ಲಾಸ್ ಏಂಜಲೀಸ್‌ನಲ್ಲಿ ನಡೆದ ಭೀಕರ ಅಗ್ನಿ ದುರಂತ ಇಡೀ ಜಗತ್ತಿಗೆ ಆಘಾತವನ್ನು ಉಂಟುಮಾಡಿದೆ. ಅಮೆರಿಕದ ಕ್ಯಾಲಿಫೋರ್ನಿಯ ರಾಜ್ಯದಲ್ಲಿ ಸಾಕಷ್ಟು ಸಾರ್ವಜನಿಕ ಆಸ್ತಿಪಾಸ್ತಿಗಳು ನಾಶ ಆಗಿದೆ. ಹಲವಾರು ಮಂದಿ ನಿರಾಶ್ರಿತರಾಗಿದ್ದಾರೆ. ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ. ಇದೀಗ ಇದಕ್ಕೆ ಸಂಬಂಧ ಪಟ್ಟ ಹಲವು ವಿಡಿಯೋಗಳು ವೈರಲ್ ಆಗುತ್ತಿವೆ. ಈ ಹಲವು ವಿಡಿಯೋಗಳಲ್ಲಿ ಒಂದು ವಿಡಿಯೋ ಬಹಳ ದೊಡ್ಡ ಮಟ್ಟದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಆ ವೈರಲ್ ವಿಡಿಯೋದಲ್ಲಿ ಸಂಪೂರ್ಣ ಊರೇ ಬೆಂಕಿಗೆ ಆಹುತಿಯಾದರೂ ಒಂದು ಚರ್ಚ್ ಮಾತ್ರ ಸುಟ್ಟು ಹೋಗದೆ ಹಿಂದೆ ಹೇಗಿತ್ತು ಹಾಗೆಯೇ ಇದೆ ಎಂದು ಪೋಸ್ಟ್ ಅನ್ನು ಹಂಚಿಕೊಳ್ಳಲಾಗುತ್ತಿದೆ.
ವೈರಲ್ ವಿಡಿಯೋದಲ್ಲಿ ಕೂಡ ಚರ್ಚ್‌ನ ಸುತ್ತಮುತ್ತಲಿನ ಪ್ರದೇಶಗಳು ಬೆಂಕಿಯ ಕೆನ್ನಾಲಿಗೆಗೆ ಭಸ್ಮವಾಗಿರುವುದು ಕಂಡುಬಂದಿದ್ದು, ಚರ್ಚ್ ಮಾತ್ರ ಒಂದು ಚೂರು ಹಾನಿಗೊಳಗಾಗದಿರುವುದು ಕಂಡುಬಂದಿದೆ. ಹೀಗಾಗಿ ಹಲವು ಮಂದಿ ವೈರಲ್ ವಿಡಿಯೋವನ್ನು ನಿಜವೆಂದು ಭಾವಿಸಿ, ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹೀಗೆ ವೈರಲ್ ಆಗುತ್ತಿರುವ ವಿಡಿಯೋವಿನ ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ
ಫ್ಯಾಕ್ಟ್‌ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ವೈರಲ್ ವಿಡಿಯೋವಿನ ವಿವಿಧ ಕೀ ಫ್ರೇಮ್‌ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜಿನಲ್ಲಿ ಪರಿಶೀಲನೆ ನಡೆಸಿದೆವು. ಈ ವೇಳೆ ವೈರಲ್ ವಿಡಿಯೋದಲ್ಲಿನ ಯಾವ ದೃಶ್ಯಗಳು ಕೂಡ ಲಾಸ್ ಏಂಜಲೀಸ್ ನಗರಕ್ಕೆ ಹೊಂದಾಣಿಕೆ ಆಗಿರುವುದು ಕಂಡುಬಂದಿಲ್ಲ.
ಹೀಗಾಗಿ ವೈರಲ್ ವಿಡಿಯೋವಿನ ಕೆಲವೊಂದು ಕೀಫ್ರೇಮ್‌ಗಳನ್ನು ಬಳಸಿಕೊಂಡು ಪತ್ತೆ ಹಚ್ಚುವ ಸಾಧನವಾದ ಹೈವ್ ಮಾಡರೇಶನ್‌ನಲ್ಲಿ ಹುಡುಕಾಟವನ್ನು ನಡೆಸಲಾಯಿತು. ಈ ವೇಳೆ ವೈರಲ್ ಫೋಟೋ ಶೇಕಡ 93.3ರಷ್ಟು AI ನಿಂದ ನಿರ್ಮಿಸಲಾಗಿದೆ ಎಂಬ ಫಲಿತಾಂಶ ಕಂಡುಬಂದಿದೆ. ಇದರೊಂದಿಗೆ ಹಲವು ಫೋಟೋ ಪತ್ತೆ ಹಚ್ಚುವ ವೆಬ್‌ಸೈಟ್‌ನಲ್ಲಿ ಕೂಡ ವೈರಲ್ ವಿಡಿಯೋ ನಕಲಿ ಎಂಬ ಮಾಹಿತಿಯನ್ನು ನೀಡಿದೆ.
ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿ ಲಾಸ್ ಏಂಜಲೀಸ್‌ನ ಹಲವು ಪ್ರದೇಶಗಳು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದ್ದರೂ ಚರ್ಚ್ ಒಂದು ಮಾತ್ರ ಯಾವುದೇ ಹಾನಿಗೆ ಒಳಗಾಗಿಲ್ಲ ಎಂಬುದು ಸುಳ್ಳು ನಿರೂಪಣೆಯಿಂದ ಕೂಡಿದೆ. ವೈರಲ್ ವಿಡಿಯೋ AI ನಿಂದ ನಿರ್ಮಿಸಲಾಗಿದೆ ಈ ಕಾರಣದಿಂದ ವೈರಲ್ ಪೋಸ್ಟ್ ಅನ್ನು ಯಾವುದೇ ಕಾರಣಕ್ಕೂ ಶೇರ್ ಮಾಡಬೇಡಿ. ಸುಳ್ಳು ಸುದ್ದಿಯನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check | ರೈಲಿನಲ್ಲಿ ಕಳ್ಳತನ ಮಾಡಲು ಖರ್ಜೂರದಲ್ಲಿ ನಿದ್ರೆ ಮಾತ್ರೆ ಬೆರಸಿದ ವಿಡಿಯೋವನ್ನು ಕೋಮು ಆಯಾಮದೊಂದಿಗೆ ಹಂಚಿಕೊಳ್ಳಲಾಗುತ್ತಿದೆ