ಸಾಮಾಜಿಕ ಜಾಲತಾಣದಲ್ಲಿ ” ಈ ಮುಸ್ಲಿಂ ಹಲ್ಕಾ ಭೇವಾರ್ಷಿಗಳು ಮಾರಕ ರೋಗ ಬರಲು ಮತ್ತು ಮಕ್ಕಳಾಗದಂತೆ ಖರ್ಜುರದಲ್ಲಿ ಮಾತ್ರೆಗಳನ್ನು ಇಟ್ಟು ಹಿಂದೂಗಳಿಗೆ ಮಾರಾಟ ಮಾಡುತ್ತಿದ್ದವರನ್ನು ಪೊಲೀಸ್ ರವರು ಬಂಧಿಸಿದ್ದಾರೆ..ಇನ್ನಾದರೂ ಎಚೆತ್ತುಕೊಳ್ಳಿ ಈ ರಕ್ಕಸ ಸಮಾಜ ಇಡೀ ಹಿಂದೂ ಮನುಕುಲಕ್ಕೆ ಮಾರಕ ವೆಂಬುದನ್ನು ತಿಳಿಯಿರಿ.” ಎಂದು ಕೋಮು ದ್ವೇಷದೊಂದಿಗೆ ಬರೆದುಕೊಂಡು ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
ಮತ್ತೊಂದು ಕಡೆ “ಆತ್ಮೀಯ ಸ್ನೇಹಿತರೇ ರಂಜಾನ್ ಶೀಘ್ರದಲ್ಲೇ ಬರಲಿದೆ, ರೈಲ್ವೆ ನಿಲ್ದಾಣಗಳ ಯಾವುದೇ ಮಾರಾಟಗಾರರಿಂದ ಖರ್ಜೂರವನ್ನು ತೆಗೆದುಕೊಳ್ಳಬೇಡಿ ಮತ್ತು ಅಪರಿಚಿತರು ಎಲ್ಲರಿಗೂ ಹಂಚಿಕೊಳ್ಳಿ, ವಿಶೇಷವಾಗಿ ಮುಸ್ಲಿಮರಿಗಾಗಿ..” ಎಂದು ಕೋಮು ಆಯಾಮದಿಂದ ಬರೆದುಕೊಂಡು ಹಂಚಿಕೊಳ್ಳಲಾಗುತ್ತಿದೆ. ಹೀಗಾಗಿ ವಿಡಿಯೋ ಕೂಡ ಸಾಕಷ್ಟು ವೈರಲ್ ಆಗುತ್ತಿದೆ. ಹೀಗೆ ವಿವಿಧ ಆಯಾಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋವಿನ ಅಸಲಿಯತ್ತು ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ
ಫ್ಯಾಕ್ಟ್‌ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ವಿಡಿಯೋಗೆ ಸಂಬಂಧಿಸಿದಂತೆ 16 ಜನವರಿ 2025ರಂದು sanewschannelcg ಎಂಬ ಖಾತೆಯಿಂದ “ರೈಲ್ವೆ ನಿಲ್ದಾಣದಲ್ಲಿ ಖರ್ಜೂರದಲ್ಲಿ ನಿದ್ದೆ ಮಾತ್ರೆಗಳನ್ನು ಬೆರೆಸಲಾಗುತ್ತಿದೆ! ದಯವಿಟ್ಟು ಈ ಆಘಾತಕಾರಿ ಸತ್ಯವನ್ನು ನೋಡಿ ಮತ್ತು ಎಚ್ಚರದಿಂದಿರಿ. ನೀವೂ ಇಂತಹ ಘಟನೆಗೆ ಬಲಿಯಾಗಿದ್ದೀರಾ?” ಎಂದು ಬರೆದುಕೊಂಡು ವೈರಲ್ ವಿಡಿಯೋವನ್ನು ಹಂಚಿಕೊಂಡಿರುವುದು ಕಂಡು ಬಂದಿದೆ.
ಈ ಕುರಿತು ಇನ್ನಷ್ಟು ಹುಡುಕಾಟವನ್ನು ನಡೆಸಿದಾಗ ಪಶ್ಚಿಮ ಬಂಗಾಳ ಪೊಲೀಸ್ ವೆಬ್‌ಸೈಟ್‌ನಲ್ಲಿ ಘಟನೆಗೆ ಸಂಬಂಧಿಸಿದಂತೆ FIR ಪ್ರತಿ ಲಭ್ಯವಾಗಿದೆ. 11 ಜನವರಿ 2025 ರಂದು, ಹೌರಾ ರೈಲ್ವೆ ನಿಲ್ದಾಣದ ಹಳೆಯ ಕಾಂಪ್ಲೆಕ್ಸ್‌ನಲ್ಲಿ ಪ್ಲಾಟ್‌ಫಾರ್ಮ್ ಸಂಖ್ಯೆ 7 ರಿಂದ ಮೂವರು ದರೋಡೆಕೋರರ ಗುಂಪನ್ನು ಬಂಧಿಸಲಾಯಿತು. ಅವರು ಪ್ರಯಾಣಿಕರಿಗೆ ಖರ್ಜೂರದೊಳಗೆ ನಿದ್ರೆ ಮಾತ್ರೆಗಳನ್ನು ಬೆರೆಸಿ ರೈಲುಗಳಲ್ಲಿ ದರೋಡೆ ನಡೆಸುತ್ತಿದ್ದರು . ಎಫ್‌ಐಆರ್‌ನಲ್ಲಿ ಆರೋಪಿಗಳ ಹೆಸರುಗಳನ್ನು ಶಂಬೃ ಪಾಸ್ವಾನ್, ಗೋವಿಂದ್ ಕುಮಾರ್ ಮತ್ತು ಮೊಹಮ್ಮದ್ ಇರ್ಫಾನ್ ಎಂದು ಉಲ್ಲೇಖಿಸಲಾಗಿದೆ. ಈ FIR ಪ್ರಕಾರ ಘಟನೆಯಲ್ಲಿ ಯಾವದೇ ರೀತಿಯಾದ ಕೋಮು ಆಯಾಮ ಕಂಡು ಬಂದಿಲ್ಲ.

ಇನ್ನು ಆಂಗ್ಲ ಭಾಷೆಯಲ್ಲಿನ ಫ್ಯಾಕ್ಟ್‌ಲೀಯೊಂದಿಗೆ ಹೌರಾ ಜಿಆರ್‌ಪಿ ಪೊಲೀಸ್ ಅಧಿಕಾರಿಗಳು ಇದರಲ್ಲಿ ಯಾವುದೇ ರೀತಿಯಾದ ಕೋಮು ಆಯಾಮವಿಲ್ಲ ಈ ದರೋಡೆಕೋರರು ಪ್ರಯಾಣಿಕರಿಗೆ ಅಮಲೇರಿದ ತಿಂಡಿಗಳನ್ನು ನೀಡುವ ಮೂಲಕ ರೈಲುಗಳಲ್ಲಿ ದರೋಡೆ ಮಾಡುತ್ತಾರೆ ಎಂದು ಹೇಳಿದ್ದಾರೆ. ದರೋಡೆಕೋರರು ಯಾವುದೇ ನಿರ್ದಿಷ್ಟ ಧಾರ್ಮಿಕ ಗುಂಪನ್ನು ಗುರಿಯಾಗಿಸಿಕೊಂಡಿಲ್ಲ ಮತ್ತು ಬಳಸಿದ ಮಾತ್ರೆಗಳು ಗರ್ಭ ನಿರೋಧಕ ಮಾತ್ರೆಯಲ್ಲ ಎಂಬುದನ್ನು ಸ್ಪಷ್ಟ ಪಡಿಸಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿ ಮುಸಲ್ಮಾನರು ಮಾರಕ ಕಾಯಿಲೆ ಬರಲು ಮತ್ತು ಹಿಂದೂಗಳಿಗೆ ಮಕ್ಕಳಾಗದಿರಲು ಮಾತ್ರೆಗಳನ್ನು ಖರ್ಜೂರಗಳಲ್ಲಿ ಮಿಶ್ರಣ ಮಾಡಿ ಮಾರುತ್ತಿದ್ದಾರೆ ಎಂಬುದು ಸುಳ್ಳಾಗಿದೆ. ಇದು ದರೋಡೆಕೋರರು ಖರ್ಜೂರದಲ್ಲಿ ನಿದ್ರೆ ಮಾತ್ರೆ, ಅಮಲಾಗುವ ಮಾತ್ರೆಗಳನ್ನು ಬೆರೆಸಿ ಪ್ರಯಾಣಿಕರಿಗೆ ಮಾರಾಟ ಮಾಡಿ ಅವರನ್ನು ದರೋಡೆ ಮಾಡುತ್ತಿರುವ ಘಟನೆಗೆ ಸಂಬಂಧಿಸಿದ್ದಾಗಿದೆ. ಹಾಗಾಗಿ ವೈರಲ್ ವಿಡಿಯೋವನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿಯನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check | ರಾಜಸ್ಥಾನಿ ಮಹಿಳೆಯರು 12ಕೊಡ ನೀರನ್ನು ಹೊತ್ತು ತರುತ್ತಿದ್ದಾರೆ ಎಂದು ಎಡಿಟೆಡ್ ಪೋಟೋ ಹಂಚಿಕೆ