“ಇಂಗ್ಲೆಂಡನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿ ಘೋಷಿಸಬೇಕೆಂದು ಒತ್ತಾಯಿಸಿ ಮುಸಲ್ಮಾನರು ಬ್ರಿಟಿಷ್ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವುದು” ಎಂಬ ಹೇಳಿಕೆಯೊಂದಿಗೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಗಿದೆ.
“ದೇಶವು ಇಸ್ಲಾಮಿಕ್ ರಾಷ್ಟ್ರವಾದಾಗ ಮಾತ್ರ ಭಾರತದ ಜನರು ಮೋದಿಯನ್ನು ಬೆಂಬಲಿಸುತ್ತಾರೆ!, ಇವತ್ತಿನ ಈ ಘಟನೆ ನೋಡಿ…ಇಂಗ್ಲೆಂಡನ್ನು ಇಸ್ಲಾಮಿಕ್ ರಾಷ್ಟ್ರ ಎಂದು ಘೋಷಿಸುವಂತೆ ಆಗ್ರಹಿಸುತ್ತಿದ್ದಾರೆ. ಈ ಪೋಸ್ಟ್ ಅನ್ನು ಶೇರ್ ಮಾಡಿ ಮತ್ತು ನಿಮ್ಮ ಪರಿಚಯಸ್ಥರು ಮತ್ತು ನೆರೆಹೊರೆಯವರಿಗೆ ಅಪಾಯದ ಬಗ್ಗೆ ಅರಿವು ಮೂಡಿಸಿ. ನಿಮಗೆ ಇನ್ನೂ ಅರ್ಥವಾಗದಿದ್ದರೆ, ದೇವರು ಕೂಡ ನಿಮ್ಮನ್ನು ಉಳಿಸಲು ಸಾಧ್ಯವಿಲ್ಲ. ‘ಹಿಂದೂಗಳೇ ಎದ್ದೇಳಿ, ಎದ್ದೇಳಿ, ನಿಮ್ಮ ಅಸ್ತಿತ್ವವನ್ನು ಗುರುತಿಸಿಕೊಳ್ಳಿ, ಇಂಗ್ಲೆಂಡನ್ನು ನೋಡಿಯಾದರೂ ನೀವು ಅರ್ಥಮಾಡಿಕೊಳ್ಳಿ. ಅಲ್ಲಿ ಇಸ್ಲಾಮಿಕ್ ದೇಶ ನಿರ್ಮಾಣವಾಗುತ್ತಿದೆ. ಹಿಂದೂಗಳು, ಮೋದಿ, ಯೋಗಿ, ಬಿಜೆಪಿ, ಆರ್‌ಎಸ್‌ಎಸ್‌ನ್ನು ಬಲಪಡಿಸಿ, ನಿಮ್ಮ ಮಗಳು ಮತ್ತು ಸೊಸೆಯನ್ನು ರಕ್ಷಿಸಿ.” ಎಂದು ವೈರಲ್ ವಿಡಿಯೋದ ಜೊತೆಗೆ ಈ ಸಂದೇಶವನ್ನು ಹರಿಬಿಡಲಾಗುತ್ತಿದೆ.
ಫ್ಯಾಕ್ಟ್‌ಚೆಕ್
ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋದ ದೃಶ್ಯಗಳು 2012ರಲ್ಲಿ ವೆಸ್ಟ್‌ಮಿನಿಸ್ಟರ್‌ನಲ್ಲಿರುವ ಲಂಡನ್ ಸಂಸತ್ತಿನ ಹೊರಗೆ ‘ಇನೋಸೆನ್ಸ್ ಆಫ್ ಮುಸ್ಲಿಮ್ಸ್’ ಎಂಬ ಚಲನಚಿತ್ರದ ವಿರುದ್ಧ ಲಂಡನ್ ಮುಸಲ್ಮಾನರು ನಡೆಸಿದ ಪ್ರತಿಭಟನೆಯ ದೃಶ್ಯಗಳಾಗಿವೆ ಎಂಬುದನ್ನು ಕನ್ನಡ ಫ್ಯಾಕ್ಟ್‌ಚೆಕ್ ತಂಡವು ಪತ್ತೆ ಹಚ್ಚಿದೆ.
“ಇಂಗ್ಲೆಂಡ್ ಅನ್ನು ಇಸ್ಲಾಮಿಕ್ ರಾಜ್ಯವೆಂದು ಘೋಷಿಸಬೇಕೆಂದು ಒತ್ತಾಯಿಸಿ UKಯಲ್ಲಿ ಮುಸ್ಲಿಮರು ಇತ್ತೀಚೆಗೆ ಇಂತಹ ಯಾವುದಾದರೂ ಪ್ರತಿಭಟನೆಯನ್ನು ನಡೆಸಿದ್ದಾರೆಯೇ?” ಎಂಬುದನ್ನು ಪರಿಶೀಲಿಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್ ತಂಡವು ಇದಕ್ಕೆ ಸಂಬಂಧಿಸಿದ ಕೀವರ್ಡ್‌ಗಳನ್ನು ಬಳಸಿಕೊಂಡು ಇಂಟರ್ನೆಟ್‌ನಲ್ಲಿ ಹುಡುಕಾಟ ನಡೆಸಿದಾಗ, ಈ ವಾದವನ್ನು ಪುಷ್ಠೀಕರಿಸುವ ಯಾವುದೇ ವಿಶ್ವಾಸಾರ್ಹ ಸುದ್ದಿ ವರದಿಗಳು ನಮಗೆ ಲಭಿಸಿಲ್ಲ. ಒಂದುವೇಳೆ, ಲಂಡನ್‌ನಲ್ಲಿ ಇಂತಹ ಪ್ರತಿಭಟನೆಗಳು ನಡೆದಿದ್ದರೆ, ಇದರ ಬಗ್ಗೆ ಹಲವು ಮುಖ್ಯವಾಹಿನಿಯ ಮಾಧ್ಯಮಗಳು ವರದಿ ಮಾಡುತ್ತಿದ್ದವು.
ವೈರಲ್ ವಿಡಿಯೋವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ವಿಡಿಯೋ ದೃಶ್ಯಗಳಲ್ಲಿ ಕಂಡುಬರುವ ರಿಚರ್ಡ್ ಕೋಯರ್ ದಿ ಲಯನ್ ಅಥವಾ ರಿಚರ್ಡ್ ದಿ ಲಯನ್‌ಹಾರ್ಟ್ (ಕುದುರೆ ಮೇಲೆ ಯೋಧ) ಪ್ರತಿಮೆಯನ್ನು ಆಧರಿಸಿ ಇದು ಲಂಡನ್‌ನ ವೆಸ್ಟ್‌ಮಿನಿಸ್ಟರ್ ಅರಮನೆಯ ಸುತ್ತಲಿನ ಪ್ರದೇಶ ಎಂಬುದನ್ನು ಖಾತರಿ ಪಡಿಸಿಕೊಂಡಿದ್ದೇವೆ.
ಇದೇ ಕೀ ವರ್ಡ್‌ಗಳನ್ನು ಆಧಾರವಾಗಿ ಇರಿಸಿಕೊಂಡು ಗೂಗಲ್‌ನಲ್ಲಿ ಹುಡುಕಾಟ ನಡೆಸಿದಾಗ 2012ರ ಅಕ್ಟೋಬರ್ 19ರಂದು ‘takbeertv‘(ತಕ್ಬೀರ್‌ಟಿವಿ) ಎಂಬ ಯೂಟ್ಯೂಬ್ ಚಾನೆಲ್ ನಲ್ಲಿ ಪ್ರತಿಭಟನೆಗೆ ಸಂಬಂಧಿಸಿದ ಹಲವಾರು ವಿಡಿಯೋಗಳನ್ನು ಅಪ್‌ಲೋಡ್ ಮಾಡಿರುವುದನ್ನು ಗಮನಿಸಿದ್ದೇವೆ.
ಈ ವಿಡಿಯೋಗಳಲ್ಲಿ ನೀಡಲಾದ ವಿವರಣೆಯ ಪ್ರಕಾರ, ಚಲನಚಿತ್ರದ ವಿರುದ್ಧ ಲಂಡನ್‌ನಲ್ಲಿ ಮುಸ್ಲಿಮರು ನಡೆಸಿದ ಪ್ರತಿಭಟನೆಗೆ ಸಂಬಂಧಿಸಿದೆ ಎಂದು ಉಲ್ಲೇಖಿಸಿದ್ದು, 2012ರಲ್ಲಿ ಬ್ರಿಟಿಷ್ ಸಂಸತ್ ಭವನದೆದುರು ಈ ಪ್ರತಿಭಟನೆ ನಡೆದಿತ್ತು ಎಂದು ತಿಳಿದು ಬಂದಿದೆ.
ಒಂದು ವಿಡಿಯೋದಲ್ಲಿ , ವೈರಲ್ ಕ್ಲಿಪ್‌ನಲ್ಲಿ ಕಂಡುಬರುವ ಅದೇ ದೃಶ್ಯಗಳನ್ನು ನಾವು ಇನ್ನೊಂದು ಕೋನದಿಂದ ಚಿತ್ರೀಕರಿಸುವುದನ್ನು ಕಾಣಬಹುದು. ಈ YouTube ವಿಡಿಯೋದೊಂದಿಗೆ ವೈರಲ್ ವಿಡಿಯೋವನ್ನು ಹೋಲಿಸಿದಾಗ, ವೈರಲ್ ವಿಡಿಯೋದಲ್ಲಿನ ದೃಶ್ಯಗಳು ಇದೇ ಪ್ರತಿಭಟನೆಗೆ ಸಂಬಂಧಿಸಿವೆ ಎಂಬುದನ್ನು ಕನ್ನಡ ಫ್ಯಾಕ್ಟ್‌ಚೆಕ್ ಪತ್ತೆ ಹಚ್ಚಿದೆ.
ಈ ಪ್ರತಿಭಟನೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ಹುಡುಕಾಟ ನಡೆಸಿದಾಗ, ಅಲಾಮಿ ಸ್ಟಾಕ್ ಇಮೇಜ್ ವೆಬ್‌ಸೈಟ್‌ನಲ್ಲಿ ಅದೇ ಪ್ರತಿಭಟನೆಯ ಹಲವಾರು ಫೋಟೋಗಳು ನಮಗೆ ಲಭಿಸಿವೆ . ಈ ಫೋಟೋಗಳ ವಿವರಣೆಯ ಪ್ರಕಾರ, 2012ರ ಅಕ್ಟೋಬರ್ 6ರಂದು, ಲಂಡನ್‌ನಲ್ಲಿರುವ ಮುಸಲ್ಮಾನರು ಲಂಡನ್‌ನ ವೆಸ್ಟ್‌ಮಿನಿಸ್ಟರ್‌ನಲ್ಲಿರುವ UK ಸಂಸತ್ತಿನ ಹೊರಗೆ ‘ಇನೋಸೆನ್ಸ್ ಆಫ್ ಮುಸ್ಲಿಂಸ್’ ಎಂಬ ಚಿತ್ರದ ವಿರುದ್ಧ ಪ್ರತಿಭಟಿಸುತ್ತಿರುವುದು ಎಂದು ಉಲ್ಲೇಖಿಸಿದೆ. ಈ ಸಿನೆಮಾದಲ್ಲಿ ಪ್ರವಾದಿ ಮುಹಮ್ಮದ್(ಸ) ಕುರಿತ ಆಕ್ಷೇಪಾರ್ಹ ದೃಶ್ಯಗಳ ವಿರುದ್ಧ ಮುಸ್ಲಿಮರು ಪ್ರತಿಭಟನೆ ನಡೆಸಿದ್ದರು. 2012ರಲ್ಲಿ ನಡೆದ ಈ ಪ್ರತಿಭಟನೆಯ ಕುರಿತು ಹೆಚ್ಚಿನ ಮಾಹಿತಿಯನ್ನು ದಿ ಗಾರ್ಡಿಯನ್ , ದಿ ವೀಕ್ , ಬಿಬಿಸಿ ಸುದ್ದಿಗಳಲ್ಲಿ ಓದಬಹುದು.
ಒಟ್ಟಾರೆಯಾಗಿ ಹೇಳುವುದಾದರೆ, 2012ರಲ್ಲಿ ‘ಇನ್ನೋಸೆನ್ಸ್ ಆಫ್ ಮುಸ್ಲಿಮ್ಸ್’ ಎಂಬ ಸಿನೆಮಾದಲ್ಲಿ ಪ್ರವಾದಿ ಮುಹಮ್ಮದ್(ಸ) ಕುರಿತ ಆಕ್ಷೇಪಾರ್ಹ ದೃಶ್ಯಗಳ ವಿರುದ್ಧ ಲಂಡನ್‌ನಲ್ಲಿ ನಡೆದ ಪ್ರತಿಭಟನೆಯ ವಿಡಿಯೋವನ್ನು ಸುಳ್ಳು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.
ಇದನ್ನು ಓದಿದ್ದೀರಾ? : Fact Check | ಉತ್ತರಪ್ರದೇಶದಲ್ಲಿ ಮಹಿಳಾ ಕಾನ್ಸ್‌ಟೇಬಲ್ ಮೇಲಿನ ಹಲ್ಲೆ ವಿಡಿಯೋವನ್ನು ಕೋಮು ನಿರೂಪಣೆಯೊಂದಿಗೆ ಹಂಚಿಕೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.