ಅಲಂಕರಿಸಿದ ವೇದಿಕೆಯ ಮೇಲೆ ವ್ಯಕ್ತಿಯೊಬ್ಬ ಎರಡು ನಿಮಿಷಗಳಿಗಿಂತ ಹೆಚ್ಚು ಕಾಲ ಶಂಖ ಊದಿರುವ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದು ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭದ ಉದ್ಘಾಟನಾ ಸಮಾರಂಭದ ದೃಶ್ಯ ಎಂದು ಬಳಕೆದಾರರು ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ.
ನಂದ ದುಲಾಲ್ ಗೊಸ್ವಾಮಿ ಎಂಬ ಬಳಕೆದಾರ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ” ಜೈ ಜಗನ್ನಾಥ, ಶುಭ ಸಂಜೆ………ಮಹಾಕುಂಭದ ಉದ್ಘಾಟನಾ ಸಮಾರಂಭದ ದೃಶ್ಯದಲ್ಲಿ 2 ನಿಮಿಷ 49 ಸೆಕೆಂಡ್ಸ್‌ಗಳ ಕಾಲ ವ್ಯಕ್ತಿಯೊಬ್ಬ ಶಂಖವನ್ನು ಊದಿ ವರ್ಲ್ಡ್ ರೆಕಾರ್ಡ್ ಮಾಡಿದ್ದಾನೆ. ಇದು ಹಿಂದೂ ಧರ್ಮಕ್ಕಿರುವ ಶಕ್ತಿ” ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾನೆ. ಈ ವೈರಲ್ ವಿಡಿಯೋವನ್ನು ಕನ್ನಡ ಫ್ಯಾಕ್ಟ್ ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ.
ಫ್ಯಾಕ್ಟ್ ಚೆಕ್
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿರುವ ವಿಡಿಯೋದ ನಿಜಸ್ವರೂಪವನ್ನು ತಿಳಿದುಕೊಳ್ಳಲು ಕನ್ನಡ ಫ್ಯಾಕ್ಟ್ ಚೆಕ್ ತಂಡವು ಮುಂದಾಯ್ತು. ಇದಕ್ಕಾಗಿ ವೈರಲ್ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಪರದೆಯ ಮೇಲಿನ ಬಲ ಮೂಲೆಯಲ್ಲಿ ‘ವಿಕೆ ನ್ಯೂಸ್’ ಎಂಬ ಪದವು ವಾಟರ್‌ಮಾರ್ಕ್‌ನಲ್ಲಿದೆ. ವೈರಲ್ ಆದ ದೃಶ್ಯದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿದ್ದಾರೆ.
ವಿಕೆ ನ್ಯೂಸ್‌ನ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ “ರಾಷ್ಟ್ರಪತಿ ದ್ರೌಪದಿ ಮುರ್ಮು” ಮತ್ತು “ಶಂಖ” ಎಂಬ ಕೀವರ್ಡ್‌ಗಳನ್ನು ಬಳಸಿ ಹುಡುಕಾಟ ನಡೆಸಿದಾಗ, 2023ರ ಫೆಬ್ರವರಿ 13ರಂದು ಹಂಚಿಕೊಳ್ಳಲಾದ ವಿಡಿಯೋದಲ್ಲಿ ವಾರಣಾಸಿಯ ವ್ಯಕ್ತಿಯೊಬ್ಬ ಶಂಖ ಊದಿರುವ ದೃಶ್ಯ ಲಭ್ಯವಾಗಿದೆ.
2023ರ ಫೆಬ್ರವರಿ 13ರಂದು ಭಾರತದ ರಾಷ್ಟ್ರಪತಿಗಳ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ‘ವಾರಣಾಸಿಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಗಂಗಾ ಆರತಿಯಲ್ಲಿ ಭಾಗವಹಿಸಿದ್ದಾರೆ’ ಎಂಬ ಶೀರ್ಷಿಕೆಯ ವಿಡಿಯೋ ಲಭ್ಯವಾಗಿದ್ದು, 17:54 ನಿಮಿಷಗಳ ಕಾಲ, ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭದ ಉದ್ಘಾಟನಾ ಸಮಾರಂಭದಂತೆ ತೋರಿಸಿರುವ ವೈರಲ್ ವಿಡಿಯೋ ಇದಾಗಿದೆ ಎಂಬುದು ಸ್ಪಷ್ಟವಾಗಿ ತಿಳಿದುಬಂದಿದೆ.
ಫೆಬ್ರವರಿ 2023ರಲ್ಲಿ ಅಧ್ಯಕ್ಷೆ ಮುರ್ಮುರವರು ವಾರಣಾಸಿಗೆ ಭೇಟಿ ನೀಡಿದ್ದಾಗ, ಕಾಲ ಭೈರವ ಮತ್ತು ಕಾಶಿ ವಿಶ್ವನಾಥ ದೇವಾಲಯಗಳಲ್ಲಿ ಪ್ರಾರ್ಥನೆ ಸಲ್ಲಿಸಿದ್ದರು ಮತ್ತು ದಶಾಶ್ವಮೇಧ ಘಾಟ್‌ನಲ್ಲಿ ಗಂಗಾ ಆರತಿಯಲ್ಲಿ ಭಾಗವಹಿಸಿದ್ದರು ಎಂದು ಹಲವಾರು ಮಾಧ್ಯಮಗಳು ವರದಿಯನ್ನು ತಯಾರಿಸಿವೆ. ಆದರೆ, ಇವುಗಳಲ್ಲಿ ಯಾವ ವರದಿಯು ಶಂಖ ಊದಿರುವ ವ್ಯಕ್ತಿ ವಿಶ್ವ ದಾಖಲೆ ಮಾಡಿದ್ದಾನೆ ಎಂದು ಉಲ್ಲೇಖಿಸಿಲ್ಲ.
ಮುರ್ಮು ಅವರ ಭೇಟಿಯ ದೃಶ್ಯಗಳನ್ನು ದಶಾಶ್ವಮೇಧ ಘಾಟ್‌ನಲ್ಲಿ ಗಂಗಾ ಆರತಿಯನ್ನು ಆಯೋಜಿಸುವ ಸಂಸ್ಥೆಯಾದ ಗಂಗಾ ಸೇವಾ ನಿಧಿಯ ಫೇಸ್‌ಬುಕ್ ಪುಟದಲ್ಲಿಯೂ ಹಂಚಿಕೊಳ್ಳಲಾಗಿದೆ. ಈ ಪುಟದಲ್ಲಿ ಐದು ನಿಮಿಷಗಳಿಗಿಂತ ಹೆಚ್ಚು ಕಾಲ ಪುರೋಹಿತರು ಶಂಖಗಳನ್ನು ಊದುವ ಹಲವಾರು ವಿಡಿಯೋಗಳು ಲಭ್ಯವಾಗಿವೆ.
ಒಟ್ಟಾರೆಯಾಗಿ ಹೇಳುವುದಾದರೆ, ಮಹಾಕುಂಭದ ಉದ್ಘಾಟನೆಯ ಸಮಯದಲ್ಲಿ ವ್ಯಕ್ತಿಯೊಬ್ಬ 2 ನಿಮಿಷಗಳಿಗಿಂತ ಹೆಚ್ಚು ಕಾಲ ಶಂಖವನ್ನು ಊದುವ ಮೂಲಕ ವಿಶ್ವ ದಾಖಲೆ ಮಾಡಿದ್ದಾನೆ ಎಂದು ವಾರಣಾಸಿಯ ಹಳೆಯ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. ಇಂತಹ ವಿಡಿಯೋಗಳನ್ನು ಹಂಚಿಕೊಳ್ಳುವ ಮುನ್ನ ಒಮ್ಮೆ ಪರಿಶೀಲಿಸಿಕೊಳ್ಳುವುದು ಉತ್ತಮ.
ಇದನ್ನು ಓದಿ :
Fact Check: ಗಣರಾಜ್ಯೋತ್ಸವದ ಪ್ರಯುಕ್ತ ಫೋನ್ ಪೇ 639 ರೂ ಕ್ಯಾಶ್‌ಬ್ಯಾಕ್ ನೀಡಲಿದೆ ಎಂಬುದು ಸುಳ್ಳು