ದಿವಂಗತ ರತನ್ ಟಾಟಾ ಅವರ ಮಹತ್ವಾಕಾಂಕ್ಷೆಯ ಯೋಜನೆಯಾದ ಟಾಟಾ ನ್ಯಾನೋ ಕಾರನ್ನು ನೋಯೆಲ್ ಟಾಟಾ ನೇತೃತ್ವದಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂಬ ಪೋಸ್ಟರ್‌ವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
ಹೊಸ ಮಾದರಿಯ ನ್ಯಾನೋ ಕಾರು ಆಧುನಿಕ ವಿನ್ಯಾಸವನ್ನು ಒಳಗೊಂಡಿದ್ದು, 624 ಸಿಸಿ ಪೆಟ್ರೋಲ್ ಎಂಜಿನ್ ಮತ್ತು 30 ಕಿ.ಮೀ ಆಕರ್ಷಕ ಮೈಲೇಜ್ ಹೊಂದಿದೆ ಎಂದು ಹೇಳಲಾಗುತ್ತಿದೆ.
ಫ್ಯಾಕ್ಟ್ ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿರವ ಪೋಸ್ಟ್‌ರ್ ಕುರಿತು ನಿಜಸ್ವರೂಪವನ್ನು ತಿಳಿದುಕೊಳ್ಳಲು ಕನ್ನಡ ಫ್ಯಾಕ್ಟ್ ಚೆಕ್ ತಂಡ ಮುಂದಾಯ್ತು. ಇದಕ್ಕಾಗಿ ಕೆಲವು ಕೀವರ್ಡ್‌ಗಳನ್ನು ಬಳಸಿಕೊಂಡು ಹುಡುಕಿದಾಗ, ಅಂತಹ ಯಾವುದೇ ವಿಶ್ವಾಸಾರ್ಹ ಪ್ರಕಟಣೆಗಳು ಲಭ್ಯವಾಗಿಲ್ಲ. ಒಂದು ವೇಳೆ ಟಾಟಾ ಮೋಟಾರ್ಸ್ ಇಂತಹ ಹೇಳಿಕೆ ನೀಡಿದ್ದರೆ ಅದು ಖಂಡಿತವಾಗಿಯೂ ಪತ್ರಿಕೆಗಳಲ್ಲಿ ವರದಿಯಾಗುತ್ತಿತ್ತು.
ವೈರಲ್ ಪೋಸ್ಟ್‌ನ ಸ್ಕ್ರೀನ್‌ಶಾಟ್ ಫೋಟೋವನ್ನು ರಿವರ್ಸ್ ಇಮೇಜ್ ಬಳಸಿಕೊಂಡು ಹುಡುಕಿದಾಗ, 2023ರ ಆಗಸ್ಟ್ 15ರಂದು HUGH BOGGANMOTORS ಎಂಬ ಯೂಟ್ಯೂಬ್ ಚಾನೆಲ್ ಟೊಯೊಟಾ ಅಯ್ಗೊ ಎಕ್ಸ್ ಪಲ್ಸ್ ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಲಾದ ವಿಡಿಯೋ ಲಭ್ಯವಾಗಿದೆ. ವೈರಲ್ ಚಿತ್ರದಲ್ಲಿ ಕಂಡುಬರುವ ಕಾರನ್ನು ಹೋಲುವ ಚಿತ್ರವೊಂದನ್ನು ಈ ವಿಡಿಯೋದಲ್ಲಿ ತೋರಿಸಲಾಗಿದೆ.
ಈ ವೈರಲ್ ಪೋಸ್ಟ್ ಕುರಿತು ಮತ್ತಷ್ಟು ಹುಡುಕಾಟ ನಡೆಸಿದಾಗ, ವೈರಲ್ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ಕಾರನ್ನೇ ಹೋಲುವ ಮತ್ತೊಂದು ಕಾರನ್ನು ಟೊಯೊಟಾದ ಅಧಿಕೃತ ವೆಬ್‌ಸೈಟ್‌ನಲ್ಲಿ ಹಂಚಿಕೊಳ್ಳಲಾಗಿದೆ ಎಂದು ಸ್ಪಷ್ಟವಾಗಿ ತಿಳಿದುಬಂದಿದೆ.
ವೈರಲ್ ಪೋಸ್ಟ್ ಮತ್ತು ಟೊಯೊಟಾದ ಅಧಿಕೃತ ವೆಬ್‌ಸೈಟ್‌ನಲ್ಲಿ ಹಂಚಿಕೊಳ್ಳಲಾದ ಕಾರಿನ ಚಿತ್ರಗಳನ್ನು ಹೋಲಿಕೆ ಮಾಡಿ ನೋಡಿದಾಗ, ಲೋಗೋದಲ್ಲಿ ವ್ಯತ್ಯಾಸಗಳು ಕಂಡುಬಂದಿವೆ. ಟೊಯೊಟಾ ಅಯ್ಗೊ ಎಕ್ಸ್ ಕಾರಿನ ಚಿತ್ರದಲ್ಲಿರುವ ಲೋಗೊ ಮತ್ತು ನಾಮಫಲಕವನ್ನು ಬದಲಾಯಿಸಿ, ಟಾಟಾ ಲೋಗೊ ಮತ್ತು ನ್ಯಾನೊ ಕಾರಿನ ನಾಮಫಲಕವನ್ನು ಸೇರಿಸಿ ಎಡಿಟ್ ಮಾಡಲಾಗಿದೆ.
ಈ ಕೆಳಗಿನ ಹೋಲಿಕೆಯು ಟಾಟಾ ಮೋಟಾರ್ಸ್ ಮತ್ತು ಟೊಯೋಟಾ ಮೋಟಾರ್ಸ್‌ನ ಕಾರುಗಳಲ್ಲಿನ ಲೋಗೋಗಳ ನಡುವಿನ ವ್ಯತ್ಯಾಸವನ್ನು ತೋರಿಸುತ್ತದೆ.
ಒಟ್ಟಾರೆಯಾಗಿ ಹೇಳುವುದಾದರೆ, ಟಾಟಾ ಮೋಟಾರ್ಸ್ ವಿನೂತನ ನ್ಯಾನೋ ಕಾರಿನ ಬಿಡುಗಡೆಯನ್ನು ಘೋಷಿಸಿದೆ ಎಂಬುದು ಸುಳ್ಳು. ವೈರಲ್ ಚಿತ್ರದಲ್ಲಿ ಟೊಯೋಟಾ ಮೋಟಾರ್ಸ್‌ನ ಕಾರುಗಳನ್ನು ಎಡಿಟ್ ಮಾಡಿ ಹಂಚಿಕೊಳ್ಳಲಾಗುತ್ತಿದೆ.
ಇದನ್ನು ಓದಿ :
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.