರೆ ಎಂಬುದನ್ನು ಮರೆತಿದ್ದಾರೆ” ಎಂದು ಬರೆದಿರುವುದು ಕಂಡುಬಂದಿದೆ. ಅಂತಹ ಪೋಸ್ಟ್‌ಗೆ ಕೆಲವರು ಪೊಲೀಸರ ಕ್ರಮವನ್ನು ಖಂಡಿಸಿ, ಇದು ಕೇವಲ ತಮಾಷೆಯಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ.

ಫ್ಯಾಕ್ಟ್ ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿರುವ ವಿಡಿಯೋದ ಕುರಿತು ಹುಡುಕಾಟ ನಡೆಸಿದಾಗ, Instagramನ ವೈರಲ್ ವಿಡಿಯೋದಲ್ಲಿ ಕಂಡುಬರುವ ಯುವಕ ಮುಸ್ಲಿಂ ಅಲ್ಲ ಆದರೆ ಹಿಂದೂ ಎಂದು ಜನರು ಕಾಮೆಂಟ್ ಮಾಡಿರುವುದು ಕಂಡುಬಂದಿದೆ. ನಂತರ ಈ ವಿಡಿಯೋವನ್ನು ಡಿಲೀಟ್ ಮಾಡಿ ಹಸುವನ್ನು ಗೇಲಿ ಮಾಡಿದ್ದಕ್ಕೆ ಕ್ಷಮೆಯಾಚಿಸಿದ್ದೇನೆ ಎಂದು ಹೇಳಿದ್ದಾರೆ. ಇತರರು ಅವನ ಹೆಸರು ನಕುಲ್ ಎಂದು ಬರೆದುಕೊಂಡಿದ್ದಾರೆ.
ಈ ವೈರಲ್ ವಿಡಿಯೋದ ಕುರಿತು ಮತ್ತಷ್ಟು ಹುಡುಕಾಟ ನಡೆಸಿದಾಗ, 2024ರ ಸೆಪ್ಟೆಂಬರ್ 19ರ Instagramನ ವಿಡಿಯೋವೊಂದು ದೊರೆತಿದೆ. ವಿಡಿಯೋದಲ್ಲಿ ಸ್ಕ್ರೀನ್‌ಶಾಟ್ ಪೋಟೊ ದೊರೆತಿದ್ದು, ಅದು ಮೂಲತಃ ವ್ಯಕ್ತಿಯೊಬ್ಬ ಹಸುವನ್ನು ಅಪಹಾಸ್ಯ ಮಾಡಲಾದ ಧೃಶ್ಯವಾಗಿದೆ. Instagramನ ಬಳಕೆದಾರ ಹೆಸರು ನಕುಲ್ “@n___nakul_” ಎಂದು ಖಚಿತವಾಗಿ ತಿಳಿದುಬಂದಿದೆ. ಆದರೆ ಈಗ ಆ ಖಾತೆಯನ್ನು ಅಳಿಸಲಾಗಿದೆ. ಹಸುವನ್ನು ಗೇಲಿ ಮಾಡಿದ್ದಕ್ಕಾಗಿ ಆ ವ್ಯಕ್ತಿಯ ಬಂಧನದ ಬಗ್ಗೆ ಯಾವುದೇ ವಿಶ್ವಾಸಾರ್ಹ ಸುದ್ದಿ ವರದಿಗಳು ಕಂಡುಬಂದಿಲ್ಲ.

ವ್ಯಕ್ತಿ ಮತ್ತು ಪೋಲೀಸ್ ಇಬ್ಬರು ಜೊತೆಗಿರುವ ಚಿತ್ರವನ್ನು ರಿವರ್ಸ್ ಇಮೇಜ್‌ನಲ್ಲಿ ಹುಡುಕಾಟ ನಡೆಸಿದಾಗ, 2023ರ ಜುಲೈ1ರಂದು ಈ ಘಟನೆಯ ಕುರಿತು ಹಲವಾರು ಸುದ್ದಿ ವರದಿಗಳು ಕಂಡುಬಂದಿವೆ. ಗುರುಗ್ರಾಮ್-ಫರಿದಾಬಾದ್ ರಸ್ತೆಯಲ್ಲಿರುವ ಹನುಮಾನ್ ದೇವಸ್ಥಾನದ ಬಳಿ ಮಾಂಸದ ತುಂಡುಗಳನ್ನು ಎಸೆದಿದ್ದಕ್ಕಾಗಿ ಪೊಲೀಸರು ಒಂಬತ್ತು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಈ ವರದಿಗಳಲ್ಲಿ ಉಲ್ಲೇಖವಾಗಿದೆ.
ಈ ಪ್ರಕರಣದಲ್ಲಿ ಪೊಲೀಸರು ಬಂಧಿಸಿರುವ ಚಿಂದಿ ಆಯುವವರ ಛಾಯಾಚಿತ್ರಗಳೂ ವರದಿಯಲ್ಲಿ ಕಂಡುಬಂದಿವೆ. ವೈರಲ್ ವಿಡಿಯೋದಲ್ಲಿ ಕಂಡುಬಂದಿರುವ ವ್ಯಕ್ತಿ ಮತ್ತು ಪೊಲೀಸ್‌ರ ಚಿತ್ರವನ್ನು ಕ್ರಾಫ್ ಮಾಡಲಾಗಿದೆ.

ವ್ಯಕ್ತಿಯೊಬ್ಬ “ಹಸು ನಮ್ಮ ತಾಯಿ” ಎಂದು ಹೇಳಿರುವ ವಿಡಿಯೋದ ಕೀಫ್ರೇಮ್‌ಗಳನ್ನು ರಿವರ್ಸ್ ಇಮೇಜ್ ಬಳಸಿಕೊಂಡು ಹುಡುಕಾಟ ನಡೆಸಿದಾಗ, 2022ರ ಅಕ್ಟೋಬರ್ 28ರಂದು ಪ್ರಕಟವಾದ ಆಜ್ ತಕ್ ಮತ್ತು ನ್ಯೂಸ್ 18 ವರದಿಗಳು ಕಂಡುಬಂದಿವೆ. ಇರ್ಷಾದ್ ಅಲಿಯಾಸ್ ಸೋನು ಎಂಬಾತನನ್ನು ಹಸು ಕಳ್ಳಸಾಗಣೆ ಆರೋಪದ ಮೇಲೆ ಗಾಜಿಯಾಬಾದ್ ಪೊಲೀಸರು ಬಂಧಿಸಿದ್ದಾರೆ. ಈ ಬಂಧನದ ವೇಳೆ ವ್ಯಕ್ತಿಯು ತಪ್ಪಿಸಿಕೊಳ್ಳಲು ಯತ್ನಿಸಿದಾಗ ಪೊಲೀಸರು ಆತನ ಮೇಲೆ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ. ಗುಂಡು ಹಾರಿಸಿದ ನಂತರ ವ್ಯಕ್ತಿಯು “ಹಸು ನಮ್ಮ ತಾಯಿ” ಎಂದು ಪದೇ ಪದೇ ಹೇಳುವುದನ್ನು ಸೆರೆಹಿಡಿಯಲಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, 2022ರಲ್ಲಿ ಹಸು ಕಳ್ಳಸಾಗಣೆಯಲ್ಲಿ ವ್ಯಕ್ತಿಯೊಬ್ಬನನ್ನು ಪೋಲಿಸರು ಬಂಧಿಸಿದ್ದರು. ಆ ವೇಳೆ ವ್ಯಕ್ತಿಯು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದರಿಂದಾಗಿ ಪೋಲಿಸರು ಗುಂಡು ಹಾರಿಸಿದ್ದರು. ಆಗ ವ್ಯಕ್ತಿಯು “ಹಸು ನಮ್ಮ ತಾಯಿ” ಎಂದು ಪದೇ ಪದೇ ಹೇಳಿರುವ ವಿಡಿಯೋವನ್ನು, ಹಸುವನ್ನು ಗೇಲಿ ಮಾಡಿದ್ದಕ್ಕಾಗಿ ಪೋಲಿಸರು ಮುಸ್ಲಿಂ ವ್ಯಕ್ತಿಯನ್ನು ಬಂಧಿಸಿದ್ದಾರೆ ಎಂದು ತಪ್ಪಾಗಿ ಲಿಂಕ್ ಮಾಡಿ ಅದಕ್ಕೆ ಕೋಮು ಬಣ್ಣವನ್ನು ಬಡಿದು ಹಂಚಿಕೊಳ್ಳಲಾಗುತ್ತಿದೆ.
ಇದನ್ನು ಓದಿ :
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.
