ಕೆಲವರು ನಾಣ್ಯಗಳನ್ನು ಮತ್ತು ನೋಟಿನ ಮೇಲೆ ಒಂದು ಪ್ರತ್ಯೇಕ ಸಂಖ್ಯೆಯನ್ನು ಶುಭ ಸಂಕೇತ ಹಾಗೂ ಅದೃಷ್ಟ ಸಂಖ್ಯೆ ಎಂದು ಭಾವಿಸುತ್ತಾರೆ, ಇನ್ನೂ ಕೆಲವರು ಹವ್ಯಾಸದ ಭಾಗವಾಗಿ ನಾಣ್ಯ ಹಾಗೂ ನೋಟಗಳನ್ನುಸಂಗ್ರಹಿಸುತ್ತಾರೆ. ಆದೆರೆ ಇಂತಹ ಕೆಲವು ಸರಣಿ ಸಂಖ್ಯೆಗಳಿರುವ ನೋಟುಗಳ ಖರೀದಿ ಮತ್ತು ಮಾರಾಟದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ಗಳು ವೈರಲ್ ಆಗುತ್ತಿವೆ. 786 ಕ್ರಮ ಸಂಖ್ಯೆ ಇರುವ ನೋಟಿನ ಮೌಲ್ಯ 12 ಲಕ್ಷ 80 ಸಾವಿರ ರೂಪಾಯಿ ಎಂದು ಹೇಳಲಾಗುತ್ತಿದೆ. ಒಂದು ಇನ್‌ಸ್ಟಾ ಹ್ಯಾಂಡಲ್‌ನಿಂದ ಇಂತಹ ಹಲವು ಪೋಸ್ಟ್‌ಗಳನ್ನು ಮಾಡಲಾಗಿದೆ. ಅವರನ್ನು ಸಂಪರ್ಕಿಸಲು ನಂಬರ್ ಕೂಡ ನೀಡಲಾಗಿದೆ.
Instagram ಬಳಕೆದಾರ 786_note_shop_786 ಅವರು ಜನವರಿ 20, 2025 ರಂದು ಪೋಸ್ಟ್ ( ಆರ್ಕೈವ್ ಲಿಂಕ್ ) ಮಾಡಿದ್ದು, ಇದರಲ್ಲಿ ” ಸರಣಿ ಸಂಖ್ಯೆ 786ರ ಮೌಲ್ಯ 12 ಲಕ್ಷದ 80 ಸಾವಿರ ” ಎಂದು ಬರೆದುಕೊಂಡಿದ್ದಾರೆ. ಇದರೊಂದಿಗೆ ಮೊಬೈಲ್ ಸಂಖ್ಯೆಯನ್ನೂ ಹಂಚಿಕೊಂಡಿದ್ದಾರೆ. ಇದಲ್ಲದೇ ಇವುಗಳನ್ನು ಖರೀದಿಸಲು ಮುಂದಾಗುವವರಿಗೆ 750 ರೂಪಾಯಿ ಆರ್‌ಬಿಐ ಶುಲ್ಕದ ರೂಪದಲ್ಲಿ ಪಾವತಿಸಲು ಕೇಳಲಾಗುತ್ತಿದೆ.

ಇದೇ ರೀತಿಯ ಕ್ಲೈಮ್ ಅನ್ನು ಜನವರಿ 20 ರಂದು ಅದೇ ಖಾತೆಯಿಂದ ಮತ್ತೊಂದು ಪೋಸ್ಟ್‌ನಲ್ಲಿ ( ಆರ್ಕೈವ್ ಲಿಂಕ್ ) ಹಂಚಿಕೊಳ್ಳಲಾಗಿದ್ದು , ಇದರಲ್ಲಿ ಮೊಬೈಲ್ ಸಂಖ್ಯೆ ಮಾತ್ರ ವಿಭಿನ್ನವಾಗಿದೆ.

ಫ್ಯಾಕ್ಟ್‌ಚೆಕ್
ವೈರಲ್ ಕ್ಲೈಮ್ ಅನ್ನು ಪರಿಶೀಲಿಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್ ತಂಡವು ಮುಂದಾಗಿದ್ದು, ಮೊದಲು ಈ ಪೋಸ್ಟ್ ಪರಿಶೀಲಿಸಿದೆ. ಇದರಲ್ಲಿ ಕೆಲವು ಬಳಕೆದಾರರು ಇದು ವಂಚನೆಯ ಜಾಲ ಎಂದು ಕಮೆಂಟಿದ್ದನ್ನು ಗಮನಿಸಿದೆ.
ಪೋಸ್ಟ್‌ನಲ್ಲಿ ನೀಡಲಾದ ಸಂಖ್ಯೆಗೆ ಕರೆ ಮಾಡಿದಾಗ, “ಮೊದಲಿಗೆ 786 ಸಂಖ್ಯೆಯ ನೋಟಿನ ಫೋಟೋವನ್ನು ವಾಟ್ಸಾಪ್ ಮಾಡಲು ಕೇಳಲಾಯಿತು. ಫೋಟೋ ಕಳುಹಿಸಿದ ನಂತರ ನಮ್ಮ ಹೆಸರು, ಪೂರ್ಣ ವಿಳಾಸ, ಪಾಸ್‌ಪೋರ್ಟ್ ಸೈಜ್ ಫೋಟೋ ಜೊತೆಗೆ ಸರ್ಕಾರದ ಅನುಮತಿಯ ಹೆಸರಿನಲ್ಲಿ 750 ರೂಪಾಯಿ ಪಾವತಿಸಲು ಹೇಳಲಾಯಿತು. ಮತ್ತು ಈ ಪ್ರತಿಕ್ರಿಯೆಯ ಬಳಿಕ 24ರಿಂದ 48ಗಂಟೆಯೊಳಗೆ ತಂಡವೊಂದನ್ನು ಮನೆಗೆ ಬಂದು ನೋಟನ್ನು ನೀಡಿ ನಿಗದಿತ ಮೊತ್ತವನ್ನುಸಂಗ್ರಹಿಸಿ ವ್ಯವಹಾರ ಕುದುರಿಸುತ್ತದೆ” ಎಂದು ಹೇಳಿತ್ತು.
ಹೆಚ್ಚಿನ ಮಾಹಿತಿಗಾಗಿ, ನೀಡಿದ ಸಂಖ್ಯೆಗೆ ಮತ್ತೊಮ್ಮೆ ಕರೆ ಮಾಡಿ ಸರ್ಕಾರದ ಅನುಮತಿಯ ಬಗ್ಗೆ ಮಾಹಿತಿ ಕೇಳಿದ್ದೇವೆ. ಫೋನ್‌ನಲ್ಲಿ ಮಾತಾಡಿದ ಯುವಕ “ಅಂತಹ ನೋಟುಗಳ ಖರೀದಿಗೆ ಆರ್‌ಬಿಐ ಅನುಮತಿ ಬೇಕು. 750 ರೂಪಾಯಿ ಶುಲ್ಕ ವಿಧಿಸಿ ಪ್ರಮಾಣಪತ್ರ ನೀಡುತ್ತಾರೆ. ಈ ಪತ್ರವಿಲ್ಲದೇ ಅವನ ತಂಡಕ್ಕೆ ನೋಟನ್ನು ಮಾರಾಟ ಮಾಡಲು ಸಾಧ್ಯವಿಲ್ಲ. ನೀವು ಖರೀದಿಸಿದ ಈ ನೋಟಿನ ಮೌಲ್ಯವನ್ನೂ ಕೂಡ ಸರ್ಕಾರಕ್ಕೆ ನೀಡಲಾಗುತ್ತದೆ. ನಾವು ಏಜೆಂಟ್ ಮಾತ್ರ. ಅನುಮತಿ ಆರ್‌ಬಿಐ ದಾಖಲೆಯಲ್ಲಿದ್ದು, ನೋಟು ವ್ಯವಹಾರದ ಅನುಮತಿ ಪತ್ರವನ್ನು ಕಂಪನಿಯು ನಿಮಗೆ ನೀಡುತ್ತದೆ” ಎಂದು ಹೇಳಿದ್ದನು.
ಆ ಬಳಿಕ ಮಾಹಿತಿ ನೀಡಿದ ಯುವಕ “ 786 ಸರಣಿ ಸಂಖ್ಯೆಯ ನೋಟನ್ನು ಖರೀದಿಸಲು ಗ್ರಾಹಕರು ನಗದು ಅಥವಾ ಆನ್‌ಲೈನ್ ಅಥವಾ ಚೆಕ್‌ನಲ್ಲಿ ಪಾವತಿಸಬಹುದು. ಕಂಪನಿಯ ಹೆಸರು ಓಲ್ಡ್ ಕಾಯಿನ್ ಮುಂಬೈ” ಎಂದು ಮಾಹಿತಿ ನೀಡಿದ್ದನು.
ಓಲ್ಡ್ ಕಾಯಿನ್ ಕಂಪನಿ ಮುಂಬೈ ಹೆಸರಿನಲ್ಲಿ ಗೂಗಲ್ ನಲ್ಲಿ ಹುಡುಕಾಟ ನಡೆಸಿದಾಗ ಅದರ ವಿಮರ್ಶೆಗಳಲ್ಲಿ, ಅನೇಕ ಜನರು ಇದನ್ನು ವಂಚನೆ ಎಂದು ಕರೆದಿದ್ದಾರೆ.

2021ರ ಆಗಸ್ಟ್ 4ರಂದು RBI ಹೊರಡಿಸಿದ ಪತ್ರಿಕಾ ಪ್ರಕಟಣೆಯ ಪ್ರಕಾರ , “ಕೆಲವರು RBI ಹೆಸರನ್ನು ವಂಚನೆಗಾಗಿ ಬಳಸುತ್ತಿದ್ದಾರೆ. ವಿವಿಧ ಆನ್‌ಲೈನ್/ಆಫ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ, ಹಳೆಯ ಬ್ಯಾಂಕ್ ನೋಟುಗಳು ಅಥವಾ ನಾಣ್ಯಗಳನ್ನು ಖರೀದಿಸುವ ಮತ್ತು ಮಾರಾಟ ಮಾಡುವ ಪ್ರಕರಣಗಳಲ್ಲಿ ವಂಚಕರು RBI ಹೆಸರಿನಲ್ಲಿ ಶುಲ್ಕವನ್ನು ಕೇಳುತ್ತಿದ್ದಾರೆ. ಆರ್‌ಬಿಐ ಅಂತಹ ಯಾವುದೇ ಶುಲ್ಕವನ್ನು ಕೇಳುವುದಿಲ್ಲ. ಅಂತಹ ವಹಿವಾಟುಗಳಿಗೆ ಶುಲ್ಕವನ್ನು ವಿಧಿಸಲು RBI ಸಂಸ್ಥೆಯಿಂದ ಯಾರಿಗೂ ಅಧಿಕಾರ ನೀಡಲಾಗಿಲ್ಲ.

ಹಳೆಯ ನಾಣ್ಯಗಳು ಮತ್ತು ನೋಟುಗಳನ್ನು ಖರೀದಿಸಲು ಕೇಂದ್ರ ಸರ್ಕಾರ ಘೋಷಿಸಿದೆ ಎಂಬ ಹೇಳಿಕೆ ಈ ಹಿಂದೆಯೂ ವೈರಲ್ ಆಗಿತ್ತು. ಹಳೆಯ ನೋಟುಗಳು ಅಥವಾ ನಾಣ್ಯಗಳನ್ನು ಖರೀದಿಸಲು ಮತ್ತು ಮಾರಾಟ ಮಾಡಲು ಆರ್‌ಬಿಐ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗೆ ಅಧಿಕಾರ ನೀಡುವುದಿಲ್ಲ ಎಂದು ಆರ್‌ಬಿಐ ಸ್ಪಷ್ಟನೆ ನೀಡಿತ್ತು . ಈ ನಿಟ್ಟಿನಲ್ಲಿ ಈಗಾಗಲೇ ಜನರಿಗೆ ಎಚ್ಚರಿಕೆ ನೀಡಲಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, 786 ಕ್ರಮಸಂಖ್ಯೆಯ ನೋಟುಗಳ ಮಾರಾಟದ ಹೆಸರಿನಲ್ಲಿ ವಂಚನೆ ನಡೆಯುತ್ತಿದ್ದು, ವಂಚಕರು ಆರ್‌ಬಿಐನಿಂದ ಅನುಮತಿ ಪತ್ರದ ಹೆಸರಿನಲ್ಲಿ ಶುಲ್ಕವನ್ನು ಭರಿಸಲು ಕೇಳುತ್ತಾರೆ. ಆದರೆ, ಆರ್‌ಬಿಐ ಇಂತಹ ವಹಿವಾಟುಗಳಿಗೆ ಯಾರಿಗೂ ಅಧಿಕಾರ ನೀಡಿಲ್ಲ ಮತ್ತು ಯಾವುದೇ ಶುಲ್ಕವನ್ನು ಕೇಳುವುದಿಲ್ಲ ಎಂದು ಸ್ಪಷ್ಟನೆ ನೀಡಿದೆ. ವಂಚನೆಗೊಳಗಾಗುವ ಮುನ್ನ ಜಾಗೃತರಾಗಿರಿ.
