ಹೆಬ್ಬಾವು ಒಂದು ದನವನ್ನು ನುಂಗಲು ಯತ್ನಿಸುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಹಲವರು ಈ ವಿಡಿಯೋವನ್ನು ಅಚ್ಚರಿ ವ್ಯಕ್ತಪಡಿಸಿ, ಇದು ಪ್ರಕೃತಿಯ ವಿಸ್ಮಯ, ಈ ರೀತಿಯ ಆಹಾರ ಸರಪಳಿಯನ್ನು ನೋಡಲು ಸಿಗುವುದು ಬಲು ವಿರಳ. ಹೆಬ್ಬಾವು ತನ್ನನ್ನು ತಿನ್ನಲು ಯತ್ನಿಸಿದರು ಗೋವು ಯಾವುದೇ ರೀತಿಯಾದ ಪ್ರತಿಕ್ರಿಯೆ ನೀಡಿಲ್ಲ ಎಂದು ಹಲವರು ಬರೆದುಕೊಂಡಿದ್ದಾರೆ. ಹೀಗೆ ವಿವಿಧ ಬರಹಗಳೊಂದಿಗೆ ಸಾಕಷ್ಟು ಮಂದಿ ವೈರಲ್ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ.
ವೈರಲ್ ವಿಡಿಯೋದಲ್ಲಿ ಕೂಡ ಹೆಬ್ಬಾವು ದನವನ್ನು ನುಂಗಲು ಯತ್ನಿಸುವುದು ಮತ್ತು ಹೆಬ್ಬಾವಿನಿಂದ ದನವನ್ನು ರಕ್ಷಿಸಲು ಹಲವರು ಪ್ರಯತ್ನಿಸುವುದು ಮತ್ತು ಗೋವನ್ನು ರಕ್ಷಿಸುವಲ್ಲಿ ಯಶಸ್ವಿಯಾಗುವುದು ಕಂಡುಬಂದಿದೆ. ಹೀಗಾಗಿ ವೈರಲ್ ವಿಡಿಯೋವನ್ನು ನಿಜವೆಂದು ಭಾವಿಸಿ, ಹಲವರು ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಹೀಗೆ ಶೇರ್ ಮಾಡಲಾಗುತ್ತಿರುವ ವೈರಲ್ ವಿಡಿಯೋವಿನ ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ
ಫ್ಯಾಕ್ಟ್‌ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ಈ ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ಯಾವುದಾದರೂ ವರದಿಗಳು ಪ್ರಕಟವಾಗಿವೆ ಎಂಬುದನ್ನು ಪರಿಶೀಲಿಸಿದೆವು. ಆದರೆ ಈ ಕುರಿತು ಯಾವುದೇ ಅಧಿಕೃತ ವರದಿಗಳು ಕಂಡುಬಂದಿಲ್ಲ. ಒಂದು ವೇಳೆ ವಿಡಿಯೋ ನಿಜವಾಗಿದ್ದರೆ ಹಲವು ಮಾಧ್ಯಮಗಳು ಖಂಡಿತವಾಗಿ ವರದಿಯನ್ನು ಮಾಡುತ್ತಿದ್ದವು. ಆದರೆ ಈ ವಿಡಿಯೋ ಕುರಿತು ಯಾವುದೇ ವರದಿಗಳು ಪ್ರಕಟಗೊಳ್ಳದಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿತ್ತು.
ಈ ಹಿನ್ನೆಲೆಯಲ್ಲಿ ವೈರಲ್ ವಿಡಿಯೋವಿನ ವಿವಿಧ ಕೀ ಪ್ರೇಮ್‌ಗಳನ್ನು ಬಳಸಿಕೊಂಡು AI ವಿಡಿಯೋ ಮತ್ತು ಫೋಟೋಗಳನ್ನು ಪತ್ತೆ ಹಚ್ಚುವ ಸಾಧನವಾದ ಹೈವ್ ಮಾಡರೇಷನ್ AI ಡಿಟೆಕ್ಟಿವ್ ಟೂಲ್ ವೆಬ್‌ಸೈಟ್‌ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ಶೇ. 99.9ರಷ್ಟು ವೈರಲ್ ವಿಡಿಯೋ AIನಿಂದ ನಿರ್ಮಿಸಲಾಗಿದೆ ಎಂಬ ಪಲಿತಾಂಶವನ್ನು ನೀಡಿದೆ. ಇದರಿಂದ ವೈರಲ್ ವಿಡಿಯೋವನ್ನು ಸಂಪೂರ್ಣವಾಗಿ AIನಿಂದ ನಿರ್ಮಿಸಲಾಗಿದೆ ಎಂಬುದು ಖಚಿತವಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿ ಹೆಬ್ಬಾವು ದನವನ್ನು ನುಂಗಲು ಯತ್ನಿಸಿದೆ ಎಂಬ ವಿಡಿಯೋ AIನಿಂದ ನಿರ್ಮಿಸಲಾಗಿದೆ. ಈ ಕಾರಣದಿಂದಾಗಿ ವೈರಲ್ ವಿಡಿಯೋವನ್ನು ಯಾವುದೇ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿ ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check | ಪ್ರಧಾನಿ ನರೇಂದ್ರ ಮೋದಿ ಅವರನ್ನು ಪಾಕಿಸ್ತಾನದ ಸೇನಾ ಮುಖ್ಯಸ್ಥ ಭೇಟಿಯಾಗಿದ್ದಾರೆ ಎಂದು AI ಫೋಟೋ ಹಂಚಿಕೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ