ಶಾಂಪೂ, ಕಾಫಿ ಮತ್ತು ಟೂತ್‌ಪೇಸ್ಟ್‌ನ ಮಿಶ್ರಣವನ್ನು ಚೆನ್ನಾಗಿ ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳುವುದರಿಂದ ತ್ಚಚೆಯು ಬಿಳಿಯಾಗುತ್ತದೆ ಎಂದು ಹೇಳುವ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. “ಶಾಂಪೂ, ಕಾಫಿ ಮತ್ತು ಟೂತ್‌ಪೇಸ್ಟ್‌ನ ಮಿಶ್ರಣವನ್ನು ಒಂದು ಬಾರಿ ಹಚ್ಚಿ ನೋಡಿ ನಿಮ್ಮ ಚರ್ಮವು ಚಂದ್ರನಂತೆ ಕಾಂತಿಯುತವಾಗುತ್ತದೆ” ಎಂದು ವಿಡಿಯೋದಲ್ಲಿ ಹೇಳುವುದನ್ನು ಕಾಣಬಹುದು.
ಫ್ಯಾಕ್ಟ್‌ಚೆಕ್
ಶಾಂಪೂ, ಕಾಫಿ ಮತ್ತು ಟೂತ್‌ಪೇಸ್ಟ್‌ನ ಮಿಶ್ರಣವನ್ನು ಚೆನ್ನಾಗಿ ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳುವುದರಿಂದ ತ್ಚಚೆಯು ಬಿಳಿಯಾಗುತ್ತದೆ ಎಂಬುದು ಸುಳ್ಳು. ಈ ಬಗ್ಗೆ ಕನ್ನಡ ಫ್ಯಾಕ್ಟ್‌ಚೆಕ್ ತಂಡವು ಪರಿಶೀಲನೆ ನಡೆಸಿದೆ.
ಕಾಫಿಯಲ್ಲಿ ಆಂಟಿ ಆಕ್ಸಿಡೆಂಟ್ ಗುಣಗಳಿರುವುದರಿಂದ ಇದು ತ್ವಚೆಯ ಆರೈಕೆಯಲ್ಲಿ ಪ್ರಯೋಜನಕಾರಿ ಘಟಕಾಂಶವೆಂದು ಹೇಳಲಾಗುತ್ತದೆ. ಇದು ವಿಕಿರಣಗಳಿಂದ ಹಾನಿಗೊಳಗಾದ ಚರ್ಮವನ್ನು ರಕ್ಷಿಸುತ್ತದೆ ಮತ್ತು ಒಟ್ಟಾರೆ ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ. ಇದು ಕೆಫೀನ್ ಮತ್ತು ಕ್ಲೋರೊಜೆನಿಕ್ ಆಮ್ಲಗಳನ್ನು (CGA) ಒಳಗೊಂಡಿದ್ದು, ಇದು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ರಕ್ತದ ಸಂಚಾರವನ್ನು ಉತ್ತೇಜಿಸುತ್ತದೆ. ಕಾಫಿನ್ನು ಸ್ಕ್ರಬ್ ಅಥವಾ ಫೇಸ್‌ಮಾಸ್ಕ್ ರೀತಿಯಲ್ಲಿ ಬಳಸಿದಾಗ ಇದು ತ್ವಚೆಯನ್ನು ಕಾಂತಿಯುತವಾಗಿಸುತ್ತದೆ ಆದರೆ, ಚರ್ಮವನ್ನು ಬಿಳುಪಾಗಿಸುವ ಗುಣಗಳನ್ನು ಕಾಫಿ ಹೊಂದಿಲ್ಲ. ಇದು ಕೇವಲ ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕಲು ಮತ್ತು ಚರ್ಮದ ನೈಸರ್ಗಿಕ ಕಾಂತಿಯನ್ನು ಹೆಚ್ಚಿಸಲು ಸಹಾಯಕವಾಗಿದೆ. ವೈಜ್ಞಾನಿಕವಾಗಿ ಆಧಾರಗಳಿಲ್ಲದಿರುವುದರಿಂದ ಕಾಫಿಯು ಚರ್ಮವನ್ನು ಬಿಳಿಯಾಗಿಸುತ್ತದೆ ಎಂಬುದು ಸುಳ್ಳು.
ಚರ್ಮದ ಮೇಲೆ ಶಾಂಪೂ, ಟೂತ್‌ಪೇಸ್ಟ್ ಬಳಕೆ ಸುರಕ್ಷಿತವಲ್ಲ !
ಶಾಂಪೂಗಳನ್ನು ವಿಶೇಷವಾಗಿ ಕೂದಲು ಮತ್ತು ನೆತ್ತಿಯ ಆರೈಕೆಗಾಗಿ ವಿನ್ಯಾಸಗೊಳಿಸಲಾಗುತ್ತದೆ ಮುಖ ಅಥವಾ ದೇಹದ ಚರ್ಮಕ್ಕಾಗಿ ಅಲ್ಲ. ಚರ್ಮದ ಮೇಲೆ ಶಾಂಪೂ ಬಳಸುವುದನ್ನು ವೈದ್ಯರು ಶಿಫಾರಸು ಮಾಡುವುದಿಲ್ಲ. ಶಾಂಪೂಗಳು ಸಾಮಾನ್ಯವಾಗಿ ಸಲ್ಫೇಟ್‌ಗಳಂತಹ ಬಲವಾದ ಸರ್ಫ್ಯಾಕ್ಟಂಟ್‌ಗಳನ್ನು ಹೊಂದಿದ್ದು ಕೂದಲಿನಿಂದ ಎಣ್ಣೆ ಮತ್ತು ಕೊಳೆಯನ್ನು ತೆಗೆದುಹಾಕಲು ಸಹಾಯಕವಾಗುತ್ತವೆ. ತ್ವಚೆಯ ಮೇಲೆ ಶಾಂಪೂ ಬಳಕೆಯು ಶುಷ್ಕತೆ, ಕಿರಿಕಿರಿ ಮತ್ತು ಸಂಭಾವ್ಯ ಹಾನಿಗೆ ಕಾರಣವಾಗುತ್ತದೆ. ಇದಲ್ಲದೆ, ಕೂದಲಿಗೆ ಹೊಂದಿಕೊಳ್ಳುವಂತೆ ಶ್ಯಾಂಪೂವಿನ pH ಮಟ್ಟವನ್ನು ವಿನ್ಯಾಸಗೊಳಿಸಲಾಗಿದೆ ಮತ್ತು ಚರ್ಮದ ನೈಸರ್ಗಿಕ pH ಮಟ್ಟಕ್ಕೆ ಇದು ಹಾನಿಕಾರಕ.
ಹಲ್ಲುಗಳನ್ನು ಸ್ವಚ್ಛಗೊಳಿಸಲು ಟೂತ್ಪೇಸ್ಟ್ ಅನ್ನು ವಿನ್ಯಾಸಗೊಳಿಸಲಾಗಿದೆ. ಅದರ ಅಪಘರ್ಷಕ ಗುಣಗಳು ಹಲ್ಲುಗಳಿಗೆ ಸುರಕ್ಷಿತವಾಗಿದ್ದು ಟೂತ್ಪೇಸ್ಟ್‌ನಲ್ಲಿರುವ ಕ್ಯಾಲ್ಸಿಯಂನಂತಹ ಬಲವಾದ ಖನಿಜಗಳು ಹಲ್ಲಿನ ಆರೈಕೆಗೆ ಪೂರಕವಾಗಿದ್ದು, ಚರ್ಮವು ಹಲ್ಲುಗಳಿಗಿಂತ ಹೆಚ್ಚು ಸೂಕ್ಷ್ಮವಾಗಿದ್ದು ಈ ಮಟ್ಟದ ಅಪಘರ್ಷಕತೆಯನ್ನು ನಿಭಾಯಿಸಲು ಸಾಧ್ಯವಿಲ್ಲ. ಚರ್ಮದ ಮೇಲೆ ಟೂತ್ಪೇಸ್ಟ್ ಅನ್ನು ಬಳಸುವುದು ಕಿರಿಕಿರಿ ಮತ್ತು ಚರ್ಮದ ಸಂಭಾವ್ಯ ಹಾನಿಗೆ ಕಾರಣವಾಗಬಹುದು. ಏಕೆಂದರೆ ಚರ್ಮದ ರಚನೆಯು ಹಲ್ಲುಗಳಿಗಿಂತ ಹೆಚ್ಚು ಸೂಕ್ಷ್ಮವಾಗಿರುತ್ತದೆ. ಚರ್ಮದ ಆರೈಕೆಗಾಗಿ ಟೂತ್ಪೇಸ್ಟ್ ಅನ್ನು ಬಳಸುವುದರ ವಿರುದ್ಧ ಚರ್ಮರೋಗ ತಜ್ಞರು ಎಚ್ಚರಿಕೆ ನೀಡುತ್ತಾರೆ. ಏಕೆಂದರೆ ಇದು ಚರ್ಮದ ನೈಸರ್ಗಿಕ ಗುಣಗಳಿಗೆ ಅಡ್ಡಿಪಡಿಸುತ್ತದೆ ಮತ್ತು ಶುಷ್ಕತೆ, ಕಿರಿಕಿರಿ ಅಥವಾ ಅಲರ್ಜಿಯ ಪ್ರತಿಕ್ರಿಯೆಗಳಿಗೆ ಕಾರಣವಾಗಬಹುದು.
ಶ್ಯಾಂಪೂ, ಕಾಫಿ ಮತ್ತು ಟೂತ್‌ಪೇಸ್ಟ್ ಮಿಶ್ರಣವು ಚರ್ಮದ ಮೇಲೆ ಹಾನಿಕಾರಕವಾಗಿದ್ದು, ಈ ಮಿಶ್ರಣವು ಚರ್ಮವನ್ನು ಕಪ್ಪಾಗಿಸಬಹುದು ಎಂದು ವೈದ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಚರ್ಮವನ್ನು ಬಿಳಿಯಾಗಿಸಲು ಯಾವುದೇ “ಮ್ಯಾಜಿಕ್ ಮದ್ದು” ಇಲ್ಲ. ಒಂದು ವೇಳೆ ಬಿಳಿ ಮೈಬಣ್ಣವನ್ನು ಸಾಧಿಸಲು ಬಯಸುವುದಾದರೆ, ಇದಕ್ಕೆ ವೈದ್ಯಕೀಯ ಮೇಲ್ವಿಚಾರಣೆಯ ವಿಧಾನಗಳನ್ನು ಬಳಸುವಂತೆ ವೈದ್ಯರು ಸಲಹೆ ನೀಡಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ಈ ಮಿಶ್ರಣವು ಚರ್ಮವನ್ನು ಬಿಳಿಯಾಗಿಸಲು ಸಹಾಯ ಮಾಡುತ್ತದೆ ಎಂಬ ಹೇಳಿಕೆಯು ಸುಳ್ಳಿನಿಂದ ಕೂಡಿದ್ದು, ಸುರಕ್ಷಿತ ಮತ್ತು ಪರಿಣಾಮಕಾರಿ ತ್ವಚೆಗಾಗಿ ಯಾವಾಗಲೂ ಚರ್ಮಶಾಸ್ತ್ರಜ್ಞರನ್ನು ಸಂಪರ್ಕಿಸುವುದು ಉತ್ತಮ.
ಇದನ್ನು ಓದಿದ್ದೀರಾ? : FACT CHECK : ಕಾಡು ಬಸಳೆ ತಿನ್ನುವುದರಿಂದ ಕಿಡ್ನಿ ಸ್ಟೋನ್ ಕರಗುತ್ತದೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.