Fact Check | ಮಹಾ ಕುಂಭಮೇಳ ಪ್ರದೇಶದಲ್ಲಿ ಸ್ಥಾಪಿಸಲಾದ ಆಸ್ಪತ್ರೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂಬುದು ಸುಳ್ಳು

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭಮೇಳ ಆರಂಭಗೊಂಡಿದ್ದು, ಮೊದಲ ದಿನ 50 ಲಕ್ಷಕ್ಕೂ ಹೆಚ್ಚು ಭಕ್ತರು ಪವಿತ್ರ ಸ್ನಾನ ಮಾಡಿದರು. ಈ ಅದ್ಧೂರಿ ಕಾರ್ಯಕ್ರಮದ ನಡುವೆ, ಮಹಾ ಕುಂಭಮೇಳದಲ್ಲಿ ನಿರ್ಮಿಸಲಾದ ಆಸ್ಪತ್ರೆಯಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಎಂಟು ಜನರು ಗಾಯಗೊಂಡಿದ್ದಾರೆ ಎಂಬ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಕೈಲಾಶ್‌ ಮೌರ್ಯ ಎಂಬ ಬಳಕೆದಾರ “ಮಹಾಕುಂಭಮೇಳದ ಪ್ರದೇಶದಲ್ಲಿ ಸ್ಥಾಪಿಸಲಾದ ಆಸ್ಪತ್ರೆಯಲ್ಲಿ ಬೆಂಕಿ ಸಂಭವಿಸಿದೆ”ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾನೆ. ಈ ವಿಡಿಯೋದ ಸತ್ಯಾಸತ್ಯತೆಯನ್ನು ಕನ್ನಡ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ.

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್‌ ಆಗುತ್ತಿರುವ ವಿಡಿಯೋದ ನಿಜಸ್ವರೂಪವನ್ನು ತಿಳಿದುಕೊಳ್ಳಲು ಕನ್ನಡ ಫ್ಯಾಕ್ಟ್‌ ಚೆಕ್‌ ತಂಡವು ಮುಂದಾಯ್ತು. ಇದಕ್ಕಾಗಿ ವೈರಲ್‌ ವಿಡಿಯೋದ ಕೀಫ್ರೇಮ್‌ಗಳನ್ನು ಗೂಗಲ್‌ ರಿವರ್ಸ್ ಇಮೇಜ್ ಬಳಸಿ ಹುಡುಕಾಟ ನಡೆಸಿದಾಗ, ಡಿಸೆಂಬರ್ 2024ರ ವಿಡಿಯೋವೊಂದು ಲಭ್ಯವಾಗಿದ್ದು, ಮಹಾ ಕುಂಭ ಪ್ರದೇಶದಲ್ಲಿರುವ ಕೇಂದ್ರ ಆಸ್ಪತ್ರೆಯಿಂದ ಗಾಯಗೊಂಡವರನ್ನು ಭದ್ರತಾ ಸಿಬ್ಬಂದಿ ರಕ್ಷಿಸಿರುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ. ಆದರೆ, ಈ ವಿಡಿಯೋ ಯಾವುದೇ ನೈಜ ಘಟನೆಯನ್ನು ತೋರಿಸದೇ, ಪೊಲೀಸರು ಮತ್ತು ಅಗ್ನಿಶಾಮಕ ಇಲಾಖೆ ನಡೆಸಿದ ‘ಮಾಕ್ ಡ್ರಿಲ್’ನ್ನು ತೋರಿಸುತ್ತದೆ. ರಕ್ಷಣಾ ಕಾರ್ಯಾಚರಣೆಗಳಿಗೆ ಪ್ರತಿಕ್ರಿಯಿಸುವವರನ್ನು ಸಿದ್ಧಪಡಿಸಲು ತರಬೇತಿಯನ್ನು ನೀಡಲಾಗಿದೆ ಎಂಬುದು ಸ್ಪಷ್ಟವಾಗಿ ತಿಳಿದುಬಂದಿದೆ.

2024ರ ಡಿಸೆಂಬರ್ 27ರಂದು ದೈನಿಕ್ ಭಾಸ್ಕರ್‌ನಲ್ಲಿ ಪ್ರಕಟವಾದ ಲೇಖನದ ಪ್ರಕಾರ, ಮಹಾ ಕುಂಭಮೇಳ ಪ್ರದೇಶದಲ್ಲಿ ಸ್ಥಾಪಿಸಲಾದ ತಾತ್ಕಾಲಿಕ ಕೇಂದ್ರ ಆಸ್ಪತ್ರೆಯಲ್ಲಿ ರಕ್ಷಣಾ ಕಾರ್ಯಾಚರಣೆಯ ತರಬೇತಿ ನಡೆಸಲಾಗಿತ್ತು. ಇದಲ್ಲದೆ, ಮಹಾ ಕುಂಭಮೇಳದಲ್ಲಿ ಎಂಟು ಜನರು ಗಾಯಗೊಂಡಿರುವ ಬಗ್ಗೆ ಅಥವಾ ಯಾವುದೇ ಬೆಂಕಿ ಅವಘಡ ಸಂಭವಿಸಿರುವ ಬಗ್ಗೆ ವಿಶ್ವಾಸಾರ್ಹ ವರದಿಗಳು ಲಭ್ಯವಾಗಿಲ್ಲ.

ಉತ್ತರ ಪ್ರದೇಶದ ಪೊಲೀಸರು ಮತ್ತು ಅಗ್ನಿಶಾಮಕ ಇಲಾಖೆ ಕೂಡ ವೈರಲ್ ಹೇಳಿಕೆಯನ್ನು ಸುಳ್ಳು ಎಂದು ಸ್ಪಷ್ಟಪಡಿಸಿದ್ದು, ಈ ವಿಡಿಯೋ ಡಿಸೆಂಬರ್ 27 ರಂದು ನಡೆಸಿದ ರಕ್ಷಣಾ ಕಾರ್ಯಾಚರಣೆಯ ತರಬೇತಿ ಪ್ರದರ್ಶನದ ವಿಡಿಯೋ ಎಂದು ದೃಢಪಡಿಸಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಮಹಾ ಕುಂಭಮೇಳ ಪ್ರದೇಶದಲ್ಲಿ ಸ್ಥಾಪಿಸಲಾದ ಆಸ್ಪತ್ರೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂಬ ವೈರಲ್‌ ವಿಡಿಯೋ ಸುಳ್ಳು. ಆದ್ದರಿಂದ ಇಂತಹ ವಿಡಿಯೋಗಳನ್ನು ಹಂಚಿಕೊಳ್ಳುವ ಮುನ್ನ ಒಮ್ಮೆ ಪರಿಶೀಲಿಸಿಕೊಳ್ಳುವುದು ಉತ್ತಮ.


ಇದನ್ನು ಓದಿ :

ಡಾ. ಬಿ.ಆರ್‌. ಅಂಬೇಡ್ಕರ್ ಅವರ ಸಂದೇಶ ಫಲಕದ ಮೇಲೆ ಯುಪಿ ಪೊಲೀಸರು ಬಣ್ಣ ಬಳಿದಿದ್ದಾರೆ ಎಂಬುದು ಸುಳ್ಳು


ಇದಕ್ಕೆ ಸಂಬಂಧಿಸಿದ ಸುದ್ದಿಯನ್ನು ಡಿಸೆಂಬರ್ 22 ರಂದು ಪ್ರಕಟಿಸಲಾದ ದೈನಿಕ್ ಜಾಗರಣದ ಇಟಾಹ್ ಆವೃತ್ತಿಯಲ್ಲಿಯೂ ಕಾಣಬಹುದು.

Leave a Reply

Your email address will not be published. Required fields are marked *