Fact Check | ಸೈಫ್ ಅಲಿ ಖಾನ್ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಚಿತ್ರ ಎಂದು ಎಡಿಟೆಡ್‌ ಫೋಟೋ ಹಂಚಿಕೆ

ನಟ ಸೈಫ್ ಅಲಿ ಖಾನ್ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ತೆಗೆದ ಚಿತ್ರ ಎಂದು ಸಾಮಾಜಿಕ ಮಾಧ್ಯಮದಲ್ಲಿ ಫೋಟೋವೊಂದು ಹೆಚ್ಚು ವೈರಲ್ ಆಗುತ್ತಿದೆ. ಚಿತ್ರದಲ್ಲಿ, ಸೈಫ್ ಅಲಿ ಖಾನ್ ಆಸ್ಪತ್ರೆಯ ಬೆಡ್ ಮೇಲೆ ಮಲಗಿರುವುದನ್ನು ಕಾಣಬಹುದು. ಈಗಾಗಲೇ ಸೈಫ್‌ ಅಲಿ ಖಾನ್‌ ಅವರು ಆಸ್ಪತ್ರೆಯಿಂದ ಚಿಕಿತ್ಸೆ ಪೂರ್ಣಗೊಳಿಸಿ ತೆರಳಿದ್ದಾರೆ ಎಂದು ವರದಿಗಳು ಕಂಡು ಬಂದಿವೆ. ಇದರ ನಡುವೆ ಈ ಫೋಟೋ ಕೂಡ ಹೆಚ್ಚಾಗಿ ಹಂಚಿಕೊಳ್ಳಲಾಗುತ್ತಿದೆ. ಇಂತಹ ಸ್ಥಿತಿಯಲ್ಲಿರುವ ಸೈಫ್‌ ಅಲಿ ಖಾನ್‌ ಅವರು ಹೇಗೆ ಡಿಸ್ಚಾರ್ಜ್‌ ಆಗಿದ್ದಾರೆ ಎಂಬ ಪ್ರಶ್ನೆ ಹಲವರಲ್ಲಿ ಕಾಡುತ್ತಿದೆ.

ಈಗ ವೈರಲ್‌ ಆಗಿರುವ ಫೋಟೋದಲ್ಲಿ ಕೂಡ ಸೈಫ್‌ ಅಲಿ ಖಾನ್‌ ಅವರೇ ಇರುವುದರಿಂದ  ಹಲವರು ವೈರಲ್‌ ಫೋಟೋವನ್ನು ನಿಜವೆಂದು ಭಾವಿಸಿ ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹೀಗಾಗಿ ಫೋಟೋ ಸಾಕಷ್ಟು ವೈರಲ್‌ ಆಗಿರುವುದರ ಜೊತೆಗೆ ಸಾರ್ವಜನಿಕರಲ್ಲಿ ಗೊಂದಲವನ್ನು ಕೂಡ ಉಂಟುಮಾಡಿದೆ. ಹೀಗೆ ವಿವಿಧ ಆಯಾಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ಫೋಟೋವಿನ ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವಿವಿಧ ಆಯಾಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ಫೋಟೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್‌ ಫೋಟೋಗೆ ಸಂಬಂಧಿಸಿದಂತೆ ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿಕೊಂಡು ಹುಡುಕಾಟವನ್ನು ನಡೆಸಿದೆವು. ಆದರೆ ಫೋಟೋಗೆ ಸಂಬಂಧಿಸಿದಂತೆ ಯಾವುದೇ ವಿಶ್ವಾಸಾರ್ಹ ಮಾಧ್ಯಮ ವರದಿಯಲ್ಲಿ ಸೈಫ್ ಅಲಿ ಖಾನ್ ಅವರ ವೈರಲ್‌ ಚಿತ್ರದಂತಹ ಅಥವಾ ಆಸ್ಪತ್ರೆಯ ಯಾವುದೇ ಫೋಟೋಗಳು ನಮಗೆ ಕಂಡುಬಂದಿಲ್ಲ.

ನಾವು ಸೈಫ್ ಅಲಿ ಖಾನ್ ಮತ್ತು ಅವರ ಪತ್ನಿ ಕರೀನಾ ಕಪೂರ್ ಖಾನ್ ಅವರ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಸಹ ಪರಿಶೀಲಿಸಿದ್ದೇವೆ . ಅಲ್ಲಿಯೂ ವೈರಲ್‌ ಫೋಟೋಗೆ ಸಂಬಂಧಿಸಿದ ಯಾವುದೇ ಪೋಸ್ಟ್ ನಮಗೆ ಕಂಡುಬಂದಿಲ್ಲ. ಚಿತ್ರದ ಸತ್ಯಾಸತ್ಯತೆ ತಿಳಿಯಲು, ನಾವು ಗೂಗಲ್ ರಿವರ್ಸ್ ಇಮೇಜ್ ಮೂಲಕ ಫೋಟೋವನ್ನು ಹುಡುಕಿದೆವು. Pinterest ವೆಬ್‌ಸೈಟ್‌ನಲ್ಲಿ ನಾವು ಮೂಲ ಚಿತ್ರವನ್ನು ಕಂಡುಕೊಂಡಿದ್ದೇವೆ . ಮೂಲ ಚಿತ್ರದಲ್ಲಿ ಮತ್ತೊಬ್ಬರು ಆಸ್ಪತ್ರೆಯಲ್ಲಿ ದಾಖಲಾಗಿ ಹಾಸಿಗೆಯ ಮೇಲೆ ಮಲಗಿರುವುದನ್ನು ಕಾಣಬಹುದು. ಸೈಫ್ ಅಲಿ ಖಾನ್ ಅವರ ಮುಖವನ್ನು ಅವರ ಚಿತ್ರದಲ್ಲಿ ಎಡಿಟ್ ಮಾಡಿರುವುದು ಈ ಚಿತ್ರದಿಂದ ನಮಗೆ ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ಫೋಟೋ ಸೈಫ್‌ ಅಲಿ ಖಾನ್‌ ಅವರದ್ದು ಎಂಬುದು ಸುಳ್ಳು. ವೈರಲ್‌ ಫೋಟೋ ಬೇರೊಬ್ಬ ವ್ಯಕ್ತಿಯ ಫೋಟೋವಾಗಿದ್ದು, ಅವರ ಫೋಟೋವಿಗೆ ಸೈಫ್‌ ಅಲಿ ಖಾನ್‌ ಅವರ ಮುಖವನ್ನು ಸೇರಿಸಿ ಎಡಿಟ್‌ ಮಾಡಿ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ವೈರಲ್‌ ಫೋಟೋವನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿಯನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.


ಇದನ್ನೂ ಓದಿ : Fact Check: ಕುಂಭಮೇಳದಲ್ಲಿ “ಆಯೂಬ್ ಖಾನ್” ಎಂಬುವವನು ಸಾಧು ವೇಷದಲ್ಲಿ ದುಷ್ಕೃತ್ಯ ನಡೆಸಲು ಸಂಚು ರೂಪಿಸಿದ್ದ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.      

Leave a Reply

Your email address will not be published. Required fields are marked *