Fact Check | ಚಂದ್ರ ಆರ್ಯ ಅವರು ಕೆನಡಾ ಪ್ರಧಾನಿ ಹುದ್ದೆಗೆ ನಾಮಪತ್ರ ಸಲ್ಲಿಸಿ ಕನ್ನಡದಲ್ಲಿ ಮಾತನಾಡಿದ್ದಾರೆ ಎಂಬುದು ಸುಳ್ಳು

ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ತಮ್ಮ ಹುದ್ದೆಗೆ ಹಠಾತ್ ರಾಜೀನಾಮೆ ನೀಡಿದ ಕಾರಣ ಮುಂದಿನ ಪ್ರಧಾನಿ ಯಾರಾಗುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ಈಗಾಗಲೇ ಹಲವು ಪ್ರಮುಖ ನಾಯಕರು ಪ್ರಧಾನಿ ರೇಸ್‌ನಲ್ಲಿದ್ದು, ಕನ್ನಡಿಗ ಚಂದ್ರ ಆರ್ಯ ಕೂಡ ಕೆನಡಾ ಪ್ರಧಾನಿ ಹುದ್ದೆಯ ಅಕಾಂಕ್ಷಿಯಾಗಿದ್ದಾರೆ. ಈ ಕಾರಣದಿಂದಾಗಿದೆ ಅವರು ನಾಮಪತ್ರ ಸಲ್ಲಿಕೆ ಕೂಡ ಮಾಡಿದ್ದಾರೆ. ಇದರ ಬೆನ್ನಲ್ಲೇ ಚಂದ್ರ ಆರ್ಯ ಅವರು ನಾಮಪತ್ರ ಸಲ್ಲಿಸಿದ ನಂತರ ಕನ್ನಡದಲ್ಲಿ ಭಾಷಣ ಮಾಡಿದ್ದಾರೆ ಎಂದು ಕೆಲ ಸುದ್ದಿ ಸಂಸ್ಥೆಗಳು ವರದಿ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಈ ಸುದ್ದಿಗಳು ವೈರಲ್ ಆಗುತ್ತಿವೆ.

ಕನ್ನಡದ ಹೆಸರಾಂತ ಸುದ್ದಿ ಸಂಸ್ಥೆಯಾದ ನ್ಯೂಸ್ ಫಸ್ಟ್ ಜನವರಿ 17, 2025 ರಂದು, “ಕೆನಡಾ ಪ್ರಧಾನಿ ಹುದ್ದೆಗೆ ಜಸ್ಟಿನ್ ಟ್ರುಡೊ ರಾಜೀನಾಮೆ ಕೊಟ್ಟ ಬಳಿಕ ಭಾರತ ಮೂಲದ ಚಂದ್ರ ಆರ್ಯ ಅವರ ಹೆಸರು ಹೆಚ್ಚು ಚಾಲ್ತಿಯಲ್ಲಿದೆ. ಮುಂದಿನ ಪ್ರಧಾನ ಮಂತ್ರಿ ರೇಸ್‌ನಲ್ಲಿ ತಮ್ಮ ಹೆಸರು ಕೇಳಿ ಬರುತ್ತಿರುವಾಗಲೇ ಚಂದ್ರ ಆರ್ಯ ಅವರು ಕೆನಡಾ ಪ್ರಧಾನಿ ಹುದ್ದೆಗೆ ಕನ್ನಡದಲ್ಲೇ ಮಾತನಾಡಿ ನಾಮಪತ್ರ ಸಲ್ಲಿಸಿದ್ದಾರೆ” ಎಂದು ತನ್ನ ವರದಿಯಲ್ಲಿ ಪ್ರಕಟಿಸಿದೆ. ಆದರೆ ವಾಸ್ತವದಲ್ಲಿ ಚಂದ್ರ ಆರ್ಯ ಅವರು ಇತ್ತೀಚೆಗೆ ಕನ್ನಡ ಮಾತನಾಡಿದ ಯಾವುದೇ ವಿಡಿಯೋ ಕಂಡು ಬಂದಿಲ್ಲ. ಹಾಗಾಗಿ ನ್ಯೂಸ್‌ ಫಸ್ಟ್‌ ಸೇರಿದಂತೆ ಹಲವು ಕನ್ನಡದ ಸುದ್ದಿ ಮಾಧ್ಯಮಗಳ ವರದಿ ಸಾರ್ವಜನಿಕರ ದಾರಿ ತಪ್ಪಿಸುತ್ತಿದೆ. ಹಾಗಾದರೆ ಈಗ ಸುದ್ದಿ ಮಾಧ್ಯಮಗಳು ಹಂಚಿಕೊಂಡಿರುವ ವಿಡಿಯೋ ಯಾವುದು ಎಂಬ ಪ್ರಶ್ನೆ ನಿಮ್ಮನ್ನು ಕಾಡಬಹುದು. ಹಾಗಾಗಿ ಆ ವಿಡಿಯೋ ಕುರಿತು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ 

ಫ್ಯಾಕ್ಟ್‌ಚೆಕ್‌

ವೈರಲ್ ವಿಡಿಯೋದಲ್ಲಿ ಚಂದ್ರ ಆರ್ಯ ಅವರು ಹೇಳಿದ್ದೇನು?

ವೈರಲ್‌ ವಿಡಿಯೋದಲ್ಲಿ ಕನ್ನಡಿಗ ಚಂದ್ರ ಆರ್ಯ ಅವರು “ಕೆನಡಾ ದೇಶದ ಸಂಸತ್ತಿನಲ್ಲಿ ನನ್ನ ಮಾತೃಭಾಷೆ ಕನ್ನಡದಲ್ಲಿ ಮಾತನಾಡಲು ಅವಕಾಶ ಸಿಕ್ಕಿರುವುದಕ್ಕೆ ಸಂತೋಷವಾಗುತ್ತಿದೆ. ಭಾರತ ದೇಶದ ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ, ಸಿರಾ ತಾಲೂಕಿನ ವ್ಯಕ್ತಿಯೊಬ್ಬ ಕೆನಡಾದಲ್ಲಿ ಸಂಸತ್ ಸದಸ್ಯನಾಗಿ ಆಯ್ಕೆಯಾಗಿ ಮತ್ತು ಕನ್ನಡದಲ್ಲಿ ಮಾತನಾಡುವುದು, ಸುಮಾರು ಐದು ಕೋಟಿ ಕನ್ನಡಿಗರಿಗೆ ಹಮ್ಮೆಯ ಕ್ಷಣವಾಗಿದೆ. ಕೆನಡಾ ದೇಶದ ಕನ್ನಡಿಗರು 2018ನೇ ಇಸವಿಯಲ್ಲಿ ಕೆನಡಾದ ಈ ಸಂಸತ್ತಿನಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಿದ್ದರು. ರಾಷ್ಟ್ರಕವಿ ಕುವೆಂಪು ಬರೆದಿರುವ ಹಾಗೂ ನಟಸಾರ್ವಭೌಮ ಡಾ. ರಾಜ್‌ಕುಮಾರ್ ಬರೆದಿರುವ ಭಾವಗೀತೆ ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು, ಕನ್ನಡವೇ ಸತ್ಯ ಕನ್ನಡವೇ ನಿತ್ಯ ಎಂದು ಹೇಳುವ ಮೂಲಕ ನನ್ನ ಮಾತು ಮುಗಿಸುತ್ತಿದ್ದೇನೆ” ಎಂದು ಹೇಳಿರುವುದು ಕಂಡು ಬಂದಿದೆ 

ಹೀಗೆ ವೈರಲ್‌ ವಿಡಿಯೋವನ್ನು ಸೂಕ್ಷ್ಮವಾಗಿ ಗನಿಸಿದ ನಮ್ಮ ತಂಡ ಈ ಕುರಿತು ವಿಡಿಯೋವಿಗೆ ಸಂಬಂಧಿಸಿದಂತೆ ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿಕೊಂಡು ಗೂಗಲ್‌ನಲ್ಲಿ ಹುಡುಕಾಟವನ್ನು ನಡೆಸಿತು. ಈ ವೇಳೆ 20 ಮೇ 2022 ರಂದು “‘ಕೆನಡಾದ ಸಂಸತ್ತಿನಲ್ಲಿ ಕನ್ನಡ ಭಾಷೆಯಲ್ಲಿ ಭಾಷಣ ಮಾಡಿದಾಗ, ಸದನವು ಚಪ್ಪಾಳೆಯಿಂದ ಪ್ರತಿಧ್ವನಿಸಿತು’ ಎಂಬ ಶೀರ್ಷಿಕೆಯೊಂದಿಗೆ ಆಜ್‌ತಕ್‌ ವರದಿ ಮಾಡಿರುವುದು ಕಂಡು ಬಂದಿದೆ. ಇದರಲ್ಲಿನ ಮಾಹಿತಿ ಪ್ರಕಾರ, “ಕೆನಡಾದ ಸಂಸದ ಚಂದ್ರ ಆರ್ಯ ಅವರು ಸಂಸತ್ತಿನಲ್ಲಿ ಭಾಷಣ ಮಾಡುವಾಗ ತಮ್ಮ ಮಾತೃಭಾಷೆ ಕನ್ನಡ ಬಳಸಿದ್ದಾರೆ. ಚಂದ್ರ ಆರ್ಯ ಅವರ ಈ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಸ್ವತಃ ಚಂದ್ರ ಆರ್ಯ ಕೂಡ ಟ್ವಿಟ್ ಮಾಡಿದ್ದಾರೆ. ಇದರಲ್ಲಿ ಅವರು, ಭಾರತದ ಹೊರಗೆ ಜಗತ್ತಿನ ಯಾವುದೇ ದೇಶದ ಸಂಸತ್ತಿನಲ್ಲಿ ಕನ್ನಡ ಭಾಷೆ ಮಾತನಾಡುತ್ತಿರುವುದು ಇದೇ ಮೊದಲು” ಎಂದು ಉಲ್ಲೇಖಿಸಿರುವುದು ಕಂಡು ಬಂದಿದೆ. 

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಹುಡುಕಾಟವನ್ನು ನಡೆಸಿದಾಗ 21 ಮೇ 2022 ರಂದು ದಿ ಇಂಡಿಯನ್ ಎಕ್ಸ್ ಪ್ರೆಸ್ ಯೂಟ್ಯೂಬ್ ಚಾನೆಲ್‌ನಲ್ಲಿ “Canadian MP Chandra Arya from Karnataka speaks in Kannada in Parliament” ಎಂಬ ಶೀರ್ಷಿಕೆಯ ಅಡಿಯಲ್ಲಿ ವೈರಲ್‌ ವಿಡಿಯೋಗೆ ಹೋಲುವ ವಿಡಿಯೋ ಅಪ್‌ಲೋಡ್‌ ಮಾಡಿರುವುದು ಕಂಡು ಬಂದಿದೆ.  ಭಾರತೀಯ ಮೂಲದ ಕೆನಡಾ ಸಂಸದ ಚಂದ್ರ ಆರ್ಯ ಅವರು ಗುರುವಾರ ಕೆನಡಾ ಸಂಸತ್ತಿನಲ್ಲಿ ತಮ್ಮ ಮಾತೃಭಾಷೆ ಕನ್ನಡದಲ್ಲಿ ಮಾತನಾಡಿದರು. ತಮ್ಮ ಅನುಭವದ ಕ್ಲಿಪ್ ಅನ್ನು ಅವರು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ ಎಂಬ ಮಾಹಿತಿಯನ್ನು ಈ ವರದಿಯಲ್ಲಿ ನೀಡಲಾಗಿದೆ.

ಈ ವರದಿಯಲ್ಲಿ ಕೂಡ ಚಂದ್ರ ಆರ್ಯ ಅವರ ಎಕ್ಸ್‌ ಪೋಸ್ಟ್‌ ಕುರಿತು ಉಲ್ಲೇಖಿಸಿರುವುದರಿಂದ ನಾವು ಅವರ ಎಕ್ಸ್‌ ( ಈ ಹಿಂದಿನ ಟ್ವಿಟರ್‌ ) ಖಾತೆಯನ್ನು ಪರಿಶೀಲನೆ ನಡೆಸಿದೆವು ಈ ವೇಳೆ ನಮಗೆ 20 ಮೇ 2022 ರಂದು ಚಂದ್ರ ಆರ್ಯ ಅವರು ವೈರಲ್‌ ವಿಡಿಯೋಗೆ ಹೋಲುವ ವಿಡಿಯೋ ಹಂಚಿಕೊಂಡಿದ್ದು, ಇದರಲ್ಲಿ ಅವರು “ಕೆನಡಾದ ಸಂಸತ್ತಿನಲ್ಲಿ ನಾನು ನನ್ನ ಮಾತೃಭಾಷೆ ಕನ್ನಡದಲ್ಲಿ ಮಾತನಾಡಿದ್ದೇನೆ. ಈ ಅದ್ಭುತವಾದ ಭಾಷೆ ದೀರ್ಘವಾದ ಇತಿಹಾಸವನ್ನು ಹೊಂದಿದೆ ಮತ್ತು ಈ ಭಾಷೆಯನ್ನು ಸುಮಾರು 50 ಮಿಲಿಯನ್ ಜನರು ಮಾತನಾಡುತ್ತಿದ್ದಾರೆ. ಜಗತ್ತಿನಲ್ಲಿ ಭಾರತದ ಹೊರಗಿನ ಸಂಸತ್ತಿನಲ್ಲಿ ಕನ್ನಡ ಮಾತನಾಡುತ್ತಿರುವುದು ಇದೇ ಮೊದಲು” ಎಂದು ಬರೆದುಕೊಂಡಿರುವುದು ಕಂಡು ಬಂದಿದೆ.

ಇವರ ಪೋಸ್ಟ್‌ನಲ್ಲಿನ ವಿಡಿಯೋ ಮತ್ತು ಸುದ್ದಿ ಮಾಧ್ಯಮಗಳ ಪ್ರಕಟಿಸುತ್ತಿರುವ ಇತ್ತೀಚೆಗಿನ ವಿಡಿಯೋ ಎರಡನ್ನೂ ಪರಿಶೀಲನೆ ನಡೆಸಿದಾಗ ಈ ಎರಡೂ ವಿಡಿಯೋಗಳು ಒಂದೇ ಎಂಬುದು ತಿಳಿದು ಬಂದಿದೆ. ಇನ್ನೂ ಚಂದ್ರ ಆರ್ಯ  ಅವರು ಇತ್ತೀಚೆಗೆ ಕನ್ನಡದಲ್ಲಿ ಮಾತನಾಡಿದ್ದರೆ ಅದನ್ನು ಕೂಡ ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಬೇಕಿತ್ತು, ಇದಕ್ಕಾಗಿ ಕೂಡ ನಾವು ಹುಡುಕಾಟವನ್ನು ನಡೆಸಿದೆವು. ಆದರೆ ಈ ಸಂಬಂಧ ಯಾವುದೇ ಪೋಸ್ಟ್‌ಗಳು ಅವರ ಖಾತೆಯಲ್ಲಿ ಕಂಡು ಬಂದಿಲ್ಲ. ಇದು ಚಂದ್ರ ಆರ್ಯ ಅವರು ಇತ್ತೀಚೆಗೆ ಕೆನಡಾದ ಸಂಸತ್ತಿನಲ್ಲಿ ಕನ್ನಡ ಮಾತನಾಡಿಲ್ಲ ಎಂಬುದನ್ನು ಸಾಬೀತು ಮಾಡಿದೆ. 

ಒಟ್ಟಾರೆಯಾಗಿ ಹೇಳುವುದಾದರೆ ಕೆನಡಾದ ಪ್ರಧಾನಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ಬಳಿಕ ಕನ್ನಡಿಗ ಚಂದ್ರ ಆರ್ಯ ಅವರು ಇತ್ತೀಚೆಗೆ ಕೆನಡಾ ಸಂಸತ್ತಿನಲ್ಲಿ ಕನ್ನಡದಲ್ಲಿ ಮಾತನಾಡಿದ್ದಾರೆ ಎಂಬುದು ಸುಳ್ಳು. 20 ಮೇ 2022 ರಂದು ಚಂದ್ರ ಆರ್ಯ ಅವರು ಕೆನಡಾ ಸಂಸತ್ತಿನಲ್ಲಿ ಕನ್ನಡ ಮಾತನಾಡಿದ ವಿಡಿಯೋವನ್ನು ಹಂಚಿಕೊಂಡು ಹಲವು ಸುದ್ದಿ ಮಾಧ್ಯಮಗಳು ಇದು ಇತ್ತೀಚಿನ ವಿಡಿಯೋ ಎಂದು ಹಂಚಿಕೊಂಡಿವೆ. ಹಾಗಾಗಿ ವೈರಲ್‌ ವಿಡಿಯೋ ಮತ್ತು ಈ ಬಗ್ಗೆ ಕಂಡು ಬರುವ ಯಾವುದೇ ವರದಿಗಳನ್ನು ಹಂಚಿಕೊಳ್ಳಬೇಡಿ ಸುಳ್ಳು ಸುದ್ದಿಯನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.


ಇದನ್ನೂ ಓದಿ : FACT CHECK : ಮಹಾಕುಂಭ ಮೇಳದಲ್ಲಿ ಅಸಾದುದ್ದೀನ್ ಓವೈಸಿ ಸ್ನಾನ ಮಾಡಿದ್ದಾರೆ ಎಂದು AI ರಚಿತ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *