Fact Check | ಉತ್ತರಪ್ರದೇಶದಲ್ಲಿ ಮಹಿಳಾ ಕಾನ್ಸ್‌ಟೇಬಲ್‌ ಮೇಲಿನ ಹಲ್ಲೆ ವಿಡಿಯೋವನ್ನು ಕೋಮು ನಿರೂಪಣೆಯೊಂದಿಗೆ ಹಂಚಿಕೆ

ಮಹಿಳೆಯೊಬ್ಬರಿಗೆ ಥಳಿಸಿರುವ ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದು ಸಿಸಿಟಿವಿ ಕ್ಯಾಮೆರಾದ ರೆಕಾರ್ಡಿಂಗ್‌ನಂತೆ ಕಂಡುಬಂದಿದ್ದು, ಇದರಲ್ಲಿ ಬೈಕಿನಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯನ್ನು ತಡೆದು ಜಗಳವಾಡುತ್ತಾನೆ. ನಂತರ ಅವಳನ್ನು ಥಳಿಸಲು ಪ್ರಾರಂಭಿಸಿದ್ದಾನೆ. ಸುಮಾರು ಎರಡೂವರೆ ನಿಮಿಷದ ಈ ವಿಡಿಯೋದಲ್ಲಿ ಅನೇಕರು ಮಾತನಾಡುತ್ತಿರುವುದು ಕಾಣಬಹುದಾಗಿದೆ. ಈ ವಿಡಿಯೋವನ್ನು ಹಂಚಿಕೊಂಡ ಹಲವರು ಹಲ್ಲೆ ಮಾಡಿರುವ ವ್ಯಕ್ತಿ ಮುಸ್ಲಿಂ ಮತ್ತು ಹಲ್ಲೆಗೊಳಗಾಗಿರುವ ಮಹಿಳೆ ಹಿಂದೂ ಎಂದು ಕೋಮು ನಿರೂಪಣೆಯೊಂದಿಗೆ ಶೇರ್ ಮಾಡುತ್ತಿದ್ದಾರೆ.

ವೈರಲ್ ವಿಡಿಯೋವನ್ನು ನೋಡಿದ ಹಲವು ಮಂದಿ ಮುಸ್ಲಿಂ ಸಮುದಾಯದ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದು, ಹಲ್ಲೆ ನಡೆಸಿದಾತ ಇರ್ಫಾನ್ ಎಂದು ಮತ್ತು ಯುವತಿಗೆ ವಿವಿಧ ರೀತಿಯ ಹಿಂದೂ ಹೆಸರುಗಳನ್ನು ನೀಡಿ ಹಂಚಿಕೊಳ್ಳುತ್ತಿದ್ದಾರೆ. ಹಲವರು ಮುಸ್ಲಿಂ ಯುವಕರು ಈಗ ಹಿಂದೂ ಯುವತಿಯರ ಮೇಲೆ ದಾಳಿ ಮಾಡಲು ಪ್ರಾರಂಭಿಸಿದ್ದಾರೆ. ಮುಂದೆ ನಿಮಗೂ ಇದೆ ಸಮಸ್ಯೆ ಬರಬಹುದು ಎಂದು ಕೋಮು ದ್ವೇಷದೊಂದಿಗೆ ಬರಹಗಳನ್ನು ಬರೆದು ವಿಡಿಯೋವನ್ನು ಶೇರ್ ಮಾಡುತ್ತಿದ್ದಾರೆ. ಹೀಗೆ ವೈರಲ್ ಆಗಿರುವ ವಿಡಿಯೋವಿನ ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ.

ಫ್ಯಾಕ್ಟ್‌ಚೆಕ್

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಪೋಸ್ಟ್ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ವಿಡಿಯೋವಿನ ವಿವಿಧ ಕೀ ಫ್ರೇಮ್‌ಗಳನ್ನು ಗೂಗಲ್ ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲನೆ ನಡೆಸಿದವು. ಈ ವೇಳೆ 2 ಡಿಸೆಂಬರ್ 2024 ರಂದು ಇದೇ ಸ್ಕ್ರೀನ್‌ಗ್ರ್ಯಾಬ್‌ ಹೊಂದಿರುವ ವರದಿಯೊಂದನ್ನು ಆಜ್‌ತಕ್‌ ಸುದ್ದಿತಾಣ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವುದು ಕಂಡುಬಂದಿದೆ.

ಈ ವರದಿಯ ಪ್ರಕಾರ ಈ ಘಟನೆ 30 ನವಂಬರ್ 2024 ರಂದು ನಡೆದಿದ್ದು ಸಿವಿಲ್ ಲೈನ್ಸ್‌ನ ಚಕ್ಕರ್‌ ಕೀ ಮಿಲಕ್ ಪ್ರದೇಶದ ಬಳಿ ನಡೆದಿದೆ ಎಂದು ಉಲ್ಲೇಖಿಸಲಾಗಿದೆ. ಹಲ್ಲೆಗೊಳಗಾದ ಮಹಿಳೆಯು ಕಾನ್‌ಸ್ಟೇಬಲ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ಅವರ ಹೆಸರು ಅಮ್ರೀನ್‌, ಇವರು ಕೂಡ ಮುಸ್ಲಿಂ ಸಮುದಾಯಕ್ಕೆ ಸೇರಿದ್ದವರಾಗಿದ್ದಾರೆ ಎಂಬುದು ತಿಳಿದು ಬಂದಿದೆ. ಇನ್ನು ಅಮ್ರೀನ್‌ ಅವರು ಸಿವಿಲ್ ಡ್ರೇಸ್‌ನಲ್ಲಿ ತನ್ನ ಮನೆಗೆ ಹೋಗುತ್ತಿದ್ದರು, ಅಷ್ಟ್ರಲ್ಲಿ ಬೈಕಿನಲ್ಲಿ ಬಂದ ವ್ಯಕ್ತಿಯೊಬ್ಬ, ಇವರ ಜೊತೆ ಮಾತಿನ ಚಕಮಕಿ ನಡೆಸಿದ್ದು, ಬಳಿಕ ಮಹಿಳೆ ಜೊತೆಗೆ ಅನುಚಿತವಾಗಿ ವರ್ತಿಸಿ, ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಮಹಿಳೆಯ ತಲೆ ಮತ್ತು ಮೊಣಕಾಲಿಗೆ ಗಂಭೀರ ಗಾಯಗಳಾಗಿವೆ ಎಂದು ಉಲ್ಲೇಖಿಸಲಾಗಿದೆ. ಇದೇ ಮಾಹಿತಿಯನ್ನು ಫ್ರೀ ಪ್ರೆಸ್ ಜರ್ನಲ್ ಇಂಗ್ಲೀಷ್ ನ್ಯೂಸ್ ಪೋರ್ಟಲ್ ಕೂಡ ವರದಿ ಮಾಡಿದೆ.

ಈ ಕುರಿತು ಇನ್‌ ಖಬರ್‌ ಕೂಡ ವರದಿಯನ್ನು ಮಾಡಿದ್ದು, ಪೊಲೀಸರು ಈ ಘಟನೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದ್ದು, ಸಂತ್ರಸ್ತ ಕಾನ್‌ಸ್ಟೇಬಲ್‌ ಅಮ್ರೀನ್‌ ಅವರ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡು, ಕಾನೂನು ಕ್ರಮವನ್ನು ಕೈಗೊಳ್ಳುತ್ತಿದ್ದಾರೆ. ಸಿವಿಲ್ ಲೈನ್ಸ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸ್ ಅಧಿಕಾರಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ.  ಇದರಲ್ಲಿ ಹಲ್ಲೆ ನಡೆಸಿದ ವ್ಯಕ್ತಿ ಮತ್ತು ಹಲ್ಲೆಗೊಳಗಾದ ಮಹಿಳೆ ಇಬ್ಬರೂ ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದಾರೆ ಎಂಬ ಮಾಹಿತಿಯು ಲಭ್ಯವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಮುಸ್ಲಿಂ ವ್ಯಕ್ತಿಯೊಬ್ಬ ಹಿಂದೂ ಯುವತಿಯ ಮೇಲೆ ಹಲ್ಲೆ ನಡೆಸಿದ್ದಾನೆ ಎಂಬ ವಿಡಿಯೋ ಸುಳ್ಳು ನಿರೂಪಣೆಯಿಂದ ಕೂಡಿದೆ. ವೈರಲ್ ವಿಡಿಯೋದಲ್ಲಿ ಹಲ್ಲೆ ಮಾಡಿದ ಆರೋಪಿ ಮತ್ತು ಹಲ್ಲೆಗೊಳಗಾದ ಸಂತ್ರಸ್ತ ಇಬ್ಬರೂ ಕೂಡ ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದು, ಈ ಕುರಿತು ದೂರು ಕೂಡ ದಾಖಲಾಗಿದೆ. ಹೀಗಾಗಿ ವೈರಲ್ ವಿಡಿಯೋವನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ, ಸುಳ್ಳು ಸುದ್ದಿ ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.


ಇದನ್ನೂ ಓದಿ : FACT CHECK : ಜಪಾನ್‌ನಿನ ಇಶಿಮಾ-ಒಹಾಶಿ ಸೇತುವೆಯನ್ನು ಉತ್ತರಪ್ರದೇಶದ್ದು ಎಂದು ಹಂಚಿಕೊಳ್ಳಲಾಗುತ್ತಿದೆ


ನಿಮಗೆ ಯಾವುದೇ ಸುದ್ದಿಫೋಟೋವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *