ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಲಕ್ಷಾಂತರ ಜನರು ಭಾಗವಹಿಸುತ್ತಿದ್ದಾರೆ. ಈ ನಡುವೆ, ಎಐಎಂಐಎಂ ನಾಯಕ ಮತ್ತು ಹೈದರಾಬಾದ್ ಲೋಕಸಭಾ ಕ್ಷೇತ್ರದ ಸಂಸದ ಅಸಾದುದ್ದೀನ್ ಓವೈಸಿ ಕುಂಭಮೇಳದಲ್ಲಿ ಸ್ನಾನ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ನಿಜವೆಂದು ಭಾವಿಸಿ ಅನೇಕ ಜನರು ಹಂಚಿಕೊಳ್ಳುತ್ತಿದ್ದಾರೆ.
ಹಿಂದೂ ತನವಾಲಾ ಯೋಗೇಶ್ ಎಂಬ ಎಕ್ಸ್ ಬಳಕೆದಾರ, “ನಿಮ್ಮ ವಂಶಸ್ಥರ ಪಾಪಗಳನ್ನು ತೊಳೆಯಲು ಮಹಾಕುಂಭಕ್ಕೆ ಬನ್ನಿ” ಎಂದು ಬರೆದುಕೊಂಡು ಈ ವಿಡಿಯೋವನ್ನು ಹಂಚಿಕೊಂಡಿದ್ದು, ಈ ಬಗ್ಗೆ ಕನ್ನಡ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ.
आओ अपने वंशजों के पाप धोने महाकुम्भ pic.twitter.com/DT6ZjMxHHg
— HINDU TANAWALA YOGESH (@y_tanawala) January 17, 2025
ಫ್ಯಾಕ್ಟ್‌ಚೆಕ್
ಹೈದರಾಬಾದ್ ಲೋಕಸಭಾ ಕ್ಷೇತ್ರದ ಸಂಸದ ಅಸಾದುದ್ದೀನ್ ಓವೈಸಿ ಕುಂಭಮೇಳದಲ್ಲಿ ಸ್ನಾನ ಮಾಡುತ್ತಿರುವ ವಿಡಿಯೋ ಕೃತಕ ಬುದ್ಧಿಮತ್ತೆಯ(AI) ಸಹಾಯದಿಂದ ರಚಿಸಲಾಗಿದೆ ಎಂಬುದನ್ನು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್ ತಂಡವು ಕಂಡುಹಿಡಿದಿದೆ. AI ರಚಿತವಾದ ವಿಡಿಯೋವನ್ನು ಸುಳ್ಳು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.
ಈ ವಿಡಿಯೋವನ್ನು ಎಚ್ಚರಿಕೆಯಿಂದ ವೀಕ್ಷಿಸಿದಾಗ, ವಿಡಿಯೋದ ಹಲವು ಸ್ಥಳಗಳಲ್ಲಿ ಜರ್ಕ್ ಮೋಷನ್ ಗೋಚರಿಸುತ್ತದೆ ಮತ್ತು ಓವೈಸಿಯ ಮುಖಭಾವಗಳು ಸಹ ಅನಿಮೇಟೆಡ್ ಆಗಿ ಕಂಡು ಬಂದಿದೆ.ಹಾಗಾಗಿ ಈ ವಿಡಿಯೋ ಕ್ಲಿಪ್ ಅನ್ನು AI ನಿಂದ ರಚಿಸಿರಬಹುದು ಎಂದು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್ ತಂಡ ಶಂಕಿಸಿದ್ದು, AI ವಿಡಿಯೋ ಪತ್ತೆ ಸಾಧನವಾದ ಹೈವ್ ಮಾಡರೇಶನ್ ಮೂಲಕ ಪರಿಶೀಲಿಸಿದ್ದೇವೆ. ಈ ಸಾಧನವು ಈ ವಿಡಿಯೋವನನು 94.9 ಪ್ರತಿಶತ AI ರಚಿತ ಎಂದು ಸೂಚಿಸಿದೆ.
ಈ ವಿಡಿಯೋವನ್ನು ಮತ್ತೊಂದು AI ವಿಡಿಯೋ ಪತ್ತೆ ಸಾಧನ, DeepWareನೊಂದಿಗೆ ಪರಿಶೀಲಿಸಿದಾಗ, ಇದು 98 ಪ್ರತಿಶತ AIನಿಂದ ರಚಿಸಲಾಗಿದೆ ಎಂದು ಸೂಚಿಸಿದೆ.
ಈ ವಿಡಿಯೋದ ಬಗ್ಗೆ AI ತಜ್ಞ ಅಂಶ್ ಮೆಹ್ರಾ ಅವರೊಂದಿಗೆ ವಿಚಾರಿಸಿದಾಗ “ಇದು ಎಐ ಮಾಡಿರುವ ವಿಡಿಯೋ ಎಂದು ಅವರು ಹೇಳಿದ್ದು, ವಿಡಿಯೋದ ಚಲನೆ, ಹಿನ್ನೆಲೆ ಮತ್ತು ಅಭಿವ್ಯಕ್ತಿಗಳನ್ನು ಎಚ್ಚರಿಕೆಯಿಂದ ನೋಡಿದರೆ, ಈ ವಿಡಿಯೋ ನೈಜವಲ್ಲ ಎಂದು ಸ್ಪಷ್ಟವಾಗುತ್ತದೆ” ಎಂದು ಅವರು ಹೇಳಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ಅಸಾದುದ್ದೀನ್ ಓವೈಸಿ ಕುಂಭಮೇಳದಲ್ಲಿ ಸ್ನಾನ ಮಾಡುತ್ತಿದ್ದಾರೆ ಎಂದು ಕೃತಕ ಬುದ್ಧಿಮತ್ತೆಯ(AI) ಸಹಾಯದಿಂದ ರಚಿಸಿದ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ.