ಭಾರತ-ಪಾಕಿಸ್ತಾನ ಉದ್ವಿಗ್ನತೆಯ ನಂತರ, ಭದ್ರತಾ ಸಂಸ್ಥೆಗಳು ಈಗ ಪಾಕಿಸ್ತಾನಕ್ಕಾಗಿ ರಹಸ್ಯವಾಗಿ ಕೆಲಸ ಮಾಡುತ್ತಿದ್ದ ಜನರನ್ನು ಹುಡುಕುವಲ್ಲಿ ನಿರತವಾಗಿವೆ. ಈ ಪ್ರಕರಣದಲ್ಲಿ ಇದುವರೆಗೆ ಹಲವರನ್ನು ಬಂಧಿಸಲಾಗಿದೆ . ಈ ಮಧ್ಯೆ, ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಮತ್ತು ಭೂಗತ ಪಾತಕಿ ದಾವೂದ್ ಇಬ್ರಾಹಿಂ ಜೊತೆ ಕಚೇರಿಯಲ್ಲಿ ಕುಳಿತಿರುವ ಮಹಿಳೆಯ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ಫೋಟೋವನ್ನು ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನಾಟೆ ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೋ ನೋಡಿದ ಕೆಲವು ಬಲಪಂಥೀಯ ಖಾತೆಗಳು “ಈಗ ನಿಮಗೆ ಕಾಂಗ್ರೆಸ್ ಎಂದರೇನು ಎಂದು ಅರ್ಥವಾಯಿತೇ? ಗಮನವಿಟ್ಟು ಯೋಚಿಸಿ, ಒಬ್ಬ ಮಹಿಳಾ ಪತ್ರಕರ್ತೆ ದಾವೂದ್ ಇಬ್ರಾಹಿಂ ಜೊತೆ ಕುಳಿತಿದ್ದಾರೆ. ಈ ಫೋಟೋ 1987 ರದ್ದು ಮತ್ತು ಅಲ್ಲಿ ಕುಳಿತಿರುವ ಮಹಿಳಾ ಪತ್ರಕರ್ತೆ ಇಂದಿನ ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನಾಟೆ. ಈಗ ನಿಮಗೆ ಕಾಂಗ್ರೆಸ್ ಏನೆಂದು ಅರ್ಥವಾಯಿತೇ” ಎಂದು ಬರೆದುಕೊಂಡು ಶೇರ್ ಮಾಡುತ್ತಿದ್ದಾರೆ. ಇದನ್ನು ಹಲವು ಮಂದಿ ನಿಜವೆಂದು ಭಾವಿಸಿದ್ದಾರೆ. ಹೀಗೆ ವ್ಯಾಪಕವಾಗಿ ಶೇರ್ ಮಾಡಲಾಗುತ್ತಿರುವ ವೈರಲ್ ವಿಡಿಯೋವಿನ ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ ವೈರಲ್ ಫೋಟೋಗೆ ಸಂಬಂಧಿಸಿದಂತೆ ಪತ್ರಕರ್ತೆ ಶೀಲಾ ಭಟ್ ಅವರು 14 ಜೂನ್ 2023 ರಂದು ತಮ್ಮ ಅಧಿಕೃತ X ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವುದು ಕಂಡು ಬಂದಿದೆ, ಇದು ವೈರಲ್ ಫೋಟೋವನ್ನು ಕೂಡ ಒಳಗೊಂಡಿದೆ. ಈ ಫೋಟೋ 1987 ರಲ್ಲಿ ದುಬೈನಲ್ಲಿರುವ ಪರ್ಲ್ ಬಿಲ್ಡಿಂಗ್‌ನದ್ದು ಎಂದು ಅವರು ಉಲ್ಲೇಖಿಸಿದ್ದು, ಅವರು ತಾವು ದಾವೂದ್ ಇಬ್ರಾಹಿಂನನ್ನು ಇಲ್ಲಿಯೇ ಸಂದರ್ಶಿಸಿದ್ದರು ಎಂದು ಉಲ್ಲೇಖಿಸಿರುವುದು ಕಂಡು ಬಂದಿದೆ. ಜೊತೆಗೆ ಈ ಫೋಟೋವನ್ನು ಕ್ಯಾಂಪೇನ್ ವೀಕ್ಲಿ ಮತ್ತು ದಿ ಇಲ್ಲಸ್ಟ್ರೇಟೆಡ್ ವೀಕ್ಲಿ 1987 ರಲ್ಲಿ ಪ್ರಕಟಿಸಿದವು ಎಂದು ಬರೆದುಕೊಂಡಿದ್ದಾರೆ.
Drop a photo of you doing your job.@nistula @Vasudha156 @MathewLiz @bhartijainTOI @_pallavighosh @NEETAS11 @OlgaTellis @mehtahansal @Shussainzaidi @tallstories @sandhyadwivedi1
Interviewing Dawood Ibrahim in Pearl Building, Dubai. 1987. pic.twitter.com/gAxxp8iW2I— Sheela Bhatt शीला भट्ट (@sheela2010) June 14, 2023
ಈ ಬಗ್ಗೆ ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿಕೊಂಡು ನಾವು ಹುಡುಕಾಟವನ್ನು ಕೂಡ ನಡೆಸಿದ್ದೇವೆ, ಆಗ The Woman Who Interviewed Dawood Ibrahim. Not Just Once ಎಂಬ ಶೀರ್ಷಿಕೆಯ ಅಡಿಯಲ್ಲಿ NDTV 14 ಜುಲೈ 2024ರಂದು ಪ್ರಕಟಿಸಿದ್ದ ವರದಿಯೊಂದು ಕಂಡು ಬಂದಿದೆ. ಅದರಲ್ಲಿ ಕೂಡ ಶೀಲಾ ಭಟ್ ಅವರು ದಾವೂದ್ ಇಬ್ರಾಹಿಂನನ್ನು ಸಂದರ್ಶನ ಮಾಡಿದ್ದರು ಕುರಿತು ಸಂಪೂರ್ಣ ವರದಿಯನ್ನು ಪ್ರಕಟಿಸಿರುವುದು ಕಂಡು ಬಂದಿದೆ. ಹೀಗಾಗಿ ವೈರಲ್ ಚಿತ್ರದಲ್ಲಿರುವುದು ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನಾಟೆ ಎಂಬುದು ಸುಳ್ಳಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ ವೈರಲ್ ಫೋಟೋದಲ್ಲಿ ದಾವೂದ್ ಇಬ್ರಾಹಿಂ ಜೊತೆ ಕುಳಿತಿರುವ ಮಹಿಳೆ ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನಾಟೆ ಅಲ್ಲ. ಬದಲಿಗೆ 1987 ರಲ್ಲಿ ದುಬೈನ ಪರ್ಲ್ ಬಿಲ್ಡಿಂಗ್‌ನಲ್ಲಿ ದಾವೂದ್ ಇಬ್ರಾಹಿಂ ಅವರನ್ನು ಸಂದರ್ಶಿಸಿದ ಪತ್ರಕರ್ತೆ ಶೀಲಾ ಭಟ್ ಎಂಬುದು ವಿವಿಧ ವರದಿಗಳ ಮೂಲಕ ಮತ್ತು ಶೀಲಾ ಭಟ್ ಅವರ ಎಕ್ಸ್ ಪೋಸ್ಟ್‌ನಿಂದ ಕೂಡ ಖಚಿತವಾಗಿದೆ. ವೈರಲ್ ಚಿತ್ರವನ್ನು ರಾಜಕೀಯ ಉದ್ದೇಶದಿಂದ ಸುಳ್ಳು ಮಾಹಿತಿಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ವೈರಲ್ ಫೋಟೋವನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿಯನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check | ಕನ್ಹಯ್ಯಾ ಕುಮಾರ್ ಅವರಿಗೆ ಕಪಾಳಮೋಕ್ಷ ಮಾಡಿರುವ ಹಳೆಯ ವೀಡಿಯೊವನ್ನು ಇತ್ತೀಚಿನದ್ದು ಎಂದು ಹಂಚಿಕೊಳ್ಳಲಾಗುತ್ತಿದೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ
