ಸಾಮಾಜಿಕ ಜಾಲತಾಣದಲ್ಲಿ ಸೇತುವೆಯ ಚಿತ್ರವನ್ನು ಹಂಚಿಕೊಳ್ಳಲಾಗುತ್ತಿದ್ದು, “ಇದು ಉತ್ತರಪ್ರದೇಶದ ಸಹರಾನ್‌ಪುರದಲ್ಲಿ ನಿರ್ಮಿಸಲಾದ ಕಾಂಬೋಹ್ ಸೇತುವೆಯ ಚಿತ್ರ” ಎಂದು ಹಂಚಿಕೊಳ್ಳಲಾಗುತ್ತಿದೆ.
ವೈರಲ್ ಪೋಸ್ಟ್ ಅನ್ನು ಹಂಚಿಕೊಳ್ಳುವಾಗ, ಫೇಸ್‌ಬುಕ್ ಬಳಕೆದಾರರು “ಉತ್ತರ ಪ್ರದೇಶದ ಸಹರಾನ್‌ಪುರ ಜಿಲ್ಲೆಯ ಕಾಂಬೋಹ್ ಸೇತುವೆಯ ವಿಶಿಷ್ಟ ಚಿತ್ರ” ಎಂಬ ಶೀರ್ಷಿಕೆಯನ್ನು ನೀಡಿ ಹಂಚಿಕೊಂಡಿದ್ದಾರೆ.
ಫ್ಯಾಕ್ಟ್‌ಚೆಕ್
ವೈರಲ್ ಚಿತ್ರದ ಸತ್ಯಾಸತ್ಯತೆ ತಿಳಿಯಲು, ಕನ್ನಡ ಫ್ಯಾಕ್ಟ್‌ಚೆಕ್ ತಂಡವು ಗೂಗಲ್ ರಿವರ್ಸ್ ಇಮೇಜ್ ಮೂಲಕ ಫೋಟೋವನ್ನು ಹುಡುಕಾಟ ನಡೆಸಿದಾಗ, Pinterest ವೆಬ್‌ಸೈಟ್‌ನಲ್ಲಿ ವೈರಲ್ ಚಿತ್ರವು ಲಭ್ಯವಾಗಿದೆ. ಇದರಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ವೈರಲ್ ಚಿತ್ರವು ಜಪಾನ್‌ನ ಇಶಿಮಾ-ಒಹಾಶಿ ಸೇತುವೆ ಎಂದು ಸಾಬೀತಾಗಿದೆ. ಯೂಟ್ಯೂಬ್‌ನಲ್ಲಿ ಇಶಿಮಾ-ಒಹಾಶಿ ಸೇತುವೆಯ ಬಗ್ಗೆ ಹಲವಾರು ವಿಡಿಯೋಗಳು ಲಭ್ಯವಿದೆ.
ಸಂಬಂಧಿತ ಕೀವರ್ಡ್‌ಗಳನ್ನು ಬಳಸಿ ಗೂಗಲ್‌ನಲ್ಲಿ ಹುಡುಕಾಟ ನಡೆಸಿದಾಗ ಜಪಾನಿನ Ankou-Shimane ವೆಬ್‌ಸೈಟ್‌ನಲ್ಲಿ ಇದಕ್ಕೆ ಸಂಬಂಧಿಸಿದ ವರದಿಯನ್ನು ನಾವು ಕಂಡುಕೊಂಡಿದ್ದೇವೆ . ವರದಿಯ ಪ್ರಕಾರ, ಈ ಸೇತುವೆಯನ್ನು ಕಡಿದಾದ ಇಳಿಜಾರಿನಂತೆ ನಿರ್ಮಿಸಲಾಗಿದೆ. ಇಶಿಮಾ-ಒಹಾಶಿ ಸೇತುವೆಯನ್ನು ನಕೌಮಿ ಸರೋವರದ ಮೇಲೆ ನಿರ್ಮಿಸಲಾಗಿದ್ದು, ಸೇತುವೆಯು ಶಿಮಾನೆ ಪ್ರಿಫೆಕ್ಚರ್‌ನಲ್ಲಿರುವ ಮಾಟ್ಸು ಮತ್ತು ತೊಟೋರಿ ಪ್ರಿಫೆಕ್ಚರ್‌ನಲ್ಲಿರುವ ಸಕಮಿನಾಟೊವನ್ನು ಸಂಪರ್ಕಿಸುತ್ತದೆ.
ಗೂಗಲ್ ಮ್ಯಾಪ್‌ನಲ್ಲಿ ಹುಡುಕಾಟ ನಡೆಸಿದಾಗ, ಇಶಿಮಾ-ಒಹಾಶಿ ಸೇತುವೆಯ ಹಲವು ಚಿತ್ರಗಳು ಲಭಿಸಿವೆ. ಈ ಸೇತುವೆಯ ವೈಶಿಷ್ಟ್ಯತೆಗಳ ಕುರಿತ ಹೆಚ್ಚಿನ ಮಾಹಿತಿಯು ವಿಕಿಪಿಡಿಯಾದಲ್ಲಿ ಲಭ್ಯವಿದೆ.
ದೈನಿಕ್ ಜಾಗರಣ್ ಪತ್ರಿಕೆಯ ಸಹರಾನ್‌ಪುರದ ಜಿಲ್ಲಾ ವರದಿಗಾರ ಕಪಿಲ್ ಕುಮಾರ್‌ರವರು ಈ ವೈರಲ್ ಫೋಟೋದ ಬಗ್ಗೆ ಮಾಡಲಾದ ವಾದವನ್ನು ನಿರಾಕರಿಸಿದ್ದು, ಈ ಮಾಹಿತಿ ಸುಳ್ಳಿನಿಂದ ಕೂಡಿದೆ. ಯಸಹರಾನ್‌ಪುರದಲ್ಲಿ ಇಂತಹ ಯಾವುದೇ ಸೇತುವೆಗಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೇ, ಉತ್ತರಪ್ರದೇಶದ ಸಹರಾನ್‌ಪುರದಲ್ಲಿ ನಿರ್ಮಿಸಲಾದ ಕಾಂಬೋಹ್ ಸೇತುವೆ ಚಿತ್ರ ಎಂದು ಜಪಾನ್‌ನಿನ ಇಶಿಮಾ-ಒಹಾಶಿ ಸೇತುವೆಯ ಫೋಟೋ ಹಂಚಿಕೊಳ್ಳಲಾಗುತ್ತಿದೆ.
ಇದನ್ನು ಓದಿದ್ದೀರಾ? : Fact Check | ಹತ್ರಾಸ್ ಕಾಲ್ತುಳಿತದ ಹಳೆಯ ವಿಡಿಯೋವನ್ನು ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿ ಎಂದು ಹಂಚಿಕೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.