ಕಳೆದ ಒಂದು ವಾರದಿಂದ ಮಹಾಕುಂಭ ಮೇಳಕ್ಕೆ ಸಂಬಂಧಿಸಿದಂತೆ ಹಲವು ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಈಗ, “ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಸಾಧು ವೇಷದಲ್ಲಿ – “ಆಯೂಬ್ ಖಾನ್” ಎನ್ನುವ ಹೆಸರಿನ ಒಬ್ಬ ಉಗ್ರವಾದಿ ಬಂದು, ನಮ್ಮ ಸಾಧುಗಳೊಂದಿಗೆ ಬೆರೆತು, ಅತಿದೊಡ್ಡ ದುಷ್ಕೃತ್ಯ ನಡೆಸಲು ಸಂಚು ಮಾಡಿದ್ದನು. ದೈವ ಕೃಪೆಯಿಂದ ನಮ್ಮ ಸಾದೂಗಳು ಆ ಉಗ್ರವಾದಿಯ ನಡವಡಿಕೆಗಳನ್ನು ಗಮನಿಸಿ ಪೊಲೀಸ್ ನವರಿಗೆ ಹಿಡಿದು ಕೊಟ್ಟರು” ಎಂದು ಪ್ರತಿಪಾದಿಸಿ ಪೋಲಿಸರು ಸಾಧುವೊಬ್ಬನನ್ನು ಹಿಡಿದುಕೊಂಡಿರುವ ಪೋಟೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಫೇಸ್ ಬುಕ್‌ನಲ್ಲಿ ಇದೇ ರೀತಿ ಪ್ರತಿಪಾದಿಸಿ ಅನೇಕರು ವೈರಲ್ ಫೋಟೊವನ್ನು ಹಂಚಿಕೊಂಡಿದ್ದಾರೆ.
ವಾಟ್ಸಾಪ್‌ನಲ್ಲಿಯೂ ಸಹ ಈ ಫೋಟೋವನ್ನು ಸಾಕಷ್ಟು ಹಂಚಿಕೊಳ್ಳಲಾಗಿದೆ.
ಫ್ಯಾಕ್ಟ್ ಚೆಕ್:
ನಾವು ಈ ಕುರಿತು ಪರಿಶೀಲಿಸಿದಾಗ ವೈರಲ್ ಹೇಳಿಕೆಗಳು ಸುಳ್ಳು ಎಂದು ಕಂಡು ಬಂದಿದೆ. ವರದಿಗಳ ಪ್ರಕಾರ, ಅಯೂಬ್ ಕುಂಭಮೇಳದಲ್ಲಿ ಸಿಕ್ಕಿಬಿದ್ದಿದ್ದಾನೆ, ಆದರೆ ಅವನು ಮಾದಕ ವ್ಯಸನಿಯಾಗಿದ್ದು, ಯಾವುದೇ ಕ್ರಿಮಿನಲ್ ದಾಖಲೆಯನ್ನು ಹೊಂದಿಲ್ಲ. ಅವನು ಯಾವುದೇ ಭಯೋತ್ಪಾದಕ ಚಟುವಟಿಕೆಗಳನ್ನು ರೂಪಿಸಲು ಯೋಜಿಸುತ್ತಿದ್ದನೆಂದು ಸೂಚಿಸಲು ಯಾವುದೇ ಪುರಾವೆಗಳಿಲ್ಲ.
ಲೈವ್ ಹಿಂದೂಸ್ತಾನ್ ಈ ಕುರಿತು ವರದಿಯೊಂದನ್ನು ಪ್ರಕಟಿಸಿದ್ದು, “ಅಲಿಗಂಜ್‌ನ ಅಯೂಬ್ ಕುಂಭಮೇಳದ ಸಮಯದಲ್ಲಿ ಯತಿ ನರಸಿಂಹಾನಂದ ಆಶ್ರಮದ ಹೊರಗೆ ಸಿಕ್ಕಿಬಿದ್ದಿದ್ದಾನೆ. ಮಾಹಿತಿ ಬಂದ ಕೂಡಲೇ ಅಲಿಗಂಜ್ ಪೊಲೀಸರು ರಾತ್ರಿ ಆತನ ಮನೆಗೆ ತಲುಪಿ ಸಹೋದರಿ ಮತ್ತು ಚಿಕ್ಕಪ್ಪನನ್ನು ಭೇಟಿಯಾದರು. ಅವರಿಂದ ಮಾಹಿತಿ ಪಡೆದ ನಂತರ ಅವನ ತಂದೆ ಮತ್ತು ಸಹೋದರ ಜೈಪುರದಲ್ಲಿ ವಾಸಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಆತನ ಮೇಲೆ ಯಾವುದೇ ಕ್ರಿಮಿನಲ್ ದಾಖಲೆಯೂ ಇಲ್ಲ” ಎಂದು ವರದಿಯಲ್ಲಿ ತಿಳಿಸಲಾಗಿದೆ.
ಮುಂದುವರೆದು, ಕುಂಭಮೇಳದಲ್ಲಿ ದಾಸ್ನಾ ದೇವಾಲಯದ ಮಹಂತ್ ಯತಿ ನರಸಿಂಹಾನಂದ ಮಹಾರಾಜ್ ಆಶ್ರಮವಿದೆ. ಅಯುಬ್‌ನನ್ನು ಮಂಗಳವಾರ ಆಶ್ರಮದ ಹೊರಗಿನಿಂದ ಬಂಧಿಸಲಾಗಿದೆ ಎಂದು ಹೇಳಲಾಗುತ್ತಿದೆ. ವಿಚಾರಣೆಯ ಸಮಯದಲ್ಲಿ ಈ ಹಿಂದೆ ತನ್ನ ಹೆಸರನ್ನು ಆಯುಷ್ ಎಂದು ಹೇಳಿಕೊಂಡಿದ್ದನು. ಅನುಮಾನದ ಮೇಲೆ ವಿಚಾರಣೆ ನಡೆಸಿದಾಗ ತನ್ನ ಹೆಸರನ್ನು ಆಯುಬ್ ಎಂದು ಬಹಿರಂಗ ಪಡಿಸಿದ್ದಾನೆ. ಯುವಕನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.
ವಿಚಾರಣೆಯ ಸಮಯದಲ್ಲಿ, ಆಯುಷ್ ಹೆಸರನ್ನು ನೀಡಿ ಆಯೂಬ್ ಆಶ್ರಮವನ್ನು ಪ್ರವೇಶಿಸುತ್ತಿದ್ದನು ಎಂದು ತಿಳಿದು ಬಂದಿದೆ. ಪೋಲಿಸರು ಯುವಕನ ಬಗ್ಗೆ ವಿಚಾರಿಸಿದಾಗ, ಅಲಿಗಂಜ್‌ನ ಮೊಹಲ್ಲಾ ಲುಹರಿ ದರ್ವಾಜಾ ಪೋಲಿಸ್ ಠಾಣೆ ವ್ಯಾಪ್ತಿಯ ಶಕೀಲ್ ಅವರ ಪುತ್ರ ಅಯೂಬ್ ಎಂದು ತಿಳಿದು ಬಂದಿದೆ.
ಇನ್ನೂ ವೈರಲ್ ಚಿತ್ರವನ್ನು ಸೂಕ್ಮವಾಗಿ ಗಮನಿಸಿದಾಗ ಅದನ್ನು ಕೃತಕ ಬುದ್ಧಿಮತ್ತೆಯಿಂದ ರಚಿಸಲಾಗಿದೆ ಎಂದು ತಿಳಿದುಬಂದಿದೆ. ಖಚಿತಪಡಿಸಿಕೊಳ್ಳಲು ನಾವು ರಿವರ್ಸ್ ಇಮೇಜ್‌ನಲ್ಲಿ ಹುಡುಕಾಟ ನಡೆಸಿದಾಗ ಇದೇ ಹೇಳಿಕೆಯನ್ನು ಪ್ರತಿಪಾದಿಸಿ ಅನೇಕರು ಎಐ ಚಿತ್ರಗಳನ್ನು ಹಂಚಿಕೊಂಡಿರುವುದನ್ನು ಗಮನಿಸಿದ್ದೇವೆ. ಅವುಗಳನ್ನು ಈ ಕೆಳಗೆ ನೋಡಬಹುದು.
ಆದ್ದರಿಂದ, ಕುಂಭಮೇಳದಲ್ಲಿ ಸಾಧು ವೇಷದಲ್ಲಿ “ಆಯೂಬ್ ಖಾನ್” ಎನ್ನುವವನು ದುಷ್ಕೃತ್ಯ ನಡೆಸಲು ಸಂಚು ರೂಪಿಸಿದ್ದ ಎಂಬುದು ಸುಳ್ಳು.
ಇದನ್ನು ಓದಿ: 786 ಸಂಖ್ಯೆಯ ನೋಟುಗಳ ಮಾರಾಟದ ಹೆಸರಲ್ಲಿ ವಂಚನೆ ಜಾಲ: RBIನಿಂದ ಎಚ್ಚರಿಕೆ