“ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದ ಸಂದರ್ಭದಲ್ಲಿ ವಾಹನವೊಂದು ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಂಡಿದೆ. ಇದರಲ್ಲಿ ಇರುವವರು ಕನ್ನಡದ ನಟ ತುಕಾಲಿ ಸಂತೊಷ್ ಮತ್ತು ಅವರ ಪತ್ನಿ ಮಾನಸ. ಇವರು ಮಹಾ ಕುಂಭಮೇಳಕ್ಕೆ ತೆರಳುವಾಗ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಂಡಿದ್ದಾರೆ. ಇದರಿಂದ ದಂಪತಿಗಳು ಕಣ್ಣೀರು ಹಾಕಿದ್ದಾರೆ” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
ವೈರಲ್ ವಿಡಿಯೋದಲ್ಲಿ ಕೂಡ ತುಕಾಲಿ ಸಂತೊಷ್ ಮತ್ತು ಅವರ ಪತ್ನಿ ಮಾನಸ ರವರು ಕಾರಿನಲ್ಲಿ ಕುಳಿತಿರುವುದು, ಜನ ದಟ್ಟಣೆಯ ನಡುವೆ ಅವರ ವಾಹನ ಇರುವುದು ಮತ್ತು ದಂಪತಿಗಳು ಕಣ್ಣೀರು ಹಾಕುತ್ತಿರುವಂತೆ ಕಂಡು ಬಂದಿದೆ. ಈ ವಿಡಿಯೋವನ್ನು ನೋಡಿದ ಹಲವು ಮಂದಿ ವೈರಲ್ ಪೋಸ್ಟ್ ನಿಜವೆಂದು ಭಾವಿಸಿ ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹೀಗೆ ವ್ಯಾಪಕವಾಗಿ ಶೇರ್ ಮಾಡಲಾಗುತ್ತಿರುವ ವೈರಲ್ ವಿಡಿಯೋವಿನ ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ
ಫ್ಯಾಕ್ಟ್‌ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ಕೆಲವೊಂದು ಕೀ ಫ್ರೇಮ್‌ಗಳನ್ನು ತೆಗೆದುಕೊಂಡು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ 31 ಜನವರಿ 2025 ರಂದು ವಿಜಯ ಕರ್ನಾಟಕ ಪ್ರಕಟಿಸಿದ್ದ ವರದಿಯೊಂದು ಕಂಡು ಬಂದಿದೆ. ಇದರಲ್ಲಿ “ಬಿಗ್ ಬಾಸ್ ಕನ್ನಡ 11 ಫಿನಾಲೆ ಮುಗಿಸಿ ವಾಪಸ್ ಬರುವಾಗ ತುಕಾಲಿ ಸಂತು ದಂಪತಿ ಇದ್ದ ಕಾರಿಗೆ ಮುತ್ತಿಗೆ ಹಾಕಲಾಯಿತು ಎಂದು ವದಂತಿ ಹಬ್ಬಿತ್ತು ಈ ಬಗ್ಗೆ ಅವರು ಸ್ಪಷ್ಟನೆ ನೀಡಿದ್ದಾರೆ. ಬಿಗ್ ಬಾಸ್ ಫಿನಾಲೆ ಹಿನ್ನೆಲೆಯಲ್ಲಿ ಅಲ್ಲಿ ತುಂಬ ಜನ ಬಂದಿದ್ದರು. ನಾನು ಕೂಡ ಅದೇ ಸಮಯಕ್ಕೆ ಮಾನಸಾ ಜೊತೆ ಕಾರಲ್ಲಿ ಹೊರಗೆ ಬಂದೆ. ಎಲ್ಲರೂ ಸುತ್ತುವರೆದರು. ಅವರೆಲ್ಲರೂ ಒಂದೇ ಒಂದು ಸೆಲ್ವಿ ಕೊಡಿ ಅಂತ ಕೇಳಿದರು. ನಾವು ಇಳಿದು ಅವರಿಗೆ ಸೆಲ್ವಿ ಕೋಡೋಣ ಅಂದರೆ ಎಲ್ಲ ಕಡೆನೂ ಜನ ಮುತ್ತಿಕೊಂಡಿದ್ದರು. ಚೂರು ಕಾರು ಹಿಂದೆ ಮುಂದೆ ಹೋದರೆ ಯಾರಿಗಾದರೂ ನೋವಾಗಬಹುದು ಎಂಬ ಆತಂಕ ನಮ್ಮಲ್ಲಿತ್ತು. ಆ ಒಂದು ಗಾಬರಿಯಲ್ಲಿ ಮಾತ್ರ ನಾವು ಇದ್ದೇವೆ” ಎಂದು ಸಂತು ಹೇಳಿಕೆಯನ್ನು ವಿಜಯ ಕರ್ನಾಟಕ ಪ್ರಕಟಿಸಿರುವುದು ಕಂಡು ಬಂದಿದೆ.
ಈ ಬಗ್ಗೆ ಇನ್ನಷ್ಟು ಹುಡುಕಾಟವನ್ನು ನಡೆಸಿದಾಗ 1 ಫೆಬ್ರವರಿ 2025 ರಂದು ಏಷ್ಯಾನೆಟ್ ಸುವರ್ಣ ನ್ಯೂಸ್ “ಯಾರಿಗೂ ತೊಂದರೆ ಆಗಿಲ್ಲ, ತಪ್ಪಾಗಿ ವೈರಲ್ ಮಾಡ್ಬೇಡಿ; ಜನರಿಗೆ ಕ್ಷಮೆ ಕೇಳಿ ತುಕಾಲಿ ಸಂತೋಷ್- ಮಾನಸ” ಎಂಬ ಶೀರ್ಷಿಕೆಯಲ್ಲಿ ಹಂಚಿಕೊಂಡಿದ್ದ ವರದಿಯೊಂದು ಕಂಡು ಬಂದಿದೆ. ಇದರಲ್ಲೂ ಕೂಡ ವಿಜಯ ಕರ್ನಾಟಕ ವರದಿಯಲ್ಲಿ ಉಲ್ಲೇಖಿಸಿದ ಅಂಶಗಳೇ ಕಂಡು ಬಂದಿವೆ. ಇಲ್ಲಿ ತುಕಾಲಿ ಸಂತೋಷ್ ಅವರು ತಮ್ಮ ಬಗ್ಗೆ ಹಬ್ಬಿದ್ದ ವದಂತಿಯ ಬಗ್ಗೆ ಸ್ಪಷ್ಟ ಪಡಿಸಿರುವುದು ಕೂಡ ಕಂಡು ಬಂದಿದೆ. ಈ ಮೂಲಕ ವೈರಲ್ ವಿಡಿಯೋ ಪ್ರಯಾಗ್‌ರಾಜ್‌ನ ಮಹಾಕುಂಭ ಮೇಳದಲ್ಲ ಎಂಬುದು ಸಾಬೀತಾಗಿದೆ.
ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ವೈರಲ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವಂತೆ ತುಕಾಲಿ ಸಂತೋಷ್ ಮತ್ತು ಮಾನಸ ಅವರು ಮಹಾ ಕುಂಭಮೇಳದ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಂಡಿದ್ದಾರೆ ಎಂಬುದು ಸುಳ್ಳು, ವೈರಲ್ ವಿಡಿಯೋ ಬಿಗ್‌ಬಾಸ್ ಕನ್ನಡ 11 ಫಿನಾಲೆಗೆ ಸಂಬಂಧಿಸಿದ್ದಾಗಿದೆ. ಹಾಗಾಗಿ ವೈರಲ್ ವಿಡಿಯೋವನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿಯನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check | ಪ್ರಧಾನಿ ನರೇಂದ್ರ ಮೋದಿ ಅವರನ್ನು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಕಡೆಗಣಿಸಿದ್ದಾರೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ