ಇತ್ತೀಚೆಗೆ ಬಾಗೇಶ್ವರ ಧಾಮದ ಧೀರೇಂದ್ರ ಕೃಷ್ಣ ಶಾಸ್ತ್ರಿಯವರು ತಮ್ಮ ಸನಾತನ ಹಿಂದೂ ಧರ್ಮದ ಏಕತಾ ಪಾದಯಾತ್ರೆಯನ್ನು ಪೂರ್ಣಗೊಳಿಸಿದರು. 160 ಕಿಲೋಮೀಟರ್ ಪಾದಯಾತ್ರೆಯನ್ನು ನವೆಂಬರ್ 21ರಂದು ಬಾಗೇಶ್ವರ್ ಧಾಮ್‌ನಿಂದ ಪ್ರಾರಂಭಿಸಿ ನವೆಂಬರ್ 29ರಂದು ಮಧ್ಯಪ್ರದೇಶದ ಓರ್ಚಾ ಧಾಮ್ ತಲುಪಿ ಮುಕ್ತಾಯಗೊಳಿಸಿದ್ದಾರೆ.
ಈ ಹಿನ್ನಲೆಯಲ್ಲಿ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದ್ದು, ಕೆಲವು ಬಳಕೆದಾರರು “ಹಿಂದೂ ಏಕತಾ ಪಾದಯಾತ್ರೆಯಲ್ಲಿ 20ಲಕ್ಷಕ್ಕಿಂತ ಹೆಚ್ಚು ಜನರು ರಸ್ತೆಯೊಂದರಲ್ಲಿ ನೆರೆದಿದ್ದರು. ಜೈ ಶ್ರೀರಾಮ್, ಇದು ಧೀರೇಂದ್ರ ಕೃಷ್ಣ ಶಾಸ್ತ್ರಿಯವರ ಹಿಂದೂ ಏಕತಾ ಪಾದಯಾತ್ರೆ” ಎಂದು ಹಂಚಿಕೊಳ್ಳುತ್ತಿದ್ದಾರೆ.
ಫ್ಯಾಕ್ಟ್ ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿರುವ ವಿಡಿಯೋದ ಕುರಿತು ನಿಜಸ್ವರೂಪವನ್ನು ತಿಳಿದುಕೊಳ್ಳಲು ಕನ್ನಡ ಫ್ಯಾಕ್ಟ್ ಚೆಕ್ ತಂಡವು ಮುಂದಾಯ್ತು. ಇದಕ್ಕಾಗಿ ವೈರಲ್ ವಿಡಿಯೋದ ಕೀಫ್ರೇಮ್‌ಗಳನ್ನು ರಿವರ್ಸ್ ಇಮೇಜ್ ಬಳಸಿಕೊಂಡು ಹುಡುಕಾಟ ನಡೆಸಿದಾಗ, 2024ರ ಸೆಪ್ಟೆಂಬರ್ 22ರಂದು ಚಿತ್ರದುರ್ಗ_ಸೌಂಡ್_ಸಿಟಿ ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಮೂಲ ವಿಡಿಯೋವೊಂದು ಲಭ್ಯವಾಗಿದೆ. “28/09/2024 ಚಿತ್ರದುರ್ಗ ಹಿಂದೂ ಮಹಾ ಗಣಪತಿ ವಿಸರ್ಜನ್ // ಭಾರತದ ಎರಡನೇ ಅತಿ ದೊಡ್ಡ ಮೆರವಣಿಗೆ //ಕರ್ನಾಟಕದ ಅತಿ ದೊಡ್ಡ ಮೆರವಣಿಗೆ” ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.
ಪಂಡಿತ್ ಧೀರೇಂದ್ರ ಕೃಷ್ಣ ಶಾಸ್ತ್ರಿಯವರ ಪಾದಯಾತ್ರೆಯು 2024ರ ನವೆಂಬರ್ 21ರಂದು ಪ್ರಾರಂಭವಾಗಿತ್ತು ಎಂಬುದು ಗಮನಾರ್ಹವಾದ ಸಂಗತಿ. ಈ ವೈರಲ್ ವಿಡಿಯೋ ಪಾದಯಾತ್ರೆಗಿಂತ ಹಿಂದಿನದಾಗಿದ್ದು, ತಪ್ಪುದಾರಿಗೆಳೆಯುವ ಹೇಳಿಕೆಯೊಂದಿಗೆ ಇತ್ತೀಚೆಗೆ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ ಎಂಬುದು ಸ್ಪಷ್ಟವಾಗಿ ತಿಳಿದುಬಂದಿದೆ.
ಅದೇ ವಿಡಿಯೋವನ್ನು, ಅದೇ ಶೀರ್ಷಿಕೆಯೊಂದಿಗೆ, ಒಂದೇ ಸಮಯದಲ್ಲಿ ಹಲವಾರು ಫೇಸ್‌ಬುಕ್ ಮತ್ತು ಎಕ್ಸ್ ಖಾತೆಗಳಲ್ಲಿ ಹಂಚಿಕೊಳ್ಳಲಾಗಿದೆ.
ಸೆಪ್ಟೆಂಬರ್ 2022ರಲ್ಲಿ ನ್ಯೂಸ್ 18 ಕನ್ನಡ ವರದಿಯಲ್ಲಿ ಹಂಚಿಕೊಳ್ಳಲಾದ ʼಚಿತ್ರದುರ್ಗದ ಬೀದಿಗಳಲ್ಲಿ ಗಣೇಶ ವಿಸರ್ಜನೆʼಯ ಅದೇ ರೀತಿಯ ವಿಡಿಯೋ ಲಭ್ಯವಾಗಿದೆ. ಈ ವಿಡಿಯೋದಲ್ಲಿ ಮೆರವಣಿಗೆಯನ್ನು ತೋರಿಸಲಾಗಿದ್ದು, ವೈರಲ್ ವಿಡಿಯೋದಲ್ಲಿ ಕಂಡುಬರುವ ಮೆರವಣಿಗೆಯನ್ನು ಹೋಲುತ್ತದೆ.
ಜಿಯೋಲೊಕೇಶನ್ ಬಳಸಿಕೊಂಡು ಗಣೇಶ ಮೆರವಣಿಗೆ ಪ್ರಾರಂಭವಾದ ಬೀದಿಯನ್ನು ಗುರುತಿಸಿದಾಗ, ಬೀದಿ ಮತ್ತು ದೀಪಸ್ತಂಭಗಳು ವೈರಲ್ ವಿಡಿಯೋವನ್ನು ಹೋಲುತ್ತವೆ.
ಒಟ್ಟಾರೆಯಾಗಿ ಹೇಳುವುದಾದರೆ, ವೈರಲ್ ಆಗುತ್ತಿರುವ ವಿಡಿಯೋ ಕರ್ನಾಟಕದ ಚಿತ್ರದುರ್ಗದಲ್ಲಿ ಗಣೇಶ ವಿಸರ್ಜನೆಯದ್ದಾಗಿದೆ ಹೊರತು ಧೀರೇಂದ್ರ ಶಾಸ್ತ್ರಿ ಅವರ ಪಾದಯಾತ್ರೆಯದ್ದಲ್ಲ.
ಇದನ್ನು ಓದಿ :
Fact Check : ಇಸ್ಕಾನ್‌ನ ಚಿನ್ಮೋಯ್ ದಾಸ್ ಕಾರಿನಲ್ಲಿ ಮಹಿಳೆಯ ಮೇಲೆ ದೌರ್ಜನ್ಯ ನಡೆಸಿದ್ದಾನೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.